ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಕೇಶವಸ್ವಾಮಿಗೆ ಕಡಲೆಕಾಳು ರಾಶಿ ಸೇವೆ

ಬಾಗೂರಿನ ನೂರೊಂದು ದೇಗುಲದ ಪುರೋಹಿತರಿಗೆ ಕಡಲೆಕಾಳು ವಿತರಣೆ
Last Updated 2 ಮಾರ್ಚ್ 2018, 9:57 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಾಗೂರು ಚನ್ನಕೇಶವಸ್ವಾಮಿ ಗರುಡನ ಕಡಲೆಕಾಳು ರಾಶಿ ಸೇವೆ ಭಕ್ತರ ಸಮ್ಮುಖದಲ್ಲಿ ಗುರುವಾರ ಸಂಭ್ರಮದಿಂದ ನಡೆಯಿತು.

ಕಡಲೆಕಾಳು ರಾಶಿ ಸೇವೆ ಪ್ರಯುಕ್ತ ದೇಗುಲದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಇಲ್ಲಿ ಪ್ರತಿವರ್ಷ ನಡೆಯುವ ಚನ್ನಕೇಶವಸ್ವಾಮಿ ಬ್ರಹ್ಮರಥೋತ್ಸವದ ಮೊದಲ ದಿನ ಕಡಲೆಕಾಳು ರಾಶಿ ಸೇವೆ ನಡೆಸಲಾಗುತ್ತದೆ. ಗರುಡೋತ್ಸವವನ್ನು ಇಲ್ಲಿ ವಿಶಿಷ್ಟವಾಗಿ ನೂರಾರು ವರ್ಷಗಳಿಂದಲೂ ಆಚರಿಸಲಾಗುತ್ತಿದೆ. ಭಕ್ತರು ಶಕ್ತ್ಯಾನುಸಾರ ಕಡಲೆಕಾಳನ್ನು ಬುಧವಾರ ಸಂಜೆಯೇ ದೇಗುಲಕ್ಕೆ ತಂದುಕೊಟ್ಟಿದ್ದರು.

ಬಳಿಕ ಭಕ್ತರು ತಂದುಕೊಟ್ಟ ಕಡಲೆಕಾಳನ್ನು ಅಂದೇ ನೀರಿನಲ್ಲಿ ನೆನೆಹಾಕಲಾಯಿತು. ಗುರುವಾರ ಬೆಳಿಗ್ಗೆ ದೇಗುಲದ ಆವರಣದಲ್ಲಿ ಅಲಂಕೃತ ಗರುಡಮೂರ್ತಿಯ ಎದುರಿಗೆ ಮೂರು ಕ್ವಿಂಟಲ್‌ಗೂ ಅಧಿಕ ಕಡಲೆಕಾಳನ್ನು ರಾಶಿ ಹಾಕಲಾಯಿತು. ನಂತರ ಪುರೋಹಿತರು ಧೂಪದಸೇವೆ, ಮಣೇವು ಕುಣಿತ, ಮಹಾಮಂಗಳಾರತಿ ಪೂಜೆ ನೆರವೇರಿಸಿದರು. ಬಳಿಕ ಅಲಂಕೃತ ಉತ್ಸವ ಮೂರ್ತಿಯನ್ನು ಕಡಲೆಕಾಳು ರಾಶಿಯ ಸುತ್ತ ಮೂರು ಸುತ್ತು ಸುತ್ತಿಸಲಾಯಿತು.

ಚನ್ನಕೇಶವಸ್ವಾಮಿಗೆ ಇಷ್ಟ: ‘ರಾಜ್ಯದ ವಿವಿಧೆಡೆ ರಥೋತ್ಸವದಲ್ಲಿ ಹಣ್ಣಿನ ರಾಶಿ ಪರಿಷೆ ಮಾಡುವುದು
ಸಾಮಾನ್ಯ. ಆದರೆ, ಇಲ್ಲಿನ ಚನ್ನಕೇಶವಸ್ವಾಮಿಗೆ ಕಡಲೆಕಾಳು ಇಷ್ಟವಿರುವುದರಿಂದ ಈ ಸೇವೆ ಮಾಡಲಾಗುತ್ತಿದೆ. ಬಾಗೂರು ಸುತ್ತಮುತ್ತ ಎರೆ ಜಮೀನು ಇದ್ದು, ರೈತರು ಹಿಂಗಾರು ಹಂಗಾಮಿನಲ್ಲಿ ಕಡಲೆಕಾಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಹಾಗಾಗಿ ಪ್ರತಿವರ್ಷ ಬೆಳೆ ಚೆನ್ನಾಗಿ ಆಗಲಿ. ಕಡಲೆ ಗಿಡಕ್ಕೆ ಯಾವುದೇ ರೋಗ ತಾಕದಿರಲಿ ಎಂದು ಪ್ರಾರ್ಥಿಸಿ ಸ್ವಾಮಿಗೆ ಕಡಲೆಕಾಳನ್ನು ಅರ್ಪಿಸುತ್ತಾರೆ’ ಎನ್ನುತ್ತಾರೆ ಪ್ರಧಾನ ಅರ್ಚಕರಾದ ಬಿ.ಕೆ.ಶ್ರೀನಿವಾಸನ್‌.

ನೂರೊಂದು ದೇಗುಲಕ್ಕೆ ವಿತರಣೆ: ನೂರೊಂದು ದೇಗುಲವಿರುವ ನೆಲೆಬೀಡು ಎಂದು ಈ ಗ್ರಾಮ ಇತಿಹಾಸ ಪ್ರಸಿದ್ಧಿಯಾಗಿದೆ. ಕಡಲೆಕಾಳು ಪರಿಷೆಯ ಧಾರ್ಮಿಕ ವಿಧಿ ವಿಧಾನಗಳು ಮುಕ್ತಾಯವಾದ ಬಳಿಕ ಬಾಗೂರಿನಲ್ಲಿರುವ ನೂರೊಂದು ದೇಗುಲದ ಪುರೋಹಿತರಿಗೆ, ಮಠಗಳಿಗೆ, ಸರ್ಕಾರಿ ಇಲಾಖೆ ಅಧಿಕಾರಿಗಳಿಗೆ, ವಿವಿಧ ಸಂಘ–ಸಂಸ್ಥೆ ಮುಖ್ಯಸ್ಥರಿಗೆ, ದೇವಸ್ಥಾನ ಆಗಮಿಕರಿಗೆ, ದೀವಟಿಗೆಯವರಿಗೆ, ದಾಸಯ್ಯಗಳಿಗೆ ಕಡಲೆಕಾಳು ಹಂಚುವುದು ವಾಡಿಕೆ.

80 ಹಳ್ಳಿ ಮುಖಂಡರಿಗೆ ಹಂಚಿಕೆ: ‘ಬಾಗೂರು ಸುತ್ತಮುತ್ತಲಿನ ಶ್ರೀರಂಗಪುರ, ಹಳೇಕುಂದೂರು, ಆನಿವಾಳ, ನೀರಗುಂದ, ಐಲಾಪುರ, ಮಂಟೇನಹಳ್ಳಿ, ಹೇರೂರು, ಮಧುರೆ, ಹೊನ್ನೇಕೆರೆ, ನಾಗೇನಹಳ್ಳಿ, ಲಕ್ಕೇನಹಳ್ಳಿ, ಶೆಟ್ಟಿಹಳ್ಳಿ, ಪಾಳೇದಹಳ್ಳಿ, ಕೋಡಿಹಳ್ಳಿ, ಸಾಣೇಹಳ್ಳಿ ಸೇರಿದಂತೆ 80 ಹಳ್ಳಿ ಮುಖಂಡರಿಗೆ ಕಡಲೇಕಾಳು ವಿತರಿಸುವುದು ಇಲ್ಲಿನ ಮತ್ತೊಂದು ಸಂಪ್ರದಾಯ’ ಎನ್ನುತ್ತಾರೆ ಶಿಕ್ಷಕ ಕೇಶವಮೂರ್ತಿ.

ಕಡಲೆರಾಶಿ ಸೇವೆ ಬಳಿಕ ಚನ್ನಕೇಶವಸ್ವಾಮಿಯ ಕಲ್ಯಾಣೋತ್ಸವ ಹಾಗೂ ಗಜಾರೋಹಣ ಉತ್ಸವಗಳು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದವು.

ಶುಕ್ರವಾರ ಮಧ್ಯಾಹ್ನ 12.08ರಿಂದ 12.55ರ ವರೆಗಿನ ಪುಬ್ಬಾ ನಕ್ಷತ್ರದಲ್ಲಿ ಚನ್ನಕೇಶವಸ್ವಾಮಿ ಕೃಷ್ಣಗಂಧೋತ್ಸವ, ಬ್ರಹ್ಮರಥೋತ್ಸವ ಜರುಗಲಿವೆ.
***
ಸೇವೆ ಮಾಡುವುದರಿಂದ ಕಡಲೆ ಬೆಳೆ ಉತ್ತಮವಾಗಿ ಆಗುತ್ತದೆ ಎಂಬ ನಂಬಿಕೆ ಈ ಭಾಗದ ರೈತರಲ್ಲಿದೆ.

–ಬಿ.ಕೆ.ಶ್ರೀನಿವಾಸನ್‌, ಪ್ರಧಾನ ಅರ್ಚಕರು, ಚನ್ನಕೇಶವಸ್ವಾಮಿ ದೇಗುಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT