ರಾಹುಲಣ್ಣನವರ ವಚನವಾಚನ

7

ರಾಹುಲಣ್ಣನವರ ವಚನವಾಚನ

Published:
Updated:
ರಾಹುಲಣ್ಣನವರ ವಚನವಾಚನ

ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ

ಇವ ನಮ್ಮವ ಇವ ನಮ್ಮವ ಇವನಮ್ಮವನೆಂದೆನಿಸಯ್ಯಾ

ಕೂಡಲಸಂಗಮ ದೇವಾ ನಿಮ್ಮ ಮಹಾಮನೆಯ

ಮಗನೆಂದೆನಿಸಯ್ಯಾ.

ಇಷ್ಟೊಂದು ಸುಂದರವಾದ ಬಸವಣ್ಣನವರ ವಚನವನ್ನು ನಮ್ಮ ರಾಹುಲಣ್ಣ ವಾಚನ ಮಾಡಿದರೆ ಹೇಗಾಗಬಹುದೆಂದು ಅದನ್ನು ಇಂಗ್ಲಿಷ್‌ನಲ್ಲಿ ಬರೆದುಕೊಟ್ಟ ಭೂಪರಿಗೆ ಗೊತ್ತಿರಬೇಕಿತ್ತು. ಕಾಂಗ್ರೆಸ್‌ನ ಹೊಸ ಅಧ್ಯಕ್ಷರು ಎದುರಿಗಿದ್ದ ಎರಡು ಮೈಕುಗಳನ್ನು ಎಂದಿನ ಸ್ಟೈಲ್‌ನಲ್ಲೇ ‘ಆಲಿಂಗನ’ ಮಾಡಿಸುತ್ತಾ, ‘ಇವ ನರ್ವ… ಇವ ನರ್ವ… ಇವ ನಮ್ವ … ಇವ ನಮ್ವ… ಇವ ನಮ್ವ...’ ಎಂದೆಲ್ಲಾ ಬಸವಣ್ಣನವರಿಗೆ ಅವಮಾನ ಮಾಡುತ್ತಾ, ಯಾವುದೇ ತಪ್ಪು ಮಾಡದವರಂತೆ ಓದುತ್ತಿದ್ದರು. ಈಗಿನ ಕಾಲದಲ್ಲಿ ಇಂತಹುದೆಲ್ಲಾ ಭಾಷಣ ಮುಗಿಸುವ ಮೊದಲೇ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿಬಿಡುತ್ತದೆ.

‘ಗೊತ್ತಿಲ್ಲದೆ ಎಸಗುವ ತಪ್ಪುಗಳಿವು ಕ್ಷಮಿಸೆನ್ನನು ಕೂಡಲಸಂಗಮ ದೇವಾ’ ಎಂದು ಬಸವಣ್ಣನವರು ಬರೆದಿಲ್ಲವಾದರೂ, ಅಂತಹ ವಚನ ಇದೆಯೆಂದು ನಮ್ಮನ್ನು ನಂಬಿಸುವವರಿಗೆ ಏನೂ ಕೊರತೆಯಿಲ್ಲ ಬಿಡಿ! ಕ್ಯಾಂಟೀನ್ ಖ್ಯಾತಿಯ ಇಂದಿರಾಜೀ ಕೂಡಾ ಇಲ್ಲಿ ಬಂದು ‘ಎಲರಿಗು ನನ ನಮಸ್ಕರ’ ಎಂದು ಹೇಳಿಯೇ ಭಾಷಣ ಆರಂಭಿಸಿದ್ದುಂಟು. ಈಚೆಗೆ ಮೋದಿ (ಬ್ಯಾಂಕ್ ಲೂಟಿಕೋರ ಅಲ್ಲ) ರಾಜ್ಯಕ್ಕೆ ಬಂದಾಗ ‘ಎಲರಿಗು ನಮಸ್ಕಾರ್’ ಅಂದಿದ್ದರು.

ಹೆಚ್ಚೆಂದರೆ ಅವರು ‘ಬೊಸ್ವನ್ನ’ರ ಹೆಸರನ್ನು ಹೇಳಿದರೇ ವಿನಾ ವಚನಾಮೃತ ಸುರಿಸುವ ಸಾಹಸಕ್ಕಿಳಿದಿರಲಿಲ್ಲ. ಆದರೆ ರಾಹುಲ್‌ಜೀ ಅಷ್ಟು ಕ್ಲಿಷ್ಟಕರ ವಾಕ್ಯಗಳನ್ನು ಓದುವ ಸಾಹಸಕ್ಕೆ ಇಳಿದಿರುವುದು ನೋಡಿದರೆ, ಅವರು ಬ್ರೇಕ್ ಇಲ್ಲದ ಕಾರು ಎಂದು ಗೊತ್ತಿದ್ದರೂ ವಾಹನವನ್ನೂ ಚಲಾಯಿಸುವ ಧೈರ್ಯ ತೋರಿಸುವವರೇ! ವಿಜಯಪುರದಿಂದ ಬಂದ ಗಾಳಿಸುದ್ದಿ ಪ್ರಕಾರ ರಾಹುಲ್‌ಜೀ ವೇದಿಕೆಯಲ್ಲಿ ಓದಿದ್ದು ಎಷ್ಟೋ ವಾಸಿಯಂತೆ. ಅದಕ್ಕೆ ಮೊದಲು ‘ರಿಹರ್ಸಲ್’ನಲ್ಲಿ ಅವರು ‘ಇವ ನೀರವ... ಇವ ನೀರವ’ ಎಂದೋ, ‘ಇವ ನಾರುವ ಇವ ನಾರುವ’ ಎಂದೋ ಓದುತ್ತಿದ್ದರಂತೆ! ಕೊನೆಗೆ ಅದನ್ನು ಹೇಳಿಕೊಡುತ್ತಿದ್ದ ‘ದ್ರೋಣಾಚಾರ್ಯ’ರಿಗೆ ಉಸ್ಸಪ್ಪಾ ಅನಿಸಿ ಅಂತೂ ಇಂತೂ ಪಾಸ್ ಮಾಡಿದ್ದರಂತೆ.

ಅಷ್ಟಕ್ಕೂ ನಮ್ಮ ಕನ್ನಡ ನಾಡಿನಲ್ಲಿ ರಾಹುಲಣ್ಣನ ಬಾಯಿಯಿಂದ ಮಾತ್ರ ತಪ್ಪು ತಪ್ಪು ಕನ್ನಡ ಹೊರಬಿದ್ದದ್ದೇನಲ್ಲ. ಅಚ್ಛಾ ಹಿಂದಿಯ ರಾಹುಲ್‌ಗೆ ಅಚ್ಚ ಕನ್ನಡ ಮಾತನಾಡುವುದು ತುಂಬಾನೇ ಕಷ್ಟ ಬಿಡಿ. ಆದರೆ ಸರಿಯಾಗಿ ಕನ್ನಡ ಮಾತನಾಡಬಲ್ಲ ಕನ್ನಡಿಗರು ಎಷ್ಟು ಮಂದಿ ಇದ್ದಾರೆ ಹೇಳಿ! ಭಾಷಣ ಕೌಶಲದ ಹೆಗಡೆ ಅವರು ಈಚೆಗೆ ಹೇಳಿದ್ದು ಅದನ್ನೇ ಅಲ್ಲವೇ? ಉತ್ತರ ಕರ್ನಾಟಕದ ಕಡೆ ಮಳೆಯ ಜತೆ ಗಾಳಿ ಬೀಸಿದರೆ ಅದು ಗಾಳಿಯಲ್ಲ, ಘಾಳಿ! ಅಯ್ಯೋ! ಏನ್ ಘಾಳಿ ಮಳೆಯಪ್ಪಾ! ಅನ್ನುತ್ತಾರೆ. ‘ಅಲ್ಲಿ ಗಂಟ’ ಎಂದರೆ ‘ಅಲ್ಲಿ ವರೆಗೆ’ ಎಂದೇ ನಾವು ಅರ್ಥ ಮಾಡಿಕೊಳ್ಳಬೇಕು.

ಬೆಂಗಳೂರಿನಲ್ಲಿ ‘ಆ ನಂತರ ಅದು ಹೊರಟು ಹೋಗುತ್ತದೆ...’ ಅನ್ನುವುದಕ್ಕಿಂತ ‘ಅದು ಬಂದು ಹೊರಟು ಹೋಗುತ್ತದೆ’ ಎಂದರೇನೆ ಸರಿ. ‘ಯವಗ? … ವೊಸು ಮಂದಿ…ಏನ್ ಮಾಡಕತ್ತೀರಿ...’ ಇಂತಹ ಪದಪುಂಜಗಳಿಂದಾಗಿಯೇ ನಮ್ಮ ಹೆಗಡೆ ಅವರಿಗೆ ಕನ್ನಡ ಭಾಷೆ ಕರ್ಣಕಠೋರವಾಗಿರಬೇಕು! ಹಾಗೆಂದು ಹೆಗಡೆ ಅವರೊಂದಿಗೆ ಅವರ ಭಾಷೆಯಲ್ಲೇ (ಅದೇ ಸ್ವಾಮಿ, ಹವ್ಯಕ ಕನ್ನಡ) ಮಾತನಾಡಿಸಿ ನೋಡಿ. ‘ಅದು ಬತ್ತು...’ ‘ಅದು ಎಲ್ಲಿ? ಕಾಣ್ತಿಲ್ಲ…’  ‘ಆನೆ ತಂದು ಕಪಾಟಿನೊಳಗಿಟ್ಟಿದ್ದೆ’... ಇದು ಅವರದ್ದೇ ಆದ ಕನ್ನಡದ ಕೆಲವು ಸ್ಯಾಂಪಲ್ಲುಗಳು. ಅಲ್ಲಿ ಮನುಷ್ಯರನ್ನು ‘ಅದು’ ಎಂದು ನಿಷ್ಠುರವಾಗಿ ಹೇಳುತ್ತಾರೆ. ಹೋಗಲಿ, ಸ್ವಯಂ ‘ನಾನು’ ಎಂಬ ಪದಕ್ಕೆ ‘ಆನೆ’ ಅನ್ನುತ್ತಾರೆ. ಅದಕ್ಕೇ ನೋಡಿ, ಆನೆ ತಂದು ಕಪಾಟಿನೊಳಗಿಟ್ಟಿರುವುದು! ಈಗ ಹೇಳಿ, ಶ್ರೀಮಾನ್ ಹೆಗಡೆ ಅವರು ಹೇಳಿದ್ದರಲ್ಲಿ ತಪ್ಪಿದೆಯಾ?

ಇನ್ನು ಮಂಗಳೂರಿನಿಂದ ಕುಂದಾಪುರದವರೆಗೆ ಮಾತನಾಡುವ ಕನ್ನಡಕ್ಕೆ ಒಂದು ವಿಶೇಷ ಸ್ಥಾನಮಾನವೇ ಸಿಕ್ಕಿದೆ! ‘ಕರ್ನಾಟಕದ ಹಾಸ್ಯ ಕನ್ನಡ’ ಎಂಬುದೇ ಆ ಸ್ಥಾನಮಾನ!

ಹೀಗೆ ನಾನಾ ರೀತಿಯ ಕನ್ನಡವನ್ನು ಮಾತನಾಡುವ ಕನ್ನಡಿಗರಿಗೆ ತಮ್ಮದು ಶುದ್ಧ ಕನ್ನಡ ಅಲ್ಲ ಎಂದು ಈವರೆಗೂ ಅನಿಸಿಲ್ಲ. ಹಾಲಿಗೆ ನೀರು ಹಾಕಿದರೂ ಬೆಳ್ಳಗಿರುತ್ತಲ್ಲ, ಅಷ್ಟು ಸಾಕು! ಆದರೆ ನಮ್ಮ ರಾಜ್ಯದಲ್ಲಿ ಇನ್ನೊಂದು ಅಪಾಯಕಾರಿ ಕನ್ನಡಿಗರು ಇದ್ದಾರೆ. ಇವರನ್ನು ಕನ್ನಡ ‘ಗ್ಯಾಂಗ್’ ಎಂದು ಕರೆದರೇನೆ ಚೆನ್ನ. ಗ್ಯಾಂಗ್ ಯಾಕೆಂದರೆ ಇವರೇ ನಮ್ಮ ಕನ್ನಡದ ಕೊಲೆ ಮಾಡುವವರು. ಇವರು ಹೆಚ್ಚಾಗಿ ಸುದ್ದಿ ವಾಚಕರ ರೂಪದಲ್ಲೋ, ಟಿ.ವಿ. ಅಡಿಬರಹಗಳನ್ನು ಬರೆಯುವವರ ರೂಪದಲ್ಲೋ, ಸಿನಿಮಾ ಹಾಡುಗಳನ್ನು ಬರೆಯುವವರ ರೂಪದಲ್ಲೋ ನುಸುಳಿರುತ್ತಾರೆ.

ದಿಟ್ಟತನದಿಂದ ಮಾತನಾಡುವ ಹೊಸ ಕನ್ನಡವೂ ಇದೆ. ಯಾಕ್ಚುವಲಿ, ಅದಕ್ಕೆ ಕಂಗ್ಲಿಷ್ ಎಂದು ಕಾಲ್ ಮಾಡುತ್ತಾರೆ (ಕರೆಯುತ್ತಾರೆ- ಎಂದು ಓದಿ) ಕಂಗ್ಲಿಷ್ ಪದಗಳು ಮುಂದೆ ಕನ್ನಡ-ಕನ್ನಡ ನಿಘಂಟಿನಲ್ಲಿ ಸೇರಿಕೊಂಡರೂ ಆಶ್ಚರ್ಯವಿಲ್ಲ. ಬೆಂಗಳೂರಿನಲ್ಲಂತೂ ಸಕತ್, ಬಂಬಾಟ್, ಮಚ್ಚಾ, ನಾಷ್ಟಾಗಳು ಕನ್ನಡದಲ್ಲಿ ಹುಚ್ಚುಚ್ಚಾಗಿ ಸೇರಿಕೊಂಡಿವೆ. ಇದಕ್ಕೆ ಕಾರಣಕರ್ತರಾದವರು ನಿಜಕ್ಕೂ ಪಾಪಿಗಳು ಎಂದು ‘ಶುದ್ಧ ಕನ್ನಡ ರಕ್ಷಣೆ ವೇದಿಕೆ’ಯ ಪರವಾಗಿ ಇಲ್ಲಿ ಹೇಳಬೇಕಾಗಿದೆ.

ಈಗ ನಿಮಗೆ ಮನದಟ್ಟಾಗಿರಲೇಬೇಕು. ರಾಹುಲಣ್ಣ ಓದಿದ ‘ಇವ ನರ್ವ… ಇವ ನರ್ವ’ದಲ್ಲಿ ಅಂತಹ ಘೋರ ತಪ್ಪೇನಿದೆ ಎಂದು. ಅವರು ಮುಂದಿನ ಬಾರಿಯೂ ಇನ್ನಷ್ಟು ಬಸವಣ್ಣನವರ ವಚನಗಳನ್ನು ವಾಚಿಸುವ ಸಾಹಸ ಮಾಡಬಹುದು. ಆದ್ದರಿಂದ ಕನ್ನಡಿಗನೇ, ಅವರನ್ನು ದಯವಿಟ್ಟು ನಮ್ಮ ಮಹಾಮನೆಯ ಮಗನೆಂದೆನಿಸಯ್ಯಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry