ಹಾಸ್ಟೆಲ್ ವಿದ್ಯಾರ್ಥಿನಿಯರ ಧರಣಿ

7
ಪ್ರಭಾರಿ ವಿಸ್ತರಣಾಧಿಕಾರಿ– ಮೇಲ್ವಿಚಾರಕರ ನಡುವೆ ಸ್ವಪ್ರತಿಷ್ಠೆ: ಆರೋಪ

ಹಾಸ್ಟೆಲ್ ವಿದ್ಯಾರ್ಥಿನಿಯರ ಧರಣಿ

Published:
Updated:
ಹಾಸ್ಟೆಲ್ ವಿದ್ಯಾರ್ಥಿನಿಯರ ಧರಣಿ

ಶಹಾಪುರ: ‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕಿನ 12 ವಸತಿನಿಲಯಗಳ ಮೇಲ್ವಿಚಾರಕರು ಸಾಮೂಹಿಕವಾಗಿ ರಜೆ ಮೇಲೆ ತೆರಳಿದ್ದರಿಂದ ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆ ಉಂಟಾಗಿದೆ’ ಎಂದು ಆರೋಪಿಸಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್)ದ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಹಶೀಲ್ದಾರ್‌ ಕಚೇರಿಯ ಮುಂದೆ ಗುರುವಾರ ಧರಣಿ ನಡೆಸಿದರು.

ಧರಣಿ ನಡೆದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ತಹಶೀಲ್ದಾರ್‌ ಕಚೇರಿಯ ಕೋಣೆಯ ಗಾಜುಗಳನ್ನು ಒಡೆದು ಹಾಕಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆಗ ಸ್ಥಳಕ್ಕೆ ಶಹಾಪುರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಜೆ.ನಾಗರಾಜ ಬಂದು ಪರಿಸ್ಥಿತಿ ಶಾಂತಗೊಳಿಸಿದರು.

‘ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಊಟದ ಸಮಸ್ಯೆ ಬಗೆಹರಿಸಲಾಗಿದ್ದು ಮತ್ತು ಅಡುಗೆ ಸಹಾಯಕರಿಗೆ ಊಟ ತಯಾರಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಮುಂದಿನ ಕ್ರಮದ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಿರುವೆ’ ಎಂದು ತಹಶೀಲ್ದಾರ್‌ ಸೋಮಶೇಖರ ಹಾಗರಗುಂಡಗಿ ತಿಳಿಸಿದರು.

‘ವಸತಿನಿಯಲದ ಮೇಲ್ವಿಚಾರಕರ ಹಾಗೂ ಪ್ರಭಾರಿ ವಿಸ್ತರಣಾಧಿಕಾರಿಯ ನಡುವೆ ಸ್ವಪ್ರತಿಷ್ಠೆಯ ಕಾರಣದಿಂದ ಮೂರು ದಿನಗಳ ಹಿಂದೆ 12 ಜನ ಮೇಲ್ವಿಚಾರಕರು ರಜೆ ಹಾಕಿದ್ದಾರೆ. ಇದರಿಂದ ವಸತಿನಿಲಯಗಳಲ್ಲಿ ಅಡುಗೆ ಮಾಡುತ್ತಿಲ್ಲ. ಪಿಯುಸಿ ಪರೀಕ್ಷೆ ನಡೆದಿರುವಾಗ ಊಟವಿಲ್ಲದೆ 12 ವಸತಿನಿಲಯಗಳ ಸುಮಾರು 1,200 ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವುದೇ ಪೂರ್ವಾನುಮತಿ ಇಲ್ಲದೆ ರಜೆಯ ಮೇಲೆ ತೆರಳಿದ ಮೇಲ್ವಿಚಾರಕರು ಹಾಗೂ ಪ್ರಭಾರಿ ವಿಸ್ತರಣಾಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಬೇಕು’ ಎಂದು ಬಿವಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಪೂಜಾರಿ ಒತ್ತಾಯಿಸಿದರು.

‘ವಿದ್ಯಾರ್ಥಿಗಳ ಸಮಸ್ಯೆಯು ಗಮನಕ್ಕೆ ಬಂದ ತಕ್ಷಣ ವಸತಿನಿಲಯಗಳಿಗೆ ಭೇಟಿ ನೀಡಿ ಅಗತ್ಯ ಆಹಾರ ಸಾಮಗ್ರಿ ಪಡೆದು ಊಟ ಸಿದ್ಧಪಡಿಸಲು ಅಡುಗೆ ಸಹಾಯಕರಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಸಮಗ್ರ ವರದಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿರುವೆ’ ಎಂದು ತಾಲ್ಲೂಕು ಪಂಚಾ ಯಿತಿ ಇಒ ಡಾ.ಟಿ.ಎಸ್.ಟಕ್ಕಳಕಿ ಮಾಹಿತಿ ನೀಡಿದರು.

ಹಿನ್ನೆಲೆ: ‘ಹಿಂದುಳಿದ ವರ್ಗಗಳ ಕಲ್ಯಾಣಿ ಇಲಾಖೆಯ ಪ್ರಭಾರಿ ವಿಸ್ತರಣಾಧಿಕಾರಿ ಅನಿತಾ ಬಿ.ದೋರನಹಳ್ಳಿ ಅವರು ನಮ್ಮ ಮೇಲೆ ಅನವಶ್ಯಕವಾಗಿ ಮಾನಸಿಕವಾಗಿ ಮತ್ತು ಬಾಹ್ಯ ವ್ಯಕ್ತಿಗಳಿಂದ ಬೆದರಿಕೆ ಒಡ್ಡುತ್ತಿದ್ದಾರೆ. ಇದರಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಆರೋಪಿಸಿ 12 ಜನ ವಸತಿನಿಲಯದ ಮೇಲ್ವಿಚಾರಕರು ಮೂರು ದಿನಗಳ ಹಿಂದೆ ಸಾಮೂಹಿಕವಾಗಿ ರಜೆಯ ಮೇಲೆ ತೆರಳಿದ್ದಾರೆ. ಅಲ್ಲದೆ ಅಡುಗೆ ಸಹಾಯಕರು ‘ನಮಗೆ ಮೇಲ್ವಿಚಾರಕರು ಅಡುಗೆ ಸಿದ್ಧಪಡಿಸುವಂತೆ ಸೂಚಿಸಿಲ್ಲ. ಇದರಿಂದ ನಾವು ಊಟ ತಯಾರಿಸಿಲ್ಲ’ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ಇದರಿಂದ ಸಮಸ್ಯೆ ಉಂಟಾಗಿತ್ತು.

***

ವಸತಿನಿಲಯದಲ್ಲಿ ಊಟದ ಸಮಸ್ಯೆ ಉಂಟಾಗಿದ್ದರಿಂದ ವಿದ್ಯಾರ್ಥಿಗಳು ಧರಣಿ ನಡೆಸಿದ್ದಾರೆ. ಕೆಲ ಕಿಡಿಗೇಡಿಗಳು ಕೋಣೆಗೆ ಕಲ್ಲು ಎಸೆದಿದ್ದು, ಯಾವುದೇ ಹಾನಿಯಾಗಿಲ್ಲ.

–ಸೋಮಶೇಖರ ಹಾಗರಗುಂಡಗಿ, ತಹಶೀಲ್ದಾರ್‌, ಶಹಾಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry