ಆತಂಕ ಮೂಡಿಸಿದ ಹುಲಿ ಉಪಟಳ

7
ಸೆರೆಹಿಡಿಯಲು ಬೋನು ಹೊತ್ತು ಅಲೆದಾಡುತ್ತಿರುವ ಅರಣ್ಯ ಸಿಬ್ಬಂದಿ

ಆತಂಕ ಮೂಡಿಸಿದ ಹುಲಿ ಉಪಟಳ

Published:
Updated:
ಆತಂಕ ಮೂಡಿಸಿದ ಹುಲಿ ಉಪಟಳ

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಹಾಗೂ ಬ್ರಹ್ಮಗಿರಿ ವನ್ಯಜೀವಿ ಅರಣ್ಯ ಅಂಚಿನ ಬಿರುನಾಣಿ, ಬೀರುಗ, ನಾಲ್ಕೇರಿ, ಬಾಳೆಲೆ, ಕೊಟ್ಟಗೇರಿ, ನಿಟ್ಟೂರು, ನಲ್ಲೂರು, ಕುಮಟೂರು, ಮಾಯಮುಡಿ, ಧನುಗಾಲ ಮೊದಲಾದ ಗ್ರಾಮಗಳಲ್ಲಿ ಹುಲಿ ದಾಳಿ ಆತಂಕ  ನಿರಂತರವಾಗಿದೆ.

ಒಂದು ತಿಂಗಳ ಅವಧಿಯಲ್ಲಿ ಹತ್ತಾರು ಜಾನುವಾರುಗಳು ಬಲಿ ತೆಗೆದುಕೊಂಡಿದೆ. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಜಾನುವಾರು ಸಾಕುವುದು ಕಷ್ಟವಾಗಿದೆ.

ಸಣ್ಣ ಕೃಷಿಕರ ಮತ್ತು ಬಡವರ ಜೀವನಾಧಾರಕ್ಕೆ ಆಸರೆಯಾಗಿದ್ದ ಜಾನುವಾರುಗಳನ್ನು ಕಳೆದುಕೊಂಡವರು ಹತಾಶರಾಗಿ ಕುಳಿತಿದ್ದಾರೆ. ಈ ಭಾಗದಲ್ಲಿ ಈಗ ಜಾನುವಾರುಗಳೇ ಇಲ್ಲದಂತಾಗಿವೆ.

ಒಂದುವಾರದ ಹಿಂದೆ ಹುಲಿ ದಾಳಿ ನಡೆಸಿರುವ ಧನುಗಾಲ, ನಲ್ಲೂರು ಹುಲಿ ಸಂರಕ್ಷಣಾ ಕೇಂದ್ರವಾದ ನಾಗರಹೊಳೆ ಅರಣ್ಯದ ಅಂಚಿನಿಂದ ಸುಮಾರು 15 ಕಿ.ಮೀ ದೂರದಲ್ಲಿವೆ.

ಇಷ್ಟು ದೂರದ ಗ್ರಾಮಗಳ ಜಾನುವಾರುಗಳ ಮೇಲೂ ದಾಳಿ ನಡೆಸಿರುವುದು ಈ ಭಾಗದ ಜನರನ್ನು ಆತಂಕಕ್ಕೆ ದೂಡಿದೆ. ಆರಣ್ಯದಂಚಿನಿಂದಲೂ ಕಾಫಿ ತೋಟವಿರುವುದರಿಂದ ತೋಟದ ಒಳಗಿನಿಂದಲೇ ಬರುವ ಹುಲಿ ಮೇಯುತ್ತಿದ್ದ ಮತ್ತು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿರುವ ಜಾನುವಾರುಗಳ ಮೇಲೆ ದಾಳಿ ನಡೆಸಿ ಸಾಯಿಸುತ್ತಿದೆ.

ಜಾನುವಾರುಗಳ ಕುತ್ತಿಗೆಗೆ ಕಚ್ಚಿ ಸಾಯಿಸುತ್ತಿದ್ದೆಯೇ ಹೊರತು ಅವುಗಳ ಮಾಂಸ ತಿನ್ನುತ್ತಿಲ್ಲ. ಒಂದು ಸಾರಿ ಒಂದು ಊರಿನಲ್ಲಿ ದಾಳಿ ನಡೆಸಿದರೆ, ಮತ್ತೊಂದು ದಿನ ಐದಾರು ಕಿ.ಮೀ ದೂರದ ಇನ್ನೊಂದು ಗ್ರಾಮದ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ.

ಇದರಿಂದ ಸಿದ್ದಾಪುರದ ಮಾಲ್ದಾರೆಯಿಂದ ಹಿಡಿದು ಸುಮಾರು 50 ಕಿ.ಮೀ ದೂರದ ಬಿರುನಾಣಿವರೆಗೂ ಅರಣ್ಯದಂಚಿನಲ್ಲಿ ಒಂದೇ ಒಂದು ಜಾನುವಾರು ಕಂಡು ಬಾರದಂತಾಗಿದೆ. ಬದುಕಿರುವ ಜಾನುವಾರುಗಳನ್ನು ಮಾಲೀಕರು ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಹುಲಿ ದಾಳಿಗೆ ಮೃತಪಟ್ಟ ಜಾನುವಾರುಗಳಿಗೆ ಸರ್ಕಾರ ಸೂಕ್ತವಾದ ಪರಿಹಾರವನ್ನೂ ಕೊಡುತ್ತಿಲ್ಲ. ಇದರಿಂದ ಇರುವ ಜಾನುವಾರುಗಳನ್ನು ಅನವಶ್ಯಕವಾಗಿ ಹುಲಿಬಾಯಿಗೆ ನೀಡುವುದೇಕೆಂದು ಸಿಕ್ಕಿದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ನಲ್ಲೂರಿನ ತಿಮ್ಮಯ್ಯ.

ಕಳೆದ ವರ್ಷದ ಬರಗಾಲದಿಂದ ಈ ಬಾರಿ ಕಾಫಿ ಇಳುವರಿ ತೀವ್ರ ಕುಂಟಿತಗೊಂಡಿದೆ. ಇದರಿಂದ ಸಣ್ಣ ರೈತರು ದನಕರುಗಳನ್ನು ಸಾಕಿಕೊಂಡು ಹಾಲು ಮಾರಾಟ ಮಾಡಿ ಜೀವನಾಧಾರಕ್ಕೆ ದಾರಿ ಮಾಡಿಕೊಂಡಿದ್ದರು. ಆದರೆ, ಈಗ ಹುಲಿ ಇದಕ್ಕೂ ಅಡ್ಡಿಪಡಿಸಿದೆ.

ಹುಲಿ ದಾಳಿ ಮಾಡಿದಾಗ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬರುತ್ತಾರೆ. ಜನರ ತೀವ್ರ ಆಕ್ರೋಶಕ್ಕೆ ಒಳಗಾಗುತ್ತಾರೆ. ಒಂದಷ್ಟು ಪರಿಹಾರ ನೀಡಿ ಹುಲಿ ಸೆರೆಹಿಡಿಯಲು ಬೋನಿಟ್ಟು ಕಾಯುತ್ತಾರೆ. ಆದರೆ, ವಾರಗಟ್ಟಲೆ ಕಾದರೂ ಹುಲಿ ಸುಳಿವು ಪತ್ತೆಯಾಗುವುದಿಲ್ಲ. ಅರಣ್ಯ ಇಲಖೆಯರು ಬೋನಿನ ಬಳಿ ಕಾಯುತ್ತಿದ್ದರೆ, ಚಾಣಾಕ್ಷ ಹುಲಿ ಮತ್ತ್ಯಾವುದೋ ಐದಾರು ಕಿ.ಮೀ ದೂರದಲ್ಲಿ ಸಂಚರಿಸಿ, ಜಾನುವಾರುಗಳ ಮೇಲೆ ದಾಳಿ ಮಾಡಿರುತ್ತದೆ. ಇದರಿಂದ ಅರಣ್ಯ ಇಲಾಖೆಗೂ ಈ ಸಮಸ್ಯೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಪ್ರಾಯಶಃ ಹಿಂದೆ ಬೋನಿಗೆ ಬಿದ್ದು ಮತ್ತೆ ಮರಳಿ ಕಾಡು ಸೇರಿರುವ ಹುಲಿ ಇದಾಗಿರಬಹುದು. ಆದ್ದರಿಂದಲೇ ಅದು ಸುಲಭವಾಗಿ ಬೋನಿಗೆ ಬೀಳುತ್ತಿಲ್ಲ. ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ ಎಂಬುದು ಸಾರ್ವಜನಿಕರು ಅಭಿಪ್ರಾಯ.

ಅರಣ್ಯ ಸಿಬ್ಬಂದಿಗಳ ಪರದಾಟ:

ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಹುಲಿ ಸಂರಕ್ಷಣಾ ಪಡೆಯರು ಮಣಬಾರದ ಹುಲಿ ಬೋನನ್ನು ಅತ್ತಿಂದ ಇತ್ತ, ಇತ್ತಿಂದ ಅತ್ತ ಹೊತ್ತು ಅಲೆದಾಡುವುದೇ ಆಗಿದೆ. ಆದರೆ, ಈ ಚಾಣಾಕ್ಷ ಹುಲಿ ಯಾರ ಕಣ್ಣಿಗೂ ಬೀಳುತ್ತಿಲ್ಲ; ಬೋನಿಗೂ ಬೀಳುತ್ತಿಲ್ಲ. ಬೇಸಿಗೆಯಾದ್ದರಿಂದ ಹುಲಿ ಓಡಾಡಿರುವ ಹೆಜ್ಜೆಗಳನ್ನೂ ಪತ್ತೆ ಹಚ್ಚಲು ಸಾಧ್ಯಗುತ್ತಿಲ್ಲ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

ಹುಲಿ ರಕ್ತ ಕುಡಿಯುವುದಿಲ್ಲ:

ಜಾನುವಾರುಗಳ ಕುತ್ತಿಗೆಯನ್ನು ಕಚ್ಚಿ ಸಾಯಿಸುತ್ತಿರುವುದನ್ನು ನೋಡಿದರೆ ಹುಲಿ ರಕ್ತ ಕುಡಿಯುತ್ತದೆ ಎನ್ನಿಸುತ್ತದೆ. ಆದರೆ, ತಜ್ಞರ ಪ್ರಕಾರ ಹುಲಿ ರಕ್ತ ಕುಡಿಯುವುದಿಲ್ಲ. ಮಾಂಸ ತಿನ್ನುವುದಕ್ಕಾಗಿ ಕುತ್ತಿಗೆ ಕಚ್ಚಿ ಸಾಯಿಸುತ್ತದೆಯೇ ಹೊರತು ರಕ್ತ ಕುಡಿಯುವುದಕ್ಕೆ ಅಲ್ಲ ಎನ್ನುತ್ತಾರೆ ವನ್ಯಜೀವಿ ತಜ್ಞ ಸ್ನೇಕ್ ಸತೀಶ್.

ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿಗೆ ಕಾಡಿನ ಪ್ರಾಣಿಗಳನ್ನು ಬೇಟೆಯಾಡಲು ಅಸಮರ್ಥ ಆಗಿರಬಹುದು ಅಥವಾ ಹುಲಿ ಗುಂಪಿನಿಂದ ಬೇರ್ಪಟ್ಟಿರಬಹುದು. ಈ ಕಾರಣದಿಂದ ಜಾನುವಾರಗಳ ಬಲಿಯನ್ನೇ ಗುರಿಯಾಗಿಸಿಕೊಂಡಿದೆ ಎನ್ನುತ್ತಾರೆ ಸತೀಶ್.

ಹುಲಿ ನರಳುವ ಶಬ್ದ:

ರಾತ್ರಿವೇಳೆ ಕೊಟ್ಡಗೇರಿ ಭಾಗದಲ್ಲಿ ಹುಲಿ ನರಳುವ ಮತ್ತು ನೋವಿನಿಂದ ಕಿರುಚಿಕೊಳ್ಳುವ ಶಬ್ದವನ್ನು ಅಲ್ಲಿನ ನಿವಾಸಿಗಳು ಕೇಳಿದ್ದಾರೆ. ತೋಟದೊಳಗಿಂದ ನೋವಿನಿಂದ ಕೂಗುವ ಶಬ್ದ ಬರುತ್ತಿದೆ. ಅದಕ್ಕೆ ಏನಾದರೂ ನೋವಾಗಿರಬಹುದು ಎಂದು ಬೆಳೆಗಾರ ವಿ.ಎಸ್. ಪ್ರಕಾಶ್ ಶಂಕೆ ವ್ಯಕ್ತಪಡಿಸುತ್ತಾರೆ.

40, 50 ಕಿ.ಮೀ ವ್ಯಾಪ್ತಿಯಲ್ಲಿ ಸುಳಿದಾಡುತ್ತಿರುವ ಹುಲಿ ಒಂದೇ ಇರಬಹುದೇ ಅಥವಾ ಬೇರೆ ಬೇರೆ ಇರಬಹುದೇ ಎಂಬುದು ಅರಣ್ಯಾಧಿಕಾರಿಗಳಿಗೆ ಗೋಚರವಾಗಿಲ್ಲ. ನೆಲ ಒಣಗಿರುವುದರಿಂದ ಹುಲಿ ಹೆಜ್ಜೆಯನ್ನು ಸ್ಪಷ್ಟವಾಗಿ ಕಂಡ ಹಿಡಿಯಲು ಸಾಧ್ಯವಾಗುತ್ತಿಲ್ಲ. ಹುಲಿ ಮನುಷ್ಯರನ್ನು ತಿನ್ನುವುದು ತೀರ ವಿರಳ. ಮನುಷ್ಯ ಚಲಿಸದೆ ಕುಳಿತ್ತಿದ್ದಾಗ ಪ್ರಾಣಿ ಎಂದು ತಿಳಿದು ಮನುಷ್ಯನ ಮೇಲೆ ಎರಗಬಹುದು. ಇಂತಹ ಸಂದರ್ಭ ಬಿಟ್ಟರೆ ಚಲಿಸುವ ಮನುಷ್ಯನ ಮೇಲೆ ದಾಳಿ ಮಾಡುವುದು ತೀರ ಅಪರೂಪ. ಹುಲಿ ಸುಳಿವಿನ ಮಾಹಿತಿ ತಿಳಿದ ಕೂಡಲೇ ಸಿಬ್ಬಂದಿಗಳನ್ನು ಕೂಡಲೆ ಸ್ಥಳಕ್ಕೆ ರವಾನಿಸಲಾಗುತ್ತಿದೆ. ಅರಣ್ಯದಂಚಿನ ಗ್ರಾಮಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸುತ್ತಾರೆ.

***

ನಾಗರಹೊಳೆ: 93 ಹುಲಿಗಳು

ನಾಗರಹೊಳೆ ಹುಲಿ ಸಂರಕ್ಷಣಾ ಕೇಂದ್ರದಲ್ಲಿ ಇದೀಗ ಅಂದಾಜು 93 ಹುಲಿಗಳಿವೆ. ಒಂದು ಹುಲಿಯ ವಾಸಕ್ಕೆ 25 ಚದರ ಕಿ.ಮೀ ವ್ಯಾಪ್ತಿ ಪ್ರದೇಶವಿರಬೇಕು. ಆದರೆ, ಈಗ 8 ಚದರ ಕಿ.ಮೀಗೆ ಒಂದು ಹುಲಿ ವಾಸ ಮಾಡುವಂತಾಗಿದೆ. ಹೀಗಾಗಿ, ಒಂದಕ್ಕೊಂದು ಹೋರಾಟ ನಡೆಸಿದ ಹುಲಿ ತನ್ನ ವ್ಯಾಪ್ತಿ ಕಾಯ್ದುಕೊಳ್ಳಲು ವಿಫಲವಾಗಿ ಅರಣ್ಯದಿಂದ ಹೊರಬಂದು ಗ್ರಾಮಗಳತ್ತ ಮುಖ ಮಾಡುತ್ತಿವೆ ಎಂದು ತಿತಿಮತಿ ಎಸಿಎಫ್ ಶ್ರೀಪತಿ ಹೇಳಿದರು.

ವಿಸ್ತೀರ್ಣ ಕಡಿಮೆಯಾದ್ದರಿಂದ ತಾಯಿಯಿಂದ ಬೇರ್ಪಟ್ಟ ಹುಲಿ ತನ್ನ ಎಲ್ಲೆ (ಟೆರಿಟೆರಿ) ಕಂಡುಕೊಳ್ಳಲು ಹುಡುಕಾಡುತ್ತಿದ್ದು ಆಗಾಗೆ ಅರಣ್ಯದಂಚಿನ ಕಾಫಿ ತೋಟದತ್ತ ನುಸುಳುತ್ತಿರಬಹುದು. ಮನುಷ್ಯರ ಮಲೆ ಅದು ದಾಳಿ ನಡೆಸುವುದು ತೀರ ಅಪರೂಪ. ಆದರೂ ಮುನ್ನೆಚ್ಚರಿಕೆಯಾಗಿ ಅದರ ಸೆರೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಶ್ರೀಪತಿ.

***

ಹಸಿವಿನಿಂದ ಬಳಲುತ್ತಿರುವ ಹುಲಿ ಅರಣ್ಯಕ್ಕೆ ತೆರಳದೇ ಕಾಫಿ ತೋಟಗಳಲ್ಲಿಯೇ ಅಲೆದಾಡಿ ಜಾನುವಾರುಗಳ ಮೇಲೆ ಪದೇ ಪದೇ ದಾಳಿ ನಡೆಸುತ್ತಿರಬಹುದು.

– ‘ಸ್ನೇಕ್’ ಸತೀಶ್, ವನ್ಯಜೀವಿ ತಜ್ಞ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry