ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7,574 ಸಾವಿರ ರೈತರ ನೋಂದಣಿ

ಕಡಲೆ ಖರೀದಿಗೆ ‘ಹೋಳಿ’ ಅಡ್ಡಿ; ಮಾರ್ಚ್ 5ರ ಸೋಮವಾರದಿಂದ ಚಾಲನೆ ?
Last Updated 2 ಮಾರ್ಚ್ 2018, 11:55 IST
ಅಕ್ಷರ ಗಾತ್ರ

ವಿಜಯಪುರ: ಧಾರಣೆ ಕುಸಿತದಿಂದ ಕಂಗಾಲಾಗಿರುವ ಕಡಲೆ ಬೆಳೆಗಾರರ ನೆರವಿಗೆ ಧಾವಿಸಿರುವ ಕೇಂದ್ರ–ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಉತ್ಪನ್ನ ಖರೀದಿಸಲು ಮುಂದಾಗಿವೆ.

ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಫೆ.19ರಿಂದ ನೋಂದಣಿಗೆ ಚಾಲನೆ ನೀಡಲಾಗಿದೆ. ಇದೂವರೆಗೂ ನೋಂದಣಿ ಅವಧಿಯನ್ನು ಎರಡು ಬಾರಿ ವಿಸ್ತರಿಸಲಾಗಿದ್ದು, ಮಾರ್ಚ್‌ 3ರವರೆಗೂ ನೋಂದಣಿ ನಡೆಯಲಿದೆ.

ಜಿಲ್ಲೆಯಲ್ಲಿ ಒಟ್ಟು ಎಂಟು ಕಡೆ ಕಡಲೆ ಖರೀದಿ ಕೇಂದ್ರ ಆರಂಭಿಸಲಾಗಿದೆ. ನೋಂದಣಿ ಪ್ರಕ್ರಿಯೆ ನಡೆದಿದೆ. ಬುಧವಾರದ (ಫೆ. 28) ಅಂತ್ಯದವರೆಗೂ ಒಟ್ಟು 7,574 ರೈತರು ಕಡಲೆ ಮಾರಲು ತಮ್ಮ ಹೆಸರನ್ನು ಖರೀದಿ ಕೇಂದ್ರದಲ್ಲಿ ನೋಂದಾಯಿಸಿದ್ದಾರೆ ಎಂದು ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ ಯೋಜನೆ ಸಮಿತಿಯ ಪದನಿಮಿತ್ತ ಸದಸ್ಯ ಕಾರ್ಯದರ್ಶಿ ಹಾಗೂ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಡಿ.ಚಬನೂರ ಮಾಹಿತಿ ನೀಡಿದರು.

‘ಹೆಸರು ನೋಂದಾಯಿಸಿದ ಪ್ರತಿ ರೈತನಿಂದ 15 ಕ್ವಿಂಟಲ್‌ ಕಡಲೆ ಖರೀದಿಸಲಾಗುವುದು. ವಿಜಯಪುರ, ಕಲಬುರ್ಗಿ, ಯಾದಗಿರಿ, ಬೀದರ್‌, ಗದಗ, ಹಾವೇರಿ, ಧಾರವಾಡ, ಬೆಳಗಾವಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬೆಳೆಯಲಾಗಿದೆ.

ರಾಜ್ಯ ಸರ್ಕಾರದ ಸೂಚನೆಯಂತೆ ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ಆರಂಭಿಸಿ, ನೋಂದಣಿ ಪ್ರಕ್ರಿಯೆ ನಡೆಸಲಾಗಿದೆ. ರಾಜ್ಯದ ಎಲ್ಲೆಡೆ ಒಟ್ಟು 20 ಲಕ್ಷ ಕ್ವಿಂಟಲ್‌ ಕಡಲೆ ಖರೀದಿಯ ಗುರಿ ನಿಗದಿಪಡಿಸಿಕೊಂಡಿದ್ದು, ಖರೀದಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿವೆ’ ಎಂದು ಅವರು ಹೇಳಿದರು.

‘ಜಿಲ್ಲೆಯ ವ್ಯಾಪ್ತಿಯಲ್ಲಿ ಆರಂಭಗೊಂಡಿರುವ ಎಂಟು ಖರೀದಿ ಕೇಂದ್ರಗಳಲ್ಲಿ ಗುರುವಾರ (ಮಾರ್ಚ್‌ 1)ದಿಂದಲೇ ರೈತರಿಂದ ಕಡಲೆ ಖರೀದಿಸುವಂತೆ ಸೂಚನೆ ನೀಡಲಾಗಿದೆ. ‘ಹೋಳಿ’ ಹುಣ್ಣಿಮೆಯ ನೆಪವೊಡ್ಡಿ ಎಲ್ಲೂ ಆರಂಭಗೊಂಡಿಲ್ಲ.

ಮಾರ್ಚ್‌ 3ರವರೆಗೂ ನೋಂದಣಿಗೆ ಅವಕಾಶವಿದ್ದು, ಈ ಪ್ರಕ್ರಿಯೆ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಂಡ ಬಳಿಕ ಖರೀದಿ ನಡೆಸುವುದಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಸಂಸ್ಥೆಗಳು ತಿಳಿಸಿವೆ’ ಎಂದು ಚಬನೂರ ಮಾಹಿತಿ ನೀಡಿದರು.
**
ಕಡಲೆ ಖರೀದಿ ಕೇಂದ್ರ ಎಲ್ಲೆಲ್ಲಿ ?

ವಿಜಯಪುರ ತಾಲ್ಲೂಕಿನ ಜುಮನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಬಸವನಬಾಗೇವಾಡಿ ತಾಲ್ಲೂಕಿನ ವಡವಡಗಿ, ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ, ಕವಡಿಮಟ್ಟಿ, ತಾಳಿಕೋಟೆ ತಾಲ್ಲೂಕಿನ ತಾಳಿಕೋಟೆ, ಸಿಂದಗಿ ತಾಲ್ಲೂಕಿನ ಬಿಂಜಲಬಾವಿ, ಇಂಡಿ ತಾಲ್ಲೂಕಿನ ಇಂಡಿ ಪಟ್ಟಣ, ಚಡಚಣ ತಾಲ್ಲೂಕಿನ ನೀವರಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಡಲೆ ಖರೀದಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
**
ಎರಡು ಕೇಂದ್ರ ರದ್ದು; ಎರಡಕ್ಕೆ ನೋಟಿಸ್‌

‘ತೊಗರಿ ಖರೀದಿ ಸಂದರ್ಭ ರೈತರಿಂದ ಬಲವಂತವಾಗಿ ಹಣ ಪಡೆದ ದೂರುಗಳ ಆಧಾರದ ಮೇಲೆ ಸಿಂದಗಿ ತಾಲ್ಲೂಕಿನ ಗೋಲಗೇರಿ, ಚಟ್ಟರಕಿ ಖರೀದಿ ಕೇಂದ್ರಗಳ ಅನುಮತಿಯನ್ನೇ ರದ್ದುಗೊಳಿಸಿ, ಸಮೀಪದ ಕೇಂದ್ರಗಳಿಗೆ ಉಸ್ತುವಾರಿ ವಹಿಸಿಕೊಡಲಾಯಿತು.

ಇದೇ ರೀತಿ ರೈತರಿಂದ ದೂರು ಕೇಳಿ ಬಂದ ಚಡಚಣ ತಾಲ್ಲೂಕಿನ ಜಿಗಜಿಣಗಿ, ವಿಜಯಪುರ ತಾಲ್ಲೂಕಿನ ಹಿಟ್ನಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ ಯೋಜನೆ ಸಮಿತಿಯ ಅಧ್ಯಕ್ಷರು ಆದ ಜಿಲ್ಲಾಧಿಕಾರಿ ಸೂಚನೆಯಂತೆ ನೋಟಿಸ್‌ ನೀಡಲಾಗಿದೆ.

ಕಡಲೆ ಖರೀದಿ ಸಂದರ್ಭವೂ ಇಂಥ ದೂರುಗಳು ಕೇಳಿ ಬಂದರೆ ಕೇಂದ್ರದ ಅನುಮತಿಯನ್ನೇ ರದ್ದುಗೊಳಿಸಲಾಗುವುದು’ ಎಂದು ಚಬನೂರ ಹೇಳಿದರು.
**
ರೈತರಿಂದ ಯಾವ ಶುಲ್ಕ ತೆಗೆದುಕೊಳ್ಳದೆ ನೇರವಾಗಿ ಕಡಲೆ ಖರೀದಿಸಬೇಕು. ದೂರು ಕೇಳಿ ಬಂದರೆ ಅಂತಹ ಸೊಸೈಟಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು
ಮಹಾದೇವಪ್ಪ ಡಿ.ಚಬನೂರ, ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ
**
ಮುಕ್ತ ಮಾರುಕಟ್ಟೆಯಲ್ಲಿ ಕಡಲೆ ಧಾರಣೆ ಕ್ವಿಂಟಲ್‌ಗೆ ₹ 3,500ರ ಆಸುಪಾಸಿದೆ. ವಿಧಿಯಿಲ್ಲದೆ ಮಾರಾಟ ಮಾಡಲು ನೋಂದಣಿಗೆ ಬಂದಿದ್ದೇವೆ.
   – ಮಹಾದೇವ ಅಸ್ಕಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT