ಮೊಬೈಲ್‌ ವಾಲೆಟ್‌ ವಹಿವಾಟಿಗೆ ಧಕ್ಕೆ

ಭಾನುವಾರ, ಮಾರ್ಚ್ 24, 2019
28 °C
ಕೆವೈಸಿ ನಿಬಂಧನೆ ಸಡಿಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಕಾರ

ಮೊಬೈಲ್‌ ವಾಲೆಟ್‌ ವಹಿವಾಟಿಗೆ ಧಕ್ಕೆ

Published:
Updated:
ಮೊಬೈಲ್‌ ವಾಲೆಟ್‌ ವಹಿವಾಟಿಗೆ ಧಕ್ಕೆ

ಬೆಂಗಳೂರು: ಮೊಬೈಲ್‌ ವಾಲೆಟ್‌ ಬಳಕೆದಾರರು ‘ತಿಳಿಯಿರಿ ನಿಮ್ಮ ಗ್ರಾಹಕರು’ (ಕೆವೈಸಿ) ಕುರಿತ ಸಂಪೂರ್ಣ ಮಾಹಿತಿ ಸಲ್ಲಿಸದಿದ್ದರೆ ಪೂರ್ಣ ಪ್ರಮಾಣದಲ್ಲಿ ವಹಿವಾಟು ನಡೆಸಲು ಮಾರ್ಚ್‌ 1 ರಿಂದ ಸಾಧ್ಯವಾಗುತ್ತಿಲ್ಲ.

ಭಾರತೀಯ ರಿಸರ್ವ್‌ ಬ್ಯಾಂಕ್‌ ವಿಧಿಸಿರುವ ಈ ನಿಬಂಧನೆಯನ್ನು ಮಾರ್ಚ್‌ 1ರಿಂದ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರುವುದರಿಂದ ಮೊಬೈಲ್‌ ವಾಲೆಟ್‌ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಕಂಡು ಬರಲಿದೆ.

‘ಕೆವೈಸಿ’ ಅಗತ್ಯ ಪೂರೈಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಫೆಬ್ರುವರಿ 28 ಕೊನೆಯ ದಿನ ಎಂದು ಗಡುವು ವಿಧಿಸಿತ್ತು. ಅದನ್ನು ವಿಸ್ತರಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿತ್ತು. ಇದಕ್ಕೂ ಮೊದಲು 2017ರ ಡಿಸೆಂಬರ್‌ 31ಕ್ಕೆ ಗಡುವು ನಿಗದಿಪಡಿಸಿತ್ತು. ಆನಂತರ ಅದನ್ನು ಫೆಬ್ರುವರಿ ಅಂತ್ಯದವರೆಗೆ ವಿಸ್ತರಿಸಿತ್ತು.

ಮೊಬೈಲ್‌ ವಾಲೆಟ್‌ಗಳ ಮೂಲಕ ನಡೆಯುವ ವಹಿವಾಟಿನ ಸುರಕ್ಷತೆ ಹೆಚ್ಚಿಸಿ ಗ್ರಾಹಕರು ನಷ್ಟಕ್ಕೆ ಗುರಿಯಾಗದಂತೆ ನೋಡಿಕೊಳ್ಳಲು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಆರ್‌ಬಿಐ ನಿರ್ಧರಿಸಿದೆ.

ಸರ್ಕಾರ ಅನುಮೋದಿಸಿರುವ ದಾಖಲೆ ಪತ್ರಗಳನ್ನು ಮೊಬೈಲ್‌ ವಾಲೆಟ್‌ ಸಂಸ್ಥೆಗಳಿಗೆ ಸಲ್ಲಿಸದ  ಮತ್ತು ಈ ದಾಖಲೆಗಳನ್ನು ದೃಢೀಕರಿಸದ ಗ್ರಾಹಕರು ತಮ್ಮ ಮೊಬೈಲ್‌ ವಾಲೆಟ್‌ಗೆ ಹೊಸದಾಗಿ ಹಣ ಸೇರ್ಪಡೆ ಮಾಡಲು, ಇತರ ವಾಲೆಟ್‌ಗಳಿಗೆ ಹಣ ವರ್ಗಾಯಿಸಲು ಈಗ ಸಾಧ್ಯವಾಗುತ್ತಿಲ್ಲ.

ವಾಲೆಟ್‌ನಲ್ಲಿ ಈ ಮೊದಲೇ ಇರುವ ಹಣವನ್ನಷ್ಟೇ ಬಳಸಿ ಮತ್ತು ಸರಕು ಮತ್ತು ಸೇವೆಗಳನ್ನು ಖರೀದಿಸಬಹುದಾಗಿದೆ. ವಾಲೆಟ್‌ನಲ್ಲಿ ಈ ಮೊದಲೇ ಇರುವ ಹಣ ಸುರಕ್ಷಿತವಾಗಿರುತ್ತದೆ. ಆ ಬಗ್ಗೆ ಗ್ರಾಹಕರು ಚಿಂತೆ ಪಡಬೇಕಾಗಿಲ್ಲ ಎಂದು ಕೇಂದ್ರೀಯ ಬ್ಯಾಂಕ್‌ ತಿಳಿಸಿದೆ.

‘ಕೆವೈಸಿ’ ಇಲ್ಲದೆ ₹ 10 ಸಾವಿರವರೆಗಿನ ವಹಿವಾಟಿಗೆ ಅವಕಾಶ ಮಾಡಿಕೊಡಬೇಕು ಎಂದು ಪ್ರಿಪೇಯ್ಡ್‌ ಪಾವತಿ ವಹಿವಾಟಿನ ಸಂಘಟನೆಯಾಗಿರುವ ಪೇಮೆಂಟ್ಸ್‌ ಕೌನ್ಸಿಲ್‌ ಆಫ್‌ ಇಂಡಿಯಾ ಮನವಿ ಮಾಡಿಕೊಂಡಿದ್ದರೂ ಆರ್‌ಬಿಐ ಅದಕ್ಕೆ ಮನ್ನಣೆ ನೀಡಿಲ್ಲ.

ಆರ್‌ಬಿಐನ ಈ ಕಠಿಣ ನಿಲುವು ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸುವ ಈ ಉದ್ಯಮದ ಮೇಲೆ ಮುಂದಿನ ಕೆಲ ತಿಂಗಳವರೆಗೆ ಪ್ರತಿಕೂಲ ಪರಿಣಾಮ ಬೀರಲಿದೆ.

‘ದೀರ್ಘಾವಧಿಯಲ್ಲಿ ಇದರಿಂದ ಇಡೀ ಉದ್ದಿಮೆಗೆ ಪ್ರಯೋಜನ ಲಭಿಸಲಿದೆ’ ಎಂದು ‘ದ ಮೊಬೈಲ್‌ ವಾಲೆಟ್‌’ ಸ್ಥಾಪಕ ವಿನಯ್‌ ಕೆ. ಅವರು ಪ್ರತಿಕ್ರಿಯಿಸಿದ್ದಾರೆ. ಪೇಟಿಎಂ, ಮೊಬಿಕ್ವಿಕ್‌, ಸಿಟ್ರಸ್‌ ಸೇರಿದಂತೆ ವಿವಿಧ ಪ್ರಿಪೇಯ್ಡ್‌ ವಾಲೆಟ್‌ ಬಳಸುವ ಶೇ 90ರಷ್ಟು ಗ್ರಾಹಕರು ‘ಕೆವೈಸಿ’ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಹೀಗಾಗಿ ಅವರು ಮಾರ್ಚ್‌ 1ರಿಂದ ಮೊಬೈಲ್‌ ವಾಲೆಟ್‌ ಅನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಸಾಧ್ಯವಾಗುತ್ತಿಲ್ಲ.

ನೋಟು ರದ್ದತಿ ನಿರ್ಧಾರದಿಂದಾಗಿ ನಗದುರಹಿತ ವಹಿವಾಟಿಗೆ ಉತ್ತೇಜನ ಸಿಕ್ಕಿತ್ತು. ಹತ್ತಾರು ಮೊಬೈಲ್‌ ವಾಲೆಟ್‌ಗಳು ಈ ಡಿಜಿಟಲ್‌ ವಹಿವಾಟಿನ ಮಾರುಕಟ್ಟೆಯನ್ನು ಪೈಪೋಟಿ ಮೇಲೆ ಪ್ರವೇಶಿಸಿದ್ದವು. ಈಗ ’ಕೆವೈಸಿ’ ನಿಬಂಧನೆ ಕಾರಣಕ್ಕೆ ನಗದುರಹಿತ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಕಂಡುಬರಲಿದೆ.

ಅಂಕಿ ಅಂಶಗಳು

* ₹ 15 ಸಾವಿರ ಕೋಟಿ: ಪ್ರತಿ ತಿಂಗಳ ವಹಿವಾಟು

* ₹ 10 ಸಾವಿರ ಕೋಟಿ: ಹಣ ವರ್ಗಾವಣೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry