ಬಾಬಾಬುಡನ್‌ಗಿರಿ: ಉರುಸ್‌ ಶುರು

ಸೋಮವಾರ, ಮಾರ್ಚ್ 25, 2019
26 °C
ಗುಹೆಯ ಪ್ರವೇಶ ದ್ವಾರದಲ್ಲೇ ಪ್ರಾರ್ಥನೆ

ಬಾಬಾಬುಡನ್‌ಗಿರಿ: ಉರುಸ್‌ ಶುರು

Published:
Updated:
ಬಾಬಾಬುಡನ್‌ಗಿರಿ: ಉರುಸ್‌ ಶುರು

ಚಿಕ್ಕಮಗಳೂರು: ತಾಲ್ಲೂಕಿನ ಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ಶುಕ್ರವಾರ ಜಿಲ್ಲಾಡಳಿತದ ನೇತೃತ್ವದಲ್ಲಿ ಸಂದಲ್‌ ಉರುಸ್‌ ಶುರುವಾಯಿತು. ಫಕೀರರು, ಸಹಸ್ರಾರು ಮುಸ್ಲಿಂ ಭಕ್ತರು ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ಗುಹೆ ಒಳಗಡೆಗೆ ಹೋಗಿ ಸಾಂಪ್ರದಾಯಿಕ ಆಚರಣೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಶಾಖಾದ್ರಿ ಗೌಸ್‌ ಮೊಯಿದ್ದೀನ್‌ ಮತ್ತು ಅವರ ಬೆಂಬಲಿಗರು ಪಟ್ಟುಹಿಡಿದರು. ಸುಮಾರು ಒಂದು ಗಂಟೆ ಕಾಲ ಗುಹೆಯ ಪ್ರವೇಶ ದ್ವಾರದಲ್ಲೇ ಜಮಾಯಿಸಿದ್ದರು.

ಪ್ರವೇಶ ದ್ವಾರದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ನಿಯೋಜಿಸಲಾಗಿತ್ತು. ಜಿಲ್ಲಾಡಳಿತ ಅನುಮತಿ ನೀಡದಿದ್ದರಿಂದ ಪ್ರವೇಶ ದ್ವಾರದಲ್ಲೇ ಪ್ರಾರ್ಥನೆ ಸಲ್ಲಿಸಿ, ಉರುಸ್‌ನಲ್ಲಿ ಭಾಗವಹಿಸದೆ ವಾಪಸ್‌ ಹೋದರು.

ಇದಕ್ಕೂ ಮೊದಲು ಜೋಳದಾಳ್‌ನಿಂದ ತಂದಿಟ್ಟಿದ್ದ ಪವಿತ್ರ ಗಂಧವನ್ನು ಮುಸ್ಲಿಂ ಭಕ್ತರು ಅತ್ತಿಗುಂಡಿಯಿಂದ ಮೆರವಣಿಗೆಯಲ್ಲಿ ಬಾಬಾಬುಡನ್‌ಗಿರಿಗೆ ತಂದರು. ಗಿರಿಗೆ ಗಂಧ ತಲುಪುತ್ತಿದ್ದಂತೆ ಭಕ್ತರು ನಾಣ್ಯ ಚಿಮ್ಮಿ ಹರಕೆ ಸಲ್ಲಿಸಿದರು. ನೆಲಕ್ಕೆ ಬಿದ್ದ ನಾಣ್ಯಗಳನ್ನು ಎತ್ತಿಕೊಳ್ಳಲು ಭಕ್ತರು ಮುಗಿಬಿದ್ದರು.

ವಿವಿಧೆಡೆಗಳಿಂದ ಬಂದಿದ್ದ ಭಕ್ತರು ಸಾಲಾಗಿ ಗುಹೆಯೊಳಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಮಹಿಳೆಯರು ಸಕ್ಕರೆ, ಪಡಿ ನೀಡಿ ಪ್ರಸಾದ ಮತ್ತು ಆಶೀರ್ವಾದ ಪಡೆದರು. ಗಂಧದ ಮೆರವಣಿಗೆ ಬರುವಾಗ ಭಕ್ತರ ಉನ್ಮಾದ ಭರಿತ ನರ್ತನ, ಉದ್ಘೋಷ ಮುಗಿಲು ಮುಟ್ಟಿತ್ತು.

ಗಿರಿಯಲ್ಲಿ ತಾತ್ಕಾಲಿಕ ಶೆಡ್‌ನಲ್ಲಿ ನಮಾಜ್‌ಗೆ (ಪ್ರಾರ್ಥನೆ) ವ್ಯವಸ್ಥೆ ಮಾಡಲಾಗಿತ್ತು. ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ, ಕೇರಳ ಮೊದಲಾದ ರಾಜ್ಯಗಳಿಂದ, ರಾಜ್ಯದ ವಿವಿಧೆಡೆಗಳಿಂದ ಭಕ್ತರು ಬಂದಿದ್ದಾರೆ. ಈ ತಿಂಗಳ 4ರವರೆಗೆ ಉರುಸ್‌ ಜರುಗಲಿದೆ.

ಬಾಬಾಬುಡನ್‌ ಗಿರಿಗ ಸಾಗುವ ಮಾರ್ಗ, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ, ಉಪವಿಭಾಗಾಧಿಕಾರಿ ಎಚ್‌.ಅಮರೇಶ್‌, ಪ್ರೊಬೆಷನರಿ ಐಎಎಸ್‌ ಅಧಿಕಾರಿ ಸಹನಾ ಸ್ಥಳದಲ್ಲಿ ಇದ್ದರು.

*

ಗುಹೆಯೊಳಗೆ ಗಂಧ ಹಚ್ಚಲು, ಚಾದರ ಹೊದಿಸಲು ನಮಗೆ ಬಿಡಲಿಲ್ಲ. ಧಾರ್ಮಿಕ ವಿಧಿಗಳಿಗೆ ನಮಗೆ ಅವಕಾಶ ನೀಡದಿರುವುದು ಬೇಸರ ಮೂಡಿಸಿದೆ.

–ಸೈಯದ್‌ ಗೌಸ್‌ ಮೊಹಿದ್ದೀನ್‌ ಶಾಖಾದ್ರಿ

*

ಸುಪ್ರೀಂ ಕೋರ್ಟ್‌ ಆದೇಶದಂತೆ ಉರೂಸ್‌ ಆಚರಣೆಗೆ ವ್ಯವಸ್ಥೆ ಮಾಡಲಾಗಿದೆ. ಮುಜಾವರ್‌ ನೇತೃತ್ವದಲ್ಲಿ ವಿಧಿವಿಧಾನಗಳನ್ನು ನೆರವೇರಿಸಲು ಅವಕಾಶ ಮಾಡಲಾಗಿದೆ.

–ಎಂ.ಕೆ.ಶ್ರೀರಂಗಯ್ಯ, ಜಿಲ್ಲಾಧಿಕಾರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry