ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಗೇಕೆ ವಯಸ್ಸಿನ ಹಂಗು

Last Updated 2 ಮಾರ್ಚ್ 2018, 19:30 IST
ಅಕ್ಷರ ಗಾತ್ರ

* ಅಮೂಲ್ಯಾ ಪಿ.ಎಲ್.

‘59ನೇ ದಾಖಲೆ ಪೂರ್ಣಗೊಳಿಸಿದ ದಿನದಂದೇ ನನಗೆ 61ನೇ ವರ್ಷದ ಜನ್ಮದಿನ. ಎಷ್ಟೋ ಜನ 60ರ ವಯೋಮಾನ ದಾಟುತ್ತಿದ್ದಂತೆ ಜೀವನವೇ ಮುಗಿಯಿತು ಎಂಬ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಅಂಥವರಿಗೆ ನಾನು ಸ್ಫೂರ್ತಿಯಾಗಬೇಕು ಎಂಬುದೇ ನನ್ನ ಮನದ ಇಂಗಿತ’.

– ಇದು ಏಕಾಂಗಿ ಕಾರು ಚಾಲನೆಯ ಮೂಲಕ ದಾಖಲೆ ನಿರ್ಮಿಸಿರುವ ಡಾ. ರಮೇಶ್‌ ಬಾಬು ಅವರ ಮಾತು.

ಮಹಾರಾಷ್ಟ್ರದ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಲೋಹಶಾಸ್ತ್ರ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದ ಅವರು ಇದೀಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಔರಂಗಬಾದ್‌ನಿಂದ ಬೆಂಗಳೂರಿಗೆ 1,106 ಕಿ.ಮೀ. ಅಂತರ. ಈ ಅಂತರವನ್ನು ಅವರು ಏಕಾಂಗಿಯಾಗಿ ಕಾರು ಚಾಲನೆಯ ಮೂಲಕ 23.34 ಗಂಟೆಗಳಲ್ಲಿ ಕ್ರಮಿಸಿದ್ದಾರೆ. ಇದು ದಾಖಲೆ ಎನಿಸಿದೆ.

ಫೆ.12ರ ಮುಂಜಾನೆ 4.43ಕ್ಕೆ ಔರಂಗಬಾದ್‌ನಿಂದ ಹೊರಟು ಫೆ.13ರ ಮುಂಜಾನೆ 4.17ಕ್ಕೆ ಬೆಂಗಳೂರು ತಲುಪಿದ್ದಾರೆ. ಪ್ರಯಾಣದ ನಡುವೆ 3 ಬಾರಿ ಡೀಸೆಲ್‌ ಹಾಕಿಸಲು, 14 ಟೋಲ್‌ಗಳಲ್ಲಿ ಶುಲ್ಕ ಪಾವತಿಸಲು, ಆಹಾರ ಸೇವನೆ, ಲಘು ವ್ಯಾಯಾಮ, ಫೋಟೊ ತೆಗೆಯಲು, ಮೂತ್ರವಿಸರ್ಜನೆ ಹಾಗೂ ಲಾಗ್‌ಬುಕ್ ನಮೂದಿಸಲು 3.20 ಗಂಟೆ ವ್ಯಯಿಸಿದ್ದಾರೆ.

‘60 ವರ್ಷ ದಾಟಿದ ಯಾರೊಬ್ಬರೂ ಇಂಥ ಸಾಹಸ ಮಾಡಿಲ್ಲ. ನನ್ನ ಸಾಧನೆಯ ದಾಖಲೆಗಳನ್ನು ಅಸಿಸ್ಟ್ ವರ್ಲ್ಡ್ ರೆಕಾರ್ಡ್ಸ್ ರಿಸರ್ಚ್ ಫೌಂಡೇಶನ್, ಯುನಿಕ್‌ ವರ್ಲ್ಡ್‌ ರೆಕಾರ್ಡ್‌, ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ ಹಾಗೂ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೆ ಕಳುಹಿಸಿದ್ದೇನೆ’ ಎಂದು ಖುಷಿಯಿಂದ ಹೇಳಿಕೊಂಡರು.

ಇವರ ಹೆಸರಿನಲ್ಲಿ ಈಗಾಗಲೇ 58 ವಿಶ್ವದಾಖಲೆ ಹಾಗೂ 9 ರಾಷ್ಟ್ರೀಯ ದಾಖಲೆಗಳಿವೆ. ಜಿಮ್‌ನಲ್ಲಿ ನಿರಂತರ 1 ಸಾವಿರ ಪುಶ್‌ ಅಪ್‌ ಮಾಡಲು ತಯಾರಿ ನಡೆಸುತ್ತಿದ್ದಾರೆ.

‘ನನ್ನ ಸಾಧನೆಗೆ ವಯಸ್ಸು ಒಂದು ವಿಷಯವೇ ಅಲ್ಲ. ನನ್ನ ಸಾಧನೆಯ ಹಂಬಲ ಇಷ್ಟಕ್ಕೇ ನಿಲ್ಲುವುದಿಲ್ಲ. ಮುಂದೆ ವಿಶಿಷ್ಟ ರೀತಿಯ ಸಾಹಸ ಮಾಡವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ’ ಅವರು.

ಸಸ್ಯಾಹಾರಿಯಾಗಿರುವ ರಮೇಶ್‌ ಬಾಬು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಸೈಕ್ಲಿಂಗ್‌, ನಿಯಮಿತ ವ್ಯಾಯಾಮ ಹಾಗೂ ಓಪನ್‌ ಜಿಮ್‌ನಲ್ಲಿ ದಿನಕ್ಕೆ ಎರಡಯ ಬಾರಿ ವರ್ಕ್‌ಔಟ್‌ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT