ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್‌ ಗಾದಿ: ಕನ್ನಡಿಗರಲ್ಲಿ ಹರ್ಷ

ಎಂಇಎಸ್‌ ಆಡಳಿತ ಬ್ರೇಕ್‌ ಹಾಕಿದ ‘ಮೀಸಲಾತಿ’
Last Updated 2 ಮಾರ್ಚ್ 2018, 7:40 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ನಗರಪಾಲಿಕೆ ಮೇಯರ್‌ ಸ್ಥಾನ ಕನ್ನಡ ಭಾಷಿಕ ಸದಸ್ಯರ ಪಾಲಾಗಿರುವುದು ಗಡಿನಾಡಿನ ಕನ್ನಡಿಗರಲ್ಲಿ ಹರ್ಷ ಮೂಡಿಸಿದೆ.

ಪಾಲಿಕೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದುದ್ದು ಕನ್ನಡ ಸದಸ್ಯರಿಗೆ ವರದಾನವಾಯಿತು. ಎಂಇಎಸ್‌ ಬಣದಲ್ಲಿ ಆ ಪಂಗಡದ ಸದಸ್ಯರಿರಲಿಲ್ಲ. ಇದರಿಂದಾಗಿ ಸ್ಪರ್ಧೆಗೆ ಅವಕಾಶವೇ ಇರಲಿಲ್ಲ! ಇದರೊಂದಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಅಧಿಕಾರಕ್ಕೆ ಬ್ರೇಕ್‌ ಬಿದ್ದಂತಾಗಿದೆ. ನೂತನ ಮೇಯರ್‌ ಆಗಿ ಬಸಪ್ಪ ಚಿಕ್ಕಲದಿನ್ನಿ ಅವಿರೋಧವಾಗಿ ಹಾಗೂ ಉಪಮೇಯರ್‌ ಆಗಿ ಎಂಇಎಸ್‌ ಬೆಂಬಲಿತ ಸದಸ್ಯೆ ಮಧುಶ್ರೀ ಪೂಜಾರಿ ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.

ಮೇಯರ್‌ ಸ್ಥಾನದ ಆಕಾಂಕ್ಷಿಯಾಗಿದ್ದ ಸುಚೇತಾ ಗಂಡಗುದರಿ ಮನವೊಲಿಸುವಲ್ಲಿ ಜಾರಕಿಹೊಳಿ ಸಹೋದರರು ಯಶಸ್ವಿಯಾದರು. ಪರಿಣಾಮ, ಸತೀಶ ಬೆಂಬಲಿಗ ಬಸಪ್ಪಗೆ ಸ್ಥಾನ ದೊರೆತಿದೆ ಎನ್ನಲಾಗುತ್ತಿದೆ.

ಪ್ರಕ್ರಿಯೆ ಹೀಗಿತ್ತು: ಹಿಂದುಳಿದ ವರ್ಗ ‘ಎ’ (ಮಹಿಳೆಗೆ) ಮೀಸಲಾಗಿದ್ದ ಉಪಮೇಯರ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ಎಂಇಎಸ್‌ನ ಮಧುಶ್ರೀ 8 ಮತಗಳ ಅಂತರದ ಗೆದ್ದರು. 54ನೇ ವಾರ್ಡ್ ಸದಸ್ಯೆ, ಕನ್ನಡ ಬಣದ ಶಾಂತಾ ಉಪ್ಪಾರ ಹಾಗೂ ಎಂಇಎಸ್‌ನ 13ನೇ ವಾರ್ಡ್ ಸದಸ್ಯೆ ಮಧುಶ್ರೀ, 48ನೇ ವಾರ್ಡ್‌ನ ಮೀನಾಕ್ಷಿ ಚಿಗರೆ ಹಾಗೂ 26ನೇ ವಾರ್ಡ್‌ನ ಮೇಘಾ ದಿಲೀಪ ಹಳದನಕರ ನಾಮಪತ್ರ ಸಲ್ಲಿಸಿದ್ದರು. ಮೀನಾಕ್ಷಿ ಹಾಗೂ ಮೇಘಾ ಉಮೇದುವಾರಿಕೆ ಹಿಂಪಡೆದರು. ಕಣದಲ್ಲಿದ್ದ ಮಧುಶ್ರೀ ಹಾಗೂ ಶಾಂತಾ ನಡುವೆ ಚುನಾವಣೆ ನಡೆಯಿತು.

ಮಧುಶ್ರೀ 31, ಶಾಂತಾ 23 ಮತ ಪಡೆದರು. ಒಟ್ಟು 63 ಸದಸ್ಯ ಬಲದ ನಗರಪಾಲಿಕೆಯಲ್ಲಿ ಏಳು ಮಂದಿ ಗೈರುಹಾಜರಾಗಿದ್ದರು. ಒಬ್ಬರಿಗೆ (ಭೈರಗೌಡ ಪಾಟೀಲ) ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ, ಮತ ಹಾಕಲು ಅರ್ಹರಿರಲಿಲ್ಲ.

ನೂತನ ಮೇಯರ್ ಹಾಗೂ ಉಪಮೇಯರ್‌ಗೆ ನಿರ್ಗಮಿತ ಮೇಯರ್ ಸಂಜೋತಾ ಬಾಂದೇಕರ್, ಉಪಮೇಯರ್ ನಾಗೇಶ ಮಂಡೋಲ್ಕರ್, ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ, ಪಾಲಿಕೆ ಆಯುಕ್ತ ಶಶಿಧರ ಕುರೇರ ಹೂಗುಚ್ಚ ನೀಡಿ ಶುಭ ಕೋರಿದರು. ಸದಸ್ಯರೂ ಅಭಿನಂದಿಸಿದರು.

ಒಮ್ಮತಕ್ಕೆ ಕಸರತ್ತು: ಪರಿಶಿಷ್ಟ ಪಂಗಡಕ್ಕೆ ಸೇರಿದ ಬಸಪ್ಪ ಹಾಗೂ ಸುಚೇತಾ ಗಂಡಗುದರಿ ಇಬ್ಬರೂ ಕನ್ನಡ ಬಣದ ಸದಸ್ಯರು. ಎರಡು ದಿನಗಳ ಹಿಂದೆ ಮೇಯರ್ ಹುದ್ದೆ ಅಭ್ಯರ್ಥಿ ಆಯ್ಕೆಗೆ ಒಮ್ಮತ ಮೂಡಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅವರು ಬಸಪ್ಪ ಚಿಕ್ಕಲದಿನ್ನಿ ಬೆಂಬಲಿಸಿದರೆ, ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಸೇಠ್ ಸುಚೇತಾ ಪರ ಇದ್ದರು. ಹೀಗಾಗಿ ಬಸಪ್ಪ ಜತೆಗೆ ಗುರುತಿಸಿಕೊಂಡಿದ್ದ 17 ಸದಸ್ಯರು ಎರಡು ದಿನಗಳಿಂದ ರೆಸಾರ್ಟ್‌ನಲ್ಲಿ ತಂಗಿದ್ದರು. ಕೊನೆ ಕ್ಷಣದವರೆಗೂ ಚುನಾವಣೆ ನಡೆಯುವ ವಾತಾವರಣವಿತ್ತು. ಆದರೆ ನಾಮಪತ್ರ ಸಲ್ಲಿಸಲು 15 ನಿಮಿಷ ಇರುವಾಗ ಕನ್ನಡ ಬಣದ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿದರು.

ಶಾಸಕ ಫಿರೋಜ್ ಸೇಠ್ ಸೇರಿದಂತೆ ಇನ್ನಿತರ ಶಾಸಕರು, ಸಂಸದರು ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದರು.

ಉಪಮೇಯರ್ ಹುದ್ದೆಗೆ ಮಧುಶ್ರೀ ಎರಡು ನಾಮಪತ್ರ ಸಲ್ಲಿಸಿದ್ದರು. ಮೊದಲ ನಾಮಪತ್ರದಲ್ಲಿ ಅಭ್ಯರ್ಥಿ ಹಾಗೂ ಸೂಚಕರ ಹೆಸರು ಒಂದೇ ಇದ್ದಿದ್ದರಿಂದ ಹಾಗೂ ಸೂಚಕರ ಹೆಸರು ಪ್ರಸ್ತಾಪಿಸದ ಕಾರಣ ಅದನ್ನು ಚುನಾವಣಾಧಿಕಾರಿ ತಿರಸ್ಕರಿಸಿದರು. ಇನ್ನೊಂದು ನಾಮಪತ್ರ ಕ್ರಮಬದ್ಧವಾಗಿತ್ತು. ಬಸಪ್ಪ ಮೂರು ನಾಮಪತ್ರಗಳನ್ನು ಸಲ್ಲಿಸಿದ್ದರು.
***
ಎಂಇಎಸ್‌ನವರ ಕ್ಯಾತೆ

ಸಭೆ ಆರಂಭವಾಗುತ್ತಿದ್ದಂತೆಯೇ ಕ್ಯಾತೆ ತೆಗೆದ ಎಂಇಎಸ್‌ನ ಸದಸ್ಯರು, ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಯಲ್ಲಿ ಮಾಹಿತಿ ನೀಡುವಂತೆ ಚುನಾವಣೆ ಅಧಿಕಾರಿಯನ್ನು ಕೋರಿದರು.

ಶಾಸಕ ಸಂಭಾಜಿ ಪಾಟೀಲ ಹಾಗೂ ಪಂಢರಿ ಪರಬ್ ಕನ್ನಡ ಬಿಟ್ಟು ಮರಾಠಿ, ಹಿಂದಿ ಇಲ್ಲವೇ ಇಂಗ್ಲಿಷ್‌ನಲ್ಲಿ ಮಾಹಿತಿ ಕೊಡಿ ಎಂದು ಒತ್ತಾಯಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕನ್ನಡ ಬಣದ ರಮೇಶ ಸೊಂಟಕ್ಕಿ, ಈ ಹಿಂದಿನ ಎಲ್ಲ ಚುನಾವಣೆಗಳಲ್ಲಿ ಆಡಳಿತ ಭಾಷೆ ಬಳಸಲಾಗಿದೆ. ಈಗಲೂ ಅದೇ ಮುಂದುವರಿಯಬೇಕು ಎಂದು ಕೋರಿದರು. ಒಟ್ಟಾರೆ ಪ್ರಕ್ರಿಯೆಯನ್ನು ಕನ್ನಡದಲ್ಲಿಯೇ ನಡೆಸಲಾಯಿತು.
***
ನಗರದ ಅಭಿವೃದ್ಧಿಗೆ ಆದ್ಯತೆ

ಸರ್ವ ಸದಸ್ಯರು, ಅಧಿಕಾರಿಗಳ ಸಹಕಾರದೊಂದಿಗೆ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನೂತನ ಮೇಯರ್‌ ಬಸಪ್ಪ ಚಿಕ್ಕಲದಿನ್ನಿ ಪ್ರತಿಕ್ರಿಯಿಸಿದರು.

‘ಜಾರಕಿಹೊಳಿ ಸಹೋದರರು, ಸಂಸದರು ಹಾಗೂ ಶಾಸಕರಿಂದಾಗಿ ಈ ಸ್ಥಾನ ದೊರೆತಿದೆ. ನಗರವನ್ನು ಸುಂದರವನ್ನಾಗಿ ಮಾಡುವುದಕ್ಕೆ ಯೋಜನೆಗಳನ್ನು ಜಾರಿಗೊಳಿಸಬೇಕಾಗಿದೆ. ಸ್ಮಾರ್ಟ್‌ ಸಿಟಿ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.
***
ಕಾರ್ಖಾನೆಯಿಂದ ಮೇಯರ್‌ವರೆಗೆ

ಪಾಲಿಕೆ ಇತಿಹಾಸದಲ್ಲಿ ಮತ್ತೊಂದು ಇತಿಹಾಸ ದಾಖಲಾಯಿತು. ಇಲ್ಲಿ 1991ರಲ್ಲಿ ಮೊಟ್ಟಮೊದಲು ಕನ್ನಡಿಗರೊಬ್ಬರು ಎಂಇಎಸ್‌ ಸದಸ್ಯರ  ಬೆಂಬಲದಿಂದ ಮೇಯರ್‌ ಸ್ಥಾನ ಅಲಂಕರಿಸಿದ್ದರು. ಈಗ ಕನ್ನಡಿಗನೊಬ್ಬ ಈ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಸಪ್ಪ ಇಂಡಾಲ್ (ಈಗ ಹಿಂಡಾಲ್ಕೊ) ಕಾರ್ಖಾನೆ ಉದ್ಯೋಗಿ. ಮುತ್ಯಾನಟ್ಟಿಯಿಂದ ವೈಭವನಗರವರೆಗೆ ಬರುವ 55ನೇ ವಾರ್ಡ್‌ನಿಂದ 2ನೇ ಬಾರಿಗೆ ಪಾಲಿಕೆಗೆ ಆಯ್ಕೆಯಾದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT