ಶೀಘ್ರ ಪರಿಹಾರ-ಶಾಶ್ವತ ಸಮಸ್ಯೆ!

ಶನಿವಾರ, ಮಾರ್ಚ್ 23, 2019
28 °C

ಶೀಘ್ರ ಪರಿಹಾರ-ಶಾಶ್ವತ ಸಮಸ್ಯೆ!

Published:
Updated:
ಶೀಘ್ರ ಪರಿಹಾರ-ಶಾಶ್ವತ ಸಮಸ್ಯೆ!

* ರಘು ಕೆ. ಸಿ.

ಮನಃಶಾಸ್ತ್ರಜ್ಞರು ಮತ್ತು ಸಮಾಜಶಾಸ್ತ್ರ ಅಧ್ಯಯನ ಮಾಡುವವರು ಹೇಳುವುದು ‘ಆಹಾರ ಅಭದ್ರತೆ, ಹಸಿವು ಮತ್ತು ಬಡತನ ತಾಂಡವವಾಡುವ ಕಾಲದಲ್ಲಿ ಜನರು ಬೊಜ್ಜನ್ನು ಬಯಸುತ್ತಾರೆ.’ ಬೊಜ್ಜು ಶ್ರೀಮಂತಿಕೆಯ ಮತ್ತು ಸಂತಸದ ಬದುಕಿನ ಸಂಕೇತವಾಗಿ ತೋರುತ್ತದೆ. ಇಂದು ಹೀಗೆ ಹೇಳುವುದುಂಟು – Thin is in; stout is out. ಪ್ರಪಂಚದ ಬಹುಪಾಲು ಜನರು ತೆಳುವಾಗಿರಲು ಹರಸಾಹಸ ಪಡುತ್ತಿದ್ದಾರೆ. ಫ್ರಾನ್ಸ್ ದೇಶದಲ್ಲಿ ಸೌಂದರ್ಯ ಸ್ಪರ್ಧೆಯ ನಡುಗೆಯಲ್ಲಿಯೇ ಬಿದ್ದು, ಒಬ್ಬಾಕೆ ಅಸುನೀಗಿದಳು. ಈಗ ಅನೇಕ ದೇಶಗಳಲ್ಲಿ ಮಾಡೆಲಿಂಗ್ ಮಾಡಲು ಕನಿಷ್ಠ ಇಷ್ಟು ತೂಕ ಇರಲೇಬೇಕೆಂದು ನಿಗದಿಪಡಿಸಲಾಗಿದೆ. ಒಂದು ರೀತಿಯಲ್ಲಿ ‘fat is a social phenomena not biological’ ಎನ್ನುವುದುಂಟು. ತೆಳ್ಳಗಿರುವ ಕಾರಣಕ್ಕಾಗಿ ಊಟವನ್ನು ಬಿಟ್ಟು, ಊಟದ ಬಗೆಗೆ ಭೀಭತ್ಸ ಭಾವನೆಯನ್ನು ಹೊಂದುವುದನ್ನು ಒಂದು ಕಾಯಿಲೆ ಎಂದೇ ಪರಿಗಣಿಸಬೇಕಾಗುತ್ತದೆ. ಹಾಗೆಯೆ ಬೊಜ್ಜು ಬೆಳೆಸಿಕೊಂಡವರನ್ನು ಕೂಡ ‘ಮಾನಸಿಕ ಹಿಡಿತ ಕಳೆದುಕೊಂಡ ರೋಗಿಗಳು’ ಎಂದು ಪರಿಗಣಿಸಬೇಕೆಂದು ಅಮೆರಿಕದ ಮನಃಶಾಸ್ತ್ರಜ್ಞರು ಅಲ್ಲಿನ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು.

ದೇಹದ ತೂಕವನ್ನು ಇಳಿಸಿಕೊಳ್ಳಲು ಮತ್ತು ಅದು ಹೆಚ್ಚಾಗದಂತೆ ನೋಡಿಕೊಳ್ಳಲು ಅನೇಕ ಕೃತಕ ಆಹಾರಗಳು ಮತ್ತು ಔಷಧಗಳು ಇಂದು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಕೊಬ್ಬನ್ನು ಸೇವಿಸಿದರೂ, ಅದು ಜೀರ್ಣವಾಗದಂತೆ ನೋಡಿಕೊಳ್ಳುವ ಔಷಧಗಳಿವೆ. ಅವು ಕೊಬ್ಬನ್ನು ಜೀರ್ಣಿಸಲು ಬೇಕಾದ ಕಿಣ್ವಗಳ ಉತ್ಪಾದನೆಯನ್ನೇ ಹತ್ತಿಕ್ಕುವ ಕೆಲಸವನ್ನು ಮಾಡುತ್ತವೆ. ಇನ್ನು ಕೃತಕ ಕೊಬ್ಬೇ ಇದೆ. ಅದನ್ನು ಸೇವಿಸಿದಾಗ, ಬಾಯಿಗೆ ಬೆಣ್ಣೆ–ತುಪ್ಪಗಳ ಅನುಭವ ಕೊಡುತ್ತದೆಯಷ್ಟೆ! ಅದು ದೇಹಕ್ಕೆ ಸೇರದೆ, ಹೊರ ಹೋಗುವಂಥದ್ದು. ಇನ್ನು ಕಾರ್ಬೋಹೈಡ್ರೇಡ್ ಕೊಬ್ಬಾಗಿ ಮಾರ್ಪಾಡು ಆಗುವುದನ್ನು ತಡೆಗಟ್ಟಲು, ಹೈಡ್ರಾಕ್ಸಿಲ್ ಮಾತ್ರೆಗಳನ್ನು ಸೇವಿಸುವುದುಂಟು. ಸಕ್ಕರೆಗೆ ಬದಲಾಗಿ ಶಕ್ತಿರಹಿತವಾದ ಕೃತಕ ಸಕ್ಕರೆ ಹತ್ತಾರು ರೀತಿಯಲ್ಲಿ ಲಭ್ಯವಿದೆ. ಇದಾವುದೂ ಬೇಡವೆಂದರೆ, ಹೊಟ್ಟೆಯ ಗಾತ್ರವನ್ನೇ ಶಸ್ತ್ರಚಿಕಿತ್ಸೆಯ ಮೂಲಕ ಚಿಕ್ಕದಾಗಿಸುವ ಚಿಕಿತ್ಸೆ ಮಾರುಕಟ್ಟೆಯಲ್ಲಿದೆ. ಬೊಜ್ಜನ್ನು ಹೊರತೆಗೆಯುವ ಶಸ್ತ್ರಚಿಕಿತ್ಸೆಯೂ ಉಂಟು. ಆಹಾರವನ್ನು ಸೇವಿಸುವಾಗ, ಕ್ಯಾಲೋರಿಗಳನ್ನು ಲೆಕ್ಕ ಹಾಕಿ, ಅಲಾರಮ್ ಹೊಡೆಯುವ ಗಂಟೆಯೂ ಮಾರುಕಟ್ಟೆಯಲ್ಲಿದೆ. ಹೀಗಾಗಿ ಬೊಜ್ಜಿನ ಸುತ್ತಾಮುತ್ತಾ ಪರಿಹಾರಕ್ಕೆಂದು ದೊಡ್ಡ ಮಾರುಕಟ್ಟೆಯೇ ಸಿದ್ಧವಾಗಿದೆ.

ಎಷ್ಟೇ ಶೀಘ್ರ ಪರಿಹಾರಗಳು ಲಭ್ಯವಿದ್ದರೂ, ಅವುಗಳಲ್ಲಿ ಒಂದಲ್ಲ ಒಂದು ರೀತಿ ಅಡ್ಡಪರಿಣಾಮಗಳು ಇದ್ದೇ ಇವೆ. ಕೃತಕ ಸಕ್ಕರೆಗಳಿಂದ ಕ್ಯಾಲೊರಿ ಸಿಕ್ಕದಿದ್ದರೂ, ಕರುಳಿನ ಸೂಕ್ಷ್ಮಜೀವಿಗಳನ್ನು ಬದಲಾಗಿಸುವುದರಿಂದ ಬೊಜ್ಜು ಹೆಚ್ಚಾಗುವುದೆಂದು ಅಧ್ಯಯನಗಳಿಂದ ತಿಳಿದುಬಂದಿದೆ. ಕೊಬ್ಬನ್ನು ಕಡಿಮೆ ಸೇವಿಸುವುದರಿಂದ ವಿಟಮಿನ್ ಎ, ಡಿ, ಇ ಮತ್ತು ಕೆ ಸಿಗದಂತಾಗಿ, ವಿವಿಧ ರೋಗಗಳಿಗೂ ತುತ್ತಾಗಬಹುದು. ‘ಬೊಜ್ಜು’ ಎಂಬ ರೋಗವನ್ನು ತಡೆಯಲು ಸೂಕ್ತ ಪರಿಹಾರವೆಂದರೆ, ನಾವು ಹೆಚ್ಚು ಸಂಸ್ಕರಿದ ಆಹಾರವನ್ನು ಸೇವಿಸದಿರುವುದು. ಅದೇ ನಾವು ಹೆಚ್ಚು ಸೇವಿಸುವುದನ್ನು ತಡೆಯುತ್ತದೆ. ಪರಿಪೂರ್ಣವಾದ ಆಹಾರಸೇವನೆಯು ನಮಗೆ ಸಂತೃಪ್ತಿಯನ್ನು ಕೊಡುವುದರ ಜೊತೆಗೆ ಅತಿಯಾದ ಸೇವನೆಗೂ ಕಡಿವಾಣವನ್ನು ಹಾಕುತ್ತದೆ.

ಉದಾಹರಣೆಗೆ ಹಣ್ಣಿನ ಮೂಲಕ ಸಿಗುವ 10 ಗ್ರಾಂ ಸಕ್ಕರೆಗೆ 100 ಗ್ರಾಂ ಹಣ್ಣನ್ನು ತಿನ್ನಬೇಕಾಗುವುದು. ಅದರಲ್ಲಿ ಶೇ. 90ರಷ್ಟು ನೀರೇ ಇರುವುದರಿಂದ ಹೊಟ್ಟೆ ತುಂಬುತ್ತದೆ, ತೃಪ್ತಿಯೂ ಸಿಗುತ್ತದೆ, ಹೆಚ್ಚು ತಿನ್ನಲೂ ಸಾಧ್ಯವಿಲ್ಲ. ಆದರೆ, ಇನ್ನೆರಡು ಚಮಚ ಸಕ್ಕರೆ ಸೇರಿಸುವುದು ಸುಲಭ ಹಾಗೂ ಅದರಲ್ಲಿ ಯಾವುದೇ ಇತರೆ ಪೌಷ್ಟಿಕಾಂಶಗಳು ಇಲ್ಲದಿರುವುದರಿಂದ ಅದರ ಕ್ಯಾಲೊರಿಯನ್ನು ‘ಜಂಕ್’  ಎನ್ನಬಹುದು. ಸಂಸ್ಕರಣೆ ಕಡಿಮೆ ಇದ್ದಲ್ಲಿ, ಆಹಾರದಲ್ಲಿನ ನಾರು ಮತ್ತು ಇತರೆ ಪೌಷ್ಟಿಕಾಂಶಗಳು ಹೊಟ್ಟೆಯಲ್ಲಿ ಸಾಕಷ್ಟು ಕಾಲ ಇದ್ದು, ನೀರನ್ನು ಹೀರಿಕೊಳ್ಳುವುದರಿಂದ ಮತ್ತೆ ಮತ್ತೆ ಹಸಿವು ಉಂಟಾಗುವುದಿಲ್ಲ. ನಮ್ಮ ಆಹಾರಕ್ರಮವನ್ನೇ ಇದರಿಂದ ನಾವೇ ನಿಯಂತ್ರಣದಲ್ಲಿಟ್ಟಂತಾಗುತ್ತದೆ. ಇದು ಒಂದು ರೀತಿಯಲ್ಲಿ ‘matter over mind, not mind over matter’ ಎನ್ನಬಹುದು. ಜೊತೆಗೆ ಆಹಾರದಲ್ಲಿನ ಎಲ್ಲ ರಸಗಳು, ಅಂದರೆ, ಆರೂ ರಸಗಳು – ಹುಳಿ, ಉಪ್ಪು, ಖಾರ, ಒಗರು, ಕಹಿ ಮತ್ತು ಸಿಹಿ – ಇದ್ದಲ್ಲಿ ಆಹಾರದ ಸಂಪೂರ್ಣ ತೃಪ್ತಿ ಸಿಕ್ಕಿ ಮತ್ತೆ ಮತ್ತೆ ಆಹಾರ ಸೇವಿಸಬೇಕೆಂಬ ಹಂಬಲವೇ ಇರುವುದಿಲ್ಲ. ಪುಸ್ತಕವನ್ನು ನಾವೇ ಕಷ್ಟಪಟ್ಟು ಓದುವುದಕ್ಕಿಂತ ಪುಸ್ತಕವೇ ನಮ್ಮನ್ನು ಸುಲಭವಾಗಿ ಓದಿಸಿಕೊಂಡಂತೆ, ಉತ್ತಮ ಆಹಾರವೇ ನಮ್ಮ ಮೇಲೆ ಹತೋಟಿಯನ್ನು ಇಟ್ಟುಕೊಳ್ಳುವಂತೆ ನಮ್ಮ ಜೀವನಶೈಲಿಯನ್ನು ಕುಶಲತೆಯಿಂದ ರೂಢಿಸಿಕೊಳ್ಳಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry