ಕಾಡದ ಪ್ರಶ್ನೆ: ಖುಷಿಯಲ್ಲಿ ಹಿಗ್ಗಿದ ವಿದ್ಯಾರ್ಥಿಗಳು

ಭಾನುವಾರ, ಮಾರ್ಚ್ 24, 2019
28 °C

ಕಾಡದ ಪ್ರಶ್ನೆ: ಖುಷಿಯಲ್ಲಿ ಹಿಗ್ಗಿದ ವಿದ್ಯಾರ್ಥಿಗಳು

Published:
Updated:
ಕಾಡದ ಪ್ರಶ್ನೆ: ಖುಷಿಯಲ್ಲಿ ಹಿಗ್ಗಿದ ವಿದ್ಯಾರ್ಥಿಗಳು

ಬೆಂಗಳೂರು: ಅರ್ಥಶಾಸ್ತ್ರ, ಭೌತವಿಜ್ಞಾನ ಪರೀಕ್ಷೆಗೆ ಆತಂಕ, ಅಂಜಿಕೆ ಹಾಗೂ ಒತ್ತಡದಲ್ಲಿಯೇ ಹೋಗಿದ್ದ ವಿದ್ಯಾರ್ಥಿಗಳು ನಗುಮೊಗದಲ್ಲಿ ಹೊರ ಬಂದರು. ‘ಪರೀಕ್ಷೆ ಸುಲಭವಾಗಿತ್ತಲ್ಲಾ’ ಎಂದು ಸ್ನೇಹಿತರೊಂದಿಗೆ ಸಂಭ್ರಮಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆ, ಅದಲು–ಬದಲು.... ಹೀಗೆ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೆ ಗುರುವಾರ ನಗರದಲ್ಲಿ ದ್ವಿತೀಯ ಪಿಯು ಪರೀಕ್ಷೆ ಸುಗಮವಾಗಿ ನಡೆಯಿತು.

ನಿಶ್ಯಬ್ಧವಾಗಿದ್ದ ಕಾಲೇಜು ಆವರಣ ಪರೀಕ್ಷೆ ಮುಗಿಯುತ್ತಿದ್ದಂತೆ ಒಮ್ಮೆಲೇ ಗಿಜಿಗುಟ್ಟಲು ಪ್ರಾರಂಭವಾಯಿತು. ‘ಆ ಪ್ರಶ್ನೆಗೆ ಉತ್ತರ ಏನು’, ‘ಓದಿಕೊಂಡು ಹೋಗಿದ್ದೇ ಬಂದಿದೆ ನೋಡು ಮಗಾ’, ‘ಎಷ್ಟು ನೆನಪಿಸಿಕೊಂಡರೂ ಇದಕ್ಕೆ ಉತ್ತರವೇ ಹೊಳೆಯಲಿಲ್ಲ ಕಣೆ’... ಹೀಗೆ ಮಾತು ನಿರಂತರವಾಗಿತ್ತು. ಕಾಲೇಜಿನ ಆವರಣದಲ್ಲಿಯೇ ಕೆಲವರು ಪರೀಕ್ಷೆಯ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರೇ, ಇನ್ನೂ ಕೆಲವರು ಸ್ನೇಹಿತರೊಂದಿಗೆ ಸಾಗುತ್ತಾ ಚರ್ಚಿಸಿದರು.

ಮಕ್ಕಳನ್ನು ಕರೆದುಕೊಂಡು ಹೋಗಲು ಕಾಲೇಜಿಗೆ ಬಂದಿದ್ದ ಪೋಷಕರ ಮೊಗದಲ್ಲಿಯೂ ಆತಂಕ ಮನೆ ಮಾಡಿತ್ತು. ಸಂತಸದಲ್ಲಿ ಓಡಿಬಂದ ಮಕ್ಕಳನ್ನು ನೋಡುತ್ತಿದ್ದಂತೆ ಅದೆಲ್ಲವೂ ಮಾಯವಾಗಿ, ನೆಮ್ಮದಿಯ ನಿಟ್ಟುಸಿರುಬಿಟ್ಟರು. 148 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

‘ಭೌತವಿಜ್ಞಾನ ಪ್ರಶ್ನೆ ಪತ್ರಿಕೆ ಬಹಳ ಸುಲಭವಾಗಿತ್ತು. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಚೆನ್ನಾಗಿ ಓದಿಕೊಂಡಿದ್ದೆ. ಅವುಗಳಿಗೆ ಹೋಲಿಸಿದರೆ, ಈ ಬಾರಿಯ ಪತ್ರಿಕೆ ಉತ್ತಮವಾಗಿತ್ತು’ ಎಂದು ನ್ಯಾಷನಲ್‌ ಕಾಲೇಜಿನ ಸ್ವಾತಿ ತಿಳಿಸಿದರು.

‘ಪ್ರಶ್ನೆಪತ್ರಿಕೆಯಲ್ಲಿ ಯಾವುದೇ ಗೊಂದಲಗಳು ಇರಲಿಲ್ಲ. ಅರ್ಥಶಾಸ್ತ್ರ ಪತ್ರಿಕೆಯಲ್ಲಿ ಉತ್ತಮ ಅಂಕ ಗಳಿಸುವ ಭರವಸೆ ಇದೆ’ ಎಂದು ಪಿಇಎಸ್‌ ಕಾಲೇಜಿನಲ್ಲಿ ಪರೀಕ್ಷೆ ಬರೆದ ಶ್ರೀನಿವಾಸ್‌ ಹೇಳಿದರು.

ಬೇಸ್‌ ಸಂಸ್ಥೆಯ ಭೌತವಿಜ್ಞಾನ ವಿಭಾಗದ ಪ್ರೊ.ದಶರತಿ ‘ಪಠ್ಯದಲ್ಲಿನ ಎಲ್ಲಾ ವಿಷಯದ ಮೇಲೂ ಪ್ರಶ್ನೆಗಳನ್ನು ಕೇಳಲಾಗಿದೆ. ಗೊಂದಲ ಸೃಷ್ಟಿಸುವ ಅಥವಾ ನಿಗದಿತ ಪಠ್ಯಕ್ರಮದಿಂದ ಹೊರಗಿನ ಯಾವುದೇ ಪ್ರಶ್ನೆಗಳು ಇರಲಿಲ್ಲ. ಸಾಮಾನ್ಯ ವಿದ್ಯಾರ್ಥಿಯೂ 70 ಅಂಕ ಗಳಿಸಬಹುದಾದ ಪ್ರಶ್ನೆಪತ್ರಿಕೆ’ ಎಂದು ವಿವರಿಸಿದರು.

ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಮತ್ತು  ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ ಅವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರೀಕ್ಷಾ ಕೇಂದ್ರಗಳ 200 ಮೀಟರ್‌ ಸುತ್ತಳತೆಯಲ್ಲಿದ್ದ ಇದ್ದ ಜೆರಾಕ್ಸ್‌ ಅಂಗಡಿಗಳನ್ನು ಮುಚ್ಚಿಸಲಾಗಿತ್ತು. ಎಲ್ಲ ಕೇಂದ್ರಗಳಿಗೂ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.

ತಡವಾಗಿ ಬಂದ 11 ವಿದ್ಯಾರ್ಥಿಗಳಿಗಿಲ್ಲ ಪರೀಕ್ಷೆ

ಫ್ರೇಜರ್‌ಟೌನ್‌ನ ಗುಡ್‌ವಿಲ್‌ ಕಾಲೇಜಿನ ಪರೀಕ್ಷಾಕೇಂದ್ರಕ್ಕೆ ತಡವಾಗಿ ಬಂದ 11 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಯಿತು. ಇದಕ್ಕೆ ಕೆಲ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.

‘10.30ರೊಳಗೆ ಕೇಂದ್ರದಲ್ಲಿ ಇರಬೇಕು ಎಂಬ ನಿಯಮವಿದೆ. ಐದು ನಿಮಿಷ ತಡವಾಗಿ ಬಂದವರಿಗೆ ಅವಕಾಶ ನೀಡಲಾಗಿದೆ. 15–30 ನಿಮಿಷ ತಡವಾಗಿ ಹಾಜರಾದವರಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿಲ್ಲ’ ಎಂದು ಇಲಾಖೆಯ ಬೆಂಗಳೂರು ಉತ್ತರ ವಿಭಾಗದ ಉಪನಿರ್ದೇಶಕಿ ಎನ್‌.ನಾಗವೇಣಿ ತಿಳಿಸಿದರು.

‘ಬೆಂಗಳೂರು ದಕ್ಷಿಣ ವಿಭಾಗದ 80 ಕೇಂದ್ರಗಳಲ್ಲಿ ಯಾವುದೇ ರೀತಿಯ ತೊಂದರೆಯಾಗಿಲ್ಲ’ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಡಿಪಿಯು ಅಬ್ದುಲ್‌ ರಶೀದ್‌ ತಿಳಿಸಿದರು.

ದ್ವಿತೀಯ ಪಿಯು ಮೊದಲದಿನ ಪರೀಕ್ಷೆ

ವಿಷಯ, ಪರೀಕ್ಷೆ ತೆಗೆದುಕೊಂಡವರು, ಹಾಜರಾದವರ ಸಂಖ್ಯೆ ಗೈರು

ಅರ್ಥಶಾಸ್ತ್ರ, 58035, 55156, 2879

ಭೌತವಿಜ್ಞಾನ, 43188, 42332, 856

ಅನಿಸಿಕೆಗಳು

ಭೌತವಿಜ್ಞಾನದ ಪ್ರಶ್ನೆಪತ್ರಿಕೆ ಸುಲಭವಾಗಿತ್ತು. ಯಾವುದೇ ಕ್ಲಿಷ್ಟಕರ ಪ್ರಶ್ನೆ ಇರಲಿಲ್ಲ. ನೋಡಿದ ತಕ್ಷಣ ಖುಷಿಯಾಯಿತು

–ಎಸ್‌. ಮೇದಾ

ಭೌತವಿಜ್ಞಾನದಲ್ಲಿ ಲೆಕ್ಕಕ್ಕೆ ಸಂಬಂಧಿಸಿದ ಪ್ರಶ್ನೆಗಳು ಸ್ವಲ್ಪ ಕಷ್ಟವಿತ್ತು. ಉಳಿದೆಲ್ಲವೂ ಸುಲಭವಾಗಿತ್ತು

–ಅರುಣ್‌

ಅರ್ಥಶಾಸ್ತ್ರದಲ್ಲಿ ಹಿಂದಿನ ಮೂರು ವರ್ಷಗಳ ಪ್ರಶ್ನೆಪತ್ರಿಕೆಯಲ್ಲಿನ ಅನೇಕ ಪ್ರಶ್ನೆಗಳನ್ನೇ ಈ ಬಾರಿ ಕೇಳಿದ್ದರಿಂದ ತುಂಬಾನೇ ಖುಷಿಯಾಯಿತು.

–ಶಾಂತರಾಜ್‌

ಚೆನ್ನಾಗಿ ಓದಿದ್ದೆ, ಅಲ್ಲದೆ ಪ್ರಶ್ನೆಗಳು ಕ್ಲಿಷ್ಟವಾಗಿರಲಿಲ್ಲ. ಮುಂದಿನ ಪರೀಕ್ಷೆಗೆ ಹೆಚ್ಚು ಆತ್ಮವಿಶ್ವಾಸ ಮೂಡಿದೆ.

–ಮಹತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry