ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸಹಾಯ ಗುಂಪುಗಳ ಡಿಜಿಟಲೀಕರಣ

ತರಬೇತಿ ಕಾರ್ಯಕ್ರಮದಲ್ಲಿ ನಬಾರ್ಡ್ ಸಹಾಯಕ ಮಹಾ ಪ್ರಬಂಧಕ ಜೋಶಿ ಹೇಳಿಕೆ
Last Updated 2 ಮಾರ್ಚ್ 2018, 8:53 IST
ಅಕ್ಷರ ಗಾತ್ರ

ಬೀದರ್: ‘ಈ-ಶಕ್ತಿ ಯೋಜನೆ ಅಡಿ ಜಿಲ್ಲೆಯಲ್ಲಿ 8 ಸಾವಿರ ಸ್ವಸಹಾಯ ಗುಂಪುಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ’ ಎಂದು ನಬಾರ್ಡ್ ಸಹಾಯಕ ಮಹಾ ಪ್ರಬಂಧಕ ಡಿ.ವಿ. ಜೋಶಿ ತಿಳಿಸಿದರು.

ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಗುರುವಾರ ಈ-ಶಕ್ತಿ ಯೋಜನೆ ಹಾಗೂ ಡಿಜಿಟಲ್ ಇಂಡಿಯಾ ಪರಿಕಲ್ಪನೆ ಕುರಿತ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಡಿಜಿಟಲೀಕರಣದಿಂದ ಸದಸ್ಯರು ದ್ವಿ ಸದಸ್ಯತ್ವ ಹಾಗೂ ಬಹುರೂಪದ ಸಾಲ ಪಡೆಯುವುದನ್ನು ತಡೆಯಬಹುದು. ಸುಲಭವಾಗಿ ಕಾಗದ ರಹಿತ ರೂಪದಲ್ಲಿ ಸಾಲ ವಿತರಿಸಬಹುದು’ ಎಂದು ಹೇಳಿದರು.

‘ಸಾಲ ನೀಡಿಕೆ ಸೇರಿ ಸಂಘಗಳ ವ್ಯವಸ್ಥಿತ ಕಾರ್ಯಾಚರಣೆಗಾಗಿ ಈ-ಶಕ್ತಿ ಯೋಜನೆ ಆರಂಭಿಸಲಾಗಿದೆ. ಯೋಜನೆಯಡಿ ದೇಶದ ನೂರು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದಲ್ಲಿ ಬೀದರ್ ಸೇರಿ 5 ಜಿಲ್ಲೆಗಳಲ್ಲಿ ಮಾತ್ರ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ’ ಎಂದು ಹೇಳಿದರು.

‘ಯೋಜನೆ ಅನುಷ್ಠಾನದಲ್ಲಿ ಬೀದರ್ ಜಿಲ್ಲೆ ಉತ್ತಮ ಸಾಧನೆ ತೋರಿದ್ದು, ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ’ ಎಂದು ತಿಳಿಸಿದರು.

‘ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಜಿಲ್ಲೆಯಲ್ಲಿ ಸ್ವಸಹಾಯ ಗುಂಪುಗಳಿಗೆ ₹134 ಕೋಟಿ ಸಾಲ ವಿತರಿಸಿ ಮಹಿಳೆಯರಿಗೆ ನೆರವಾಗಿದೆ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಅನಿಲ ಪಾಟೀಲ ಮಾತನಾಡಿ, ‘ಸ್ವ ಸಹಾಯ ಗುಂಪುಗಳ ಸದಸ್ಯೆಯರು ಸಾಲ ವಿತರಣೆ ಜತೆಗೆ ಕೃಷಿಕರಿಗೆ ಉಪಯುಕ್ತವಾಗುವ ಹಲವು ಸೇವೆಗಳನ್ನು ಒದಗಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನೂ ಮಾಡಬಹುದು’ ಎಂದು ತಿಳಿಸಿದರು.

‘ಹೊಸ ಸಾಧ್ಯತೆಗಳ ಬಗೆಗೆ ತಿಳಿವಳಿಕೆ ನೀಡಲು ಸ್ವಸಹಾಯ ಗುಂಪುಗಳ ಸದಸ್ಯೆಯರಿಗೆ ತರಬೇತಿ ಅಗತ್ಯವಾಗಿದೆ’ ಎಂದು ನುಡಿದರು.

ಚಿಟ್ಟಾದ ಪ್ರಗತಿಪರ ರೈತ ಜಾಫರ್ ಮಾತನಾಡಿ, ‘ಕೃಷಿ ಕುರಿತ ತರಬೇತಿಗಳು ರೈತರಿಗೆ ಸಹಕಾರಿಯಾಗಲಿವೆ. ತರಬೇತಿ ಕಾರ್ಯಕ್ರಮಗಳಿಂದ ಪ್ರೇರಿತನಾಗಿ ನನ್ನ ಹೊಲದಲ್ಲಿ ಹಲವು ಆಧುನಿಕ ಕೃಷಿ ಪದ್ಧತಿಗಳನ್ನು ಅನುಸರಿಸಿದ್ದೇನೆ. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ತೊಗರಿ ಬೆಳೆಯನ್ನು ಕ್ವಿಂಟಲ್‌ಗೆ ₹ 8 ಸಾವಿರದಂತೆ ಮಾರಾಟ ಮಾಡಿದ್ದೇನೆ’ ಎಂದು ತಿಳಿಸಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಬೀದರ್ ತಾಲ್ಲೂಕು ಅಧಿಕಾರಿ ಮಲ್ಲಿಕಾರ್ಜುನ ಕಾಜಿ, ನಾಗೇಶ, ರಮೇಶ, ಶಂಕರ ಉಪಸ್ಥಿತರಿದ್ದರು. ಸಹಾರ್ದ ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಅನೀಲ ಮತ್ತು ತನ್ವೀರ್ ರಾಜಾ ನಿರೂಪಿಸಿದರು. ಎಸ್.ಜಿ. ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT