ಮಹಿಳಾ ಸಮಾನತೆ ಪ್ರತಿಪಾದಿಸಿದ ಜಗತ್ತಿನ ಮೊದಲ ವ್ಯಕ್ತಿ ಬಸವಣ್ಣ: ಸಿದ್ದರಾಮಯ್ಯ

ಬುಧವಾರ, ಮಾರ್ಚ್ 27, 2019
22 °C

ಮಹಿಳಾ ಸಮಾನತೆ ಪ್ರತಿಪಾದಿಸಿದ ಜಗತ್ತಿನ ಮೊದಲ ವ್ಯಕ್ತಿ ಬಸವಣ್ಣ: ಸಿದ್ದರಾಮಯ್ಯ

Published:
Updated:
ಮಹಿಳಾ ಸಮಾನತೆ ಪ್ರತಿಪಾದಿಸಿದ ಜಗತ್ತಿನ ಮೊದಲ ವ್ಯಕ್ತಿ ಬಸವಣ್ಣ: ಸಿದ್ದರಾಮಯ್ಯ

ಬೆಂಗಳೂರು: ‘ವುಮೆನ್ ಆಫ್ ವರ್ತ್ ಕರ್ನಾಟಕ’ ಹಾಗೂ ಹಾರೋಹಳ್ಳಿ, ಕನಕಪುರ ಇಮ್ಮಾವು-ಮೈಸೂರು, ಕುಡಿತಿನಿ-ಬಳ್ಳಾರಿ ಮತ್ತು ಗಾಮನಗಟ್ಟಿ-ಧಾರವಾಡದಲ್ಲಿ ಕೆಐಎಡಿಬಿ ವತಿಯಿಂದ ಮಹಿಳಾ ಉದ್ಯಮಿಗಳ ಪಾರ್ಕ್ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಬಸವಣ್ಣನವರು 12ನೇ ಶತಮಾನದಲ್ಲಿಯೆ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ, ಮಹಿಳಾ ಸಮಾನತೆ ಪ್ರತಿಪಾದಿಸಿದ ಜಗತ್ತಿನ ಮೊದಲ ವ್ಯಕ್ತಿ ಎನಿಸಿದ್ದಾರೆ. ಇದು ನಮ್ಮ ನಾಡಿಗೆ ಹೆಮ್ಮೆಯ ವಿಚಾರ ಎಂದರು.

ಯಾರು ಅವಕಾಶಗಳಿಂದ ವಂಚಿತರಾಗಿರುತ್ತಾರೆ ಅವರಿಗೆ ಕೇವಲ ರಾಜಕೀಯ ಹಕ್ಕು ಮಾತ್ರ ದೊರೆತರೆ ಸಾಲದು. ಅವರಿಗೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ವಾತಂತ್ರ್ಯ ದೊರೆತಾಗ ಮಾತ್ರ ಅದು ಸಾರ್ಥಕವಾಗುತ್ತದೆ ಮತ್ತು ನಿಜ ಅರ್ಥದಲ್ಲಿ ಸಬಲೀಕರಣ ಸಾಧ್ಯ ಎಂದು ಹೇಳಿದರು.

ಮನುಷ್ಯರನ್ನು ಪರಿವರ್ತಿಸುವ ಹೋರಾಟದ ಮುಂಚೂಣಿಯಲ್ಲಿ ಮಹಿಳೆಯರಿದ್ದರೆ ಅಲ್ಲಿ ಗೆಲುವು ಶತಸಿದ್ಧ. ಈ ಪಾತ್ರವನ್ನು ಮಹಿಳೆಯರಿಗೆ ಕೊಡಬೇಕಾದದ್ದು ಸಮಾಜದ ಕರ್ತವ್ಯ ಎಂದು ಮಹಾತ್ಮ ಗಾಂಧಿ ಅವರು ಹೇಳಿದ್ದಾರೆ. ಮಹಿಳೆಯರು ಸಂಪೂರ್ಣವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಅವರಿಗೆ ಅಧಿಕಾರ ಮತ್ತು ಸಂಪತ್ತು ಸಮಾನ ಹಂಚಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಯಾಗಿದ್ದು, ಲೋಕಸಭೆಯಲ್ಲಿ 1996ರಲ್ಲಿ ಮಹಿಳೆಯರಿಗೆ ಶೇಕಡಾ 33 ಮೀಸಲಾತಿ ನೀಡಬೇಕೆಂದು ರೂಪಿಸಿದ ಮಸೂದೆ ಅನುಮೋದನೆಯಾಗದೆ ಹಾಗೆಯೇ ಬಾಕಿ ಉಳಿದಿದೆ. ಅದೂ ಕೂಡ ಅಂಗೀಕಾರವಾಗಿ, ಜಾರಿಯಾಗಬೇಕೆಂದು ಬಯಸುತ್ತೇನೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಉದ್ಯಮಿಗಳು ಕಂಡುಬರುತ್ತಿರುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ಯಾರೆಲ್ಲ ಮಹಿಳೆಯರು ನವೋದ್ಯಮಿಗಳಾಗಿ ಹೊರಹೊಮ್ಮುತ್ತಿದ್ದಾರೋ ಅವರೆಲ್ಲರಿಗೂ ನನ್ನ ಅಭಿನಂದನೆಗಳು ಎಂದರು.

ಪ್ರಸಕ್ತ  ಬಜೆಟ್‌ನಲ್ಲಿ ಮಹಿಳಾ ಸಬಲೀಕರಣಕ್ಕಾಗಿ ₹34,388 ಕೋಟಿ ಅನುದಾನ ಘೋಷಿಸಿದ್ದೇವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಮಹಿಳಾ ಸಬಲೀಕರಣ ಇಲಾಖೆಗೆ ನೀಡುತ್ತಿದ್ದ ಅನುದಾನ ಮೂರು ಪಟ್ಟು ಹೆಚ್ಚಳವಾಗಿದೆ. ನಾನು ಸಾಮಾಜಿಕ ನ್ಯಾಯವನ್ನು ನಂಬಿರುವವನು. ದೀನ ದಲಿತರಂತೆ ಮಹಿಳೆಯರು ಸಹಾ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದು ನನ್ನ ಉದ್ದೇಶ ಎಂದು ಹೇಳಿದರು.

ಮಹಿಳೆಯರು ಸಹಾ ದಲಿತರಷ್ಟೆ ಹಿಂದುಳಿದವರು ಎಂದು ರಾಮ ಮನೋಹರ ಲೋಹಿಯಾರವರು ಹೇಳಿದ್ದಾರೆ. ತಲೆತಲಾಂತರಗಳಿಂದ ಅಕ್ಷರ ಸಂಸ್ಕೃತಿಯಿಂದ ಮಹಿಳೆಯರು ವಂಚಿತರಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಆದ್ದರಿಂದ ಅವರಿಗೂ ಸಹಾ ಸಮಾನ ಅವಕಾಶಗಳನ್ನು ಒದಗಿಸಿ, ಅಭಿವೃದ್ಧಿಪಡಿಸಲು ನಾವು ಬದ್ಧರಿದ್ದೇವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry