ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಕುಸ್ತಿ: ವಿನೇಶಾ ಪೋಗಟ್‌ಗೆ ಬೆಳ್ಳಿ

Last Updated 2 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬಿಷಕೆಕ್‌, ಕಿರ್ಗಿಸ್ತಾನ: ಭಾರತದ ವಿನೇಶಾ ಪೋಗಟ್ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಮಹಿಳೆಯರ 50ಕೆ.ಜಿ ಫ್ರೀಸ್ಟೈಲ್‌ ವಿಭಾಗದ ಫೈನಲ್‌ ಹೋರಾಟದಲ್ಲಿ ವಿನೇಶಾ 2–3ರಲ್ಲಿ ಚೀನಾದ ಚನ್‌ ಲೀ ಎದುರು ಸೋತರು.

ಬೌಟ್‌ನ ಆರಂಭದಲ್ಲಿಯೇ ಭಾರತದ ಆಟಗಾರ್ತಿ 0–1ರಲ್ಲಿ ಹಿನ್ನಡೆ ಸಾಧಿಸಿದರು. ಈ ಹಂತದಲ್ಲಿ ಪ್ರಬಲ ಸ್ಪರ್ಧೆ ಒಡ್ಡುವ ಮೂಲಕ ಎರಡು ಪಾಯಿಂಟ್ಸ್ ಪಡೆದು ಮುನ್ನಡೆ ಸಾಧಿಸಿದರು. ಪಂದ್ಯದ ಕೊನೆಯ ವೇಳೆ ಎದುರಾಳಿಗೆ ಎರಡು ಪಾಯಿಂಟ್ಸ್ ಬಿಟ್ಟುಕೊಡುವ ಮೂಲಕ ಚಿನ್ನ ಗೆಲ್ಲುವ ಅವಕಾಶ ಕಳೆದುಕೊಂಡರು. ಆರಂಭದಲ್ಲಿ ರಕ್ಷಣಾತ್ಮಕವಾಗಿ ಆಡಿದ್ದ ಚನ್‌ ಅಂತಿಮ ಹಂತದಲ್ಲಿ ಚುರುಕಿನ ದಾಳಿಯಿಂದ ಗಮನಸೆಳೆದರು.

ವಿನೇಶಾ ಅವರು ಸೆಮಿಫೈನಲ್‌ ಪಂದ್ಯದಲ್ಲಿ ಜಪಾನ್‌ನ ಯೂಕಿ ಇರಿಯಾ ಎದುರು ಗೆದ್ದು ಫೈನಲ್‌ ಪ್ರವೇಶಿಸಿದ್ದರು.

‘ಫೈನಲ್‌ನಲ್ಲಿ ಸೋತಿದ್ದರಿಂದ ಹೆಚ್ಚು ಬೇಸರವಾಗಿಲ್ಲ. 2018ರ ಋತುವನ್ನು ಪದಕದ ಮೂಲಕ ಆರಂಭಿಸಿದ್ದೇನೆ. ಇದು ಒಳ್ಳೆಯ ಬೆಳವಣಿಗೆ. ಮಹತ್ವದ ಟೂರ್ನಿಗಳು ಇರುವ ಈ ವರ್ಷದಲ್ಲಿ ಕಠಿಣ ಸವಾಲುಗಳನ್ನು ಎದುರಿಸಬೇಕಿದೆ’ ಎಂದು ವಿನೇಶಾ ಹೇಳಿದ್ದಾರೆ.

ಮಹಿಳೆಯರ 59ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಸಂಗೀತಾ ಕೊರಿಯಾದ ಜುವಾನ್ ಯುಮ್ ಎದುರು ಜಯಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಸೆಮಿಫೈನಲ್‌ನಲ್ಲಿ ಸೋತಿದ್ದ ಅವರು ಪ್ಲೇ ಆಫ್‌ನಲ್ಲಿ ಗೆದ್ದರು. ದಿವ್ಯಾ ಕರ್ಮಾಕರ್‌ ಮಹಿಳೆಯರ 68ಕೆ.ಜಿ ಫ್ರೀಸ್ಟೈಲ್ ವಿಭಾಗದ ಪ್ಲೇ ಆಫ್‌ ಪಂದ್ಯದಲ್ಲಿ ಕಿರ್ಗಿಸ್ತಾನದ ಮೆರಿಮ್‌ ಜುಮರೋವಾ ಎದುರು ಸೋತಿದ್ದಾರೆ.

ಎರಡು ಕಂಚಿನ ಪದಕ ಸೇರಿದಂತೆ ಭಾರತ ಟೂರ್ನಿಯಲ್ಲಿ ಒಟ್ಟು ನಾಲ್ಕು ಪದಕಗಳನ್ನು ಗೆದ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT