ಚುನಾವಣೆಗೆ ಸಂಜೀವಿನಿಯಾಗದ ಜೀವನದಿ!

7

ಚುನಾವಣೆಗೆ ಸಂಜೀವಿನಿಯಾಗದ ಜೀವನದಿ!

Published:
Updated:
ಚುನಾವಣೆಗೆ ಸಂಜೀವಿನಿಯಾಗದ ಜೀವನದಿ!

ತಲಕಾವೇರಿಯಲ್ಲಿ ಹುಟ್ಟಿ ಕಾವೇರಿಪಟ್ಟಣಂನಲ್ಲಿ ಸಮುದ್ರ ಸೇರುವ ಕಾವೇರಿ ನದಿಗೆ ಕರ್ನಾಟಕ ಮತ್ತು ತಮಿಳುನಾಡು ರಾಜಕೀಯದಲ್ಲಿ ಮಹತ್ವವಿದೆ. ಎರಡೂ ರಾಜ್ಯಗಳಲ್ಲಿ ಹಂಚಿಹೋಗಿರುವ ಕಾವೇರಿ ನದಿಯ ದಂಡೆಯ ಮೇಲೆ ಬೆಳೆದ ಬೆಳೆಗಳಿಗಿಂತ ರಾಜಕೀಯ ಬೆಳೆಯೇ ಹೆಚ್ಚು ಹುಲುಸಾಗಿ ಬೆಳೆದಿದೆ. ಆದರೂ ಕಾವೇರಿ ನದಿ ನೀರಿನ ಹಂಚಿಕೆ ವಿಷಯ ಕರ್ನಾಟಕದ ಮಟ್ಟಿಗಂತೂ ಚುನಾವಣಾ ವಿಷಯವಾದ ಇತಿಹಾಸ ಇಲ್ಲ.

ಕಾವೇರಿ ವಿವಾದಕ್ಕೆ ಬೇಕಾದಷ್ಟು ಇತಿಹಾಸ ಇದೆ. ಎರಡೂ ರಾಜ್ಯಗಳಲ್ಲಿ ‘ರಕ್ತ ಕೊಟ್ಟೇವು, ನೀರು ಬಿಡಲ್ಲ’ ಎಂಬ ಘೋಷಣೆಗಳಿಗೇನೂ ಕಡಿಮೆ ಇಲ್ಲ. ನೀರಿನ ಹೆಸರಿನಲ್ಲಿ ರಕ್ತವೂ ಹರಿದಿದೆ. ಜೀವಗಳೂ ಬಲಿಯಾಗಿವೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಆದರೆ ಈ ವಿಷಯವನ್ನೇ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆದ್ದವರು ಕಡಿಮೆ.

1924ರಲ್ಲಿಯೇ ಕಾವೇರಿ ಒಪ್ಪಂದವಾಗಿದ್ದರೂ 1991ರವರೆಗೆ ಇದೊಂದು ಸಾರ್ವಜನಿಕ ಸಮಸ್ಯೆಯಾಗಿದ್ದಿಲ್ಲ. ಅಲ್ಲಿಯವರೆಗೂ ಒಂದು ಅಲಿಖಿತ ನಿಯಮದಂತೆ ಏನೋ ಹೊಂದಾಣಿಕೆಯಿಂದ ನಡೆಯುತ್ತಿತ್ತು. ಆದರೆ 1991ರಲ್ಲಿ ಕಾವೇರಿ ನ್ಯಾಯ ಮಂಡಳಿಯ ಮಧ್ಯಂತರ ತೀರ್ಪು ಹೊರಬಿದ್ದ ನಂತರ ಇದೊಂದು ದೊಡ್ಡ ಸಮಸ್ಯೆಯೇ ಆಯಿತು. ಆಗ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರು ಕಾವೇರಿ ನ್ಯಾಯ ಮಂಡಳಿಯ ಮಧ್ಯಂತರ ತೀರ್ಪು ಒಪ್ಪಲು ಸಾಧ್ಯವಿಲ್ಲ ಎಂದು ಸುಗ್ರೀವಾಜ್ಞೆ ಜಾರಿಗೆ ತಂದರು. ಇದು ಭಾರೀ ವಿವಾದವನ್ನು ಸೃಷ್ಟಿಸಿತು.

ಈ ಮಧ್ಯಂತರ ತೀರ್ಪು ಮಂಡ್ಯ, ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾಕಷ್ಟು ಅನಾಹುತವನ್ನೂ ಮಾಡಿತ್ತು. ಹಿಂಸಾಚಾರ ಭುಗಿಲೆದ್ದಿತ್ತು. ಇದನ್ನು ಗಮನಿಸಿಯೇ ಬಂಗಾರಪ್ಪ ಅವರು ನ್ಯಾಯಮಂಡಳಿ ತೀರ್ಪಿಗೆ ಸಡ್ಡು ಹೊಡೆದು ಸುಗ್ರೀವಾಜ್ಞೆ ಜಾರಿಗೆ ತಂದರು. ಆದರೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆಯ ಬೆದರಿಕೆ ಹಾಕಿದ್ದರಿಂದ ಸುಗ್ರೀವಾಜ್ಞೆ ಠುಸ್ ಎಂದಿತು. ನ್ಯಾಯಾಂಗ ನಿಂದನೆಗೆ ಹೆದರಿದ ಬಂಗಾರಪ್ಪ ಅವರೂ ಕಾವೇರಿ ನೀರು ಹರಿಸಿದರು.

ಕಾವೇರಿ ನ್ಯಾಯ ಮಂಡಳಿಗೆ ಸಡ್ಡು ಹೊಡೆದ ಬಂಗಾರಪ್ಪ ಅವರಿಗೆ ಕಾವೇರಿ ತಟದ ಮತದಾರರು ಆಶೀರ್ವಾದ ಏನೂ ಮಾಡಲಿಲ್ಲ. ನಂತರದ ಚುನಾವಣೆಯಲ್ಲಿ ಅವರ ಪಕ್ಷ ಈ ಕ್ಷೇತ್ರಗಳಲ್ಲಿ ಯಾವ ಸಾಧನೆಯನ್ನೂ ಮಾಡಲಿಲ್ಲ. ಅಷ್ಟರಲ್ಲಾಗಲೇ ಅವರು ಕಾಂಗ್ರೆಸ್ ಪಕ್ಷದಿಂದ ಹೊರಬಂದು ಬೇರೆ ಪಕ್ಷ ಕಟ್ಟಿದ್ದರು. ಕಾವೇರಿ ವಿಷಯದಲ್ಲಿ ವೀರಾವೇಶ ತೋರಿದ ಕಾರಣಕ್ಕಾಗಿ ಜನರು ಚುನಾವಣೆಯಲ್ಲಿ ಅವರ ಪಕ್ಷವನ್ನು ಗೆಲ್ಲಿಸಲಿಲ್ಲ. ಸೋಲಿಸಲೂ ಇಲ್ಲ. ಚುನಾವಣೆ ಸಂದರ್ಭದಲ್ಲಿ ಅದೊಂದು ಚರ್ಚೆಯ ವಿಷಯವೇ ಆಗಲಿಲ್ಲ.

2002ರಲ್ಲಿ ಆಗಿನ ಮುಖ್ಯಮಂತ್ರಿಎಸ್.ಎಂ.ಕೃಷ್ಣ ಅವರಿಗೂ ಇದೇ ಅನುಭವ ಆಯಿತು. ಆಗಲೂ ರಾಜ್ಯದಲ್ಲಿ ತೀವ್ರ ಬರಗಾಲ ಇತ್ತು. ತಮಿಳುನಾಡಿಗೆ ನೀರು ಬಿಡುವ ಸಾಧ್ಯತೆಗಳೇ ಇರಲಿಲ್ಲ. ಆದರೂ ಸುಪ್ರೀಂ ಕೋರ್ಟ್ ನೀರು ಬಿಡುವಂತೆ ಸೂಚಿಸಿತ್ತು. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಇದನ್ನು ವಿರೋಧಿಸಿದರು. ‘ನಮಗೇ ನೀರಿಲ್ಲ. ಇನ್ನು ತಮಿಳುನಾಡಿಗೆ ಎಲ್ಲಿಂದ ನೀರು ಬಿಡುವುದು’ ಎಂದು ಬೆಂಗಳೂರಿನಿಂದ ಪಾದಯಾತ್ರೆ ಆರಂಭಿಸಿದರು. ಅದಕ್ಕೆ ವ್ಯಾಪಕ ಜನಬೆಂಬಲವೂ ವ್ಯಕ್ತವಾಯಿತು. ಆದರೆ ಪಾದಯಾತ್ರೆ ಮದ್ದೂರು ತಲುಪುವ ವೇಳೆಗೆ

ಎಸ್.ಎಂ.ಕೃಷ್ಣ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುವ ಎಚ್ಚರಿಕೆಯನ್ನು ಪಡೆದರು. ‘ನೀವು ರಾಜಕೀಯ ಲಾಭ ಪಡೆಯಲು ಯತ್ನಿಸಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ. ಮೊದಲು ನೀರು ಬಿಡಿ’ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತು. ಇದರಿಂದ ವಿಚಲಿತರಾದ ಕೃಷ್ಣ ನೀರು ಬಿಟ್ಟರು.

ಕಾವೇರಿ ನೀರಿನ ವಿಷಯದಲ್ಲಿ ದಿಟ್ಟತನದ ನಿಲುವು ತಳೆದಿದ್ದರೂ ಮುಂದಿನ ಚುನಾವಣೆಯಲ್ಲಿ ಅದು ಹೆಚ್ಚಿನ ಲಾಭವನ್ನು ತರಲಿಲ್ಲ. ವಿಧಾನಸಭೆಯಲ್ಲಿ 135ರಷ್ಟಿದ್ದ ಕಾಂಗ್ರೆಸ್ ಸದಸ್ಯರ ಸಂಖ್ಯೆ 65ಕ್ಕೆ ಇಳಿಯಿತು.

ಕೇಂದ್ರ ಸಚಿವರಾಗಿದ್ದ ಅಂಬರೀಶ್ ಅವರು ಕಾವೇರಿ ನೀರು ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಂಸತ್ತಿಗೂ ಹೋಗಲಿಲ್ಲ. ಆದರೂ ಮಂಡ್ಯದ ಮತದಾರರು ಅವರ ಕೈ ಹಿಡಿಯಲಿಲ್ಲ. ನಂತರ ನಡೆದ ಚುನಾವಣೆಯಲ್ಲಿ ಅವರು ಸೋತರು.

ತಮ್ಮ ರಾಜಕೀಯ ಮತ್ತು ಹೋರಾಟದ ಜೀವನದಲ್ಲಿ ಕಾವೇರಿ ವಿಷಯವನ್ನೇ ಮುಖ್ಯವಾಗಿಸಿಕೊಂಡಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೂ ಚುನಾವಣೆಯ ದೃಷ್ಟಿಯಲ್ಲಿ ಕಾವೇರಿ ಜೀವ ತುಂಬಲಿಲ್ಲ. ಅವರು ಶಾಸಕರಾಗಿ ಆಯ್ಕೆ ಆಗಲು ಇದ್ದ ಕಾರಣಗಳು ಬೇರೆಯೇ ಆಗಿದ್ದವು. ಕಾವೇರಿ ಹೋರಾಟವೇ ಅವರ ಜಯಕ್ಕೆ ಕಾರಣ ಎನ್ನುವ ಹಾಗಿರಲಿಲ್ಲ.

ಶ್ರೀರಂಗಪಟ್ಟಣದಲ್ಲಿ 6 ಬಾರಿ ಚುನಾವಣೆಗೆ ನಿಂತು 6 ಬಾರಿಯೂ ಸೋತವರು ನಂಜುಂಡೇಗೌಡ. ಕಾವೇರಿ ಹೋರಾಟದಲ್ಲಿಯೇ ತಮ್ಮ ಜೀವನವನ್ನು ಸವೆಸಿದವರು ಅವರು. ಆದರೂ ಅವರಿಗೆ ಇದು ಸಂಜೀವಿನಿ

ಯಾಗಲಿಲ್ಲ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರಿಗೆ ಮಾತ್ರ ಕಾವೇರಿ ಹೋರಾಟದಿಂದ ಲಾಭವಾಗಿದೆ ಎಂದು ವಾದಿಸುವವರು ಇದ್ದಾರೆ. ಆದರೆ ಅವರ ರಾಜಕೀಯ ಬದುಕನ್ನು ತಿಳಿದವರಿಗೆ ಕಾವೇರಿ ಹೋರಾಟದಿಂದ ಅವರ ರಾಜಕೀಯ ಭವಿಷ್ಯಕ್ಕೆ ಎಷ್ಟು ಲಾಭ ಆಗಿದೆ ಎನ್ನುವುದು ಗೊತ್ತಿದೆ. ಕಾವೇರಿ ಹೋರಾಟದಲ್ಲಿ ಗುರುತಿಸಿಕೊಂಡ ಇನ್ನೊಬ್ಬ ನಾಯಕರೆಂದರೆ ಜಿ. ಮಾದೇಗೌಡರು. ಅವರು ವಿಧಾನಸಭೆ ಮತ್ತು ಲೋಕಸಭೆಗೆ ಆಯ್ಕೆಯಾದವರು. ಕಾವೇರಿ ಹೋರಾಟದಲ್ಲಿ ಅವರದು ದೊಡ್ಡ ಧ್ವನಿ. ಆದರೂ ಚುನಾವಣಾ ರಾಜಕೀಯದಲ್ಲಿ ಕಾವೇರಿ ಹೋರಾಟ ಅವರಿಗೆ ಜಯ ತಂದುಕೊಟ್ಟಿಲ್ಲ. ಈ ಮಾತನ್ನು ಅವರೂ ಒಪ್ಪುತ್ತಾರೆ. ‘ಚುನಾವಣೆಯೇ ಬೇರೆ. ಕಾವೇರಿ ಹೋರಾಟವೇ ಬೇರೆ. ಕಾವೇರಿ ವಿಷಯ ನ್ಯಾಯ ಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಇದ್ದಿದ್ದರಿಂದ ಆ ಬಗ್ಗೆ ಚುನಾವಣೆ ಸಂದರ್ಭದಲ್ಲಿ ನಾವು ಯಾವುದೇ ಭರವಸೆ ನೀಡುವ ಹಾಗೆ ಇರಲಿಲ್ಲ. ನ್ಯಾಯಾಲಯದ ತೀರ್ಪು ಹೊರಬಂದಾಗ ಜನರ ಪರವಾಗಿ ಹೋರಾಟ ನಡೆಸುವುದು ನಮ್ಮ ಕರ್ತವ್ಯವಾಗಿತ್ತು. ಹೋರಾಟ ನಡೆಸುತ್ತಿದ್ದೆವು. ನಮ್ಮ ಜನ ಬಹಳ ಬುದ್ಧಿವಂತರು. ಕಾವೇರಿ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಅವರು ಸಹಿಸುತ್ತಿರಲಿಲ್ಲ’ ಎಂದು ಅವರು ಹೇಳುತ್ತಾರೆ.

ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳು ಕಾವೇರಿ ಕಣಿವೆಯ ವ್ಯಾಪ್ತಿಯಲ್ಲಿ ಬರುತ್ತವೆ. ಈ ಜಿಲ್ಲೆಗಳಲ್ಲಿ 67 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಇದೆ. ಬೆಂಗಳೂರು ನಗರದಲ್ಲಿಯೇ 28 ಕ್ಷೇತ್ರಗಳಿವೆ. ಇಲ್ಲಿ ಕುಡಿಯುವ ನೀರು ಮುಖ್ಯವಾಗುತ್ತದೆಯಾದರೂ ಇಲ್ಲಿನ ಜನರು ಕಾವೇರಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬೇರೆ ಬೇರೆ ವಿಷಯಗಳೇ ಮುಖ್ಯವಾಗುತ್ತವೆ. ಇಲ್ಲಿನ ಜನರಿಗೆ ಕುಡಿಯಲು ನೀರು ಬೇಕು. ಆದರೆ ಅದು ಕಾವೇರಿಯೇ ಆಗಬೇಕು ಎಂದೇನೂ ಇಲ್ಲ. ಕಾವೇರಿಯ ಜೊತೆ ರಾಜಧಾನಿಯ ಮತದಾರರಿಗೆ ಭಾವನಾತ್ಮಕ ನಂಟು ಇಲ್ಲ.

ಕಾವೇರಿ ಉಗಮವಾಗುವ ಕೊಡಗಿನಲ್ಲಿಯೂ ಇದು ಚುನಾವಣಾ ವಿಷಯ ಅಲ್ಲ. ಕಾವೇರಿ ನದಿಯಿಂದ ಅಲ್ಲಿನ ಜನರಿಗೆ ಹೆಚ್ಚಿನ ಲಾಭವೇನೂ ಆಗದು. ಅದಕ್ಕೇ ಕಾವೇರಿ ಬಗ್ಗೆ ಎಷ್ಟೇ ಗಲಾಟೆ ನಡೆದರೂ ಕೊಡಗು ಶಾಂತವಾಗಿಯೇ ಇರುತ್ತದೆ.

ಚಾಮರಾಜನಗರದಲ್ಲಿಯೂ ಕಾವೇರಿ ವಿಷಯ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿಲ್ಲ. ಅಲ್ಲಿ ಏನಿದ್ದರೂ ದಲಿತರ ರಾಜಕಾರಣ. ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿಯೇ ಕಾವೇರಿ ವಿಷಯ ಹೆಚ್ಚಿನ ಗದ್ದಲಕ್ಕೆ ಕಾರಣವಾಗುತ್ತದೆ. ಆದರೆ ಈ ಎರಡೂ ಜಿಲ್ಲೆಗಳಲ್ಲಿ ಒಕ್ಕಲಿಗ ರಾಜಕಾರಣವೇ ಪ್ರಮುಖವಾಗಿದ್ದರಿಂದ ಕಾವೇರಿ ವಿಷಯ ಚುನಾವಣೆ ಹೊತ್ತಿನಲ್ಲಿ ವಿಶೇಷವಾಗುವುದಿಲ್ಲ. ಅದೇ ಸ್ಥಿತಿ ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೂ ಅನ್ವಯವಾಗುತ್ತದೆ.

ಕಾವೇರಿ ಉಗಮ ಸ್ಥಾನವಾದ ಕೊಡಗು ಬಿಟ್ಟರೆ ಬೆಂಗಳೂರು ನಗರದಲ್ಲಿ ಮಾತ್ರ ಬಿಜೆಪಿ ಸ್ಥಾನ ಕಂಡುಕೊಂಡಿದೆ. ಉಳಿದೆಡೆ ಬಿಜೆಪಿಗೆ ಸ್ಥಾನವೇ ಇಲ್ಲ. ಮೈಸೂರಿನಲ್ಲಿ ಒಂದು ಸ್ಥಾನಕ್ಕೆ ಪರದಾಟ ನಡೆಸುತ್ತಿದೆ. ಉಳಿದ ಎಲ್ಲ ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆಯೇ ಹಣಾಹಣಿ.

‘ತಮಿಳುನಾಡಿನಂತೆ ಇಲ್ಲಿ ಪ್ರಾದೇಶಿಕ ಪಕ್ಷಗಳುಪ್ರಬಲವಾಗಿಲ್ಲ. ಅದಕ್ಕಾಗಿಯೇ ‘ಕಾವೇರಿ’  ಚುನಾವಣಾ ವಿಷಯವಾಗುವುದಿಲ್ಲ. ಪ್ರಾದೇಶಿಕ ಪಕ್ಷ ಪ್ರಬಲವಾಗಿದ್ದರೆ ಕರ್ನಾಟಕಕ್ಕೆ ಇಷ್ಟೊಂದು ಅನ್ಯಾಯವೂ ಆಗುತ್ತಿರಲಿಲ್ಲ. ಕಾವೇರಿ ವಿಷಯ ತಮಿಳುನಾಡಿನಲ್ಲಿ ಚುನಾವಣಾ ವಿಷಯವಾಗುತ್ತದೆ. ಆದರೆ ನಮ್ಮಲ್ಲಿ ಆಗದೇ ಇರುವುದಕ್ಕೆ ಇದೇ ಕಾರಣ’ ಎಂದು ರೈತ ಮುಖಂಡ ಶ್ರೀರಂಗಪಟ್ಟಣದ ನಂಜುಂಡೇಗೌಡ ಹೇಳುತ್ತಾರೆ.

ಎಚ್.ಎಂ.ಚನ್ನಬಸಪ್ಪ, ಎಚ್.ಎನ್.ನಂಜೇಗೌಡ ಮುಂತಾದ ನೀರಾವರಿ ತಜ್ಞರೂ ರಾಜಕಾರಣಿಗಳಾಗಿದ್ದರು. ಹಾಸನದ ಪುಟ್ಟಸ್ವಾಮಿ ಗೌಡರೂ ನೀರಾವರಿ ಸಚಿವರಾಗಿದ್ದರು. ಎಲ್ಲರೂ ಕಾವೇರಿ ವಿಷಯದಲ್ಲಿ ಹೋರಾಟ ನಡೆಸಿದವರೇ ಆಗಿದ್ದಾರೆ.

ಎಚ್.ಡಿ.ದೇವೇಗೌಡರು ಕಾವೇರಿ ಹೋರಾಟದಿಂದಲೇ ರಾಜಕೀಯ  ಜೀವನವನ್ನು ಆರಂಭಿಸಿದವರು. ಅವರು ಚುನಾವಣೆಯಲ್ಲಿ ಸೋತಾಗ ಕಾವೇರಿ ಹೋರಾಟವೇ ಅವರಿಗೆ ರಾಜಕೀಯ ಪುನರ್ ಜೀವನವನ್ನು ಕೊಟ್ಟಿದೆ ಎಂದು ಮೈಸೂರು ಜಿಲ್ಲೆಯ ಶಾಸಕರೊಬ್ಬರು ನೆನಪಿಸಿಕೊಳ್ಳುತ್ತಾರೆ.

ದೇವರಾಜ ಅರಸು ಅವರ ಕಾಲದಲ್ಲಿ ವರುಣಾ ನಾಲೆಯ ವಿಷಯ ಚುನಾವಣೆಯ ವಿಷಯವಾಗಿತ್ತೇ ವಿನಾ ಕಾವೇರಿ ನೀರು ಹಂಚಿಕೆ ಯಾವ ಚುನಾವಣೆಯಲ್ಲಿಯೂ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳಲಿಲ್ಲ ಎಂದು ಹೋರಾಟಗಾರ ಡಾ. ವಾಸು ಹೇಳುತ್ತಾರೆ.

ಕಾವೇರಿ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಹೋರಾಟ ನಡೆಸಿದ್ದಾರೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಯಾವುದೇ ರಾಜಕೀಯ ಮುಖಂಡರು ಇದನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಸಂಕಷ್ಟ ಬಂದಾಗಲೆಲ್ಲಾ ಎಲ್ಲರೂ ಒಂದಾಗಿಯೇ ಹೋರಾಟ ನಡೆಸಿದ್ದಾರೆ. ಕೆಲವು ತಪ್ಪುಗಳು ಆಗಿರಬಹುದು. ಆದರೆ ಅದಕ್ಕೆ ರಾಜಕೀಯ ಕಾರಣಗಳು ಇಲ್ಲ ಎಂದು ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಡುತ್ತಾರೆ.

ಕಾವೇರಿ ದಕ್ಷಿಣ ಕರ್ನಾಟಕದ ಜೀವನದಿ. ಇಲ್ಲಿನ ಜನಜೀವನದ ಮೇಲೆ ಸಾಕಷ್ಟು ಪ್ರಭಾವವನ್ನು ಹೊಂದಿದೆ. ಇಲ್ಲಿನ ಆರ್ಥಿಕ ಪರಿಸ್ಥಿತಿಯೂ ಈ ನದಿಯನ್ನೇ ಅವಲಂಬಿಸಿದೆ. ಆದರೂ ಜನರು ಇದನ್ನೊಂದು ರಾಜಕೀಯ ವಿಷಯವನ್ನಾಗಿ ಮಾಡಿಕೊಂಡಿಲ್ಲ. ಇಲ್ಲಿ ಅರ್ಥವಾಗದ ವಿಷಯವೊಂದಿದೆ. ಕಾವೇರಿ ನದಿ ನೀರಿನ ಹಂಚಿಕೆ ಮಾತ್ರ ವಿವಾದವಾಗಿದೆ. ನಮ್ಮ ಪಾಲಿಗೆ ಬಂದ ನೀರನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎನ್ನುವುದು ವಿವಾದದ ವಿಷಯವೇ ಅಲ್ಲ. ಕೆರೆಕಟ್ಟೆಗಳನ್ನು ತುಂಬುವುದರ ಬಗ್ಗೆ ಯಾರ ತಕರಾರೂ ಇಲ್ಲ. ಆದರೂ ಅದು ಚುನಾವಣೆಯ ವಿಷಯವಾಗುವುದಿಲ್ಲ. ಅದೇ ಕಾವೇರಿ ಕಣಿವೆಯ ವ್ಯಥೆ.

ಕಾವೇರಿ ವ್ಯಾಪ್ತಿಯ ಜಿಲ್ಲೆಗಳು

1.ಕೊಡಗು, 2.ಮೈಸೂರು, 3.ಮಂಡ್ಯ, 4.ಚಾಮರಾಜನಗರ, 5.ಹಾಸನ, 6.ಬೆಂಗಳೂರು ಗ್ರಾಮಾಂತರ, 7.ರಾಮನಗರ, 8.ಬೆಂಗಳೂರು ನಗರ

ಕಾವೇರಿ ಕಣಿವೆಯ ಪಕ್ಷಗಳ ಬಲಾಬಲ

ಕೊಡಗು: ಒಟ್ಟು ಸ್ಥಾನ–2

ಬಿಜೆಪಿ–2

ಬೆಂಗಳೂರು ನಗರ: ಒಟ್ಟು ಸ್ಥಾನ 28

ಕಾಂಗ್ರೆಸ್–13

ಬಿಜೆಪಿ–12

ಜೆಡಿಎಸ್–3ಬೆಂಗಳೂರು ಗ್ರಾಮಾಂತರ: ಒಟ್ಟು ಸ್ಥಾನ 4

ಕಾಂಗ್ರೆಸ್ –2

ಜೆಡಿಎಸ್–2


ರಾಮನಗರ: ಒಟ್ಟು ಸ್ಥಾನ 4

ಕಾಂಗ್ರೆಸ್–1

ಜೆಡಿಎಸ್–2

ಇತರೆ–1ಮಂಡ್ಯ: ಒಟ್ಟು ಸ್ಥಾನ 7

ಕಾಂಗ್ರೆಸ್ –2

ಜೆಡಿಎಸ್–4

ಇತರೆ–1


ಹಾಸನ ಒಟ್ಟು ಸ್ಥಾನ 7

ಕಾಂಗ್ರೆಸ್ –2

ಜೆಡಿಎಸ್–5ಮೈಸೂರು ಒಟ್ಟು ಸ್ಥಾನ 11

ಕಾಂಗ್ರೆಸ್ –8

ಜೆಡಿಎಸ್–3

ಚಾಮರಾಜನಗರ ಒಟ್ಟು ಸ್ಥಾನ 4

ಕಾಂಗ್ರೆಸ್–4

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry