ಸಹಸ್ರಮಾನದ ಮತದಾರರು 130

7
ಹಾವೇರಿ ಜಿಲ್ಲೆ: ಮತಪಟ್ಟಿ ಪರಿಷ್ಕರಣೆಯ ಬಳಿಕ 19,325 ಮತದಾರರ ಹೆಚ್ಚಳ

ಸಹಸ್ರಮಾನದ ಮತದಾರರು 130

Published:
Updated:

ಹಾವೇರಿ: ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕೃರಣೆಗೊಂಡಿದ್ದು, 12,748 ಮತದಾರರು ಇದೇ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 130 ಮಂದಿ ‘ಸಹಸ್ರಮಾನ’ದ (ಮಿಲೇನಿಯಂ) ಮತದಾರರು.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ., ‘ಮತದಾರರ ಪಟ್ಟಿ ಪರಿಷ್ಕರಣೆಯ ಹೊಸ ಸೇರ್ಪಡೆಗಳಲ್ಲಿ ವಾಸ ಸ್ಥಳ ಬದಲಾವಣೆ ಮಾಡಿದವರು, ಈ ಹಿಂದೆ ನೋಂದಣಿಗೆ ಬಾಕಿ ಉಳಿದಿದ್ದ ಮತದಾರರು ಸೇರಿದಂತೆ ಒಟ್ಟು 31,669 ಮತದಾರರು ಸೇರ್ಪಡೆಗೊಂಡಿದ್ದಾರೆ. ಈ ಪೈಕಿ 130 ಮಂದಿ ಸಹಸ್ರಮಾನದ ಮತದಾರರು’ ಎಂದು ವಿವರಿಸಿದರು.

‘ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ‘ಮಿಲೇನಿಯಂ (ಸಹಸ್ರಮಾನ) ಮತದಾರರು’ ಮೊದಲ ಬಾರಿಗೆ ಹಕ್ಕು ಚಲಾಯಿಸುತ್ತಿದ್ದಾರೆ. ಅಂದರೆ, 2000ನೇ ಇಸ್ವಿಯ ಜನವರಿ 01ರ ಬಳಿಕ ಹುಟ್ಟಿದ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಚುನಾವಣೆಯು ‘ಸಹಸ್ರಮಾನ’ದ ವಿಶೇಷ' ಎಂದು ಚುನಾವಣಾಧಿಕಾರಿಯೂ ಆದ ಅವರು ಬಣ್ಣಿಸಿದರು. ‘ಈ ಬಾರಿಯ ಮತದಾರರ ಪರಿಷ್ಕರಣೆಯಲ್ಲಿ 2000ರ ಜನವರಿ 1ರ ತನಕ ಹುಟ್ಟಿದವರಿಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಈ ಪೈಕಿ ಜನವರಿ 1ರಂದು ಹುಟ್ಟಿದ 130 ಮಂದಿ ನೋಂದಾಯಿಸಿದ್ದು, ‘ಸಹಸ್ರಮಾನದ ಮತದಾರರು’ ಆಗಿದ್ದಾರೆ’ ಎಂದು ತಹಶೀಲ್ದಾರ್ ಪ್ರಶಾಂತ ನಾಲವಾರ ತಿಳಿಸಿದರು.

ಜಿಲ್ಲೆಯಲ್ಲಿ ಅಂದಾಜು 17.25 ಲಕ್ಷ ಜನಸಂಖ್ಯೆಯಿದ್ದು, 2017ರ ಡಿಸೆಂಬರ್ ಅಂತ್ಯದ ತನಕ 11.93 ಲಕ್ಷ ಮತದಾರರು ಇದ್ದರು. ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ 31,669 ಮಂದಿ ಸೇರ್ಪಡೆಗೊಂಡರೆ, 12,344 ಹೆಸರು ಕೈ ಬಿಡಲಾಗಿದೆ. ಹೀಗಾಗಿ ಒಟ್ಟು 19,325 ಮತದಾರರ ಹೆಚ್ಚಳವಾಗಿದೆ. ಒಟ್ಟು ಜನಸಂಖ್ಯೆಯ ಶೇ 70.31 ಮತದಾರರು ಇದ್ದಾರೆ. 18 ವರ್ಷದಿಂದ ಒಳಗಿದ್ದು, ಮತದಾನದಿಂದ ಹೊರಗುಳಿದ 5.12 ಲಕ್ಷ ಜನಸಂಖ್ಯೆ ಜಿಲ್ಲೆಯಲ್ಲಿದೆ.

6 ವಿಧಾನ ಸಭಾ ಕ್ಷೇತ್ರಗಳ ಪೈಕಿ ರಾಣೆಬೆನ್ನೂರು ಕ್ಷೇತ್ರದಲ್ಲಿ ಗರಿಷ್ಠ ಮತದಾರರ ಸೇರ್ಪಡೆಯಾಗಿದೆ. ಈ ಸಂಖ್ಯೆಯು ಹಿರೇಕೆರೂರಿನಲ್ಲಿ ಅತಿ ಕಡಿಮೆ ಇದೆ. ಮಹಿಳಾ ಮತದಾರರ ಅನುಪಾತದಲ್ಲೂ ರಾಣೆಬೆನ್ನೂರು ಮುಂದೆ ಇದ್ದರೆ, ಹಾನಗಲ್‌ ಹಿಂದುಳಿದಿದೆ.

***

ಸಾವಿರ ಪುರುಷ ಮತದಾರರಿಗೆ ಮಹಿಳಾ ಮತದಾರರ ಅನುಪಾತ

ಹಾನಗಲ್ –904

ಶಿಗ್ಗಾವಿ –917

ಹಿರೇಕೆರೂರ –923

ಹಾವೇರಿ –927

ಬ್ಯಾಡಗಿ –939

ರಾಣೆಬೆನ್ನೂರು–949

ಜಿಲ್ಲೆ –927

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry