ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ವಂಚಿತ ಸಮಿತಿ ಸಭೆ: ಆಕ್ರೋಶ

ದಿಬ್ಬೂರು ಆಶ್ರಯ ಮನೆಗಳ ಫಲಾನುಭವಿಗಳ ಪಟ್ಟಿ ತಿರಸ್ಕಾರ
Last Updated 2 ಮಾರ್ಚ್ 2018, 11:47 IST
ಅಕ್ಷರ ಗಾತ್ರ

ತುಮಕೂರು: ನಗರದ ದಿಬ್ಬೂರಿನಲ್ಲಿ ರಾಜೀವ್ ಗಾಂಧಿ ಆವಾಸ್ ಯೋಜನೆಯಡಿ ನಿರ್ಮಿಸಿರುವ 1200 ಮನೆಗಳ ಫಲಾನುಭವಿಗಳ ಪಟ್ಟಿಯನ್ನು ತಿರಸ್ಕರಿಸಿರುವ ಮಹಾನಗರ ಪಾಲಿಕೆಯ ಸಾಮಾನ್ಯಸಭೆ ನಿರ್ಧಾರಕ್ಕೆ ಜನಪರ ಸಂಘಟನೆಗಳ ಒಕ್ಕೂಟ ಹಾಗೂ ನಾಗರಿಕ ಸಂಘಟನೆಗಳ ಒಕ್ಕೂಟ ಆಕ್ರೋಶ ಹೊರ ಹಾಕಿದೆ.

ಗುರುವಾರ ನಗರದಲ್ಲಿ ಸಭೆ ಸೇರಿದ ಒಕ್ಕೂಟದ ಪದಾಧಿಕಾರಿಗಳು, ‘ವಸತಿ ವಂಚಿತರು ಹೋರಾಟದ ಮೂಲಕ ಪಡೆದುಕೊಂಡಿದ್ದ ಹಕ್ಕುಗಳನ್ನು ನಿರಾಕರಿಸಿರುವುದು ಖಂಡನೀಯ’ ಎಂದರು.

ಸ್ವರಾಜ್ ಸಂಘಟನೆ, ಭೂಮಿ ಮತ್ತು ವಸತಿ ವಂಚಿತರ ವೇದಿಕೆಯ ರಾಜ್ಯ ಸಂಚಾಲಕ ಸಿ.ಯತಿರಾಜ್  ಮಾತನಾಡಿ, ‘ ಪಾಲಿಕೆಯ ಅಧಿಕಾರಿಗಳು ಪಲಾನುಭವಿಗಳ ಪಟ್ಟಿಯನ್ನು ಸಮೀಕ್ಷೆ ಮಾಡಿ ಅಂತಿಮಗೊಳಿಸಿದ್ದರು. ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆ ಮಾಡಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರೆ ಪ್ರಶ್ನಿಸಬಹುದಿತ್ತು. ಆದರೆ ಯಾವುದೆ ಕಾರಣವಿಲ್ಲದೆ ಪಟ್ಟಿ ತಿರಸ್ಕರಿಸಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ರಾಜಕೀಯ ಪಕ್ಷಗಳು ದಲಿತರು, ರೈತರ ಸಮಾವೇಶ ನಡೆಸಿ  ಮನೆ, ನಿವೇಶನ ನೀಡುವುದಾಗಿ  ಹೇಳುತ್ತವೆ. ಆದರೆ ಪಾಲಿಕೆಯ ಜನಪ್ರತಿನಿಧಿಗಳು ಬಡ ಜನರಿಗೆ ನೀಡಿರುವ ಮನೆಗಳನ್ನು ಕಿತ್ತುಕೊಳ್ಳುವ ನಿರ್ಧಾರ ಮಾಡಿದ್ದಾರೆ. ವಂಚಿತರಿಗೆ ನ್ಯಾಯವಾಗಿ ಸಿಗಬೇಕಾದ ಸೌಲಭ್ಯಗಳನ್ನು ದೊರಕದಾಗೆ ಮಾಡಿ ಚುನಾವಣಾ ರಾಜಕಾರಣ ಮಾಡಲು ಹೊರಟಿರುವುದು ದುರಾದೃಷ್ಟಕರ’ ಎಂದು ಆರೋಪಿಸಿದರು.

‘ನಗರದಲ್ಲಿ  25 ವರ್ಷಗಳಿಂದ ಬಡಜನರಿಗೆ ನಿವೇಶನ ಮತ್ತು ವಸತಿ ಹಂಚಿಕೆ ಮಾಡಿಲ್ಲ. ಈಗ ಹಂಚಿಕೆ ಮಾಡಲು ಹೊರಟಿರುವ ಮನೆಗಳ ವಿಚಾರದಲ್ಲೂ ರಾಜಕೀಯ ಮಾಡಲಾಗುತ್ತಿದೆ’ ಎಂದು ಕಿರಿಕಾರಿದರು.

ಸ್ಲಂ ಜನಾಂದೋಲನಾ-ಕನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ‘ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಪಾರದರ್ಶಕವಾಗಿ ಪಲಾನುಭವಿಗಳನ್ನು ಆಯ್ಕೆ ಮಾಡಿದೆ. ಮೂಲ ಪಲಾನುಭವಿಗಳಾದ 508 ಮಂದಿಗೂ ಮನೆ ನಿರಾಕರಿಸಿರುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

ಸಿಐಟಿಯುನ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ, ‘ಯೋಜನೆ ಮಾರ್ಗದರ್ಶಿಯಂತೆಯೆ  ಅಂಗವಿಕಲರು, ಲೈಂಗಿಕ ಅಲ್ಪಸಂಖ್ಯಾತರು, ಆಟೊ ಚಾಲಕರು, ಕುಶಲಕರ್ಮಿಗಳು, ಬೀದಿ ವ್ಯಾಪಾರಸ್ಥರು, ಯೋಜನಾ ಬಾಧಿತರು, ವಸತಿ ವಂಚಿತ ಸಮುದಾಯದವರು  ಈ ಪಟ್ಟಿಯಲ್ಲಿದ್ದರು. ಪಟ್ಟಿ ತಿರಸ್ಕರಿಸುರವ  ಪಾಲಿಕೆ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.

ಸಭೆಯಲ್ಲಿ ಕೊಳೆಗೇರಿ ಸಮಿತಿಯ ಉಪಾಧ್ಯಕ್ಷೆ ದೀಪಿಕಾ, ಮುಖಂಡರಾದ ಆಟೊ ಶಿವರಾಜ, ತಿಪ್ಪೇಸ್ವಾಮಿ, ಶಂಕರ್, ಷಣ್ಮುಗಪ್ಪ, ದರ್ಶನ್, ದೊಡ್ಡರಂಗಪ್ಪ, ಶೆಟ್ಟಾಳಯ್ಯ, ಚಾಂದು, ಮಂಜು, ಹಯಾತ್, ಹನುಂತರಾಯಪ್ಪ, ಅರುಣ್, ರಘು, ಗಾಯಿತ್ರಿ, ಮಂಜುನಾಥ್  ಹಾಜರಿದ್ದರು.
***
ಹೋರಾಟದ ಫಲ

ವಸತಿ ವಂಚಿತ ಜನರ ಪರವಾಗಿ ಕೊಳೆಗೇರಿ ಸಮಿತಿಯ ನಿರತಂರ ಹೋರಾಟದಿಂದ ದಿಬ್ಬೂರಿನಲ್ಲಿ 1200 ಮನೆಗಳನ್ನು ನಿರ್ಮಿಸಲಾಗಿದೆ.  ಮನೆ ಹಸ್ತಾಂತರಿಸುವ ಸಂಧರ್ಭದಲ್ಲಿ  ಪಾಲಿಕೆಯ ಸಾಮಾನ್ಯ ಸಭೆಯ ರಾಜಕೀಯ ಆರೋಪ, ಮನೆ ಹಂಚದಿರಲು ಮಾಡಿರುವ ನಿರ್ಧಾರ ಜನರ ಹಕ್ಕುಗಳನ್ನು ಹತ್ತಿಕ್ಕುವ ಕೆಲಸವಾಗಿದೆ ಎಂದು ಪಿಯುಸಿಎಲ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ದೊರೈರಾಜ್ ಹೇಳಿದರು.

ಹೋರಾಟದ ಮೂಲಕ ಪಡೆದಿರುವ ಸೌಲಭ್ಯಗಳನ್ನು ಅವಮಾನಿಸುವುದು ಖಂಡನೀಯ. ಜಾತಿ, ಧರ್ಮ, ಮೀರಿ ಎಲ್ಲರೂ ಧ್ವನಿ ಎತ್ತಬೇಕು.  ಪರಿಶಿಷ್ಟ ಜಾತಿ ಮತ್ತು ಮುಸ್ಲಿಮರನ್ನು ಕೇಂದ್ರೀಕರಿಸಿಕೊಂಡು ಪೂರ್ವಾಗ್ರಹಿತರಾಗಿ ಮಾತನಾಡುವ ಜನಪ್ರತಿನಿಧಿಗಳ ಮತ್ತು ಪಕ್ಷಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಂಥವರನ್ನು ಚುನಾವಣೆಯಲ್ಲಿ  ತಿರಸ್ಕರಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT