ಬೆಳ್ಳಂದೂರು ಕೆರೆ ಕಾವಲಿಗೆ 16 ಸಿಬ್ಬಂದಿ

7

ಬೆಳ್ಳಂದೂರು ಕೆರೆ ಕಾವಲಿಗೆ 16 ಸಿಬ್ಬಂದಿ

Published:
Updated:
ಬೆಳ್ಳಂದೂರು ಕೆರೆ ಕಾವಲಿಗೆ 16 ಸಿಬ್ಬಂದಿ

ಬೆಂಗಳೂರು: ‘ಬೆಳ್ಳಂದೂರು ಕೆರೆ ಒಡಲಿಗೆ ತ್ಯಾಜ್ಯ ಸುರಿಯುವುದು ಹಾಗೂ ಕೊಳಚೆ ನೀರು ಹರಿಸುವುದನ್ನು ತಡೆಗಟ್ಟಲು 16 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.

ಜಲಮೂಲದ ಸ್ವಚ್ಛತಾ ಕಾರ್ಯವನ್ನು ಗುರುವಾರ ಪರಿಶೀಲಿಸಿದ ಅವರು, ‘ಸಿಬ್ಬಂದಿ ಗಸ್ತು ತಿರುಗಿ ಜಲಮೂಲ ಮಲಿನ ಮಾಡುವವರ ಬಗ್ಗೆ ನಿಗಾ ಇಟ್ಟಿದ್ದಾರೆ’ ಎಂದರು.

‘ನೀರಿನಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿಸಲು ಪ್ರಾಯೋಗಿಕವಾಗಿ ಎರಡು ಏರೇಟರ್‌ ಅಳವಡಿಸಲಾಗುತ್ತದೆ. ಆ ಮೂಲಕ ಕೆರೆ ನೀರನ್ನು ಸ್ವಚ್ಛವಾಗಿಡಲಾಗುತ್ತದೆ. ಸುತ್ತಲೂ ಸಿ.ಸಿ.ಟಿ.ವಿ ಕ್ಯಾಮೆರಾಗಳು ಹಾಗೂ ತಂತಿ ಬೇಲಿ ಅಳವಡಿಸುತ್ತೇವೆ’ ಎಂದು ಹೇಳಿದರು.

‘ಕಳೆಯಿಂದಾಗಿ ಕೆರೆಯ ನೀರು ಶುದ್ಧೀಕರಣವಾಗುತ್ತದೆ ಎಂಬ ಕಾರಣ ನೀಡಿ ಸ್ವಚ್ಛತಾ ಕಾರ್ಯಕ್ಕೆ ತಜ್ಞರ ಸಮಿತಿ ಅಡ್ಡಗಾಲು ಹಾಕಿತ್ತು. ಇಲ್ಲವಾಗಿದ್ದರೆ, ಕೆಲ ತಿಂಗಳ ಹಿಂದೆಯೇ ಈ ಕಾರ್ಯ ಪೂರ್ಣಗೊಳ್ಳುತ್ತಿತ್ತು. ಒಣಗಿದ ಹುಲ್ಲಿನಿಂದಲೇ ಕೆರೆಗೆ ಬೆಂಕಿ ಬೀಳುತ್ತಿದೆ’ ಎಂದರು.

ಸದ್ಯ ಶೇ 40 ರಷ್ಟು ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ. ಉಳಿದ ಕಾರ್ಯವನ್ನು ಎರಡು ತಿಂಗಳುಗಳಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೆರೆ ರಕ್ಷಣೆಯೂ ಸಮಾಜಸೇವೆ

‘ನನ್ನ ಪ್ರಕಾರ ಗಡಿ ರಕ್ಷಣೆಯಂತೆ ಕೆರೆ ಸಂರಕ್ಷಣೆಯೂ ದೇಶಸೇವೆ ಇದ್ದಂತೆ. ಅದೇ ಭಾವನೆಯಿಂದ ಜಲಮೂಲದ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದೇವೆ’ ಎಂದು ಕಾವಲು ಸಿಬ್ಬಂದಿಯ ಮುಖ್ಯಸ್ಥ ಎಂ.ಫರ್ನಾಂಡಿಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಿನದ 24 ಗಂಟೆಯೂ ಕೆರೆ ರಕ್ಷಣೆ ಮಾಡುವ ಹೊಣೆ ನಮ್ಮ ಮೇಲಿದೆ. ಸಿಬ್ಬಂದಿ ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಮಾಜಸೇವೆಯ ಮನೋಭಾವವುಳ್ಳ ಎನ್‌ಸಿಸಿ ಕೆಡೆಟ್‌ಗಳನ್ನು ಈ ಕೆಲಸಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.

‘ಕೇಂದ್ರ ನಯಾಪೈಸೆ ನೀಡಿಲ್ಲ’

‘ವರ್ತೂರು ಹಾಗೂ ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಯಾಪೈಸೆ ವಿಶೇಷ ಅನುದಾನ ನೀಡಿಲ್ಲ’ ಎಂದು ಕೆ.ಜೆ.ಜಾರ್ಜ್‌ ಸ್ಪಷ್ಟಪಡಿಸಿದರು.

‘ಕೇಂದ್ರ ಅನುದಾನ ನೀಡಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ಹಾಗೂ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸುಳ್ಳು ಹೇಳಿದ್ದಾರೆ. ಕೇಂದ್ರ ಸರ್ಕಾರ ಹೇಳುವುದು ಒಂದು ಮಾಡುವುದು ಇನ್ನೊಂದು’ ಎಂದು ಕಿಡಿಕಾರಿದರು.

ಬೆಳ್ಳಂದೂರು ಕೆರೆಯನ್ನು ಜಲಕ್ರೀಡೆಯ ತಾಣ ಮಾಡಲಾಗುತ್ತದೆ. ಆ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ

–ಕೆ.ಜೆ.ಜಾರ್ಜ್, ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry