ಕೈಮಗ್ಗ ಉತ್ಪನ್ನ ಬಳಸಿ, ನೇಕಾರರ ಉಳಿಸಿ

ಶುಕ್ರವಾರ, ಮಾರ್ಚ್ 22, 2019
28 °C
ನಗರದ ಕೈಮಗ್ಗ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ‘ವಸ್ತ್ರ ನಂದಿ- 2018’ಕ್ಕೆ ಚಾಲನೆ

ಕೈಮಗ್ಗ ಉತ್ಪನ್ನ ಬಳಸಿ, ನೇಕಾರರ ಉಳಿಸಿ

Published:
Updated:
ಕೈಮಗ್ಗ ಉತ್ಪನ್ನ ಬಳಸಿ, ನೇಕಾರರ ಉಳಿಸಿ

ಚಿಕ್ಕಬಳ್ಳಾಪುರ: ‘ಗುಡಿ ಮತ್ತು ಗೃಹ ಕೈಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜನರು ಹೆಚ್ಚೆಚ್ಚು ಕೈಮಗ್ಗ ಉತ್ಪನ್ನಗಳನ್ನು ಖರೀದಿಸಬೇಕು. ಇದರಿಂದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡಿದಂತಾಗುತ್ತದೆ’ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎನ್‌.ರಮೇಶ್‌ ತಿಳಿಸಿದರು.

ಕೇಂದ್ರ ಕೈಮಗ್ಗ ಜವಳಿ ಸಚಿವಾಲಯ, ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ, ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾ ಮಂಡಳಿ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿರುವ ಕೈಮಗ್ಗ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ‘ವಸ್ತ್ರ ನಂದಿ- 2018’ಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಪ್ರತಿಯೊಬ್ಬರು ಖಾದಿ ಮತ್ತು ಕೈಮಗ್ಗದಿಂದ ತಯಾರಿಸಿದ ಉಡುಗೆ ಗಳನ್ನು ಬಳಸುವ ಮೂಲಕ ಮಹಾತ್ಮಾ ಗಾಂಧೀಜಿ ಅವರ ಕನಸು ನನಸು ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಹಾನಿಕಾರಕ ರಾಸಾಯನಿಕ ಮಿಶ್ರಣ ಹೊಂದಿರುವ ಪಾಲಿಸ್ಟರ್‌ ಬಟ್ಟೆಗಳು ಮಾರುಕಟ್ಟೆಗೆ ಬರುತ್ತಿವೆ. ಅವುಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆರೋಗ್ಯದ ದೃಷ್ಟಿಯಿಂದ ಕೂಡ ಖಾದಿ ಉತ್ತಮ ಆಯ್ಕೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ 70 ಕೈಮಗ್ಗ ಸಂಘಗಳಿವೆ. ಕೈಮಗ್ಗ ಉತ್ಪನ್ನಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ಸಿದ್ಧಗೊಳ್ಳುತ್ತಿವೆ. ನೇಕಾರಿಕೆಯಂತಹ ನೆಲಮೂಲದ ಕುಲಕಸುಬು ಉಳಿಯಬೇಕಾದರೆ ಜನರು ಕೈಮಗ್ಗ ಉತ್ಪನ್ನಗಳ ಖರೀದಿಸಲು ಮುಂದಾಗಬೇಕು. ಆ ಬಗ್ಗೆ ಯುವ ಜನರಲ್ಲಿ ಕೂಡ ಕೈಮಗ್ಗ ಮತ್ತು ಜವಳಿ ಇಲಾಖೆ ಹೆಚ್ಚು ಅರಿವು ಮೂಡಿಸುವ ಅಗತ್ಯವಿದೆ’ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಂ.ಮುನಿಯಪ್ಪ ಮಾತನಾಡಿ, ‘ಸಂಕಷ್ಟದಲ್ಲಿರುವ ನೇಕಾರರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನೇಕ ಯೋಜನೆಗಳ ಮೂಲಕ ಸಾಕಷ್ಟು ಸಲವತ್ತುಗಳನ್ನು ನೀಡುತ್ತಿದೆ. ನೇಕಾರ ಸಮುದಾಯದ ಯುವ ಜನರು ಕೂಡ ಅವುಗಳ ಸದುಪಯೋಗ ಪಡೆದುಕೊಂಡು ಮುಂದೆ ಬರುವ ಜತೆಗೆ ಕುಲಕಸುಬು ಉಳಿಸಿಕೊಳ್ಳಬೇಕು’ ಎಂದು ಹೇಳಿದರು.

‘ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಇವತ್ತಿಗೂ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ತಮ್ಮ ಕುಲಕಸುಬನ್ನು ಮುಂದುವರೆಸುತ್ತಿದ್ದಾರೆ. ಅವರಿಗೆ ಇನ್ನಷ್ಟು ಉತ್ತೇಜನ ನೀಡಲು ಇಲಾಖೆ ಶ್ರಮಿಸಬೇಕು. ಹಬ್ಬದ ವಿಶೇಷ ದಿನಗಳಲ್ಲಿ ಗ್ರಾಹಕರು ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು, ಬೆಂಗಳೂರಿನ ಕೈ ಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ಎ.ಸುರೇಶ್‌ ಕುಮಾರ್‌, ಬೆಂಗಳೂರಿನ ಕಾವೇರಿ ಹ್ಯಾಂಡ್‌ಲೂಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಎಸ್‌.ಮುದಯ್ಯ, ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ಉಪನಿರ್ದೇಶಕ ಕೆ.ಎಸ್‌.ಮಂಜುನಾಥ್‌ , ನೇಕಾರರ ಸಮುದಾಯ ಮುಖಂಡರಾದ ಚಂದ್ರಪ್ಪ ಉಪಸ್ಥಿತರಿದ್ದರು.

***

ಎಲ್ಲಿ ಮೇಳ?

ನಗರದ ಹೊಸ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸಮೀಪದ ಕೆಪಿಟಿಸಿಎಲ್ ನೌಕರರ ಒಕ್ಕೂಟದ ಕಲ್ಯಾಣ ಮಂಟಪದಲ್ಲಿ ಈ ಮೇಳ ನಡೆಯುತ್ತಿದೆ. 30 ಮಳಿಗೆಗಳಲ್ಲಿ ವಿವಿಧ ಬಗೆಯ ಪುರುಷ ಮತ್ತು ಮಹಿಳೆಯರ ನವನವೀನ ವಿನ್ಯಾಸದ ಉಡುಗೆಗಳು, ಸೀರೆಗಳು, ಬಟ್ಟೆಗಳು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಮೇಳವು ಮಾರ್ಚ್ 14ರ ವರೆಗೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry