ಕಾರಾಗೃಹ ಅವ್ಯವಹಾರ: ಸಿಐಡಿ ತನಿಖೆ

7

ಕಾರಾಗೃಹ ಅವ್ಯವಹಾರ: ಸಿಐಡಿ ತನಿಖೆ

Published:
Updated:

ಬೆಂಗಳೂರು: ಕಾರಾಗೃಹ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆಯನ್ನು ಸಿಐಡಿ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ ಕುಮಾರ್ ಈ ಸಂಬಂಧ ನಡೆಸಿದ ವಿಚಾರಣಾ ವರದಿಯ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದೆ.

ಎಚ್‌.ಎನ್‌. ಸತ್ಯನಾರಾಯಣರಾವ್‌ ಕಾರಾಗೃಹ ಇಲಾಖೆ ಡಿಜಿಪಿ ಆಗಿದ್ದಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸೌಲಭ್ಯ ಒದಗಿಸಲು ₹ 2 ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪದ ತನಿಖೆಯನ್ನು ಎಸಿಬಿಗೆ ಒಪ್ಪಿಸಲಿದೆ.

ಅಲ್ಲದೆ, ಶಶಿಕಲಾ ಅವರಿಗೆ ಜೈಲಿನ ನಿಯಮಗಳನ್ನು ಉಲ್ಲಂಘಿಸಿ ವಿಶೇಷ ಸವಲತ್ತುಗಳನ್ನು ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಜೈಲು ಅಧೀಕ್ಷಕರಾಗಿದ್ದ ಕೃಷ್ಣಕುಮಾರ್‌ ಮತ್ತು ಉಪ ಅಧೀಕ್ಷಕಿ ಅನಿತಾ ವಿರುದ್ಧವೂ ತನಿಖೆ ನಡೆಯಲಿದೆ.

‘ಐಜಿಪಿ ಡಿ.ರೂಪಾ ಹಾಗೂ ನಿವೃತ್ತ ಡಿಜಿಪಿ ಎಚ್‌.ಎನ್‌. ಸತ್ಯನಾರಾಯಣರಾವ್‌ ತಮ್ಮ ವೃತ್ತಿ ಜೀವನದಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆಯೇ’ ಎಂಬ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯಿಂದ ವಿಚಾರಣೆ ನಡೆಸಲಾಗುವುದು ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ಕೇಂದ್ರ ಗೃಹ ಇಲಾಖೆ ಸಿದ್ಧಪಡಿಸಿರುವ 2016 ರ ಕಾರಾಗೃಹಗಳ ಮಾದರಿ ನಿಯಮಾವಳಿ ಕೈಪಿಡಿಯನ್ನು ಆಧರಿಸಿ ರಾಜ್ಯದ ಕಾರಾಗೃಹ ನಿಯಮಾವಳಿಗಳನ್ನು ಮೂರು ತಿಂಗಳ ಒಳಗೆ ಪರಿಷ್ಕರಿಸಿ ಜಾರಿಗೊಳಿಸಬೇಕು ಎಂದು ಕಾರಾಗೃಹ ಇಲಾಖೆ ಎಡಿಜಿಪಿ ಮತ್ತು ಐಜಿಗೆ ಸೂಚನೆ ನೀಡಿದೆ.

ಬೆಂಗಳೂರಿನ ಕೇಂದ್ರ ಕಾರಾಗೃಹವಲ್ಲದೆ, ಎಲ್ಲ ಜಿಲ್ಲಾ ಕಾರಾಗೃಹಗಳಲ್ಲಿ ಸಿಸಿಟಿವಿ, ಮೊಬೈಲ್‌ ಫೋನ್‌ ಜಾಮರ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ವಾರ್ಷಿಕ ನಿರ್ವಹಣೆ ಮಾಡಿಸಬೇಕು. ವಿಚಾರಣಾಧೀನ ಮತ್ತು ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ನಿರ್ವಹಣೆಯಲ್ಲಿ ಜೈಲಿನ ನಿಯಮಾವಳಿ ಮತ್ತು ಕೈಪಿಡಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry