ಇಷ್ಟು ಸಮಯವಾದರೂ ತಾಯಿ ಆಗುತ್ತಿಲ್ಲವೇಕೆ?

7

ಇಷ್ಟು ಸಮಯವಾದರೂ ತಾಯಿ ಆಗುತ್ತಿಲ್ಲವೇಕೆ?

Published:
Updated:
ಇಷ್ಟು ಸಮಯವಾದರೂ ತಾಯಿ ಆಗುತ್ತಿಲ್ಲವೇಕೆ?

ಇತ್ತೀಚೆಗೆ ನನ್ನ ಬಳಿ ಬಂದ ಮಹಿಳೆಯೊಬ್ಬರ ಪ್ರಶ್ನೆ ಹೀಗಿತ್ತು: ‘ನನಗೆ 35 ವರ್ಷ. ನನ್ನ ಪತಿಗೆ 36. ಮದುವೆಯಾಗಿ ಕೆಲ ತಿಂಗಳುಗಳಾಗಿವೆ. ಆರು ತಿಂಗಳಿನಿಂದ ಮಗು ಬೇಕೆಂದು ಬಯಸುತ್ತಿದ್ದೇವೆ. ಆದರೂ ಸಾಧ್ಯವಾಗಿಲ್ಲ. ಗರ್ಭ ನಿರೋಧಕ ಮಾತ್ರೆಗಳನ್ನೂ ಬಳಸಿಲ್ಲ. ನನ್ನ ಋತುಚಕ್ರ ನಿಯಮಿತವಾಗಿದೆ. ನಮಗೆ ಮಗುವಿನ ನಿರೀಕ್ಷೆಯಿದೆ. ಆದರೆ ಈಗ ಭಯವಾಗುತ್ತಿದೆ. ಇದು ಒಂದು ಸಮಸ್ಯೆಯೇ? ಇನ್ನೂ ಆರು ತಿಂಗಳಾಗಿರುವ ಕಾರಣ ಹೆದರುವ ಅವಶ್ಯಕತೆಯಿಲ್ಲ ಎನ್ನುತ್ತಾರೆ ಪತಿ. ಆದರೆ ಆರೋಗ್ಯಕರವಾಗಿ ಗರ್ಭ ಧರಿಸಲು ಇನ್ನೂ ಎಷ್ಟು ಸಮಯ ಹಿಡಿಯುತ್ತದೆ?’

ಈ ಪ್ರಶ್ನೆಯನ್ನೇ ಎದುರಿಗಿಟ್ಟುಕೊಂಡು ವಿಶ್ಲೇಷಿಸುವುದಾದರೆ, ಆರೇಳು ದಂಪತಿಗಳಲ್ಲಿ ಒಬ್ಬರಲ್ಲಿ ಸಂತಾನಹೀನತೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಒಂದು ವರ್ಷದ ನಿರಂತರ ಪ್ರಯತ್ನದ ನಂತರ ಶೇ 85 ರಿಂದ ಶೇ90 ದಂಪತಿಗಳು ಸಫಲರಾಗುತ್ತಾರೆ. ಇನ್ನುಳಿದ ಶೇ 5 ದಂಪತಿಗಳು ಎರಡನೇ ವರ್ಷಕ್ಕೆ ಮಗುವನ್ನು ಪಡೆಯುತ್ತಾರೆ.

‌ಮಗು ಪಡೆಯಬೇಕೆಂದು ಒಮ್ಮೆ ನಿರ್ಧರಿಸಿದರೆ, ಸಹಜವಾಗಿ, ಬೇಗನೇ ಮಗುವನ್ನು ಪಡೆಯುವುದು ಸಾಧ್ಯವೇ ಹೌದು. ಕೆಲವರಿಗೆ ಯಾವುದೇ ಸಮಸ್ಯೆಯಿಲ್ಲದೇ ಮಕ್ಕಳಾಗುತ್ತವೆ. ಆದರೆ ಎಲ್ಲರ ವಿಷಯದಲ್ಲೂ ಹಾಗಾಗಬೇಕಿಲ್ಲ ಎನ್ನುವುದೂ ನಿಮ್ಮ ಗಮನದಲ್ಲಿರಬೇಕು. ಇದಕ್ಕೆ ಮೊದಲು ಸಹಜವಾಗಿರುವುದು ಯಾವುದು ಎಂಬುದನ್ನು ಕಂಡುಕೊಳ್ಳುವುದು ಮುಖ್ಯ. ಇದರಿಂದ ಸಕಾರಣವಿಲ್ಲದೇ ಚಿಂತಿಸುವುದು ತಪ್ಪುತ್ತದೆ.

ನೀವು 35 ವಯಸ್ಸಿನ ಒಳಗಿನವರಾಗಿದ್ದು, ಹನ್ನೆರಡು ತಿಂಗಳ ಅವಧಿಯಲ್ಲಿ ನಿಯಮಿತ ಲೈಂಗಿಕ ಕ್ರಿಯೆಯ ನಂತರವೂ ಗರ್ಭ ಧರಿಸಲು ಅಸಮರ್ಥವಾದುದನ್ನೇ ಸಂತಾನಹೀನತೆ ಎಂದು ವೈದ್ಯರು ವ್ಯಾಖ್ಯಾನಿಸುತ್ತಾರೆ.

ನಿಮಗೆ 35 ವರ್ಷ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಾಗಿದ್ದರೆ, ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವ ಆರು ತಿಂಗಳ ನಂತರವೂ ಗರ್ಭಧರಿಸಲು ಸಾಧ್ಯವಾಗದೇ ಇದ್ದರೆ, ಈ ಕುರಿತು ವೈದ್ಯರು ವಿಶ್ಲೇಷಣೆಗೆ ತೊಡಗುತ್ತಾರೆ. ನಿಯಮಿತವಾಗಿ ಋತುಚಕ್ರವಾಗುತ್ತಿದ್ದರೆ, ಅದು ನಿಯಮಿತವಾಗಿ ಅಂಡಾಣು ಬಿಡುಗಡೆಯಾಗುತ್ತಿದೆ ಎಂಬರ್ಥವೂ ಹೌದು. ಆದ್ದರಿಂದ ಋತುಚಕ್ರದ ನಡುವೆ, ಗರ್ಭ ಧರಿಸಲು ಅತಿ ಫಲವತ್ತಾದ ದಿನಗಳನ್ನೂ ನೀವು ಕಂಡುಕೊಳ್ಳಬೇಕಾಗುತ್ತದೆ. ಅದು ಅಂಡೋತ್ಪತ್ತಿಯ ಸಮರ್ಥ ಸಮಯವಾಗಿರುತ್ತದೆ. ಈ ಅವಧಿಯಲ್ಲಿ ನಿರಂತರವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಮಗುವನ್ನು ಪಡೆಯುವ ಸಾಧ್ಯತೆ ಇರುತ್ತದೆ.

ನಿಮ್ಮಲ್ಲಿ ಯಾವಾಗ ಅಂಡೋತ್ಪತ್ತಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಫರ್ಟಿಲಿಟಿ ಕಿಟ್ ಬಳಸಬಹುದು. ಯಾವುದೇ ಲ್ಯೂಬ್ರಿಕೆಂಟ್‌ ಉಪಯೋಗಿಸಬಾರದು. ಮುಖ್ಯವಾಗಿ, ಲೈಂಗಿಕಕ್ರಿಯೆ ನಂತರ ತಕ್ಷಣವೇ ಏಳಬಾರದು.

ಶೇ 25 ದಂಪತಿಗಳು, ಪ್ರಯತ್ನದ ಮೊದಲ ತಿಂಗಳು ಗರ್ಭ ಧರಿಸುವಲ್ಲಿ ಯಶಸ್ವಿಯಾಗುತ್ತಾರೆ. ಶೇ 50 ದಂಪತಿ, ಆರು ತಿಂಗಳಲ್ಲಿ ಯಶಸ್ಸು ಕಾಣುತ್ತಾರೆ. ಶೇ85ರಿಂದ ಶೇ 90 ದಂಪತಿಗಳಿಗೆ ವರ್ಷದ ಒಳಗೆ ಮಕ್ಕಳಾಗುವ ಸಾಧ್ಯತೆ ಇರುತ್ತದೆ. ಆದರೆ ಇನ್ನೂ ಗರ್ಭಧಾರಣೆ ಸಾಧ್ಯವಾಗಿಲ್ಲವಾದರೆ, ವೈದ್ಯರಿಂದ ನಿರ್ದಿಷ್ಟ ಸಹಾಯ ಪಡೆದುಕೊಳ್ಳಬೇಕು ಎಂದರ್ಥ. ಆದರೆ ಎಷ್ಟೋ ಮಂದಿ ಈ ಕೆಲಸವನ್ನು ಮಾಡುವುದಿಲ್ಲ.

ತಿಂಗಳ ಸಾಧ್ಯತೆಗಳು: ನೀವು 35ಕ್ಕೂ ಕಡಿಮೆ ವಯಸ್ಸಿನವರಾಗಿದ್ದು, ಅಂಡೋತ್ಪತ್ತಿಯ ನಿರ್ದಿಷ್ಟ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಲ್ಲಿ, ಪ್ರತಿ ಋತುಚಕ್ರದ ಅವಧಿಯಲ್ಲಿಯೂ ಗರ್ಭ ಧರಿಸುವ ಸಾಧ್ಯತೆ ಶೇ 30–35ರಷ್ಟು ಇರುತ್ತದೆ. ಇದರೊಂದಿಗೆ,

* ಲೈಂಗಿಕಕ್ರಿಯೆಯ ಮೊದಲ ಮೂರು ಪ್ರಯತ್ನದಲ್ಲಿ, ಗರ್ಭ ಧರಿಸುವ ಸಾಧ್ಯತೆಯು ಅತಿ ಹೆಚ್ಚಿರುತ್ತದೆ.

* ಒಂದು ವರ್ಷದ ನಿರಂತರ ಪ್ರಯತ್ನದ ನಂತರ ಗರ್ಭ ಧರಿಸಲು ಸಾಧ್ಯವಾಗಿಲ್ಲದಿದ್ದರೂ, ಮುಂಬರುವ ವರ್ಷಗಳಲ್ಲೂ ಶೇ 50ರಷ್ಟು ಸಾಧ್ಯತೆ ಇರುತ್ತದೆ.

* ನಿಯಮಿತ ಲೈಂಗಿಕ ಕ್ರಿಯೆಯ ನಂತರ ಗರ್ಭಧಾರಣೆಯಾಗದೇ ಇದ್ದಲ್ಲಿ, 36 ತಿಂಗಳ ನಂತರ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ. 48 ತಿಂಗಳ ನಂತರ, ಅದು ಸೊನ್ನೆಯಾಗುತ್ತದೆ.

* ವಯಸ್ಸಾಗುತ್ತಿದ್ದಂತೆ, ಪ್ರತಿ ಋತುಚಕ್ರದಲ್ಲೂ ಗರ್ಭ ಧರಿಸುವ ಸಾಧ್ಯತೆಯೂ ಕುಂದುತ್ತಾ ಹೋಗುತ್ತದೆ.

* ಗರ್ಭಧಾರಣೆಯ ಅವಧಿಗೆ ತೊಡಕುಗಳು: ಪ್ರತಿ ಋತುಚಕ್ರದ ಅವಧಿಯು ಈ ವಿಷಯದಲ್ಲಿ ಅತಿ ಮುಖ್ಯವಾಗುತ್ತದೆ. ಅಂಡೋತ್ಪತ್ತಿಯ ಸಮಯ ಹಾಗೂ ಲೈಂಗಿಕ ಕ್ರಿಯೆ, ಅಂಡಾಣುವಿನ ಗುಣಮಟ್ಟ ಇವೆಲ್ಲವೂ ಈ ಅವಧಿಯನ್ನೇ ಅವಲಂಬಿಸಿರುತ್ತದೆ. ಇನ್ನಿತರ ಅಂಶಗಳು ಈ ಎರಡೂ ಅಂಶಗಳ ಮೇಲೆ ಪರಿಣಾಮ ಬೀರಿ, ಗರ್ಭಧಾರಣೆಯ ಸಾಧ್ಯತೆಯನ್ನು ಕುಗ್ಗಿಸುತ್ತದೆ.

* ಅಂಡೋತ್ಪತ್ತಿ ಹಾಗೂ ಲೈಂಗಿಕ ಕ್ರಿಯೆಯ ಸಮಯ: ಪ್ರತಿ ಋತುಚಕ್ರದ ಸಮಯದಲ್ಲೂ ಗಮನಿಸಬೇಕಾದ್ದು, ಅಂಡೋತ್ಪತ್ತಿಗೂ ಹಾಗೂ ಲೈಂಗಿಕ ಕ್ರಿಯೆಗೆ ಹೊಂದಿಕೊಳ್ಳುವ ಪ್ರಶಸ್ತ ಸಮಯವನ್ನು. ಗರ್ಭಧರಿಸುವಲ್ಲಿ ಇದು ಅತಿ ನಿರ್ಣಾಯಕ ಅಂಶ. ನೀವು ಅಂಡೋತ್ಪತ್ತಿಯ ಸಮಯವನ್ನು ಗಮನಿಸದಿದ್ದರೆ, ಗರ್ಭಧಾರಣೆಯ ಸಮಯವೂ ಹಿಗ್ಗುವುದು. ಈ ಕೆಳಗಿನ ಮಾಹಿತಿಯು, ಅಂಡೋತ್ಪತ್ತಿ ಸಮಯವನ್ನು ಕಂಡುಕೊಳ್ಳಲು ನೆರವಾಗಬಹುದು.

* ಅಂಡೋತ್ಪತ್ತಿಯ ನಂತರದ ಆರು ದಿನಗಳು ಅತಿ ಫಲವತ್ತಾದ ದಿನಗಳಾಗಿದ್ದು, ಆಗ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಗರ್ಭ ಧರಿಸುವ ಸಾಧ್ಯತೆ ಹೆಚ್ಚಿರುತ್ತದೆ.

* ಓವ್ಯುಲೇಷನ್ ಪ್ರೆಡಿಕ್ಟರ್ ಕಿಟ್ ಉಪಯೋಗಿಸಿ, ಈ ಸಮಯವನ್ನು ಕಂಡುಕೊಳ್ಳಬಹುದು.

ವಯಸ್ಸಿನ ಅಂಶ: ವಯಸ್ಸು ಗರ್ಭಧಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ವಯಸ್ಸಾಗುತ್ತಿದ್ದಂತೆ ಗರ್ಭಧಾರಣೆಯ ಸಾಧ್ಯತೆಯೂ ಕ್ಷೀಣಿಸುತ್ತಾ ಹೋಗುತ್ತದೆ. ಮಹಿಳೆಯರಲ್ಲಿ, 35ವಯಸ್ಸಿನ ನಂತರ ಪ್ರತಿ ಋತುಚಕ್ರದಲ್ಲೂ ಸಾಧ್ಯತೆಯು ಕುಗ್ಗುತ್ತಾ ಹೋಗುತ್ತದೆ. ಅಂಡಾಶಯದ ಕಾರ್ಯಕ್ಷಮತೆಯೂ ಕುಗ್ಗುವುದರಿಂದ ಹೀಗಾಗುತ್ತದೆ.

ಪುರುಷರಿಗೆ 50 ವರ್ಷದ ನಂತರ ಗಣನೀಯವಾಗಿ ಮಕ್ಕಳನ್ನು ಪಡೆಯುವ ಸಾಧ್ಯತೆಯು ಕಡಿಮೆಯಾಗುತ್ತದೆ. ಮೂವತ್ತು ವಯಸ್ಸಿನವರಿಗೆ ಹೋಲಿಸಿದರೆ, 50 ವಯಸ್ಸಿನವರಲ್ಲಿ ವೀರ್ಯದ ಗುಣಮಟ್ಟವೂ ವಯಸ್ಸಿನೊಂದಿಗೆ ಕ್ಷೀಣಿಸುತ್ತದೆ.

ಅಂಡಾಶಯ, ಪಿಟ್ಯುಟರಿ, ಹೈಪೊಥಾಲಮಸ್, ಥೈರಾಯ್ಡ್ ಇನ್ನಿತರ ಹಾರ್ಮೋನ್ ಗ್ರಂಥಿಗಳು ನಿಯಮಿತ ಅಂಡೋತ್ಪತ್ತಿಯ ಮೇಲೆ ಪರಿಣಾಮ ಬೀರಿ ಅಂಡಾಶಯದ ವಿಫಲತೆಗೆ ಕಾರಣವಾಗುತ್ತವೆ.

* ಲೈಂಗಿಕ ಸೋಂಕು, ಎಂಡೋಮಿಟ್ರಿಯಾಸಿಸ್, ಅಪೆಂಡಿಸೈಟಿಸ್ ಅಥವಾ ಉದರ ಶಸ್ತ್ರಚಿಕಿತ್ಸೆಯಿಂದಾಗಿ ಡಿಂಬನಾಳಕ್ಕೆ ತೊಂದರೆಯಾದರೆ, ಫೈಬ್ರಾಯ್ಡ್, ಪಾಲಿಪ್ಸ್‌ನಂಥ ಸಮಸ್ಯೆಗಳು ಸಂತಾನಹೀನತೆಗೆ ಕಾರಣಗಳಾಗಬಹುದು.

* ಅಸಹಜ ವೀರ್ಯೋತ್ಪತ್ತಿ, ಕಡಿಮೆ ವೀರ್ಯ, ಗುಣಮಟ್ಟದ ಕೊರತೆ, ಇವು ಪುರುಷ ಸಂಬಂಧಿ ಸಂತಾನಹೀನತೆ ಕಾರಣಗಳು.

* ಅಂಡದ ಬೆಳವಣಿಗೆ, ಅಂಡೋತ್ಪತ್ತಿ, ಅಂಡದ ಗುಣಮಟ್ಟ, ವೀರ್ಯೋತ್ಪತ್ತಿ ಹಾಗೂ ಅದರ ಗುಣಮಟ್ಟದ ಮೇಲೆ ಆರೋಗ್ಯ ಹಾಗೂ ಜೀವನಶೈಲಿಯೂ ಪರಿಣಾಮ ಬೀರುತ್ತದೆ. ಗರ್ಭ ಧರಿಸುವ ಸಾಧ್ಯತೆಯ ಅವಧಿಯನ್ನು ಇನ್ನಷ್ಟು ವಿಸ್ತರಿಸುತ್ತವೆ.

* ಸ್ಥೂಲಕಾಯ, ಕೃಶಕಾಯ, ಧೂಮಪಾನ, ಮದ್ಯಪಾನ, ಕೆಫೇನ್, ಮಾತ್ರೆಗಳ ಸೇವನೆಯೂ ಪರಿಣಾಮ ಬೀರುವ ಅಂಶಗಳು

ಔಷಧಗಳೂ ಸರಿಯಲ್ಲ: ಆರು ತಿಂಗಳ ನಿರಂತರ ಪ್ರಯತ್ನದ ನಂತರ, ಗರ್ಭಧಾರಣೆ ಸಾಧ್ಯವಾಗದಿದ್ದಲ್ಲಿ, ನೀವು ಸೇವಿಸುತ್ತಿರುವ ಔಷಧಿಗಳ ಕುರಿತು ವೈದ್ಯರೊಂದಿಗೆ ಚರ್ಚಿಸಿ. ಕೆಲವು ಗರ್ಭನಿರೋಧಕಗಳ ಸೇವನೆ ನಿಲ್ಲಿಸಿದ ನಂತರ ಸಹಜ ಋತುಚಕ್ರವನ್ನು ಎಷ್ಟೋ ತಿಂಗಳು ಪಡೆಯುವುದು ಸಾಧ್ಯವಾಗುವುದಿಲ್ಲ.

ಮೊದಲ ಮಗುವಿನ ಜನನ: ಎರಡನೇ ಮಗುವಿಗೆ ತೊಡಕೇ?:

ಮೊದಲ ಮಗು ಜನಿಸಿದ ನಂತರ, ಇನ್ನೊಂದು ಮಗುವನ್ನು ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮೊದಲ ಮಗುವನ್ನು ಪಡೆದದ್ದು ನಿಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದರ ಸೂಚಕ ಹೌದು. ಆದರೆ ಎರಡನೇ ಗರ್ಭಧಾರಣೆಯೂ ಹಾಗೇ ಆಗಬೇಕೆಂದುಕೊಳ್ಳಬೇಕಿಲ್ಲ.

ಹೆರಿಗೆ ಸಂಬಂಧಿ ಕೆಲವು ತೊಡಕುಗಳು, ಹೆರಿಗೆ ನಂತರದ ಸೋಂಕುಗಳು, ಹಾರ್ಮೋನಿನ ಅಸಮತೋಲನ, ಈ ಸಮಸ್ಯೆಗಳಿಗೆ ಸೇವಿಸುವ ಕೆಲವು ಔಷಧಗಳು ಎರಡನೇ ಮಗುವನ್ನು ಪಡೆಯಲು ಅಡ್ಡಿ ಮಾಡಬಹುದು.

ಯಾವಾಗ ಸಲಹೆ ಅಗತ್ಯ?

35ವರ್ಷಕ್ಕಿಂತ ಕಡಿಮೆಯಿದ್ದು,. ಒಂದು ವರ್ಷದ ಪ್ರಯತ್ನದ ನಂತರವೂ ಗರ್ಭ ಧರಿಸಲಿಲ್ಲ ಎಂದರೆ ವೈದ್ಯರನ್ನು ಸಂಪರ್ಕಿಸಬೇಕು. 35 ವರ್ಷಕ್ಕೂ ಹೆಚ್ಚಿನವರಾಗಿದ್ದು, ಆರು ತಿಂಗಳ ಪ್ರಯತ್ನದ ನಂತರವೂ ಗರ್ಭಧಾರಣೆ ಸಾಧ್ಯವಾಗದೇ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಯಾವ ವಯಸ್ಸಿನವರಾಗಿದ್ದರೂ ಆರು ತಿಂಗಳ ನಂತರ ಸಮಸ್ಯೆ ಇದೆ ಎಂದೆನಿಸಿದರೆ ಸಲಹೆ ತಗೆದುಕೊಳ್ಳುವುದು ಸೂಕ್ತ. ಕೆಲವು ಔಷಧಗಳನ್ನು ಸೇವಿಸುತ್ತಿದ್ದರೆ, ಅದು ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರಿರುವ ಸಂಶಯವಿದ್ದರೆ, ಆ ಸಮಯದಲ್ಲಿ ವೈದ್ಯರ ಸಲಹೆ ಪಡೆದರೆ ಒಳಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry