ಬುದ್ಧನ ಹಾದಿಯಲ್ಲಿ ಹೂವು

7

ಬುದ್ಧನ ಹಾದಿಯಲ್ಲಿ ಹೂವು

Published:
Updated:
ಬುದ್ಧನ ಹಾದಿಯಲ್ಲಿ ಹೂವು

‘ಧಮ್ಮಪದ’ದಲ್ಲಿ ಹಲವು ರೂಪಕಗಳ ಮೂಲಕ, ಉಪದೇಶಗಳ ಮೂಲಕ ಅರಿವನ್ನು ದಾಟಿಸಿರುವ ಕ್ರಮ ಅನನ್ಯವಾಗಿದೆ. ಪ್ರಕೃತಿಯ ಸಹಜ ವಿದ್ಯಮಾನಗಳನ್ನೇ ಬಳಸಿಕೊಂಡು ನಮಗೆ ಬೇಕಾದ ಉಪದೇಶವನ್ನು ಕಂಡರಿಸಿರುವ ವಿಧಾನ ಕಾವ್ಯಾತ್ಮಕವೂ ಆಗಿದೆ. ಅಲ್ಲಿಯ ಒಂದು ವರ್ಗ ಹೂವನ್ನೇ ಪ್ರತಿನಿಧಿಸಿದೆ; ‘ಪುಷ್ಪವರ್ಗ’ ಎಂಬ ಈ ಅಧ್ಯಾಯದಲ್ಲಿರುವ ಕೆಲವೊಂದು ಮಾತುಗಳನ್ನು ನೋಡಬಹುದು.

ಯಾರು ಈ ಭೂಮಿಯನ್ನೇ ಗೆಲ್ಲಬಲ್ಲರು? ಈ ಪ್ರಶ್ನೆಯನ್ನು ತೆಗೆದುಕೊಂಡು ‘ಧಮ್ಮಪದ’ ನೀಡಿರುವ ಉತ್ತರ ಹೀಗಿದೆ:

ಕೋ ಇಮಙ್‌ ಪಠವಿಙ್‌ ವಿಜೆಸ್ಸತಿ

ಯಮಲೋಕಙ್‌ ಚ ಇಮಙ್‌ ಸದೇವಕಙ್‌ ?

ಕೋ ಧಮ್ಮಪದಙ್‌ ಸುದೇಸಿತಙ್‌

ಕುಸಲೋ ಪುಷ್ಪಂ ಇವ ಪಚೆಸ್ಸತಿ ?

ಇದರ ತಾತ್ಪರ್ಯ: ‘ಯಾವನು ಈ ಭೂಮಿಯನ್ನೇ ಗೆಲ್ಲಬಲ್ಲ? ದೇವತೆಗಳ ಸಹಿತ ಯಮಲೋಕವನ್ನೂ ಗೆಲ್ಲಬಲ್ಲ? ಯಾವನು ಚೆನ್ನಾಗಿ ಉಪದೇಶಿಸಿದ ಧರ್ಮಪದವನ್ನು ಜಾಣನು ಹೂಗಳನ್ನು ಆಯ್ದುಕೊಳ್ಳುವಂತೆ ಆಯ್ದುಕೊಳ್ಳುವನು?’

ಇಲ್ಲಿ ಪ್ರಶ್ನೆಗೆ ಪ್ರಶ್ನೆಯ ಮೂಲಕವೇ ಉತ್ತರಿಸಲಾಗಿದೆ.

ಭೂಮಿಯನ್ನು ಗೆಲ್ಲುವುದು ಎಂದರೆ ಯುದ್ಧದಲ್ಲಿ ಭೂಮಿಯನ್ನು ಗೆದ್ದು ಚಕ್ರವರ್ತಿಯಾಗುವುದು ಎಂದೇನಲ್ಲವಷ್ಟೆ! ನಮ್ಮ ಮನಸ್ಸನ್ನೇ ಗೆದ್ದು, ಅದರ ಮೇಲೆ ಆಳ್ವಿಕೆ ನಡೆಸುವುದು ಎಂದು. ಯಮಲೋಕವನ್ನು ಗೆಲ್ಲುವುದು ಎಂದರೆ ಸಾವನ್ನು ಜಯಿಸುವುದು ಎಂದಲ್ಲ; ಪ್ರತಿ ಕ್ಷಣವೂ ಆಸೆ–ಭಯ–ಕೋಪ ಮುಂತಾದ ರೋಗಗಳಿಂದ ಸಾವಿಗೆ ತುತ್ತಾಗದೆ ಅವನ್ನು ಗೆದ್ದು ಶಾಶ್ವತವಾದ ಆನಂದದಲ್ಲಿರುವುದು ಎಂದರ್ಥ. ಇದು ಸಾಧ್ಯವಾಗುವುದು ಧರ್ಮಪದವನ್ನು ತಿಳಿದವನಿಗೆ.

ಇಲ್ಲಿ ‘ಧರ್ಮಪದ’ ಎನ್ನುವುದು ‘ಧಮ್ಮಪದ’ ಎಂಬ ಗ್ರಂಥವನ್ನೂ ಸೂಚಿಸುತ್ತದೆ; ಧರ್ಮದ ದಾರಿ – ಎಂದರೆ ಬುದ್ಧನ ಮಾರ್ಗ ಎಂದೂ ಆಗುತ್ತದೆ. ಈ ಮಾರ್ಗದ/ಕೃತಿಯ ಉಪದೇಶವನ್ನು ಸ್ವೀಕರಿಸಿದರೆ ಆಗ ನಾವು ಭೂಮಿಯನ್ನೂ ಗೆಲ್ಲಬಹುದು, ಯಮಲೋಕವನ್ನೂ ಗೆಲ್ಲಬಹುದು ಎಂದು ‘ಧಮ್ಮಪದ’ ಹೇಳುತ್ತಿದೆ.

ಈ ಉಪದೇಶವನ್ನು ಸ್ವೀಕರಿಸುವ ವಿಧಾನವನ್ನೂ ಅದೇ ಹೇಳಿದೆ – ‘ಹೂಗಳನ್ನು ಜಾಣನೊಬ್ಬ ಹೇಗೆ ಆಯ್ದುಕೊಳ್ಳುವನೋ ಹಾಗೆ ಈ ಉಪದೇಶಗಳನ್ನೂ ಆಯ್ದುಕೊಂಡರೆ ಆಗ ನಮಗೆ ಅದರ ಫಲ ಒದಗುತ್ತದೆ.’ ಹೂವನ್ನು ಆರಿಸುವ ಪ್ರಕ್ರಿಯೆ ತುಂಬ ಸೂಕ್ಷ್ಮವಾದುದು; ಮಾತ್ರವಲ್ಲ, ಅದು ಆಹ್ಲಾದಕಾರಿಯೂ ಹೌದು; ಶ್ರದ್ಧೆಯ ಕಾಯಕವೂ ಹೌದು. ಬುದ್ಧನ ಉಪದೇಶಗಳ ಬಗ್ಗೆಯೂ ಅಂಥ ಮನೋಧರ್ಮ ನಮ್ಮದಾಗಬೇಕು ಎಂದು ‘ಧಮ್ಮಪದ’ ಆಶಿಸುತ್ತಿದೆ.

ಇನ್ನೊಂದು ಗಾಹೆಯನ್ನು ನೋಡಿ:

ಯಥಾ ಪಿ ಭಮರೋ ಪುಪ್ಫಙ್‌ ವಣ್ಣಗಂಧಙ್‌ ಅಹೇಠಯಙ್‌ |

ಪಲೇತಿ ರಸಂ ಆದಾಯ ಏವಙ್‌ ಗಾಮೇ ಮುನೀ ಚರೇ ||

‘ದುಂಬಿಯು ಹೇಗೆ ಹೂವಿನ ಬಣ್ಣವನ್ನಾಗಲೀ ವಾಸನೆಯನ್ನಾಗಲೀ ಕೆಡಿಸದೆಯೇ, ರಸವನ್ನು ಮಾತ್ರ, ಎಂದರೆ ಮಕರಂದವನ್ನು ತೆಗೆದುಕೊಂಡು ಓಡುವುದೋ ಹಾಗೆಯೇ ಮುನಿಯಾದವನು ಗ್ರಾಮದಲ್ಲಿ ಸಂಚರಿಸಬೇಕು.’

ಅತಿಯಾದ ಆಸೆಯಿಂದಲೂ ಲೋಭದಿಂದಲೂ ಜಗತ್ತಿನ ವಸ್ತುಗಳನ್ನು ನಾಶ ಮಾಡದೆ ನಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಪಡೆದು ಕುಶಲದಿಂದ ಬಾಳಬೇಕು ಎಂಬುದನ್ನು ಈ ಗಾಹೆ ಹೇಳುತ್ತಿದೆ. ಇದು ಕೇವಲ ಮುನಿಗಳಿಗೆ ಮಾತ್ರವೇ ಹೇಳಿದ ಉಪದೇಶವಲ್ಲ; ಯಾರೂ ಕೂಡ ಲೋಕಪೀಡಕರಾಗಬಾರದು ಎಂಬ ಹಂಬಲ ಇಲ್ಲಿ ಕಾಣುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry