‘ಪ್ರಸಾರ ಭಾರತಿ ಜತೆ ಸಂಘರ್ಷ ಇಲ್ಲ'

7

‘ಪ್ರಸಾರ ಭಾರತಿ ಜತೆ ಸಂಘರ್ಷ ಇಲ್ಲ'

Published:
Updated:

ನ‌ವದೆಹಲಿ : ಪ್ರಸಾರ ಭಾರತಿ ಸಿಬ್ಬಂದಿಯ ವೇತನದ ಹಣವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಡೆಹಿಡಿದಿದೆ ಎಂಬ ವರದಿಯು ದುರುದ್ದೇಶಪೂರಿತ ಎಂದು ಸರ್ಕಾರ ಹೇಳಿದೆ. ಪ್ರಸಾರ ಭಾರತಿ ಮತ್ತು ಸಚಿವಾಲಯದ ನಡುವಣ ಸಂಘರ್ಷದ ಕಾರಣಕ್ಕೆ ಹಣ ಬಿಡುಗಡೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿತ್ತು.

ಪ್ರಸಾರ ಭಾರತಿಯು ಸ್ವಾಯತ್ತ ಮಂಡಳಿಯಾಗಿದ್ದು, ದೂರದರ್ಶನ ಮತ್ತು ಆಕಾಶವಾಣಿಯ ನಿರ್ವಹಣೆಗಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಅನುದಾನ ಪಡೆಯುತ್ತಿದೆ.

ಸುಳ್ಳು ಮಾಹಿತಿ ಮತ್ತು ದುರುದ್ದೇಶದಿಂದ ಕೂಡಿದ ಮಾಧ್ಯಮ ವರದಿಗಳ ಉದ್ದೇಶ ಜನರ ಕಣ್ಣಲ್ಲಿ ಸರ್ಕಾರವನ್ನು ಕೆಟ್ಟದಾಗಿ ಚಿತ್ರಿಸುವುದಾಗಿದೆ ಎಂದು ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹರಿಹಾಯ್ದಿದೆ.

ಸಚಿವಾಲಯವು ವೇತನದ ಹಣವನ್ನು ಬಿಡುಗಡೆ ಮಾಡದ ಕಾರಣ ಜನವರಿ ಮತ್ತು ಫೆಬ್ರುವರಿ ತಿಂಗಳ ವೇತನ ನೀಡಲು ಆಂತರಿಕ ನಿಧಿಯನ್ನು ಬಳಸಿಕೊಳ್ಳಬೇಕಾಯಿತು ಎಂದು ಪ್ರಸಾರ ಭಾರತಿ ಅಧ್ಯಕ್ಷ ಎ. ಸೂರ್ಯಪ್ರಕಾಶ್‌ ಹೇಳಿದ್ದಾಗಿ ‘ದಿ ವೈರ್‌’  ವೆಬ್‌ಸೈಟ್‌ ಸೇರಿ ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಸಚಿವಾಲಯ ಮತ್ತು ಪ್ರಸಾರ ಭಾರತಿ ನಡುವೆ ಸಂಘರ್ಷ ಮುಂದುವರಿದರೆ ಏಪ್ರಿಲ್‌ ಬಳಿಕ ದೂರದರ್ಶನ ಮತ್ತು ಆಕಾಶವಾಣಿ ನೌಕರರ ವೇತನಕ್ಕೆ ಹಣ ಇರುವುದಿಲ್ಲ ಎಂದು ‘ದಿ ವೈರ್‌’ ವರದಿಯಲ್ಲಿ ಹೇಳಲಾಗಿತ್ತು. ವಾರ್ತಾ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ಮತ್ತು ಪ್ರಸಾರ ಭಾರತಿ ನಡುವಣ ಭಿನ್ನಾಭಿಪ್ರಾಯವೇ ಸಂಘರ್ಷಕ್ಕೆ ಕಾರಣ ಎಂದು ವರದಿ ಹೇಳಿತ್ತು.

ಭಾರತ ಸರ್ಕಾರದ ಸಾಮಾನ್ಯ ಹಣಕಾಸು ನಿಯಮಗಳು ಪ್ರಸಾರ ಭಾರತಿಗೂ ಅನ್ವಯ ಆಗುತ್ತವೆ. ಸರ್ಕಾರದಿಂದ ಅನುದಾನ ಪಡೆಯುವ ಯಾವುದೇ ಸ್ವಾಯತ್ತ ಸಂಸ್ಥೆ ಸಂಬಂಧಪಟ್ಟ ಸಚಿವಾಲಯದ ಜತೆಗೆ ಒಪ್ಪಂದಕ್ಕೆ ಸಹಿ ಮಾಡಬೇಕು. ಪ್ರತಿ ಹಣಕಾಸು ವರ್ಷದ ಆರ್ಥಿಕ ಗುರಿಗಳು ಮತ್ತು ಚಟುವಟಿಕೆಗಳ ಕಾಲಮಿತಿಯನ್ನು ಅನುಸರಿಸಬೇಕು ಎಂಬುದು ಈ ಒಪ್ಪಂದದಲ್ಲಿ ಸ್ಪಷ್ಟವಾಗಿ ಇದೆ. ಆದರೆ ಹಲವು ಜ್ಞಾಪನಾ ಪತ್ರಗಳನ್ನು ಕಳುಹಿಸಿದರೂ ಪ್ರಸಾರ ಭಾರತಿಯು ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಸಚಿವಾಲಯ ತಿಳಿಸಿದೆ. ಆದರೆ, ಅನುದಾನ ತಡೆ ಹಿಡಿಯಲಾಗಿದೆ ಎಂದು ಸೂರ್ಯಪ್ರಕಾಶ್‌ ಅವರು ಮಾಡಿರುವ ಆರೋಪವನ್ನು ನೇರವಾಗಿ ಅಲ್ಲಗಳೆದಿಲ್ಲ. ಸೂರ್ಯಪ್ರಕಾಶ್‌ ಅವರು ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.

ಆದರೆ, ಅನುದಾನ ಬಿಡುಗಡೆಯಲ್ಲಿ ಹಿಂದೆಯೂ ವಿಳಂಬ ಆಗಿತ್ತು. ಈಗಿನ ವಿಳಂಬ ವಿಶೇಷ ಏನಲ್ಲ. ಇನ್ನಷ್ಟು ವಿಳಂಬವಾದರೆ ಸಮಸ್ಯೆಯಾಗಬಹುದು. ಯಾಕೆಂದರೆ, ಖರ್ಚು ನಿಭಾಯಿಸುವಷ್ಟು ಹಣ ಪ್ರಸಾರ ಭಾರತಿಯ ಆಂತರಿಕ ನಿಧಿಯಲ್ಲಿ ಇಲ್ಲ ಎಂದು ಪ್ರಸಾರ ಭಾರತಿಯ ಅಧಿಕಾರಿಗಳು ಹೇಳಿದ್ದಾರೆ.

ಗೋವಾದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮದ ಚಿತ್ರೀಕರಣ ಮಾಡಿದ ಖಾಸಗಿ ಕಂಪನಿಯೊಂದಕ್ಕೆ ಸುಮಾರು ₹3 ಕೋಟಿ ಪಾವತಿಸಲು ಪ್ರಸಾರ ಭಾರತಿ ನಿರಾಕರಿಸಿದ್ದೇ ಸಚಿವಾಲಯ ಮತ್ತು ಪ್ರಸಾರ ಭಾರತಿಯ ನಡುವಣ ಸಂಘರ್ಷಕ್ಕೆ ಕಾರಣ ಎಂದು ‘ದಿ ವೈರ್‌’ ವರದಿ ಹೇಳಿದೆ.

ಚಿತ್ರೋತ್ಸವವನ್ನು ಚಿತ್ರೀಕರಿಸಲು ಬೇಕಾದ ಎಲ್ಲ ಪರಿಣತಿಯು ತಮ್ಮಲ್ಲಿ ಇದೆ. ಹಾಗಾಗಿ ಈ ಕೆಲಸಕ್ಕೆ ಹೊರಗಿನವರನ್ನು ನಿಯೋಜಿಸುವ ಅಗತ್ಯವೇ ಇಲ್ಲ ಎಂಬುದು ದೂರದರ್ಶನದ ವಾದ ಎಂದು ವರದಿಯು ತಿಳಿಸಿದೆ. ಸ್ಮೃತಿ ಇರಾನಿಯವರ ಕೆಲವು ಕ್ರಮಗಳನ್ನು ಸೂರ್ಯಪ್ರಕಾಶ್‌ ಅವರು ಪ್ರಶ್ನಿಸಿದ್ದೇ ಸಂಘರ್ಷದ ಹಿಂದಿನ ನಿಜವಾದ ಕಾರಣ ಎಂದು ಪ್ರಸಾರ ಭಾರತಿಯ ಕೆಲವು ಅಧಿಕಾರಿಗಳು ಹೇಳಿದ್ದಾರೆ ಎಂದೂ ‘ದಿ ವೈರ್‌’ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry