4

ಕಾಂಗ್ರೆಸ್‌ ಜೊತೆ ಜೆಡಿಎಸ್‌ ಚರ್ಚೆ

Published:
Updated:
ಕಾಂಗ್ರೆಸ್‌ ಜೊತೆ ಜೆಡಿಎಸ್‌ ಚರ್ಚೆ

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಾರ್ಚ್‌ 23ರಂದು ನಡೆಯುವ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್‌ಗೆ ಜೆಡಿಎಸ್‌ ಮನವಿ ಮಾಡಿದೆ.

ಕಾಂಗ್ರೆಸ್‌ಗೆ ಇರುವ ಶಾಸಕ ಬಲದ ಆಧಾರದಲ್ಲಿ ಮೂರು ಸ್ಥಾನ ಗೆಲ್ಲಲು ಅವಕಾಶವಿದೆ. ಆದರೆ ಮೂರನೇ ಸ್ಥಾನವನ್ನು ತನಗೆ ಬಿಡುವಂತೆ ಜೆಡಿಎಸ್‌ ವರಿಷ್ಠರು ಕೇಳಿದ್ದಾರೆ. ಈ ಬಗ್ಗೆ ಎಐಸಿಸಿ ಮುಖಂಡರ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ನಿಮಗೆ ಸಹಕಾರ ನೀಡಿದ್ದೇವೆ. ನೀವು ನಮ್ಮ ಪಕ್ಷವನ್ನು ಒಡೆದಿದ್ದೀರಿ. ನಮ್ಮ ಶಾಸಕರ ಬೆಂಬಲ ಪಡೆದು ರಾಜ್ಯಸಭೆ ಚುನಾವಣೆಯಲ್ಲಿ ನಿಮ್ಮ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದೀರಿ. ನಮ್ಮ ‍ಅಭ್ಯರ್ಥಿ ಬಿ.ಎಂ. ಫಾರೂಕ್‌ ಇದರಿಂದಾಗಿ ಸೋತರು’ ಎಂಬ ಭಾವನೆಯನ್ನು ಜೆಡಿಎಸ್‌ ಮುಖಂಡರು ಎಐಸಿಸಿ ನಾಯಕರಿಗೆ ತಲುಪಿಸಿದ್ದಾರೆ.

ಜೆಡಿಎಸ್‌ ಈ ಸಲವೂ ಫಾರೂಕ್‌ ಅವರನ್ನು ಕಣಕ್ಕಿಳಿಸುತ್ತಿದೆ. ಶತಾಯಗತಾಯ ಅವರನ್ನು ಗೆಲ್ಲಿಸಬೇಕೆಂದು ಪಣ ತೊಟ್ಟಿರುವ ಪಕ್ಷ, ಕಾಂಗ್ರೆಸ್‌ ವರಿಷ್ಠರ ಜೊತೆ ಮಾತನಾಡುವ ಹೊಣೆಯನ್ನು ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿಗೆ ವಹಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್‌ ಬೆಂಬಲ ನಿಮಗೆ ಬೇಕಾಗಲಿದೆ, ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ವಿಷಯದಲ್ಲಿ ನಮಗೆ ಸಹಕರಿಸಬೇಕು ಎಂದು ಕಾಂಗ್ರೆಸ್‌ ವರಿಷ್ಠರಿಗೆ ರೆಡ್ಡಿ ಮನವರಿಕೆ ಮಾಡಿದ್ದಾರೆ. ಇದಕ್ಕೆ ಎಐಸಿಸಿ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಕಾಂಗ್ರೆಸ್‌ ಪಕ್ಷದೊಳಗೂ ಲಾಬಿ ಆರಂಭವಾಗಿದೆ. ರಾಜ್ಯಸಭೆ ಅವಧಿ ‍ಪೂರ್ಣಗೊಳಿಸುತ್ತಿರುವ ಕೆ. ರೆಹಮಾನ್‌ ಖಾನ್‌, ಸಚಿವ ರೋಷನ್‌ ಬೇಗ್‌, ಸಿದ್ದರಾಮಯ್ಯ ಆಪ್ತ, ಗುತ್ತಿಗೆದಾರ ಚೆನ್ನಾರೆಡ್ಡಿ ಅವರ ಹೆಸರು ಪ್ರಮುಖವಾಗಿ ಚಲಾವಣೆಯಲ್ಲಿವೆ.

ಸಲೀಂ ಅಹಮದ್‌, ಕೋಲಾರದ ನಜೀರ್‌ ಅಹಮದ್‌, ಶಾಮನೂರು ಶಿವಶಂಕರಪ್ಪ, ಎ.ಬಿ. ಮಾಲಕ ರಡ್ಡಿ, ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರ ಪುತ್ರ ಕೈಲಾಸನಾಥ ಪಾಟೀಲ ಸೇರಿದಂತೆ ಅನೇಕರು ರಾಜ್ಯಸಭೆ ಪ್ರವೇಶಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನೊಳಗೆ ಇನ್ನೂ ಈ ಬಗ್ಗೆ ಚರ್ಚೆ ಆರಂಭವಾಗಿಲ್ಲ ಎನ್ನಲಾಗಿದೆ.

10ರಂದು ದೆಹಲಿಗೆ ಮುಖ್ಯಮಂತ್ರಿ

ರಾಜ್ಯಸಭೆ ಚುನಾವಣೆ ಕುರಿತು ಪಕ್ಷದ ವರಿಷ್ಠರೊಂದಿಗೆ ಸಮಾಲೋಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ತಿಂಗಳ 10ರಂದು ದೆಹಲಿಗೆ ತೆರಳಲಿದ್ದಾರೆ.

ಕಾಂಗ್ರೆಸ್‌ ಬೆಂಬಲ ಕೋರಿದ ಎಚ್‌ಡಿಕೆ

ಹುಬ್ಬಳ್ಳಿ: ‘ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಸ್ಪರ್ಧಿಸಲಿದ್ದು, ಇದಕ್ಕೆ ಕಾಂಗ್ರೆಸ್‌ನ ಬೆಂಬಲ ಕೋರಲಾಗಿದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಗುರುವಾರ ಇಲ್ಲಿ ಹೇಳಿದರು.

‘ಮೂರನೇ ಅಭ್ಯರ್ಥಿ ಆಯ್ಕೆಗೆ ಅವಕಾಶ ಇರುವುದು ಜೆಡಿಎಸ್‌ಗೆ ಮಾತ್ರ. ಇದನ್ನು ಕಡೆಗಣಿಸಿ ಕಾಂಗ್ರೆಸ್‌ ಕುತಂತ್ರ ರಾಜಕೀಯ ಮಾಡಿದರೆ, ಮುಂಬರುವ ದಿನಗಳಲ್ಲಿ ಅದಕ್ಕೆ ಕಾಲವೇ ಉತ್ತರಿಸಲಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ಇದು ಭಿಕ್ಷೆಯಲ್ಲ, ನ್ಯಾಯಯುತ ಬೇಡಿಕೆಯಾಗಿದೆ. ಜೆಡಿಎಸ್‌ ಸದ್ಯ 30 ಶಾಸಕರನ್ನು ಹೊಂದಿದೆ. ಈಗಾಗಲೇ ಪಕ್ಷ ಬಿಟ್ಟಿರುವ ಏಳೂ ಶಾಸಕರು ತಾಂತ್ರಿಕವಾಗಿ ಇನ್ನೂ ಜೆಡಿಎಸ್‌ನಲ್ಲಿಯೇ ಇದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry