ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವುಡತನ: ಎಚ್ಚರಕ್ಕೆ ಕಿವಿಗೊಡಿ!

Last Updated 2 ಮಾರ್ಚ್ 2018, 19:30 IST
ಅಕ್ಷರ ಗಾತ್ರ

* ಡಾ. ವಾಸಂತಿ ಆನಂದ್

ಭಾಷೆ, ಸಂವಹನ ಸಾಮರ್ಥ್ಯ, ಮಾತು ಹಾಗೂ ಕಲಿಕೆ – ಈ ಎಲ್ಲದರ ಬೆಳವಣಿಗೆ ನಿಂತಿರುವುದೇ ನಮ್ಮ ಶ್ರವಣಶಕ್ತಿ, ಎಂದರೆ ನಮ್ಮ ಕಿವಿಕೇಳುವಿಕೆಯ ಶಕ್ತಿಯ ಮೇಲೆ. 2002ರಲ್ಲಿ ನಡೆದ ‘ನ್ಯಾಷನಲ್ ‍ಸ್ಯಾಂಪಲ್ ಸರ್ವೇ ಅರ್ಗನೈಜೇಷನ್’ನ 58ನೇ ಸುತ್ತಿನ ಸಮೀಕ್ಷೆಯ ಪ್ರಕಾರ ಒಂದು ಲಕ್ಷ ಮಂದಿಯಲ್ಲಿ 291 ಜನರು ಗಂಭೀರ ಶ್ರವಣದೋಷ(ಕಿವುಡುತನ)ದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ ಬಳಲುತ್ತಿರುವವರ ಪ್ರಮಾಣದಲ್ಲಿ 0–14 ವರ್ಷದ ಮಕ್ಕಳ ಸಂಖ್ಯೆಯೇ ಹೆಚ್ಚು. ಇದರಲ್ಲಿ ಗಮರ್ನಾಹವಾದ ವಿಷಯವೆಂದರೆ ಶೇ 7ರಷ್ಟು ಮಂದಿ ಜನ್ಮಜಾತ ಸಂವೇದನಾಶೀಲ ಕಿವುಡುತನದಿಂದ ಬಳಲುತ್ತಿದ್ದಾರೆ.

ಆದರೆ ಇಷ್ಟೆಲ್ಲ ಅಂಕಿ–ಅಂಶಗಳ ಹೊರತಾಗಿಯೂ ಸಮಾಧಾನದ ವಿಷಯವೆಂದರೆ ಕಿವುಡುತನವು ಗುರುತಿಸಬಹುದಾದ ಮತ್ತು ಗುಣಪಡಿಸಬಹುದಾದ ಸಮಸ್ಯೆ. ಆದರೆ ಈ ವಿಷಯದ ಬಗ್ಗೆ ಜನರಲ್ಲಿ ತಿಳಿವಳಿಕೆಯ ಕೊರತೆ ಇದೆ. ಪ್ರತಿ ವರ್ಷ ಮಾರ್ಚ್‌ 3ರಂದು ‘ವಿಶ್ವ ಶ್ರವಣದಿನ’ವನ್ನಾಗಿ  ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಕಿವುಡತನದ ಬಗ್ಗೆಯೂ ಮತ್ತು ಸಮಸ್ಯೆ ನಿವಾರಣೆಯ ಕಡೆಗೂ ಗಮನ ಸೆಳೆಯುವಂತೆ ಮಾಡುವುದು ಇದರ ಉದ್ದೇಶ. ಈ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆ ‘ಆ್ಯಕ್ಷನ್ ಫಾರ್ ಹಿಯರಿಂಗ್ ಲಾಸ್: ಮೇಕ್ ಎ ಸೌಂಡ್ ಇನ್ವೆಸ್ಟ್‌ಮೆಂಟ್’ ಎಂದು ಘೋಷಿಸಿರುವುದು ಆರ್ಥಿಕ ಪರಿಸ್ಥಿತಿಗೂ ಈ ಸಮಸ್ಯೆಗೂ ಇರುವ ಸಂಬಂಧದ ಬಗ್ಗೆ ಬೆಳಕನ್ನು ಚೆಲ್ಲುವಂತಿದೆ.

ಶಬ್ದಗಳನ್ನು ಸಂಸ್ಕರಿಸುವ ಅಂಗಗಳೇ ಕಿವಿಗಳು. ನಾವು ಕೇಳಿಸಿಕೊಳ್ಳುವ ಶಬ್ದಗಳನ್ನು ಮೆದುಳು ಅರ್ಥೈಸಿಕೊಳ್ಳಲು ಇವು ಸಹಕರಿಸುತ್ತವೆ. ನಮ್ಮ ಕಿವಿಯಲ್ಲಿರುವ ಶ್ರವಣಕೋಶಗಳು ಶಬ್ದಗಳು ನಮಗೆ ಕೇಳುವಂತೆ ಮಾಡುತ್ತವೆ. ಆದರೆ ಹೆಚ್ಚು ಕಾಲ ಅತಿಯಾದ ಶಬ್ದವನ್ನು ಕೇಳಿಸಿಕೊಂಡಾಗ ನಮಗೆ ತಾತ್ಕಾಲಿಕ ಅಥವಾ ಶಾಶ್ವತ ಕಿವುಡತನದ ಸಮಸ್ಯೆ ಉಂಟಾಗಬಹುದು ಅಥವಾ ಕಿವಿಯಲ್ಲಿ ರಿಂಗಣಿಸುವಂಥ ಸಂವೇದನೆ ಉಂಟಾಗಬಹುದು.

ಶ್ರವಣಸಾಮರ್ಥ್ಯದ ಮೂಲ: ವಾತಾವರಣದಲ್ಲಿರುವ ಶಬ್ದತರಂಗಗಳು ಕಿವಿಯ ಹಾಲೆಯಿಂದ ಸಂಗ್ರಹಿಸಲ್ಪಟ್ಟು ಹೊರಕಿವಿಯ ಮೂಲಕ ಸಾಗಿ, ಕಿವಿಯ ತಮಟೆಯನ್ನು ತಲುಪಿದಾಗ ಕಿವಿತಮಟೆ ಸ್ಪಂದಿಸುತ್ತದೆ. ಆ ತರಂಗಗಳು ಕಿವಿಯ ಮೂರು ಸೂಕ್ಷ್ಮ ಮೂಳೆಗಳ ಮೂಲಕ ಒಳಕಿವಿಯ ಕರ್ಣಶಂಖದ ಪದರದ ಭಾಗದಲ್ಲಿರುವ ಶ್ರವಣೇಂದ್ರಿಯ ಜೀವಕೋಶಗಳನ್ನು ತಲಪುತ್ತವೆ. ಅಲ್ಲಿಂದ ಜೀವಕೋಶದ ಬುಡದಲ್ಲಿರುವ ಒಳಕಿವಿಯ ನರದ ತಂತುಗಳ ಮೂಲಕ ಈ ಶಬ್ದತರಂಗಗಳು ಮೆದುಳನ್ನು ತಲಪುತ್ತವೆ. ಈ ಹಾದಿಯಲ್ಲಿ ಎಲ್ಲೇ ಅಡಚಣೆಯುಂಟಾದರೂ ಕಿವುಡತನ ಉಂಟಾಗುತ್ತದೆ.

ಮಕ್ಕಳಲ್ಲಿ ಕಿವುಡುತನದ ಲಕ್ಷಣಗಳು

ಹುಟ್ಟಿದಾಗಿನಿಂದ ನಾಲ್ಕು ತಿಂಗಳವರೆಗೆ:

* ಜೋರಾದ ಶಬ್ದಕ್ಕೆ ಸ್ಪಂದಿಸದಿರುವುದು.

* ನಿಮ್ಮ ಧ್ವನಿಗೆ ನಗುವಿನ ಮೂಲಕ ಪ್ರತಿಕ್ರಿಯಿಸದಿರುವುದು.

* ಆತ್ಮೀಯರ ಧ್ವನಿ ಕೇಳಿದರೂ ಅಳುವನ್ನು ನಿಲ್ಲಿಸಿ ಶಾಂತವಾಗದಿರುವುದು.

4ನೇ ತಿಂಗಳಿಂದ 9ನೇ ತಿಂಗಳವರೆಗೆ:

* ನಾವು ಮಾತನಾಡಿದಾಗ ನಗದೇ ಇರುವುದು.

* ಗೊಂಬೆಯ ಸದ್ದಿನ್ನು ಗುರುತಿಸದೇ ಇರುವುದು.

* ಆತ್ಮೀಯರ ದನಿ ಕೇಳಿದಾಗ ತಿರುಗಿ ನೋಡದಿರುವುದು.

* ತೊದಲು ನುಡಿಗಳನ್ನು ಹೊರಡಿಸದಿರುವುದು.

* ಕೈಸನ್ನೆಗಳನ್ನು ಅರ್ಥಮಾಡಿಕೊಳ್ಳದಿರುವುದು.

ಒಂಬತ್ತರಿಂದ 15ನೇ ತಿಂಗಳು:

* ಬೇರೆ ಬೇರೆ ರೀತಿಯ ಶಬ್ದಗಳನ್ನು ಹೊರಡಿಸುವುದೇ ಇರುವುದು.

* ಸರಳ ಶಬ್ದಗಳನ್ನೂ ಪುನರುಚ್ಚರಿಸದಿರುವುದು.

* ಸಾಮಾನ್ಯ ಕೋರಿಕೆಗಳನ್ನೂ ಅರ್ಥಮಾಡಿಕೊಳ್ಳದಿರುವುದು.

* ಸದ್ದುಗಳ ಮೂಲಕ ನಿಮ್ಮ ಗಮನವನ್ನು ಸೆಳೆಯದಿರುವುದು.

* ಹೆಸರನ್ನು ಕರೆದಾಗಲೂ ಪ್ರತಿಕ್ರಿಯಿಸದೇ ಇರುವುದು.

15ರಿಂದ 24ನೇ ತಿಂಗಳು:

* ಕೆಲವಾದರೂ ಸರಳ ಶಬ್ದಗಳನ್ನು ಉಚ್ಚರಿಸದಿರುವುದು.

* ನಿಮ್ಮ ಮಾತಿನ ಆದೇಶ ಪ್ರಕಾರ ದೇಹದ ಭಾಗಗಳನ್ನು ಗುರುತಿಸದಿರುವುದು.

* ಸಾಮಾನ್ಯ ಬಳಕೆಯ ವಸ್ತುಗಳನ್ನು ಹೆಸರಿಸದಿರುವುದು.

* ಹಾಡು, ಪದ್ಯ ಹಾಗೂ ಕಥೆಗಳಿಗೆ ಆಸಕ್ತಿಯಿಂದ ಸ್ಪಂದಿಸದಿರುವುದು.

* ನೀವು ಹೇಳುವ ಪರಿಚಿತ ವಸ್ತುಗಳನ್ನು ಗುರುತಿಸದಿರುವುದು.

* ‘ಬಾಗಿಲನ್ನು ಮುಚ್ಚು’, ‘ಚೆಂಡನ್ನು ಹಿಡಿ’ ಇಂತಹ ಸಾಮಾನ್ಯ ಆದೇಶಗಳನ್ನು ಪಾಲಿಸದೇ ಇರುವುದು.

ಬೆಳೆದ ಮಕ್ಕಳಲ್ಲಿ ಕೂಡ ಕಿವುಡುತನದ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದು ಶಾಶ್ವತ ಅಥವಾ ತಾತ್ಕಾಲಿಕವಾಗಿರಬಹುದು.

ಪೂರ್ವ ಪ್ರಾಥಮಿಕ (ಪ್ರಿ–ಸ್ಕೂಲ್‌)ನಲ್ಲಿ ಓದುವ ಮಕ್ಕಳಲ್ಲೂ ಶ್ರವಣದೋಷ ಕಾಣಿಸಿಕೊಳ್ಳಬಹುದು.

ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು –

* ಜನರು ಏನು ಹೇಳುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಡಬಹುದು.

* ನೀವು ಅವಳ/ ಅವನ ಹೆಸರು ಕೂಗಿದಾಗ ಪ್ರತಿಕ್ರಿಯೆ ನೀಡದಿರಬಹುದು.

* ನೀವು ಕೇಳಿದ ಪ್ರಶ್ನೆಗಳಿಗೆ ಅನುಚಿತವಾಗಿ ಉತ್ತರಿಸಬಹುದು.

* ಟಿವಿಯ ಧ್ವನಿಯನ್ನು ಅಗತ್ಯಕ್ಕಿಂತ ಹೆಚ್ಚಿಗೆ ಇರಿಸಿಕೊಳ್ಳುವುದು ಅಥವಾ ಕೇಳಿಸಿಕೊಳ್ಳುವ ಸಲುವಾಗಿ ಟಿವಿಯ ಸನಿಹ ಹೋಗಿ ಕುಳಿತುಕೊಳ್ಳುವುದು.

* ಶೈಕ್ಷಣಿಕವಾಗಿ ಹಿಂದುಳಿಯಬಹುದು. 

* ಮಾತನಾಡುವ ಅಥವಾ ಭಾಷೆಯ ಸಮಸ್ಯೆ ಅಥವಾ ಅಭಿವ್ಯಕ್ತಿಯ ಸಮಸ್ಯೆ.

* ಕಿವಿನೋವು ಎಂದು ಹೇಳುವುದು; ಸದ್ದುಗಳನ್ನು ದೂರುವುದು.

* ಎದುರಿಗೆ ಮಾತನಾಡುತ್ತಿರುವವರ ಮುಖವನ್ನೇ ತೀಕ್ಷ್ಮವಾಗಿ ನೋಡುವುದು.

ಹೆಚ್ಚಿನ ಮಕ್ಕಳು ಶ್ರವಣದೋಷ ಗಮನಕ್ಕೆ ಬರದೆಯೂ ಇರಬಹುದು. ಕಾರಣ ಅವರು ಅತ್ಯಂತ ಯಶಸ್ವಿ ‘ತುಟಿ ಓದುಗ’ರಾಗಿರುತ್ತಾರೆ.

ವಯಸ್ಕರಲ್ಲಿ ಶ್ರವಣದೋಷದ ಲಕ್ಷಣಗಳು:

* ಕಿವಿಯಲ್ಲಿ ರಿಂಗಣಿಸುವುದು.

* ಭಾರೀ ಶಬ್ದವನ್ನು ಕೇಳುವಲ್ಲಿ ಕಷ್ಟಪಡುವುದು (ಹಕ್ಕಿಗಳ ಕೂಗು, ಕರೆಗಂಟೆಯ ಸದ್ದು, ಫೋನ್‌ ರಿಂಗ್‌, ಅಲರಾಂ ಸದ್ದು, ಮುಂತಾದವು).

* ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಡುವುದು (ಮುಖ್ಯವಾಗಿ ಫೋನಿನಲ್ಲಿ ಮಾತನಾಡುವಾಗ).

* ಸದ್ದು–ಗದ್ದಲ ತುಂಬಿರುವ ವಾತಾವರಣದಲ್ಲಿ ಇರಲು ಕಷ್ಟಪಡುವುದು (ಉದಾ: ಮಾರ್ಕೆಟ್‌ ಹಾಗೂ ಸಾಮಾಜಿಕ ಸಭೆಗಳು).

ಶ್ರವಣದೋಷದ ಪರಿಣಾಮಗಳು:

ಕೂಸು/ಈಗಷ್ಟೇ ಹುಟ್ಟಿದ ಮಕ್ಕಳಲ್ಲಿ ಶ್ರವಣದೋಷದಿಂದ ಉಂಟಾಗುವ ಸಮಸ್ಯೆಗಳು:
ಶ್ರವಣದೋಷ ಇರುವ ಮಕ್ಕಳಲ್ಲಿ ಮಾತು ಹಾಗೂ ಭಾಷೆಯ ಬೆಳವಣಿಗೆಯ ಮೇಲಷ್ಟೇ ಪರಿಣಾಮ ಬೀರುವುದಿಲ್ಲ, ಅದರ ಜೊತೆಗೆ ಮಕ್ಕಳ ಸಾಮಾಜಿಕ, ಶೈಕ್ಷಣಿಕ ಹಾಗೂ ವ್ಯಕ್ತಿತ್ವ ಬೆಳವಣಿಗೆಗೂ ಅಡ್ಡಿಪಡಿಸುತ್ತದೆ. ಮಕ್ಕಳಲ್ಲಿ ಆರಂಭದ ಹಂತದಲ್ಲಿಯೇ ಸಮಸ್ಯೆಯನ್ನು ಗುರುತಿಸುವುದರಿಂದ ಮಕ್ಕಳನ್ನು ಕಿವುಡರ ಶಾಲೆಗೆ ಕಳುಹಿಸುವುದನ್ನು ತಪ್ಪಿಸಿ ಸಾಮಾನ್ಯ ಶಾಲೆಗೆ ಸೇರಿಸಬಹುದು. ಆರಂಭದ ಹಂತದಲ್ಲೇ ಈ ಸಮಸ್ಯೆಯನ್ನು ಗುರುತಿಸುವುದು ತುಂಬ ಮುಖ್ಯ. ಏಕೆಂದರೆ ಮಕ್ಕಳು ಶಬ್ದಗಳನ್ನು ಹೇಗೆ ಬಳಸಬೇಕು ಎಂಬುದನ್ನು ಬಹಳ ಬೇಗ ಕಲಿಯುತ್ತಾರೆ.

ವಯಸ್ಕರಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಏನಾಗಬಹುದು?
ಅಧ್ಯಯನದ ಪ್ರಕಾರ ಶ್ರವಣದೋಷಕ್ಕೆ ಸರಿಯಾದ ಚಿಕಿತ್ಸೆ ಪಡೆಯದೇ ಇರುವವರು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೂ ಒಳಗಾಗಬಹುದು. ಈ ಸಮಸ್ಯೆ ಒಮ್ಮೆಲೇ ಕಾಣಿಸಿಕೊಂಡರೆ ಅಥವಾ ಹಂತ ಹಂತವಾಗಿ ಕಾಣಿಸಿಕೊಂಡರೂ ಈ ದೋಷ ನಿಮ್ಮನ್ನು ಖಿನ್ನತೆಗೆ ತಳ್ಳಬಹುದು ಮತ್ತು ನಿಮ್ಮ ಸುತ್ತಲಿನ ಜನರ ಜೊತೆ ಸಂಬಂಧವನ್ನೇ ಕಡಿದುಕೊಳ್ಳುವಂತೆ ಮಾಡಬಹುದು.

ಅಸಹನೀಯ ಎನಿಸುವ ಶಬ್ದಗಳನ್ನು ಇಡೀ ದಿನ ಕೇಳಿಸಿಕೊಳ್ಳವುದರಿಂದ ನಿರಾಶಭಾವ ಹಾಗೂ ದಣಿವು ನಿಮ್ಮನ್ನು ಆವರಿಸಬಹುದು.
ನೀವು ಸಾಮಾಜಿಕ ಸಂದರ್ಭಗಳಿಂದ ದೂರ ಉಳಿಯಬಹುದು. ನಿಮ್ಮ ಪ್ರೀತಿಪಾತ್ರರ ಜೊತೆಗೂ ಬಾಂಧ್ಯವಕ್ಕೆ ಅಡ್ಡಿಯಾಗಬಹುದು.
ಶ್ರವಣದೋಷದಿಂದ ನೆನಪಿನ ಶಕ್ತಿಯೂ ಕುಂಠಿತಗೊಳ್ಳುವುದು. ಇದು ಕಲಿಕಾ ಸಾಮರ್ಥ್ಯದ ಮೇಲೆ ಪ್ರಭಾವ ಬೀರಿ ಕೆಲಸದ ನಿರ್ವಹಣೆಗೂ ತೊಂದರೆಯಾಗಬಹುದು. ನಿಮ್ಮ ಆತ್ಮವಿಶ್ವಾಸವನ್ನು ತಗ್ಗಿಸಬಹುದು. ನಿಮ್ಮನ್ನು ಅಪಾಯಕ್ಕೂ ಒಡ್ಡಬಹುದು. ಶ್ರವಣದೋಷ ನಿಮ್ಮ ದೈನಂದಿನ ಚಟುವಟಿಕೆಯ ಮೇಲೂ ಪರಿಣಾಮ ಬೀರುತ್ತದೆ. ಜೀವನದ ಸುಂದರ ಕ್ಷಣಗಳನ್ನು ಅನುಭವಿಸಲು ಇದು ಅಡ್ಡಿಯಾಗುತ್ತದೆ.

ಶ್ರವಣದೋಷಕ್ಕೆ ಚಿಕಿತ್ಸೆ

ತಂತ್ರಜ್ಞಾನವೇ ಶ್ರವಣದೋಷವನ್ನು ಗುಣಪಡಿಸುವುದಿಲ್ಲ. ಆದರೆ ಮಕ್ಕಳಲ್ಲಿ ಉಳಿಕೆಯಾಗಿರುವ ಶ್ರವಣಶಕ್ತಿಯಿಂದಲೇ ಅವರ ಶ್ರವಣದೋಷದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಬಹುದು. ತಂತ್ರಜ್ಞಾನವನ್ನು ಬಳಸುವ ಮಕ್ಕಳ ಪೋಷಕರಿಗೆ ಅನೇಕ ದಾರಿಗಳಿವೆ: ಇವುಗಳಲ್ಲಿ ಪ್ರಮುಖವಾಗಿ: ಹಿಯರಿಂಗ್ ಏಡ್‌ (ಶ್ರವಣಸಾಧನ), ಕೋಕ್ಲಿಯರ್‌ ಇಂಪ್ಲಾಂಟೇಶನ್‌.

ಗಂಭೀರ ಶ್ರವಣದೋಷದಿಂದ ಬಳಲುವ ಮಕ್ಕಳು ಹಾಗೂ ವಯಸ್ಕರಿಗೆ ಶ್ರವಣಸಾಧನದಿಂದ ಉಪಯೋಗ ಕಡಿಮೆ ಎಂದು ಹೇಳಬಹುದು (> 70ಡಿಬಿ ಎನ್‌ಎಚ್‌ಎಲ್‌). ಅಂತಹವರಿಗೆ ಕೋಕ್ಲಿಯರ್ ಇಂಪ್ಲಾಂಟ್ ಸರ್ಜರಿ ಮಾಡಿಸಬಹುದು. ಮಕ್ಕಳು ಸಹಜ ಮಾತನ್ನು ಕಲಿಯಲು ಈ ಇಂಪ್ಲಾಂಟೇಶನ್ ತುಂಬಾ ಮುಖ್ಯ. ಆದ್ದರಿಂದ ಇದು ಮೂರು ವರ್ಷದ ಒಳಗೆ ಮಾಡುವುದು ಪ್ರಯೋಜನಕಾರಿ.

ಕೋಕ್ಲಿಯರ್ ಇಂಪ್ಲಾಂಟ್‌ ಒಂದು ಶ್ರವಣ ಸಾಧನ. ಇದು ದೀರ್ಘವಾದ ಶ್ರವಣದೋಷ ಹೊಂದಿರುವವರಿಗಾಗಿ ಪ್ರಯೋಜನಕಾರಿ. ಇದು ಅತಿಯಾದ ಶ್ರವಣದೋಷದಿಂದ ಬಳಲುವವರಿಗೂ ಶ್ರವಣಸಾಧನದಿಂದ ಪ್ರಯೋಜವಿಲ್ಲದವರಿಗೂ ವರದಾನ. ಇದು ಶಸ್ತ್ರಚಿಕಿತ್ಸೆಯ ಮೂಲಕ ಕಸಿಗೊಂಡ ಭಾಗವನ್ನು ಕಿವಿಯ ಹಿಂಭಾಗದ ತಲೆಬುರುಡೆ ಸಮೀಪದಲ್ಲಿ ಇರಿಸಲಾಗುತ್ತದೆ.

ಕೋಕ್ಲಿಯರ್ ಇಂಪ್ಲಾಂಟೇಶನ್‌ಗಳನ್ನು ವಿಶೇಷ ಕೇಂದ್ರಗಳಲ್ಲಿ ತಜ್ಞರಿಂದ ನಡೆಸಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೆರವಿನಿಂದ ಆರೋಗ್ಯ ಮತ್ತು ಕುಟುಂಬದ ಕಲ್ಯಾಣ ಇಲಾಖೆಯು 5ವರ್ಷದ ಒಳಗಿನ ಮಕ್ಕಳಿಗೆ ಕೋಕ್ಲಿಯರ್ ಇಂಪ್ಲಾಟೇಶನ್ ಅನ್ನು ನಡೆಸುವ ಯೋಜನೆಯನ್ನು ಹಮ್ಮಿಕೊಂಡಿದೆ.

ಮಾಹಿತಿಗಾಗಿ ಸಂಪರ್ಕಿಸಿ: ಡಾ. ವಾಸಂತಿ ಆನಂದ್‌, ಕೋಕ್ಲಿಯರ್ ಇಂಪ್ಲಾಂಟ್‌ ಸರ್ಜನ್‌ (9900116499); ಅಶ್ವಿನಿ ರಾವ್, ಕೋಕ್ಲಿಯರ್ ಇಂಪ್ಲಾಂಟ್‌ ಶ್ರವಣತಜ್ಞೆ(9035213651)

ಚಿಕಿತ್ಸೆ

ಸಾಂಪ್ರದಾಯಿಕ ರೀತಿಯ ಚಿಕಿತ್ಸೆ ಸಾಧ್ಯವಾಗದ ಶಿಶುಗಳಿಗೆ (6 ತಿಂಗಳ ಒಳಗಿನ ಕೂಸುಗಳಿಗೆ) ಅವುಗಳ ವರ್ತನೆಯ ಹಾಗೂ ಸ್ಪಂದನೆಯ ಆಧಾರದ ಮೇಲೆ ಶ್ರವಣದೋಷತಜ್ಞರು ಚಿಕಿತ್ಸೆಯನ್ನು ನೀಡುತ್ತಾರೆ. ಅಂಥವರಿಗೆಂದೇ ಹಲವು ರೀತಿಯ ವಿಶೇಷ ಚಿಕಿತ್ಸಾ ಸೌಲಭ್ಯಗಳು ಇವೆ. ಕೂಸುಗಳು, ಅಂಬೆಗಾಲಿಡುವವರು ಹಾಗೂ ಎಳೆಯ ಮಕ್ಕಳಿಗೂ ಚಿಕಿತ್ಸೆಯನ್ನು ನೀಡಬಹುದು. ಈ ಚಿಕಿತ್ಸೆ ನೋವುರಹಿತವಾದದ್ದು. ತೊಂದರೆಗೆ ಒಳಗಾದ ಮಕ್ಕಳ ಪರೀಕ್ಷೆಯ ನಂತರ ಶ್ರವಣತಜ್ಞರು ಶ್ರವಣದೋಷದ ತೀವ್ರತೆಗೆ ಅನುಗುಣವಾಗಿ ಸೂಕ್ತ ಚಿಕಿತ್ಸಾ ವಿಧಾನ ಹಾಗೂ ವೈದ್ಯಕೀಯ ವಿಧಾನವನ್ನು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT