ನಗರ ಪಾಲಿಕೆ: ಮತ್ತೆ ಕಾಂಗ್ರೆಸ್, ಜೆಡಿಎಸ್ ಸಖ್ಯ!

5
ನಾಳೆ ಚುನಾವಣೆ: ನಾಗರಾಜ ಮೇಯರ್, ವಿಜಯಲಕ್ಷ್ಮಿಗೆ ಉಪಮೇಯರ್ ?

ನಗರ ಪಾಲಿಕೆ: ಮತ್ತೆ ಕಾಂಗ್ರೆಸ್, ಜೆಡಿಎಸ್ ಸಖ್ಯ!

Published:
Updated:
ನಗರ ಪಾಲಿಕೆ: ಮತ್ತೆ ಕಾಂಗ್ರೆಸ್, ಜೆಡಿಎಸ್ ಸಖ್ಯ!

ಶಿವಮೊಗ್ಗ: ನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಮತ್ತೆ ಅಚ್ಚರಿಯ ತಿರುವು ಪಡೆದಿದ್ದು, ಒಂದು ವರ್ಷ ಬೆಂಬಲ ನೀಡಿದ್ದ  ಬಿಜೆಪಿ ಸ್ನೇಹ ತೊರೆದಿರುವ ಜೆಡಿಎಸ್ ಮತ್ತೆ ಕಾಂಗ್ರೆಸ್‌ ಸಖ್ಯ ಬೆಳೆಸಿದೆ.

ಆ ಮೂಲಕ ಮಾರ್ಚ್‌ 3ರಂದು ನಡೆಯುವ ಚುನಾವಣೆಯಲ್ಲಿ ಜೆಡಿಎಸ್‌ನ ನಾಗರಾಜ್ ಕಂಕಾರಿ ಮೇಯರ್, ಕಾಂಗ್ರೆಸ್‌ನ ವಿಜಯಲಕ್ಷ್ಮೀ ಪಾಟೀಲ ಉಪ ಮೇಯರ್ ಸ್ಥಾನಪಡೆಯುವುದು ಬಹುತೇಕ ಖಚಿತವಾಗಿದೆ.

ನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು ನಗರ ಸಭೆಗೆ ಆಯ್ಕೆಯಾಗಿದ್ದ ಸದಸ್ಯರನ್ನೇ ಪಾಲಿಕೆ ಸದಸ್ಯರಾಗಿ ಮುಂದುವರಿಸಲು ಅವಕಾಶ ನೀಡಿತ್ತು. ಹಾಗಾಗಿ, ಅಂದು ಜೆಡಿಎಸ್‌ ಬೆಂಬಲ ಪಡೆದು ನಗರಸಭೆ ಅಧ್ಯಕ್ಷೆಯಾಗಿದ್ದ ಕಾಂಗ್ರೆಸ್‌ನ ಖುರ್ಷಿದಾ ಬಾನು ಪಾಲಿಕೆ

ಮೇಯರ್‌ ಆಗಿ ಮುಂದುವರಿದಿದ್ದರು. ಎರಡನೇ ಅವಧಿಗೆ ಮಂಗಳಾ ಅಣ್ಣಪ್ಪ, ಮೂರನೇ ಅವಧಿಗೆ ಎಸ್‌.ಕೆ. ಮರಿಯಪ್ಪ (ಇಬ್ಬರೂ ಕಾಂಗ್ರೆಸ್) ಅವರು ಮೇಯರ್ ಸ್ಥಾನ ಅಲಂಕರಿಸಿದ್ದರು.

ಮೂರು ಅವಧಿಯೂ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ಜೆಡಿಎಸ್ ನಾಲ್ಕನೇ ಅವಧಿಗೆ ಮೇಯರ್ ಸ್ಥಾನ ಬಿಟ್ಟಕೊಡುವಂತೆ ಪಟ್ಟು ಹಿಡಿದಿತ್ತು. ಆದರೆ, ಮಿತ್ರ ಪಕ್ಷದ ಮನವಿಗೆ ಕಾಂಗ್ರೆಸ್‌ ಮುಖಂಡರು ಸೊಪ್ಪು ಹಾಕಿರಲಿಲ್ಲ. ಈ ಬೆಳವಣಿಗೆ ಬಿಜೆಪಿ–ಜೆಡಿಎಸ್ ಮಧ್ಯೆ ಮೈತ್ರಿಗೆ ನಾಂದಿ ಹಾಡಿತ್ತು. ಹಾಗಾಗಿ, ನಾಲ್ಕನೇ ಅವಧಿಗೆ ಜೆಡಿಎಸ್ ಸದಸ್ಯ ಎನ್‌. ಏಳುಮಲೈ ಮೇಯರ್, ಬಿಜೆಪಿಯ ರೂಪಾ ಲಕ್ಷ್ಮಣ್ ಉಪ ಮೇಯರ್ ಸ್ಥಾನ ಅಲಂಕರಿಸಿದ್ದರು.

ಒಂದೇ ವರ್ಷಕ್ಕೆ ಮುರಿದ ಮೈತ್ರಿ: ಒಂದು ವರ್ಷ ಅನೋನ್ಯವಾಗಿದ್ದ ಜೆಡಿಎಸ್– ಬಿಜೆಪಿ ಸಂಬಂಧ ಈಗ ಹಳಸಿದೆ. ಅಂದು ಕೊಟ್ಟ ಮಾತಿನಂತೆ ನಡೆದುಕೊಳ್ಳದ ಜೆಡಿಎಸ್ ಕೊನೆಯ ಮೂರು ತಿಂಗಳ ಅವಧಿಗೆ ಬಿಜೆಪಿಗೆ ಮೇಯರ್ ಪಟ್ಟ ಬಿಟ್ಟುಕೊಡಲು ಸಿದ್ಧವಿಲ್ಲ. ಹಾಗಾಗಿ, ಮತ್ತೆ ಹಳೆಯ ಮೈತ್ರಿಯತ್ತ ಒಲವು ತೋರಿದೆ.

ಎರಡು ದಿನ ನಗರದ ಹೋಟೆಲ್‌ ಒಂದರಲ್ಲಿ ಎರಡೂ ಪಕ್ಷದ ಮುಖಂಡರು ಸಭೆ ಸೇರಿ ಮಾತುಕತೆ ನಡೆಸಿದ್ದಾರೆ. ಅದರ ಫಲವಾಗಿ ಜೆಡಿಎಸ್‌ಗೆ ಮೇಯರ್ ಸ್ಥಾನ, ಕಾಂಗ್ರೆಸ್‌ಗೆ ಉಪ ಮೇಯರ್ ಸ್ಥಾನ ಅಂತಿಮವಾಗಿದೆ.

ಈ ಬಾರಿ ಮೇಯರ್ ಸ್ಥಾನ ಬಿಸಿಎಂ ‘ಎ’ ಗೆ, ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. 35 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್‌ನ 12, ಬಿಜೆಪಿಯ (ಕೆಜೆಪಿಯ ಮೂವರು ಸೇರಿ) 11, ಜೆಡಿಎಸ್–6, ಎಸ್‌ಡಿಪಿಐ–1, ಕೆಜೆಪಿ–4 ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಇದ್ದಾರೆ. ಬಿಜೆಪಿಯ ಒಬ್ಬರು ಸಂಸತ್‌ ಸದಸ್ಯರು, ಮೂವರು ವಿಧಾನ ಪರಿಷತ್‌ ಸದಸ್ಯರು, ಕಾಂಗ್ರೆಸ್‌ನ ಒಬ್ಬರು ವಿಧಾನ ಪರಿಷತ್‌ ಸದಸ್ಯರು, ಜೆಡಿಎಸ್‌ನ ಒಬ್ಬರು ವಿಧಾನಸಭಾ ಸದಸ್ಯರು ಮತದಾನದ ಹಕ್ಕು ಪಡೆದಿದ್ದಾರೆ. ಒಟ್ಟು 41 ಜನಪ್ರತಿನಿಧಿಗಳು ಮತ ಚಲಾವಣೆ ಮಾಡಬಹುದು.

**

ಜೆಡಿಎಸ್‌ 5 ವರ್ಷವೂ ಆಡಳಿತ ಪಕ್ಷ!

ಪಾಲಿಕೆಯಲ್ಲಿ ಕೇವಲ ಐವರು ಸದಸ್ಯರನ್ನು ಜೆಡಿಎಸ್‌ ಹೊಂದಿತ್ತು.  ನಂತರ ಪಕ್ಷೇತರ ಸದಸ್ಯ ನರಸಿಂಹ ಮೂರ್ತಿ ಜೆಡಿಎಸ್ ಸೇರಿದರು. ಬಿಜೆಪಿ ಹಾಗೂ ಕಾಂಗ್ರೆಸ್‌ಗಿಂತ ಅರ್ಧದಷ್ಟು ಸದಸ್ಯರನ್ನು ಹೊಂದಿದ್ದರೂ ಸಂಪೂರ್ಣ 5 ವರ್ಷ ಪಾಲಿಕೆಯಲ್ಲಿ ಆಡಳಿತ ಪಕ್ಷವಾಗಿ ಅಧಿಕಾರ ಅನುಭವಿಸಿತು.

ಸಮಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಬಂದ ಜೆಡಿಎಸ್ ಮೊದಲ ಮೂರು ಅವಧಿ ಕಾಂಗ್ರೆಸ್ ಜತೆ, ಒಂದು ಅವಧಿ ಬಿಜೆಪಿ ಜತೆ, ಈಗ ಕೊನೆಯ ಅವಧಿ ಮತ್ತೆ ಕಾಂಗ್ರೆಸ್ ಜತೆ ಸೇರಿ ಆಡಳಿತ ನಡೆಸುತ್ತಿದೆ.

**

ಕೇವಲ 3 ತಿಂಗಳ ಅವಧಿ

2013ರಲ್ಲಿ ನಡೆದ ನಗರಸಭೆ ಚುನಾವಣೆಯ ನಂತರ ಪಾಲಿಕೆ ಘೋಷಣೆಯಾಗಿತ್ತು. ಪಾಲಿಕೆ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷಗಳಾದರೂ ಚುನಾಯಿತ ಸದಸ್ಯರ ಅವಧಿ ಇನ್ನು ಮೂರು ತಿಂಗಳಿಗೆ ಕೊನೆಗೊಳ್ಳುತ್ತದೆ. ಹಾಗಾಗಿ, ಕೊನೆಯ ಅವಧಿಗೆ ಮೇಯರ್, ಉಪ ಮೇಯರ್‌ ಸ್ಥಾನ ಪಡೆಯುವವರು ಕೇವಲ ಮೂರು ತಿಂಗಳು ಮಾತ್ರ ಅಧಿಕಾರದಲ್ಲಿ ಇರುತ್ತಾರೆ. ಪಾಲಿಕೆಗೆ ಜೂನ್‌ನಲ್ಲಿ ಚುನಾವಣೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry