‘ಹೆಣ್ಣು ಗೆಲ್ಲುವ ಪ್ರತಿ ದಿನವೂ ಮಹಿಳಾದಿನವೇ’

7

‘ಹೆಣ್ಣು ಗೆಲ್ಲುವ ಪ್ರತಿ ದಿನವೂ ಮಹಿಳಾದಿನವೇ’

Published:
Updated:
‘ಹೆಣ್ಣು ಗೆಲ್ಲುವ ಪ್ರತಿ ದಿನವೂ ಮಹಿಳಾದಿನವೇ’

* ಹೆಣ್ಣಾಗಿ ಹುಟ್ಟಿರೋದೇ ಹೆಮ್ಮೆ ಅಂತ ಅನಿಸಿದ್ದು ಯಾವಾಗ?

ಪ್ರತಿದಿನ ನನಗೆ ಹೀಗೆ ಅನಿಸುತ್ತೆ. ನಾನು ಮಾಡುವ ಪ್ರತಿ ಕೆಲಸದಲ್ಲಿಯೂ ನನಗೆ ಹೆಮ್ಮೆಯಿದೆ. ಆದರೂ, ಕೆಲವು ವಿಶೇಷ ಸಂದರ್ಭಗಳಲ್ಲಿ ಹೆಚ್ಚು ಖುಷಿಯಾಗಿದೆ. ವೈದ್ಯಕೀಯ ಪದವಿ ಮುಗಿಸಿದಾಗ, ತಾಯಿಯಾದಾಗ, ಸ್ನಾತಕೋತ್ತರ ಪದವಿ ಪಡೆದಾಗ, ಬಿಬಿಎಂಪಿಯಲ್ಲಿ ಆರೋಗ್ಯ ಇಲಾಖೆಯ ಮುಖ್ಯಸ್ಥೆಯಾಗಿ ಕೆಲಸ ನಿರ್ವಹಿಸುವಾಗ ಹೆಮ್ಮೆ ಅನಿಸಿತು.

ನಿಮ್ಮೂರು, ಬಾಲ್ಯ ನೆನಪಿಸಿಕೊಳ್ಳಿ...

ನಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ. ನಮ್ಮ ತಂದೆ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಕಾರಣ ಹೆಬ್ಬಾಳದ ಕ್ಯಾಂಪಸ್‌ ಕ್ವಾರ್ಟರ್ಸ್‌ನಲ್ಲಿದ್ದೆವು. ನಾನು ಓದಿದ್ದು ವೈಯ್ಯಾಲಿಕಾವಲ್‌ನ ಸ್ಟೆಲ್ಲಾ ಮೇರೀಸ್‌ ಸ್ಕೂಲ್‌. ಎಂ.ಬಿ.ಬಿ.ಎಸ್. ಮಾಡಿದ್ದು ದಾವಣಗೆರೆಯಲ್ಲಿ. ಸ್ನಾತಕೋತ್ತರ ಪದವಿ ಮೈಸೂರು ವಿಶ್ವವಿದ್ಯಾಲಯದಲ್ಲಿ. ನನ್ನ ಬಾಲ್ಯ ತುಂಬಾ ಚೆನ್ನಾಗಿತ್ತು. ಕೌಟುಂಬಿಕ, ಸಾಮಾಜಿಕ, ನೈಜ ವಾತಾವರಣದಲ್ಲಿ ಬೆಳೆಯುವ ಅವಕಾಶ ನನಗೆ ಸಿಕ್ಕಿತ್ತು. ನಮ್ಮ ಮನೆಯಲ್ಲಿ ಹೆಣ್ಣು–ಗಂಡು ಎಂಬ ಭೇದ ಭಾವ ತೋರಿಸಲಿಲ್ಲ. ದೈನಂದಿನ ಚಟುವಟಿಕೆಗಳಲ್ಲಿ ಎದುರಾಗುವ ಸಣ್ಣಪುಟ್ಟ ಸನ್ನಿವೇಶಗಳಲ್ಲೂ ಬದುಕಿನ ಮೌಲ್ಯಗಳ ಬಗ್ಗೆ ನನ್ನ ತಂದೆ ತಾಯಿ ತಿಳಿಹೇಳುತ್ತಿದ್ದರು. ಚೆನ್ನಾಗಿ ಓದಬೇಕು, ನನ್ನ ಬದುಕನ್ನು ರೂಪಿಸಿಕೊಳ್ಳಬೇಕು ಎಂಬುದಷ್ಟೇ ನನ್ನ ಗುರಿಯಾಗಿತ್ತು. ಹಾಗಾಗಿ ಚೆನ್ನಾಗಿ ಓದಿದೆ.

* ವೈದ್ಯಾಧಿಕಾರಿಯಾಗಿದ್ದುಕೊಂಡು ಉನ್ನತ ಶಿಕ್ಷಣ ಪಡೆಯುವಾಗ ಕುಟುಂಬದ ಸಹಕಾರ ಹೇಗಿತ್ತು?

ಕುಟುಂಬದ ಸಹಕಾರ ಸಿಗದೇ ಹೋದರೆ ನಾನು ಪೀಡಿಯಾಟ್ರಿಕ್ಸ್‌ ಎಂ.ಡಿ. ಓದಲು ಸಾಧ್ಯವಿರಲಿಲ್ಲ. ನನ್ನ ಅಮ್ಮ ದೊಡ್ಡ ಸ್ಫೂರ್ತಿಯಾಗಿ ಜತೆಗೆ ನಿಂತರು. ಧೈರ್ಯ ತುಂಬಿದರು. ‘ಸವಾಲುಗಳು ಬಂದರೇನೇ ಬದುಕಿನ ಮಹತ್ವ ಗೊತ್ತಾಗೋದು. ಮನಸ್ಸಿನಲ್ಲಿ ಯಾವುದೇ ಕಲ್ಮಶ ಇಲ್ಲದೆ ಕೈಗೆತ್ತಿಕೊಂಡ ಕೆಲಸಕ್ಕೆ ಜಯ ಸಿಗುತ್ತದೆ. ಅಂದುಕೊಂಡಿದ್ದನ್ನು ಸಾಧಿಸಿ ತೋರಿಸು. ಕಷ್ಟ ಬಂದಾಗ ಧೈರ್ಯ ಕೆಡಬಾರದು. ಯಾವುದೇ ಕಾರಣಕ್ಕೂ ಹೆಜ್ಜೆ ಹಿಂದೆ ಇಡಬೇಡ, ನಾವೆಲ್ಲರೂ ನಿನ್ನೊಂದಿಗಿದ್ದೇವೆ’ ಎಂದು ಮಗುವಿನ ಜವಾಬ್ದಾರಿಯನ್ನು ವಹಿಸಿಕೊಂಡರು. ನಾನು ಓದಿನತ್ತ ಗಮನ ಹರಿಸಲು ಸಾಧ್ಯವಾಯಿತು. ದುಡಿಯುವ ಹೆಣ್ಣು ಮಕ್ಕಳಿಗೆ ಕುಟುಂಬದ ಸಹಕಾರ ಸಿಕ್ಕರೆ ಆಕೆ ಏನನ್ನಾದರೂ ಸಾಧಿಸಬಲ್ಲಳು. ಇವತ್ತು ನನಗೆ ಸಿಕ್ಕಿರುವ ಸ್ಥಾನಮಾನಗಳಿಗೆ ನನ್ನ ತಾಯಿಯೇ ಕಾರಣ.

* ಜವಾಬ್ದಾರಿಯುತ ಸ್ಥಾನದಲ್ಲಿರುವ ಹೆಣ್ಣು ಮಕ್ಕಳಿಗೆ ಪುರುಷ ಸಹೋದ್ಯೋಗಿಗಳು, ಅಧಿಕಾರಿಗಳು ಪ್ರೋತ್ಸಾಹ ಕೊಡುವುದು ಕಡಿಮೆ ಎಂಬ ದೂರು ಇದೆಯಲ್ಲ?

ದೂರು ಇರುವುದು ನಿಜ. ಅದು ಬೇರೆಯವರ ಅನುಭವ ಆಗಿರಲೂಬಹುದು. ಆದರೆ ನಾನು ಪದವಿ ಮುಗಿಸಿದ ತಕ್ಷಣ ಪಾಲಿಕೆಯಲ್ಲಿ ವೈದ್ಯಾಧಿಕಾರಿಯಾಗಿ ಸೇರಿಕೊಂಡೆ. ಈಗ ಮುಖ್ಯ ಆರೋಗ್ಯಾಧಿಕಾರಿ. ಇದುವರೆಗೂ ಪುರುಷ ಸಹೋದ್ಯೋಗಿ ಅಥವಾ ಅಧಿಕಾರಿಗಳಿಂದ ನನಗೆ ಕಿರುಕುಳ, ಕೆಲಸಕ್ಕೆ ಅಡೆತಡೆ, ಸಮಸ್ಯೆ ಎದುರಾಗಿಲ್ಲ. ಜವಾಬ್ದಾರಿ ಎಂದ ಮೇಲೆ ಸಮಸ್ಯೆಗಳು ಸಹಜ. ಅದನ್ನೆಲ್ಲಾ ಸಮರ್ಥವಾಗಿ ಎದುರಿಸಿಕೊಂಡು ಹೋಗಬೇಕು. ಉನ್ನತ ಅಧಿಕಾರಿಗಳು, ಜಂಟಿ ಆಯುಕ್ತರು, ಆಯುಕ್ತರು ಯಾರೂ ಮಹಿಳಾ ಅಧಿಕಾರಿ ಎಂಬ ಕಾರಣಕ್ಕೆ ತಾರತಮ್ಯ ಮಾಡಿಲ್ಲ.

* ನಿಮ್ಮ ಪ್ರಕಾರ ಈ ನಗರದಲ್ಲಿ ಲಿಂಗ ಸಮಾನತೆ ಇದೆಯೇ?

ಬೆಂಗಳೂರಿನಲ್ಲಿಯೂ ಲಿಂಗ ಅಸಮಾನತೆ ತುಂಬಾ ಇದೆ. ಆದರೆ ನನ್ನ ಅದೃಷ್ಟಕ್ಕೆ ನನಗೆ ಅಂತಹ ಅನುಭವ ಆಗಿಲ್ಲ. ಕೆಲವೊಮ್ಮೆ ನನ್ನ ಅನುಭವಕ್ಕೆ ಬಂದಿದ್ದರೂ ಇನ್ನಷ್ಟು ಉತ್ತಮ ರೀತಿಯಿಂದ ಕೆಲಸ ಮಾಡುವ ಮೂಲಕ ಉತ್ತರ ಕೊಟ್ಟಿದ್ದೇನೆ.

* ನಿಮ್ಮ ಪ್ರಕಾರ ಮಹಿಳಾ ದಿನ ಅಂದರೆ?

ಹೆಣ್ಣು, ತಾನು ಹೆಣ್ಣು ಎಂಬುದನ್ನು ಪ್ರತಿದಿನ ಸಂಭ್ರಮಿಸಬೇಕಾದ ಸಂಗತಿ. ಅವಳು ತನ್ನ ಮೇಲಿನ ಅನ್ಯಾಯವನ್ನು ಸಹಿಸಿಕೊಂಡು ಕೂರುವ ಬದಲು ಕಠಿಣ ಪರಿಶ್ರಮದಿಂದ ಗಟ್ಟಿಯಾಗಿ ನಿಲ್ಲಬೇಕು. ಹೆಣ್ಣು ಗೆಲ್ಲುವ ಪ್ರತಿದಿನವೂ ಮಹಿಳಾ ದಿನವೇ.

* ಹೆತ್ತವರು ತಮ್ಮ ಗಂಡು ಮಕ್ಕಳಲ್ಲಿ ಎಂಥ ಮೌಲ್ಯಗಳನ್ನು ತುಂಬಿದರೆ ನಮ್ಮ ಸಮಾಜ ‘ಸ್ತ್ರೀಸ್ನೇಹಿ’ಯಾದೀತು?

ಮಕ್ಕಳು ದೊಡ್ಡವರಾದ ಮೇಲೆ ಅವರಿಗೆ ತಿಳಿಹೇಳುವುದಕ್ಕಿಂತ ಹೆಣ್ಣು ಮಕ್ಕಳನ್ನು, ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಬಾಲ್ಯದಿಂದಲೇ ತುಂಬುತ್ತಾ ಹೋಗಬೇಕು. ಸ್ವಸ್ಥ ಸಮಾಜಕ್ಕೆ ಇದು ಅತ್ಯುತ್ತಮ ಮಾರ್ಗ.

ಹೆಣ್ಣಿಗೆ ಅನುಕಂಪ ಬೇಕಾಗಿಲ್ಲ. ಅವಳಿಗೆ ಬೇಕಿರುವುದು ಸಮಾನತೆ ಮತ್ತು ಗೌರವ. ಟಿ.ವಿ ನೋಡುವಾಗ ದೌರ್ಜನ್ಯದ ಸನ್ನಿವೇಶ ಬಂದರೆ ಅದು ತಪ್ಪು ಎಂದು ಅಲ್ಲಿಯೇ ತಿಳಿಹೇಳಬೇಕು. ಮನೆಯೇ ಮೊದಲ ಪಾಠಶಾಲೆ. ಗಂಡ ಮತ್ತು ಹೆಂಡತಿ ಪರಸ್ಪರ ಗೌರವಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸಮಾನತೆ ಕಾಪಾಡಿಕೊಳ್ಳಬೇಕು. ಇದು ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

* ನಾನು ಗಂಡಾಗಿ ಹುಟ್ಟಬೇಕಿತ್ತು ಎಂದು ಅನಿಸಿದೆಯಾ?

ಹಾಗೆ ಅನಿಸಿದ್ದು ಕಡಿಮೆ. ಅನಿಸಿದಾಗಲೆಲ್ಲ ಗಟ್ಟಿಯಾಗಿ ನಿಂತು ಹೋರಾಡಿ ಗೆದ್ದಿದ್ದೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry