ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಲೇಜು: ಯಡಪುರದ ಬಳಿ ಸ್ಥಳ ಪರಿಶೀಲನೆ

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕಾಲೇಜು ಆರಂಭಿಸುವ ಉದ್ದೇಶ
Last Updated 2 ಮಾರ್ಚ್ 2018, 9:01 IST
ಅಕ್ಷರ ಗಾತ್ರ

ಚಾಮರಾಜನಗರ: ಕೃಷಿ ಕಾಲೇಜು ಸ್ಥಾಪನೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಾಲ್ಲೂಕಿನ ಯಡಪುರದ ಬಳಿ ಗುರುವಾರ ಸ್ಥಳ ಪರಿಶೀಲನೆ ನಡೆಸಿದರು.

ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಗೆ ಕೃಷಿ ಕಾಲೇಜು ಮಂಜೂರು ಮಾಡಿದ್ದು, ವೈದ್ಯಕೀಯ ಕಾಲೇಜಿನ ಹಿಂಭಾಗದಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಉದ್ದೇಶಿಸಲಾಗಿದೆ. ಈ ಸಂಬಂಧ ಸಂಸದ ಆರ್. ಧ್ರುವನಾರಾಯಣ, ಜಿಲ್ಲಾಧಿಕಾರಿ ಬಿ. ರಾಮು, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಸ್. ನಟರಾಜ್‌, ರಿಜಿಸ್ಟ್ರಾರ್ ಎ.ಬಿ. ಪಾಟೀಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ಕುಮಾರ್, ಮಂಡ್ಯ ಕೃಷಿ ಕಾಲೇಜಿನ ಡೀನ್‌ ಶಿವಶಂಕರ್‌ ಮುಂತಾದವರು ಸ್ಥಳ ಪರಿಶೀಲನೆ ನಡೆಸಿದರು.

ಕಾಲೇಜಿಗೆ ಅಗತ್ಯವಾದ ರಸ್ತೆ, ಕಟ್ಟಡಗಳ ನಿರ್ಮಾಣ, ಕುಡಿಯಲು ಹಾಗೂ ಕೃಷಿ ಸಂಶೋಧನೆಗಳಿಗೆ ಅಗತ್ಯವಾದ ನೀರಿನ ಲಭ್ಯತೆ ಮುಂತಾದವುಗಳ ಕುರಿತು ಸಮಾಲೋಚನೆ ನಡೆಸಿದರು. ಜಿಲ್ಲಾಡಳಿತ ಭೂಮಿಯನ್ನು ಆದಷ್ಟು ಬೇಗ ಹಸ್ತಾಂತರಿಸಿ, ಪ್ರದೇಶದಲ್ಲಿರುವ ಕುರುಚಲು ಗಿಡಗಳನ್ನು ತೆರವುಗಳಿಸಿ ಜಾಗ ಸಮತಟ್ಟು ಮಾಡಿ ಮೂಲಸೌಕರ್ಯಗಳನ್ನು ಕಲ್ಪಿಸಿದರೆ, ಉಳಿದ ಕೆಲಸಗಳನ್ನು ತಕ್ಷಣ ಪ್ರಾರಂಭಿಸಲಾಗುವುದು ಎಂದು ಕುಲಪತಿ ಅವರು, ಜಿಲ್ಲಾಧಿಕಾರಿಗೆ ತಿಳಿಸಿದರು.

75 ಎಕರೆ ಬೇಕು: ‘ಕೃಷಿ ಅನುಸಂಧಾನ ಪರಿಷತ್‌ (ಐಸಿಎಆರ್‌) ನಿಯಮದಂತೆ ಕೃಷಿ ಕಾಲೇಜು ಸ್ಥಾಪನೆಗೆ 75 ಎಕರೆ ಭೂಮಿಯ ಅಗತ್ಯವಿದೆ. ಸದ್ಯ 50 ಎಕರೆ ಲಭ್ಯವಿದ್ದು, ಪಕ್ಕದಲ್ಲಿಯೇ ಇರುವ 25 ಎಕರೆಯನ್ನು ಮಂಜೂರು ಮಾಡಲಾಗುವುದು’ ಎಂದು ಸಂಸದ ಆರ್. ಧ್ರುವನಾರಾಯಣ ತಿಳಿಸಿದರು.

ಕಾಲೇಜು ನಿರ್ಮಾಣಕ್ಕೆ ಸದ್ಯ ₹10 ಕೋಟಿ ಬಿಡುಗಡೆಯಾಗಿದೆ. ಅದರಲ್ಲಿ ₹2 ಕೋಟಿ ಹಣವನ್ನು ಕಾಲೇಜು ಆರಂಭದ ಪ್ರಕ್ರಿಯೆಗಳಿಗೆ ಬಳಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಕೃಷಿ ವಿ.ವಿ. ಕುಲಪತಿ ಕೋರಿದರು. ಉಳಿಕೆ ಪ್ರಕ್ರಿಯೆಗಳು ಪ್ರಾರಂಭವಾಗುವ ವೇಳೆಗೆ ಅನುದಾನ ಬಿಡುಗಡೆ ಮಾಡಿಸೋಣ ಎಂದು ಸಂಸದರು ಭರವಸೆ ನೀಡಿದರು.

‘100 ಎಕರೆ ಜಾಗ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ, ಅಷ್ಟು ಪ್ರಮಾಣದ ಜಾಗ ಸಿಗುವುದಿಲ್ಲ. ಇರುವ ಜಾಗವನ್ನು ಅಭಿವೃದ್ಧಿಪಡಿಸಿ, ಅಗತ್ಯ ಸೌಲಭ್ಯಗಳನ್ನು ಒದಗಿಸಿ ನೀಡಲಾಗುವುದು. ವೈದ್ಯಕೀಯ ಕಾಲೇಜು ಸಮೀಪದಲ್ಲಿಯೇ ಇರುವುದರಿಂದ ಉತ್ತಮ ಕ್ಯಾಂಪಸ್‌ ಸೃಷ್ಟಿಯಾಗಲಿದೆ. ನಗರದ ಪ್ರದೇಶದಿಂದ ದೂರವಿದ್ದರೆ ಕಲಿಕೆಗೆ ಅನುಕೂಲವಾಗುತ್ತದೆ. ಪಕ್ಕದಲ್ಲಿಯೇ ಪೊಲೀಸ್‌ ತರಬೇತಿ ಸಂಸ್ಥೆ ಸ್ಥಾಪನೆಗೆ 30 ಎಕರೆ ಮಂಜೂರು ಮಾಡಲಾಗಿದೆ. ವೈದ್ಯಕೀಯ ಕಾಲೇಜು ಪಕ್ಕದಲ್ಲಿ 600 ಹಾಸಿಗೆಯ ಆಸ್ಪತ್ರೆ ನಿರ್ಮಾಣವಾಗಲಿದೆ. ಹೀಗಾಗಿ ಒಟ್ಟಾರೆ ಪ್ರದೇಶ ಸಮಗ್ರ ಅಭಿವೃದ್ಧಿಯಾಗಲಿದೆ’ ಎಂದು ಜಿಲ್ಲಾಧಿಕಾರಿ ಬಿ. ರಾಮು ಹೇಳಿದರು.

ನೀರು ಸರಬರಾಜು ವ್ಯವಸ್ಥೆ ಕುರಿತು ಚಿಂತನೆ ನಡೆಸಲಾಗಿದೆ. ವೈದ್ಯಕೀಯ ಕಾಲೇಜಿಗೆ ಬರುವ ನೀರಿನ ಸಂಪರ್ಕವನ್ನು ವಿಸ್ತರಿಸಬೇಕು. ಸಮೀಪದಲ್ಲಿಯೇ ಕೆರೆ ಇದ್ದು, ಅದನ್ನು ತುಂಬಿಸಿ ಅಲ್ಲಿಂದ ನೀರು ಪೂರೈಸಬಹುದು. ಬೋರ್‌ವೆಲ್‌ಗಳನ್ನು ಕೊರೆಯಿಸಲು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಕೃಷಿ ವಿ.ವಿ. ಸಂಶೋಧನಾ ನಿರ್ದೇಶಕರಾದ ಷಡಕ್ಷರಿ, ದೇವರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ಕೆರೆಹಳ್ಳಿ ನವೀನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ. ಚಂದ್ರು, ಎಪಿಎಂಸಿ ನಿರ್ದೇಶಕ ಬಿ.ಕೆ. ರವಿಕುಮಾರ್,  ಎಪಿಎಂಸಿ ಅಧ್ಯಕ್ಷರಾದ ಬಿ.ಕೆ.ರವಿಕುಮಾರ್,  ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕರಾದ ದೊರೆಸ್ವಾಮಿ ಮತ್ತಿತರರು ಹಾಜರಿದ್ದರು.
**
ಈ ವರ್ಷದಿಂದಲೇ ಆರಂಭಕ್ಕೆ ಸಿದ್ಧತೆ

ಹರದನಹಳ್ಳಿಯಲ್ಲಿ ಇರುವ ಕೃಷಿ ತರಬೇತಿ ಕೇಂದ್ರದಲ್ಲಿಯೇ ಪ್ರಸಕ್ತ ಸಾಲಿನಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಅಗತ್ಯ ಸೌಲಭ್ಯಗಳಿವೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ನಟರಾಜ್‌ ಹೇಳಿದರು.

ಕೇಂದ್ರದಲ್ಲಿ ಇರುವ ವಸತಿ ಮತ್ತಿತರ ಸೌಲಭ್ಯಗಳನ್ನು ಬಳಸಿಕೊಂಡು 30 ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲು ಅವಕಾಶವಿದೆ. ಇಲ್ಲಿಯೇ ಕೃಷಿ ಪ್ರಯೋಗಗಳು, ತರಬೇತಿ ನಡೆಯುವುದರಿಂದ ಮತ್ತು 12 ಕೃಷಿ ವಿಜ್ಞಾನಿಗಳು ಇರುವುದರಿಂದ ಅನುಕೂಲಕರ ವಾತಾವರಣವಿದೆ. ಈ ವರ್ಷದಿಂದಲೇ ಕಾಲೇಜು ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಮಂಡ್ಯ ಕೃಷಿ ಕಾಲೇಜು, ನಾಗೇನಹಳ್ಳಿ ಸಂಶೋಧನಾ ಕೇಂದ್ರ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಸ್ಥಳೀಯ ಉಪನ್ಯಾಸಕರನ್ನು ಬಳಸಿಕೊಂಡು ತರಗತಿಗಳನ್ನು ನಡೆಸಬಹುದು. ಮೊದಲ ವರ್ಷದ ತರಗತಿಗಳನ್ನು ಅಲ್ಲಿಯೇ ನಡೆಸಲು ತೊಂದರೆಯಿಲ್ಲ. ಮುಂದಿನ ಸಾಲಿನಲ್ಲಿ ಕಾಲೇಜು ಕಟ್ಟಡ ನಿರ್ಮಾಣವಾದ ಬಳಿಕ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಬಹುದು ಎಂದರು.

ಸಿಇಟಿ ಪರೀಕ್ಷೆಗಳು ನಡೆದಿದ್ದರೂ, ಕಾಲೇಜು ಪ್ರವೇಶಾತಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಒಟ್ಟಾರೆ ದಾಖಲಾತಿಯಲ್ಲಿ ಶೇ 40ರಷ್ಟು ಸೀಟುಗಳನ್ನು ರೈತರ ಮಕ್ಕಳಿಗೆ ಮೀಸಲಿಡಲಾಗುವುದು ಎಂದರು.
***
ಈ ಹಿಂದೆ ಕಲಬುರ್ಗಿಗೆ ಮಂಜೂರಾಗಿದ್ದ ಕಾನೂನು ಕಾಲೇಜಿನ ಪ್ರಕ್ರಿಯೆ ನಡೆದಿರಲಿಲ್ಲ. ಅದನ್ನು ಜಿಲ್ಲೆಗೆ ವರ್ಗಾಯಿಸಿಕೊಳ್ಳಲಾಗಿದೆ. ಕೇಂದ್ರೀಯ ವಿದ್ಯಾಲಯದ ಕಟ್ಟಡದಲ್ಲಿ ಕಾಲೇಜು ನಡೆಸುವ ಉದ್ದೇಶವಿದೆ ಆರ್. ಧ್ರುವನಾರಾಯಣ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT