ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದವರ ಸೋಲಿಸುವುದು ಇಲ್ಲಿ ಮಾಮೂಲು

ಚನ್ನಗಿರಿ: ಜೆ.ಎಚ್. ಪಟೇಲರ ರಾಜಕೀಯ ಭೂಮಿಯಲ್ಲಿ ಕಾಂಗ್ರೆಸ್‌ನ ಬೇರುಗಳು
Last Updated 2 ಮಾರ್ಚ್ 2018, 10:00 IST
ಅಕ್ಷರ ಗಾತ್ರ

ದಾವಣಗೆರೆ: ಶಿವಮೊಗ್ಗೆಯ ಮಲೆನಾಡಿನ ಸೋಷಲಿಸ್ಟ್‌ ಗಂಧ–ಗಾಳಿ ತಾಕಿಸಿಕೊಂಡೂ ಸಿದ್ಧಾಂತಮುಖಿಯಾಗದ ಮತದಾರರನ್ನು ಒಳಗೊಂಡ ಕ್ಷೇತ್ರ ಚನ್ನಗಿರಿ. ದಾವಣಗೆರೆ ಜಿಲ್ಲೆಗೆ ಸೇರಿದ್ದಾಗಿನಿಂದಲೂ ಇಲ್ಲಿನ ಮತದಾರರ ಚಿತ್ತ ಒಂದೇ ಕಡೆ ನೆಟ್ಟಿರುವುದು ಕಡಿಮೆ. ಅವಕಾಶದ ವಿಷಯದಲ್ಲಿ ಸರ್ವರಿಗೂ ಸಮಪಾಲು ಎಂದೇ ಇಲ್ಲಿನ ನಾಗರಿಕರು ಭಾವಿಸಿರುವಂತಿದೆ.

ಚನ್ನಗಿರಿ ಕ್ಷೇತ್ರದಲ್ಲಿ ಜೆ.ಎಚ್.ಪಟೇಲ್ 1962ರ ಸೋಲಿನಿಂದಲೇ ವಿಧಾನಸಭಾ ರಾಜಕೀಯ ಪ್ರಾರಂಭಿಸಿದ್ದು. 1957ರಲ್ಲಿ ಅವಿರೋಧವಾಗಿ ಇಲ್ಲಿಂದ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಕುಂದೂರು ರುದ್ರಪ್ಪ ಚರಿಷ್ಮಾ ಹೆಚ್ಚಾಗಿದ್ದ ಕಾಲಘಟ್ಟದಲ್ಲಿ ಆ ಸೋಲೇ ಅವರಿಗೆ ಸೋಪಾನವಾಯಿತು. ಆ ಸಂದರ್ಭದಲ್ಲಿ 14 ಸಾವಿರ ಚಿಲ್ಲರೆ ಮತಗಳನ್ನು ಪಡೆದುಕೊಳ್ಳುವುದು ಸುಲಭವಿರಲಿಲ್ಲ.

ರುದ್ರಪ್ಪ ಕೂಡ 1952ರಲ್ಲಿ (ಮೈಸೂರು ಪ್ರಾಂತ್ಯದ ಕಾಲಘಟ್ಟ) ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯ ಎಲ್.ಸಿದ್ದಪ್ಪ ಅವರೆದುರು ಸೋತಿದ್ದವರೇ. ಇಲ್ಲಿನ ಮತದಾರರ ಆಯ್ಕೆಯನ್ನು ಗಮನಿಸಿದರೆ, ಸೋತವರನ್ನು ಗೆಲ್ಲಿಸುವುದು, ಗೆದ್ದವರನ್ನು ಮತ್ತೆ ಬೀಳಿಸುವುದು ಮಾಮೂಲಾಗಿದೆ.

ಮೂರು ಸಲ ಜನತಾ ಪಕ್ಷದಿಂದ, ಒಮ್ಮೆ ಜನತಾದಳದಿಂದ ಸ್ಪರ್ಧಿಸಿ ಗೆದ್ದ ಜೆ.ಎಚ್.ಪಟೇಲರು 1996–99ರ ಅವಧಿಯಲ್ಲಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿ ಆಗಿ ಸದ್ದು ಮಾಡಿದ್ದವರು. ಆ ಗಾದಿಯಲ್ಲಿ ಇದ್ದ ಅವರನ್ನು ಇದೇ ಕ್ಷೇತ್ರದ ಜನ ಮೂರನೇ ಸ್ಥಾನಕ್ಕೆ ತಳ್ಳಿದ್ದು ರಾಜಕೀಯ ಇತಿಹಾಸದ ಗಮನಾರ್ಹ ಸಂಗತಿ.

1999ರಲ್ಲಿ ವಡ್ನಾಳ್ ರಾಜಣ್ಣ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು, ಮುಸ್ಲಿಂ ಎಂಬ ಕಾರಣಕ್ಕೆ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದಿದ್ದ ಮೊಹಿಬುಲ್ಲಾ ಖಾನ್ ಅವರನ್ನು ಶೇ 27ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದೂ ಮಹತ್ವದ ಬೆಳವಣಿಗೆ. ಮೊಹಿಬುಲ್ಲಾ 
ಖಾನ್ ಅವರಿಗಿಂತ 7,000 ಚಿಲ್ಲರೆ ಕಡಿಮೆ ಮತ ಪಟೇಲರಿಗೆ ಸಂದದ್ದು ಅವರ ಕುರಿತು ಮತದಾರರಿಗೆ ಇದ್ದ ಸೆಡವಿಗೆ ಕನ್ನಡಿ ಹಿಡಿಯುತ್ತದೆ. 1989ರಲ್ಲೂ ಪಟೇಲರು ಸೋಲು ಅನುಭವಿಸಿದ್ದರು. ಮರು ಚುನಾವಣೆಯಲ್ಲಿ ಗೆದ್ದು, ಮುಖ್ಯಮಂತ್ರಿ ಆದದ್ದಷ್ಟೆ. ಆಮೇಲೆ ಇಲ್ಲಿನ ಜನಬೆಂಬಲ ಅವರಿಗೆ ದೊರೆಯಲಿಲ್ಲ.

ಕಾಂಗ್ರೆಸ್ ಪಕ್ಷದ ಬೇರುಗಳನ್ನೂ ಇಲ್ಲಿ ನೋಡಬಹುದು. ಕುಂದೂರು ರುದ್ರಪ್ಪ ಎರಡು ಸಲ ಗೆದ್ದು ಬೀಗಿದ್ದು ಅದೇ ಪಕ್ಷದಿಂದ. ಒಮ್ಮೆ ಅವರಿಗೆ ಸೋಲಾಯಿತು. ಸೋಷಲಿಸ್ಟ್ ಪಕ್ಷದಿಂದ ರಾಜಕೀಯ ಬದುಕಿಗೆ ಕಾಲಿಟ್ಟ ಎನ್‌.ಜಿ.ಹಾಲಪ್ಪ ಕೂಡ ಕಾಂಗ್ರೆಸ್‌ಗೆ ಜಿಗಿದರು. ಒಟ್ಟು ಮೂರು ಗೆಲುವನ್ನು ಕಂಡ ಅವರಿಗೆ ಎರಡು ಸಲ ಸಿಕ್ಕಿದ್ದು ಸೋಲಿನ ಕಹಿ.

ಚೆನ್ನಾಗಿ ಓದಿಕೊಂಡಿರುವ, ಸಭ್ಯ ರಾಜಕಾರಣಿ ಎಂದೇ ಈಗಲೂ ಹೆಸರಾಗಿರುವ ಮಹಿಮ ಜೆ. ಪಟೇಲ್ 2004ರಲ್ಲಿ ಜಾತ್ಯತೀತ ಜನತಾದಳದಿಂದ ಗೆದ್ದಿದ್ದರು. ಮರು ಚುನಾವಣೆಯಲ್ಲಿ ಅವರು ಸೂಳೆಕೆರೆಯಲ್ಲಿ ಮೌನವ್ರತ ಕೈಗೊಂಡರು. ಯಾರ ಮನೆಗೂ ಹೋಗಿ ಮತ ಕೇಳದೆ ಚುನಾವಣೆಯಲ್ಲಿ ಸ್ಪರ್ಧಿಸುವ ಹೊಸ ಸಂಕಲ್ಪ ಅವರದ್ದಾಗಿತ್ತು. ಬಿಜೆಪಿಯ ಮಾಡಾಳ್ ವಿರೂಪಾಕ್ಷಪ್ಪ, ಕಾಂಗ್ರೆಸ್‌ನ ವಡ್ನಾಳ್ ರಾಜಣ್ಣ ಇಬ್ಬರಿಗೂ ಅದೇ ರಾಜಕೀಯ ಸದವಕಾಶ ಸೃಷ್ಟಿಸಿತು.

ವಿರೂಪಾಕ್ಷಪ್ಪ ಕೇವಲ 900 ಚಿಲ್ಲರೆ ಮತಗಳಿಂದ ವಡ್ನಾಳ್ ಅವರನ್ನು ಸೋಲಿಸಿದರು. ಅದಕ್ಕೂ ಮೊದಲು ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ವಡ್ನಾಳ್ ರಾಜಣ್ಣ 2013ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಗೆದ್ದುಬಂದರು. ಆಗ ಕೆಜೆಪಿ ಸೇರಿದ್ದ ವಿರೂಪಾಕ್ಷಪ್ಪ ಎರಡನೇ ಸ್ಥಾನಕ್ಕೆ ಕುಸಿದರು.

‘ಚನ್ನಗಿರಿಯಲ್ಲಿ ಮತದಾರರು ವ್ಯಕ್ತಿಯನ್ನು ಅಳೆಯುತ್ತಾ ಬಂದಿರುವರೇ ವಿನಾ ಪಕ್ಷ ಸಿದ್ಧಾಂತಗಳನ್ನಲ್ಲ. ಅವರು ಯಾರನ್ನು ಬೇಕಾದರೂ ಸೋಲಿಸುತ್ತಾರೆ ಯಾರನ್ನು ಬೇಕಾದರೂ ಗೆಲ್ಲಿಸುತ್ತಾರೆ. ಅವರ ಉಮೇದು ನಿರ್ದಿಷ್ಟ ನಿಲುವಿಗೆ ಅಂಟಿಕೊಂಡಿದ್ದೇ ಇಲ್ಲ’ ಎನ್ನುವುದು ಹಿರಿಯ ಪತ್ರಕರ್ತ ನಜೀರ್ ವಿಶ್ಲೇಷಣೆ.

ಶಿವಮೊಗ್ಗ ಜಿಲ್ಲೆಗೆ ಚನ್ನಗಿರಿ ಸೇರಿದ್ದಾಗಲೇ ಜನ ಸಂತೋಷದಿಂದ ಇದ್ದರು. ದಾವಣಗೆರೆ ಜಿಲ್ಲೆಗೆ ಸೇರಿದ ಮೇಲೆ ಕಚೇರಿ ಕೆಲಸಗಳನ್ನು ಮಾಡಿಸಿಕೊಳ್ಳುವುದೇ ಕಷ್ಟವಾಗಿದೆ. ಜನ ತಮಗೆ ಬೇಡ ಎನಿಸಿದವರನ್ನು ಸಲೀಸಾಗಿ ಕಿತ್ತೆಸೆಯುತ್ತಾರೆ ಎನ್ನುವುದು ಸ್ಥಳೀಯರಾದ ಶಂಕರಪ್ಪ ಅವರ ಅಭಿಪ್ರಾಯ.

1952ರಿಂದ ಇಲ್ಲಿಯವರೆಗೆ ಚನ್ನಗಿರಿಯಲ್ಲಿ ಮತದಾರರ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. ಅದಲು ಬದಲು ಕಂಚಿ ಕದಲು ಆಟ ಮುಂದುವರಿದೇ ಇದೆ.
***
ಟಿಕೆಟ್ ಆಕಾಂಕ್ಷಿಗಳು ಹಾಗೂ ಪ್ರಯೋಗ

ಕಾಂಗ್ರೆಸ್‌ನ ಹಾಲಿ ಶಾಸಕ ವಡ್ನಾಳ್‌ ರಾಜಣ್ಣಗೆ ಪರ್ಯಾಯ ಇಲ್ಲ ಎನ್ನಲಾಗುತ್ತಿದೆ. ಮಾಡಾಳ್ ವಿರೂಪಾಕ್ಷಪ್ಪ ಹೆಸರು ಈಗಾಗಲೇ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪ್ರಕಟಗೊಂಡಿದೆಯಾದರೂ ಖಾತರಿ ಇಲ್ಲ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಡಕೆ ಮಾರುಕಟ್ಟೆ ತುಮ್‌ಕೋಸ್‌ ಅಧ್ಯಕ್ಷ ಎಂ.ಶಿವಕುಮಾರ್‌ ಕೂಡ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್‌ ಟಿಕೆಟ್ ಪಡೆದಿರುವ ಆ ಪಕ್ಷದ ಪರಿಶಿಷ್ಟ ಪಂಗಡದ ರಾಜ್ಯ ಘಟಕದ ಅಧ್ಯಕ್ಷ ಹೊದಿಗೆರೆ ರಮೇಶ್‌ ಪ್ರಮುಖ ಸ್ಪರ್ಧಿಯಾಗುವ ಕಾತರದಲ್ಲಿದ್ದಾರೆ. ಜೆ.ಎಚ್‌.ಪಟೇಲರ ಪುತ್ರ ಮಹಿಮ ಪಟೇಲ್‌ ರಾಜ್ಯದಲ್ಲಿ ಜೆಡಿಯು ಸಾರಥ್ಯ ವಹಿಸಿದ್ದು, ಇವರೂ ಕಣಕ್ಕಿಳಿಯುವುದು ಸ್ಪಷ್ಟ. ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಎಲ್ಲ ಅಭ್ಯರ್ಥಿಗಳನ್ನು ಮಠದಲ್ಲೇ ಇರಿಸಿಕೊಂಡು, ಅವರವರ ಕಾರ್ಯಕ್ರಮಗಳನ್ನು ಜನರಿಗೆ ಪ್ರಚಾರ ಮಾಡಿ, ಹಣ–ಮದ್ಯದ ಆಮಿಷವಿಲ್ಲದೆ ಚುನಾವಣೆ ನಡೆಸುವ ಪ್ರಯೋಗದ ಪ್ರಸ್ತಾಪ ಮಾಡಿದ್ದರು. ಪ್ರಮುಖ ಟಿಕೆಟ್ ಆಕಾಂಕ್ಷಿಗಳೆಲ್ಲ ಅದಕ್ಕೆ ಒಪ್ಪಿಗೆ ಸೂಚಿಸಿರುವುದರಿಂದ ಕುತೂಹಲ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT