ಭೋಗ್ಯದ ಹಣ ವಾಪಸ್‌ ಕೇಳಿದ್ದಕ್ಕೆ ಮಹಿಳೆ ಕೊಲೆ

7
ಸದ್ದುಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ

ಭೋಗ್ಯದ ಹಣ ವಾಪಸ್‌ ಕೇಳಿದ್ದಕ್ಕೆ ಮಹಿಳೆ ಕೊಲೆ

Published:
Updated:
ಭೋಗ್ಯದ ಹಣ ವಾಪಸ್‌ ಕೇಳಿದ್ದಕ್ಕೆ ಮಹಿಳೆ ಕೊಲೆ

ಬೆಂಗಳೂರು: ಸದ್ದುಗುಂಟೆಪಾಳ್ಯದ ಕೊಳೆಗೇರಿ ವಸತಿ ಸಮುಚ್ಚಯದಲ್ಲಿ ವಾಸವಿದ್ದ ಕಮಲಮ್ಮ (55) ಎಂಬುವರನ್ನು ಕತ್ತು ಕೊಯ್ದು ಬುಧವಾರ ರಾತ್ರಿ ಕೊಲೆ ಮಾಡಲಾಗಿದೆ.

ಮೃತರು ವಾಸವಿದ್ದ ಮನೆ ಮಾಲೀಕ ಜಗದೀಶ್‌ ಹಾಗೂ ಆತನ ಇಬ್ಬರು ಸ್ನೇಹಿತರು ಈ ಕೊಲೆ ಮಾಡಿರುವ ಅನುಮಾನವಿದ್ದು, ಮೂವರಿಗಾಗಿ ಸದ್ದುಗುಂಟೆಪಾಳ್ಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸುಂಕದಕಟ್ಟೆ ನಿವಾಸಿಯಾದ ಜಗದೀಶ್‌, ಗುಂಡುತೋಪಿನ ಕೊಳೆಗೇರಿ ವಸತಿ ಸಮುಚ್ಚಯದಲ್ಲಿದ್ದ ತನ್ನ ಮನೆಯನ್ನು ಏಳು ವರ್ಷಗಳ ಹಿಂದೆ ಕಮಲಮ್ಮ ಅವರಿಂದ ₹4 ಲಕ್ಷ ಪಡೆದು ಭೋಗ್ಯಕ್ಕೆ ನೀಡಿದ್ದ. ಆ ಮನೆಯಲ್ಲೇ ಮಗಳು ಹಾಗೂ ಮಾನಸಿಕ ಅಸ್ವಸ್ಥನಾಗಿದ್ದ ಪುತ್ರನ ಜತೆಯಲ್ಲಿ ಅವರು ವಾಸವಿದ್ದರು. ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ಸದ್ದುಗುಂಟೆಪಾಳ್ಯ ಪೊಲೀಸರು ತಿಳಿಸಿದರು.

ಇತ್ತೀಚೆಗೆ ಮನೆ ಖಾಲಿ ಮಾಡಲು ತೀರ್ಮಾನಿಸಿದ್ದ ಕಮಲಮ್ಮ, ಹಣವನ್ನು ವಾಪಸ್‌ ಕೊಡುವಂತೆ ಮಾಲೀಕನಿಗೆ ಹೇಳಿದ್ದರು. ಹಣ ಕೊಡಲು ನಿರಾಕರಿಸಿದ್ದ ಆತ, ‘ಸದ್ಯಕ್ಕೆ ಹಣವಿಲ್ಲ. ಮನೆಯಲ್ಲೇ ಉಳಿದುಕೊಳ್ಳಿ. ಪದೇ ಪದೇ ಹಣ ಕೇಳಿದರೆ ಪರಿಣಾಮ ಸರಿ ಇರುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದ.  ಅದೇ ವಿಷಯಕ್ಕೆ ಸಂಬಂಧಿಸಿದಂತೆ ಬುಧವಾರ ಬೆಳಿಗ್ಗೆ ಅವರಿಬ್ಬರ ನಡುವೆ ಗಲಾಟೆ ನಡೆದಿತ್ತು.

ಕೊಲೆ ಮಾಡುವ ಉದ್ದೇಶದಿಂದಲೇ ಸ್ನೇಹಿತರ ಜತೆ ರಾತ್ರಿ ಮನೆಗೆ ಬಂದಿದ್ದ ಜಗದೀಶ್, ಇಬ್ಬರೂ ಮಕ್ಕಳನ್ನು ಹೊರಗೆ ಕಳುಹಿಸಿದ್ದ. ಬಳಿಕ ಕಮಲಮ್ಮ ಜತೆ ಜಗಳ ತೆಗೆದು, ಚಾಕುವಿನಿಂದ ಕತ್ತು ಕೊಯ್ದು ಪರಾರಿಯಾಗಿದ್ದಾನೆ. ಕೆಲ ನಿಮಿಷ ಬಿಟ್ಟು ಮನೆಗೆ ಮರಳಿದ ಮಕ್ಕಳು, ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ಸ್ಥಳೀಯರ ಸಹಾಯದಿಂದ ಸೇಂಟ್ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಕಮಲಮ್ಮ ಅಸುನೀಗಿದರು ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry