ಸಬಲೀಕರಣದ ಪ್ರತಿಪಾದಕಿಯರು

ಮಂಗಳವಾರ, ಮಾರ್ಚ್ 19, 2019
21 °C

ಸಬಲೀಕರಣದ ಪ್ರತಿಪಾದಕಿಯರು

Published:
Updated:
ಸಬಲೀಕರಣದ ಪ್ರತಿಪಾದಕಿಯರು

ಮಹಿಳೆಯರ ಚೈತನ್ಯ ಆಗ್ನೆಸ್‌

ಮಂಗಳೂರಿನ ಕದ್ರಿಯವರಾದ ಫ್ಲೆವಿಯಾ ಆಗ್ನೆಸ್‌ (71), ಸ್ವತಃ ಕೌಟುಂಬಿಕ ದೌರ್ಜನ್ಯ ಎದುರಿಸಿ, ಸಂಕಷ್ಟಗಳಿಂದ ಹೊರಬಂದು ಹೆಸರಾಂತ ವಕೀಲೆಯಾಗಿ ರೂಪುಗೊಂಡವರು. ಮಜ್ಲಿಸ್‌ ಎಂಬ ಸಂಸ್ಥೆ ಕಟ್ಟಿ ಆ ಮೂಲಕ ಸಾವಿರಾರು ಹೆಣ್ಣುಮಕ್ಕಳಿಗೆ ಉಚಿತ ಕಾನೂನು ನೆರವನ್ನು ನೀಡುತ್ತಿದ್ದಾರೆ. ಮಹಿಳಾಪರ ಕಾನೂನು ಕುರಿತ ಚರ್ಚೆ ಬಂದರೆ ಎದ್ದುಕಾಣುವ ಅವರ ಬದುಕಿನ ಕಥೆ ಸ್ಫೂರ್ತಿದಾಯಕ.

ಫ್ಲೇವಿಯಾ ತಮ್ಮ ಚಿಕ್ಕಮ್ಮನ ಮನೆಯಲ್ಲಿ ಇದ್ದುಕೊಂಡು ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದರು. ಆ ವೇಳೆಗೆ ಯೆಮೆನ್‌ನಲ್ಲಿದ್ದ ತಂದೆ ತೀರಿಕೊಂಡರು. ಸ್ವಲ್ಪ ಸಮಯ ಟೈಪಿಸ್ಟ್‌ ಆಗಿ ವಿದೇಶದಲ್ಲಿಯೇ ಕೆಲಸ ಮಾಡಿದರು. ಮತ್ತೆ ಮಂಗಳೂರಿಗೆ ಬಂದ ಕೂಡಲೇ ಮದುವೆ. ಪತಿಯಿಂದ ನಿರಂತರ ಹಿಂಸೆ ಎದುರಿಸಿದರು. ಕ್ರೈಸ್ತಧರ್ಮದ ಅನುಸಾರ ವಿಚ್ಛೇದನ ಪಡೆಯಲು ಸಾಧ್ಯವಾಗದಿದ್ದಾಗ ಕೋರ್ಟ್‌ ಮೆಟ್ಟಿಲೇರಿದರು. ವಿಚ್ಛೇದನ ಸಿಕ್ಕಿತಾದರೂ, ಆರ್ಥಿಕವಾಗಿ ಸಬಳಲ್ಲ ಎಂಬ ಕಾರಣಕ್ಕೆ ಕೋರ್ಟ್‌, ಮಕ್ಕಳನ್ನು ಫ್ಲೇವಿಯಾ ಅವರ ವಶಕ್ಕೆ ನೀಡಲಿಲ್ಲ.

ಇದರಿಂದ ಕಂಗೆಡದ ಫ್ಲೇವಿಯಾ ಮತ್ತೆ ವಿದ್ಯಾಭ್ಯಾಸ ಮುಂದುವರೆಸಿದರು. ನಾಥೂಬಾಯಿ ದಾಮೋದರ ಥ್ಯಾಕರ್ಸೆ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಷಯವಾಗಿ ಸ್ನಾತಕ ಪದವಿ ಮತ್ತು ಮುಂಬೈ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಪಡೆದು ಮುಂಬೈ ಹೈಕೋರ್ಟ್‌ನಲ್ಲಿ ವೃತ್ತಿಯನ್ನು ಆರಂಭಿಸಿದರು. ಕಾನೂನು ಹೋರಾಟದ ಮೂಲಕ ತಮ್ಮ ಮಕ್ಕಳನ್ನು ಹಿಂದಕ್ಕೆ ಪಡೆದುಕೊಂಡರು. ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾದಲ್ಲಿ ಎಂ.ಫಿಲ್‌. ಮುಗಿಸಿರುವ ಅವರು ಅಲ್ಲಿನ ಗೌರವ ಪ್ರಾಧ್ಯಾಪಕಿಯಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ‘ಪಾಲಿಟಿಕ್ಸ್‌ ಆಫ್‌ ಪರ್ಸನಲ್‌ ಲಾಸ್‌ ಇನ್‌ ಡಿಫರೆಂಟ್‌ ರಿಲಿಜಿಯಸ್‌ ಕಮ್ಯುನಿಟೀಸ್‌’ ಪಿಎಚ್‌.ಡಿ. ಪ್ರಬಂಧದ ವಿಷಯವನ್ನು ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌ ಪ್ರಕಟಿಸಿದೆ.

ನಿರ್ಭಯಾ ಪ್ರಕರಣ ಮತ್ತು ಶಕ್ತಿಮಿಲ್‌ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ಮರಣದಂಡನೆ ವಿಧಿಸಿದಾಗ ಫ್ಲೇವಿಯಾ ಅದನ್ನು ವಿರೋಧಿಸಿದ್ದರು. ಅತ್ಯಾಚಾರದಂತಹ ಹೀನಕೃತ್ಯಕ್ಕೆ ವ್ಯಕ್ತಿಯೇ ಪ್ರಧಾನ ಕಾರಣನಾದರೂ, ಸಾಮಾಜಿಕ ವ್ಯವಸ್ಥೆ ಕೂಡ ಪರೋಕ್ಷವಾಗಿ ಹೇಗೆ ಕಾರಣವಾಗುತ್ತದೆ ಎಂಬ ಅಂಶವನ್ನು ಕೋರ್ಟ್‌ ಪರಿಗಣಿಸಬೇಕು ಎಂಬುದು ಮರಣದಂಡನೆಯ ವಿರೋಧದ ಹಿಂದಿನ ಅವರ ವಾದವಾಗಿತ್ತು.

ತ್ರಿವಳಿ ತಲಾಖ್‌, ಏಕರೂಪ ನಾಗರಿಕ ಸಂಹಿತೆ ಕುರಿತು ಹಿಂದುತ್ವವಾದಿ ಪಕ್ಷಗಳೇ ಏಕೆ ಮಾತನಾಡುತ್ತಿವೆ ಎಂದೂ ಪ್ರಶ್ನಿಸಿದ್ದರು. ಮುಂಬೈನ ಬಾರ್ ನರ್ತಕಿಯರ ಪರವಾಗಿಯೂ ಫ್ಲೇವಿಯಾ ವಾದಿಸಿದ್ದಾರೆ.

ಹೋರಾಟ ಹಿನ್ನೆಲೆಯ ಗುಪ್ತೆ

ಪುಣೆಯ ಮನಿಶಾ ಗುಪ್ತೆ (61) ಹೋರಾಟಗಾರರ ಮನೆತನದವರು. ಮಹಿಳೆಯರ ಸರ್ವಾಂಗೀಣ ಪ್ರಗತಿಗಾಗಿ ಪರ್ಯಾಯ ಹುಡುಕುತ್ತ ಹೊರಟ ಅವರು ಪತಿ ರಮೇಶ್‌ ಅವಸ್ಥಿ ಸಹಕಾರದಿಂದ ‘ಮಾಸುಮ್‌’ (ಮಹಿಳಾ ಸರ್ವಾಂಗೀಣ ಉತ್ಕೃಷ್ಟ ಮಂಡಲ್‌) ಸಂಸ್ಥೆ ಕಟ್ಟಿದರು. ಇದಕ್ಕಾಗಿ ಸುಮಾರು ಐದು ವರ್ಷಗಳ ಕಾಲ ಬರಪೀಡಿತ ಪ್ರದೇಶಗಳಲ್ಲಿ ಉಳಿದು ಅಧ್ಯಯನ ನಡೆಸಿದರು.

ವಕೀಲಿವೃತ್ತಿಯನ್ನು ತೊರೆದು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ನೀಲಕಾಂತ ಗುಪ್ತೆ ಅವರು ಮನಿಶಾ ಅವರ ಅಜ್ಜ. ತಂದೆ–ತಾಯಿಯರಾದ ವಸಂತ ಮತ್ತು ಶಾಲಿನಿ ಗುಪ್ತೆ ಸೋಶಿಯಲಿಸ್ಟ್ ಪಕ್ಷದಲ್ಲಿದ್ದರು. ಟ್ರೇಡ್‌ ಯೂನಿಯನ್‌ನಲ್ಲೂ ಕೆಲಸ ನಿರ್ವಹಿಸಿದ್ದರು. ಇವರ ಪ್ರಭಾವದಿಂದಲೇ ಮನಿಶಾ ಜಯಪ್ರಕಾಶ್‌ ನಾರಾಯಣ್‌ ಅವರ ‘ಛಾತ್ರ ಯುವ ವಾಹಿನಿ’ಯನ್ನು ಸೇರಿದ್ದರು. ಮುಂಬೈನ ಸ್ಲಂನಲ್ಲಿ ಕೆಲಸ ಮಾಡುವಾಗ ರಮೇಶ್‌ ಅವರ ಪರಿಚಯವಾಗಿ ಇಬ್ಬರೂ ಬಾಳಸಂಗಾತಿಗಳಾದರು.

ಗ್ರಾಮೀಣ ಪ್ರದೇಶಗಳ ಮಹಿಳೆಯರಲ್ಲಿ ಅವರ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ‘ಮಾಸುಮ್‌’ ಸಂಘಟನೆ ಆರಂಭಿಸಿದರು. ಕೌಟುಂಬಿಕ ದೌರ್ಜನ್ಯಕ್ಕೀಡಾದ ಮಹಿಳೆಯರಿಗೆ ಕಾನೂನು ನೆರವು ನೀಡಲು ಮತ್ತು ಆಪ್ತಸಮಾಲೋಚನೆಗಾಗಿ ‘ಸಂವಾದ’ ಕೇಂದ್ರ ತೆರೆದರು. ಸಾಲ ಉಳಿತಾಯ ಯೋಜನೆಯ ಸ್ವ–ಸಹಾಯ ಗುಂಪುಗಳನ್ನು ರಚಿಸಿದರು. ಗ್ರಾಮಸಭೆ ಇತರೆಡೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಕುರಿತು ನಾನಾ ಕಾರ್ಯಕ್ರಮಗಳನ್ನು ಹಾಕಿಕೊಂಡರು. ಪ್ರಸ್ತುತದಲ್ಲಿ ಆರಕ್ಕೂ ಹೆಚ್ಚು ಗುಂಪುಗಳು ಸಕ್ರಿಯವಾಗಿದ್ದು, ಹೊಸ ತಲೆಮಾರಿನವರೂ ಇವರೊಂದಿಗೆ ಕೈಜೋಡಿಸಿದ್ದಾರೆ.

ದೆಹಲಿಯಲ್ಲಿ 2005ರಲ್ಲಿ ನಡೆದ 10ನೇ ಅಂತರರಾಷ್ಟ್ರೀಯ ‘ಮಹಿಳೆ ಮತ್ತು ಆರೋಗ್ಯ’ ಸಭೆಯ ಸಂಯೋಜಕಿಯಾಗಿ ಮನಿಶಾ ಕೆಲಸ ನಿರ್ವಹಿಸಿದ್ದಾರೆ. ‘ಪುರುಷಾಧಿಪತ್ಯ ಮತ್ತು ಮಹಿಳೆಯರ ಹಕ್ಕುಗಳ–ದಕ್ಷಿಣ ಏಷ್ಯಾ ದೃಷ್ಟಿಕೋನಗಳು’ ವಿಷಯ ಕುರಿತ ಏಳು ದೇಶಗಳ 15 ಲೇಖನಗಳಿರುವ ಪುಸ್ತಕವನ್ನು ಅವರು ಸಂಪಾದಿಸಿದ್ದಾರೆ.

ಭಾವನಾತ್ಮಕ ಸಬಲೀಕರಣ ಅಗತ್ಯ

ಮಹಿಳೆ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ಆರ್ಥಿಕವಾಗಿ ಸಬಲಳಾದರೂ ಕೌಟುಂಬಿಕ ದೌರ್ಜನ್ಯಗಳಿಂದ ಇನ್ನೂ ಸಂಪೂರ್ಣವಾಗಿ ಮುಕ್ತಳಾಗಿಲ್ಲ. ಗಂಡ, ಮಕ್ಕಳು, ಕುಟುಂಬ ಇತ್ಯಾದಿ ಕಾರಣಗಳಿಂದ ಎಷ್ಟೇ ಹಿಂಸೆ ನಡೆದರೂ ದೂರು ನೀಡಲು ಹಿಂಜರಿಯುತ್ತಾಳೆ. ಆದಕಾರಣ ಮಹಿಳೆಯನ್ನು ಆರ್ಥಿಕ ಸಬಲೀಕರಣದ ಜತೆಗೆ ಭಾವನಾತ್ಮಕವಾಗಿಯೂ ಸಬಲೀಕರಣಗೊಳಿಸುವುದು ಅತ್ಯಗತ್ಯ ಎನ್ನುತ್ತಾರೆ, ಆಗ್ನೆಸ್‌ ಮತ್ತು ಗುಪ್ತೆ.

ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಒಳ್ಳೆಯ ಹೆಂಡತಿಯಾಗಿ ಅಥವಾ ತಾಯಿಯಾಗಿ ಕರ್ತವ್ಯ ನಿರ್ವಹಿಸುವ ಬಗ್ಗೆ ಬಾಲ್ಯದಿಂದಲೇ ತರಬೇತಿ ನೀಡಲಾಗುತ್ತದೆ. ಗಂಡಿನಷ್ಟೇ ಹೆಣ್ಣು ಕೂಡ ಸ್ವತಂತ್ರಳು, ಸಮಾನಳು ಎಂಬುದಕ್ಕಿಂತ ಪರಾವಲಂಬಿಯಂತೆ ಬೆಳೆಸಲಾಗುತ್ತದೆ. ಮದುವೆಯ ನಂತರ ತಾನು ಗಂಡನ ಮನೆಯ ಸ್ವತ್ತು ಎಂಬುದನ್ನು ಹೆಣ್ಣಿನಲ್ಲಿ ಮೂಡಿಸಲಾಗುತ್ತದೆ. ಗಂಡನ ಮನೆಯಲ್ಲಿ ದೌರ್ಜನ್ಯ ನಡೆದಾಗ ತವರಿಗೆ ಬರುವುದು ಅನಿವಾರ್ಯವಾಗುತ್ತದೆ. ಹೀಗೆ ಬಂದಾಗ ಒಂದೆರಡು ದಿನದ ನಂತರ ತಂದೆ–ತಾಯಿ ‘ಎಂದು ಗಂಡನ ಮನೆಗೆ ಹೋಗುತ್ತೀಯಾ?’ ಎಂದು ಹೇಳಿದರೆ, ಅಣ್ಣ–ತಮ್ಮಂದಿರ ಸಹಕಾರವೂ ಸಿಗುವುದಿಲ್ಲ. ಮರಳಿ ಗಂಡನ ಮನೆಗೆ ಹೋದರೂ ಇರಲಾಗದ ಸ್ಥಿತಿ. ಅಭದ್ರತೆಯ ಕಾರಣಕ್ಕೆ ಅನೇಕರು ದೂರು ದಾಖಲಿಸಲು ಮುಂದೆ ಬರುವುದಿಲ್ಲ. ಮತ್ತೆ ಕೆಲವರು ದೂರನ್ನು ವಾಪಸ್‌ ಪಡೆದು ರಾಜಿ ಮಾಡಿಕೊಳ್ಳುತ್ತಾರೆ.

ಮಹಿಳೆಯರು ಕಟುಂಬದ ಆಚೆಗಿನ ತಮ್ಮ ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಗತ್ಯ ನಿರ್ಧಾರಗಳನ್ನು ಸ್ವತಂತ್ರವಾಗಿ ಕೈಗೊಳ್ಳಬಲ್ಲರು; ನಿಭಾಯಿಸಬಲ್ಲರು. ಆದರೆ, ಕುಟುಂಬದ ಒಳಗಿನ ನಿರ್ಧಾರಗಳಿಗೆ ಮತ್ತೆ ಅದೇ ನಿರ್ಬಂಧಗಳನ್ನು ಎದುರಿಸುತ್ತಾರೆ. ಒಮ್ಮೊಮ್ಮೆ ಒಂಟಿ ಎನಿಸಿಬಿಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಆಕೆಗೆ ಸಾಂತ್ವನ ಹೇಳುವುದು ಬಹಳ ಮುಖ್ಯ. ಮಿತಿಮೀರಿದ ದೌರ್ಜನ್ಯದ ಸಂದರ್ಭಗಳಲ್ಲಿ ಕುಟುಂಬವನ್ನು ತೊರೆದರೂ ಸಾಮಾಜಿಕ ಸುರಕ್ಷತೆ ಸಿಗಲಿದೆ ಎನ್ನುವ ಭರವಸೆ ಮೂಡಿದಲ್ಲಿ ಭಾವನಾತ್ಮಕವಾಗಿಯೂ ಗಟ್ಟಿಗೊಳ್ಳುತ್ತಾಳೆ ಎಂದು ಅಭಿಪ್ರಾಯಪಡುತ್ತಾರೆ ಅವರು.

ಮಹಿಳಾ ಚೈತನ್ಯದ ದಿನ

ಸಮಾನತೆ–ಸೋದರಿತ್ವದ ಆಶಯದೊಂದಿಗೆ  ಕೆಲಸ ನಿರ್ವಹಿಸುತ್ತಿರುವ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಕಳೆದ ಐದು ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲಾ ಕೇಂದ್ರದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಮಹಿಳಾ ಚೈತನ್ಯ’ ದಿನವೆಂದು ಆಚರಿಸುತ್ತಾ ಬಂದಿದೆ.

ಶಿವಮೊಗ್ಗ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಕಳೆದ ಅಕ್ಟೋಬರ್‌ನಿಂದಲೇ ಜಿಲ್ಲೆಯಾದ್ಯಂತ ವಿವಿಧ ಬಗೆಯಲ್ಲಿ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗಿತ್ತು. ಮಲೆನಾಡಿನ ಕೆಲವು ಹಳ್ಳಿಗಳಲ್ಲಿ ಗಾಮನ ಹಬ್ಬದ ಸಂದರ್ಭದಲ್ಲಿ ಮುಟ್ಟಾದ ಹೆಣ್ಣುಮಕ್ಕಳನ್ನು ಊರಿನಿಂದ ಹೊರಗೆ ಇಡುವ ಪದ್ಧತಿ ಇಂದಿಗೂ ಜೀವಂತವಾಗಿದ್ದು, ಈ ಬಗ್ಗೆ ವಿಸ್ತೃತ ಜಾಗೃತಿ ಅಭಿಯಾನ ನಡೆಸಲಾಯಿತು.

‘ಅರಿವಿನ ಪಯಣ’ ಕಿರುಹೊತ್ತಿಗೆ ಮೂಲಕ ಜಿಲ್ಲೆಯ ವಿವಿಧ ಶಾಲಾ–ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಪ್ಪು–ಬಿಳಿ, ದಪ್ಪ–ಸಣ್ಣ ಇತ್ಯಾದಿ ಕೀಳರಿಮೆಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನಕ್ಕೆ ಉತ್ತಮ ಬೆಂಬಲ ದೊರಕಿತು. ’ಇದುವರೆಗೆ ಸುಮಾರು 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗಿದೆ. ಅರಿವಿನ ಅವ್ವನ ದೊಂದಿ ಹಿಡಿದು ಶ್ರಮಿಕರ, ದಲಿತರ ಕೇರಿಗಳಿಗೂ ಹೋಗಿದ್ದೇವೆ. ಇಂತಹ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕಿದೆ’ ಎನ್ನುತ್ತಾರೆ ಕಾರ್ಯಕ್ರಮದ ಸಂಘಟಕರಾದ ಎಚ್‌.ಎಸ್‌. ಅನುಪಮಾ ಮತ್ತು ದು. ಸರಸ್ವತಿ.

* ಮಾರ್ಚ್‌ 8: ‘ಮಹಿಳೆ, ಸಮಾಜ ಮತ್ತು ಸಂವಿಧಾನ’ ಕುರಿತು ವಿಚಾರ ಸಂಕಿರಣ

* ಸ್ಥಳ: ಡಾ.ಬಿ.ಆರ್‌. ಅಂಬೇಡ್ಕರ್‌ ಭವನ

* ಮಾರ್ಚ್‌ 9: ಹಕ್ಕೊತ್ತಾಯ ಮೆರವಣಿಗೆ ಮತ್ತು ಸಮಾವೇಶ

* ಸ್ಥಳ: ನೆಹರೂ ಸ್ಟೇಡಿಯಂ

* ಮಾಹಿತಿಗೆ: 9482642147/9480211320

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry