ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ತಡೆದು ದಿಢೀರ್‌ ಪ್ರತಿಭಟನೆ

ಮುರನಾಳ–ಸೀಮಿಕೇರಿ ಗ್ರಾಮಸ್ಥರಿಂದ ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ
Last Updated 2 ಮಾರ್ಚ್ 2018, 7:25 IST
ಅಕ್ಷರ ಗಾತ್ರ

ಬಾಗಲಕೋಟೆ: ಹದಗೆಟ್ಟ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಮುರನಾಳ–ಸೀಮಿಕೇರಿ ಗ್ರಾಮಸ್ಥರು ಗುರುವಾರ ತಾಲ್ಲೂಕಿನ ಗದ್ದನಕೇರಿ ಕ್ರಾಸ್ ಸಮೀಪದ ಲಡ್ಡುಮುತ್ಯಾ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿ (218) ರಸ್ತೆ ತಡೆ ನಡೆಸಿ ದಿಢೀರ್ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಇಲ್ಲಿ ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಆತನ ಬೈಕ್ ಮೇಲೆ ಟಿಪ್ಪರ್ ಹರಿದ ಪರಿಣಾಮ ಅದು ಸಂಪೂರ್ಣ ಜಖಂಗೊಂಡಿದೆ. ಇದರಿಂದ ಕೆರಳಿದ ಸ್ಥಳೀಯರು ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದರಿಂದ ಕೆಲ ಗಂಟೆಗಳ ಕಾಲ ವಾಹನ ಸವಾರರು ಪರದಾಡುವಂತಾಯಿತು. ಕೆಲ ಹೊತ್ತು ವಾಹನ ದಟ್ಟಣೆಯೂ ಉಂಟಾ­ಗಿತ್ತು. ರಸ್ತೆ ಪಕ್ಕದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪ್ರತಿಭಟನೆ ನಡೆಯುವ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಆದರೂ ಪ್ರತಿಭಟನೆ ಮುಂದುವರಿಸಿದರು. ಸಂಬಂಧಪಟ್ಟವರನ್ನು ಸ್ಥಳಕ್ಕೆ ಕರೆಸಬೇಕು. ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಭರವಸೆ ನೀಡಬೇಕು ಎಂದು ಪಟ್ಟುಹಿಡಿದರು.

ಗುತ್ತಿಗೆದಾರರು ಕಳೆದ ಮೂರು ತಿಂಗಳಿನಿಂದ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ರಸ್ತೆಯನ್ನು ಹಾಳುಗೆಡವಿ ಹೋಗಿದ್ದಾರೆ. ಕಾಮಗಾರಿ ಮುಗಿಸಲು ವಿಳಂಬ ಮಾಡುತ್ತಿದ್ದಾರೆ. ಪ್ರತಿದಿನ ನೂರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಅದರಿಂದ ಉಂಟಾಗುವ ದೂಳಿನಿಂದ ಇಲ್ಲಿನ ನಿವಾಸಿಗಳು ಹೈರಾಣವಾಗಿ ಹೋಗಿದ್ದು, ಅನಾರೋಗ್ಯಕ್ಕೆ ತುತ್ತಾಗುತ್ತಿ­ದ್ದಾರೆ ಎಂದು ದೂರಿದರು.

ದೂಳಿನಿಂದಾಗಿ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗಿದೆ. ದಿನೇದಿನೇ ಅಪಘಾತಗಳ ಸಂಖ್ಯೆ ಕೂಡಾ ಹೆಚ್ಚಾಗುತ್ತಿವೆ. ಕೂಡಲೇ ಸಂಬಂಧಪಟ್ಟವರು ತ್ವರಿತವಾಗಿ ಕಾಮಗಾರಿ ಮುಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹನುಮಂತ ನಿಂಗಪ್ಪ ಮೇಟಿ, ರವಿ ಯರಗಲ್ಲ, ಮೌನೇಶ ಬಡಿಗೇರ, ಯಂಕಪ್ಪ ಹಟ್ಟಿ, ಬಾಲಪ್ಪ ಜಮಕಟ್ಟಿ, ಸುರೇಶ ತಳವಾರ, ಮಂಜಪ್ಪ ಬಡಿಗೇರ ಸೇರಿದಂತೆ ಮುರನಾಳ–ಸೀಮಿಕೇರಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಇದ್ದರು.

***
ಇಲ್ಲಿ ನಿತ್ಯ ನರಕ ದರ್ಶನ..

‘ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಗುತ್ತಿಗೆದಾರರು ಒಂದು ಭಾಗದಲ್ಲಿ ರಸ್ತೆ ಅಗೆದು ಮಣ್ಣು ಹಾಕಿದ್ದಾರೆ. ಇದರಿಂದ ಒಂದು ಕಡೆ ಮಾತ್ರ ಸಂಚಾರಕ್ಕೆ ಆಸ್ಪದವಾಗುತ್ತದೆ. ಇನ್ನು ಕೆಲವು ಕಡೆ ಸಂಪೂರ್ಣ ರಸ್ತೆಯನ್ನು ಅಗೆಯಲಾಗಿದೆ. ಅವೈಜ್ಞಾನಿಕ ಕಾಮಗಾರಿಯ ಫಲವಾಗಿ ಇಲ್ಲಿನ ಜನರಿಗೆ ನಿತ್ಯ ನರಕ ದರ್ಶನವಾಗುತ್ತಿದೆ’ ಎಂದು ಗದ್ದನಕೇರಿ ಕ್ರಾಸ್ ನಿವಾಸಿ ಮುತ್ತು ಗಡಗಡೆ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮಣ್ಣಿನ ರಸ್ತೆಗೆ ಸರಿಯಾಗಿ ನೀರು ಹಾಕದ ಪರಿಣಾಮ ವಾಹನಗಳು ಹಾದು ಹೋದರೆ ಇಡೀ ಪ್ರದೇಶ ದೂಳಿನಿಂದ ಆವೃತವಾಗುತ್ತದೆ. ಎದುರಿನ ವ್ಯಕ್ತಿಗಳು ಕಾಣುವುದಿಲ್ಲ. ಸ್ಥಳೀಯರಿಗೆ ದೂಳಿನಿಂದಾಗಿ ಕೆಮ್ಮ, ನೆಗಡಿ, ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಹೆಚ್ಚಿವೆ ಹೀಗಿದ್ದರೂ ಸ್ಥಳೀಯಾಡಳಿತ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಮುರನಾಳದ ಭರತ್ ಬಾರಕೇರ ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT