ಪ್ರಧಾನಿ ಮೋದಿ ಬೆಂಬಲಕ್ಕೆ ಅಹಿಂದ

7
ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಹೇಳಿಕೆ

ಪ್ರಧಾನಿ ಮೋದಿ ಬೆಂಬಲಕ್ಕೆ ಅಹಿಂದ

Published:
Updated:
ಪ್ರಧಾನಿ ಮೋದಿ ಬೆಂಬಲಕ್ಕೆ ಅಹಿಂದ

ರಾಯಚೂರು: ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಏನೂ ಮಾಡಲಿಲ್ಲ. ಈ ಸಲ ಅಹಿಂದ ಶಕ್ತಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ ರಾವ್‌ ಹೇಳಿದರು.

ನಗರ ಹೊರವಲಯದ ಹರ್ಷಿತಾ ಗಾರ್ಡನ್‌ನಲ್ಲಿ ಗುರುವಾರ ಏರ್ಪಡಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾಗಳ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದುಳಿದ ವರ್ಗಗಳನ್ನು ಸಶಕ್ತೀಕರಣ ಮಾಡುವುದಕ್ಕೆ ಬಿಜೆಪಿ ಬದ್ಧವಾಗಿದೆ. ಈ ಕಾರಣದಿಂದ ರಾಷ್ಟ್ರಮಟ್ಟದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಈ ವರ್ಷದಿಂದ ಆರಂಭಿಸಿದ್ದು ವಿಶೇಷ. 60 ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ಆಗದಿರುವ ಕೆಲಸವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಸೇರಿದ್ದರೂ ಹಿಂದುಳಿದ ವರ್ಗಗಳ ಪ್ರಗತಿಯನ್ನು ಬಯಸುತ್ತಿಲ್ಲ. ಪ್ರಧಾನಮಂತ್ರಿ ವಿರುದ್ಧ ನೇರವಾದ ಟೀಕೆಗಳನ್ನು ಅವರು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದರ ಕಡೆಗೆ ಹಿಂದುಳಿದ ವರ್ಗಗಳ ಮುಖಂಡರೆಲ್ಲ ಲಕ್ಷ್ಯ ವಹಿಸಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ರಾಯಚೂರಿನಲ್ಲಿ ಗುರುವಾರ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶದ ಪೂರ್ವತಯಾರಿ ಸಭೆ. ಶುಕ್ರವಾರ ಬೆಂಗಳೂರಿನಲ್ಲಿ ‘ಬೆಂಗಳೂರು ಬಚಾವ್‌’ ಆಂದೋಲನ, ಆನಂತರ ಕರಾವಳಿ ಬಜಾಚ್‌ ಆಂದೋಲನ... ಹೀಗೆ ನಿರಂತರ ಕಾರ್ಯಕ್ರಮಗಳನ್ನು ಸಂಘಟಿಸಿ ಲಕ್ಷಗಟ್ಟಲೆ ಜನರನ್ನು ಸೇರಿಸುವ ಶಕ್ತಿ ಇರುವುದು ಬಿಜೆಪಿಗೆ ಮಾತ್ರ ಎಂದರು.

ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗಗಳ 31 ಸಮಾಜಗಳಿಗೆ ₹96 ಕೋಟಿ ಅನುದಾನ ಮಂಜೂರಿ ಮಾಡಲಾಗಿತ್ತು. ಈಗಷ್ಟೆ ಹಿಂದುಳಿದ ವರ್ಗಗಳ 36 ಸಮಾಜಗಳಿಗೆ 58 ಎಕರೆ 20 ಗುಂಟೆ ಜಾಗ ಕೊಟ್ಟಿರುವುದಾಗಿ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಹೇಳಿದ್ದಾರೆ. ಆದರೆ, ಅರಣ್ಯಭೂಮಿಯನ್ನು ಹಂಚಿಕೆ ಮಾಡಿದ್ದರಿಂದ ಅದರ ವಿರುದ್ಧ ಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಜನರ ನಂಬಿಕೆಗೆ ಮುಖ್ಯಮಂತ್ರಿ ದ್ರೋಹ ಮಾಡಿದ್ದಾರೆ. ಬಡವರಿಗೆ, ಗುಡಿಸಲು ವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಕೆಲಸ ಇನ್ನೂ ಮಾಡಿಲ್ಲ. ತಾಂತ್ರಿಕ ತೊಂದರೆ ಎಂದು ಹೇಳಿಕೊಂಡು ಐದು ವರ್ಷ ಕಳೆದಿದ್ದಾರೆ. ಬಗರ್ ಹುಕುಂ ಸಾಗುವಳಿ ಭೂಮಿಗೆ ಹಕ್ಕು ನೀಡಲು ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಶಾಸಕರು ಸಭೆಯನ್ನೆ ನಡೆಸಿಲ್ಲ ಎಂದು ಕಂದಾಯ ಸಚಿವರು ವಿಧಾನ ಮಂಡಲದಲ್ಲಿ ಹೇಳಿದ್ದಾರೆ. ಇಂತಹ ಸರ್ಕಾರವನ್ನು ಹಿಂದುಳಿದ ವರ್ಗದವರು ಹೇಗೆ ನಂಬಲು ಸಾಧ್ಯ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ, ಶಾಸಕ ವಿ. ಸೋಮಣ್ಣ, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ, ಮುಖಂಡರಾದ ಡಾ.ಶಿವರಾಜ ಪಾಟೀಲ, ಎ.ಪಾಪಾರೆಡ್ಡಿ, ಎನ್‌.ಶಂಕ್ರಪ್ಪ, ವಿರೂಪಾಕ್ಷಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಹಾಗೂ ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳು ಇದ್ದರು.

***

ಹಣ ಸಂಗ್ರಹಿಸಲು ಸೂಚನೆ

ಹಿಂದುಳಿದ ವರ್ಗಗಳ ಸಮಾವೇಶಕ್ಕಾಗಿ ಸಮಾಜದ ಜನರಿಂದ ಹಣ ಸಂಗ್ರಹಿಸಬೇಕು. ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೆ ಬರುವ ಜನರಿಗಾಗಿ ಬಸ್‌ ವ್ಯವಸ್ಥೆ ಮಾಡುವಂತೆ ಕೇಳಿ. ಸಮಾಜದಲ್ಲಿ ದಾನಿಗಳು ಬೇಕಾದಷ್ಟಿದ್ದಾರೆ ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry