ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನ ಸರಿಪಡಿಸಲು ಒತ್ತಾಯ

Last Updated 2 ಮಾರ್ಚ್ 2018, 10:52 IST
ಅಕ್ಷರ ಗಾತ್ರ

ಕಾರವಾರ: ವಾರ್ಡ್ ನಂ.25ರ ಚಂದ್ರಾದೇವಿವಾಡಾ ಹಾಗೂ ಹಿರೇಶಿಟ್ಟಾಗಳಲ್ಲಿನ ಸ್ಮಶಾನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಒತ್ತಾಯಿಸಿ ಸ್ಥಳೀಯರು ಬುಧವಾರ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಸ್ಥಳೀಯರಾದ ಪ್ರಮೋದ ತಳೇಕರ ಮಾತನಾಡಿ, ‘ವಾರ್ಡ್ ನಂ.25 ರಲ್ಲಿರುವ ಸ್ಮಶಾನದಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಕಟ್ಟಿಗೆಗಳನ್ನು ಜೋಡಿಸಲು ಅನು ಕೂಲ ಆಗುವಂತೆ ಅಗತ್ಯವಾದ ಆ್ಯಂಗಲ್‌ಗಳನ್ನು ಅಳವಡಿಸುವಂತೆ ಮಂಗಳವಾರ ನಗರಸಭೆ ಕಚೇರಿಗೆ ಬಂದು ಮನವಿ ಮಾಡಿದ್ದೇವೆ. ಆದರೆ ಇದುವರೆಗೆ ಅದನ್ನು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದೆವು. ನಗರಸಭೆ ಕಿರಿಯ ಎಂಜಿನಿಯರ್ ಅರವಿಂದ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದ್ದರು’ ಎಂದರು.

‘ಈ ಬಗ್ಗೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮೋಹನರಾಜ್ ಅವರೂ ನಮಗೆ ಕೇಳಲು ನೀವು ಯಾರು ಎಂದು ಪ್ರಶ್ನಿಸಿದರಲ್ಲದೇ ಎಲ್ಲರೂ ಸೇರಿ ಬನ್ನಿ ಎಂದು ಸವಾಲು ಹಾಕಿದ್ದರು. ಹೀಗಾಗಿ ಇಂದು ಎಲ್ಲರೂ ಸೇರಿ ಬಂದಿದ್ದೇವೆ’ ಎಂದು ಪೌರಾಯುಕ್ತರಿಗೆ ತಿಳಿಸಿದರು.

ಈ ವೇಳೆ ಮೋಹನರಾಜ್ ಅವರು ಮಧ್ಯ ಮಾತಾಡಲು ಆರಂಭಿಸಿದಾಗ ಪ್ರತಿಭಟನಾಕಾರರು ಉದ್ರಿಕ್ತಗೊಂಡು ಗಲಾಟೆ ಎಬ್ಬಿಸಿದರು. ಮಾತಿನ ಚಕಮಕಿ ನಡೆದವು. ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

ಕೆಲ ಸಮಯದ ಬಳಿಕ ಪೌರಾಯುಕ್ತ ಯೋಗೇಶ್ವರ, ‘ಎಲ್ಲ ಸ್ಮಶಾನಗಳಿಗೆ ಸೇರಿ ಟೆಂಡರ್ ಕರೆಯಲಾಗಿದೆ’ ಎಂದು ಉತ್ತರಿಸಿದರು. ‘ನಮಗಿದರ ಅವಶ್ಯಕತೆ ಇಲ್ಲ. ಪ್ರತ್ಯೇಕ ಟೆಂಡರ್ ಕರೆದು ವಾರ್ಡ್ ನಂ.25ರ ಸ್ಮಶಾನ ಸರಿಪಡಿಸಿ ಅನುಕೂಲ ಮಾಡಿ ಕೊಡಿ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಅಲ್ಲದೆ ತಮ್ಮ ಮೇಲೆ ಹರಿಹಾಯ್ದ ಎಂಜಿನಿಯರ್‌ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಅವರು ಕ್ಷಮೆ ಕೇಳಿದ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು.

ಮನವಿ: ಈ ಬಗ್ಗೆ ಸ್ಥಳೀಯರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅವರು, ಸ್ಮಶಾನಕ್ಕೆ ಪ್ರತ್ಯೇಕ ಟೆಂಡರ್ ಕರೆದು ಕಾಮಗಾರಿ ನಡೆಸುವುದಕ್ಕೆ ಒಪ್ಪಿಗೆ ಸೂಚಿಸಿದರು.

ಪ್ರಮುಖರಾದ ಚಂದ್ರಹಾಸ ಕೊಠಾ ರಕರ, ಸತೀಶ ಕೊಳಂಬಕರ, ಚಂದ್ರಾ ದೇವಿ ವಾಡಾ ಹಾಗೂ ಹಿರೇಶಿಟ್ಟಾದ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT