ಕಾವೇರಿ ನಿರ್ವಹಣಾ ಮಂಡಳಿ ರಚಿಸಿದರೆ ಸಂಕಷ್ಟ

7
ಶೀಘ್ರ ಕೇಂದ್ರ ಸಚಿವ ಗಡ್ಕರಿ ಭೇಟಿ: ದೇವೇಗೌಡ

ಕಾವೇರಿ ನಿರ್ವಹಣಾ ಮಂಡಳಿ ರಚಿಸಿದರೆ ಸಂಕಷ್ಟ

Published:
Updated:
ಕಾವೇರಿ ನಿರ್ವಹಣಾ ಮಂಡಳಿ ರಚಿಸಿದರೆ ಸಂಕಷ್ಟ

ಹಾಸನ: ಸುಪ್ರೀಂ ಕೋರ್ಟ್‌ ಆದೇಶದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಿದರೆ ರಾಜ್ಯಕ್ಕೆ ಮತ್ತಷ್ಟು ತೊಂದರೆ ಆಗಲಿದೆ. ಈ ವಿಚಾರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಎಚ್ಚರಿಕೆಯಿಂದ ನಿಭಾಯಿಸಬೇಕು ಎಂದು ಸಂಸದ ಎಚ್.ಡಿ.ದೇವೇಗೌಡ ಶುಕ್ರವಾರ ಸಲಹೆ ಮಾಡಿದರು.

ಹೇಮಾವತಿ ಜಲಾಶಯಕ್ಕೆ ಭೇಟಿ ನೀಡಿ, ನೀರಿನ ಲಭ್ಯತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ನಂತರ ಮಾತನಾಡಿದರು. ‘ಆರು ವಾರದೊಳಗೆ ಮಂಡಳಿ ರಚಿಸುವಂತೆ ತೀರ್ಪು ನೀಡಿದೆ. ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಮಾರ್ಚ್‌ 5 ಅಥವಾ 6ರಂದು ದೆಹಲಿಯಲ್ಲಿ ಭೇಟಿ ಮಾಡುತ್ತೇನೆ. ಅಗತ್ಯ ಬಿದ್ದರೆ ಪ್ರಧಾನಿ ಭೇಟಿ ಮಾಡಿ ವಸ್ತುಸ್ಥಿತಿ ಮನವರಿಕೆ ಮಾಡಲಾಗುವುದು’ ಎಂದರು.

‘ಯಾರ ಮೇಲೂ ದೋಷ ಹೊರಿಸುವುದಿಲ್ಲ. ಆದರೆ, ರಾಜ್ಯಕ್ಕೆ ಬಿದ್ದಿರುವ ಪೆಟ್ಟು ಸರಿದೂಗಿಸಲು ಒಗ್ಗಟ್ಟಾಗುವುದು ಅನಿವಾರ್ಯವಾಗಿದೆ. ರಾಜ್ಯ ಸರ್ಕಾರವೂ ಕೇಂದ್ರದ ಜೊತೆ ಸಹಕರಿಸಬೇಕು. ತೀರ್ಪನ್ನು ಪೂರ್ಣ ಅಧ್ಯಯನ ಮಾಡದೆ ರಾಜ್ಯ ಸರ್ಕಾರ ಸಿಹಿ ಹಂಚಿದೆ. ರಾಜಕೀಯವಾಗಿ ಏನೇ ತಿಕ್ಕಾಟ ಬೇಕಾದರೂ ಮಾಡಿಕೊಳ್ಳಲಿ. ಕಾವೇರಿ ವಿಷಯ ಬಂದಾಗ ರಾಜಕೀಯ ನಾಯಕರು ಹೇಗಿರಬೇಕು ಎಂಬುದನ್ನು ತಮಿಳುನಾಡು ನೋಡಿ ಕಲಿಯಬೇಕು’ ಎಂದು ಹೇಳಿದರು.

‘ಸದ್ಯಕ್ಕೆ ನೀರು ನಿರ್ವಹಣಾ ಮಂಡಳಿ ರಚನೆ ಕಷ್ಟ ಸಾಧ್ಯ ಎಂಬ ಗಡ್ಕರಿ ಹೇಳಿಕೆ ರಾಜ್ಯಕ್ಕೆ ತರಾತುರಿಯಾಗಿ ಬೀಳುತ್ತಿದ್ದ ಪೆಟ್ಟನ್ನು ತುಸು ಸಮಯ ಮುಂದೂಡಿದೆ. ರಾಜ್ಯದ ಉಳಿವಿಗಾಗಿ ಯಾರೇ ಆಗಲಿ ಕರುಣೆ ತೋರಿದರೆ ಅಂಥವರೊಂದಿಗೆ ಹೆಜ್ಜೆ ಹಾಕುವೆ’ ಎಂದು ನುಡಿದರು.

‘ಇದೇ ರೀತಿ ಕಾವೇರಿ ಕೊಳ್ಳದ ಕಬಿನಿ, ಹಾರಂಗಿ, ಕೆಆರ್‌ಎಸ್‌ ಜಲಾಶಯಗಳಿಗೂ ಭೇಟಿ ನೀಡಿ, ನೀರಿನ ಲಭ್ಯತೆ ಬಗ್ಗೆ ಅಂಕಿ– ಅಂಶ ಪಡೆದು ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ಮಾಡುತ್ತೇನೆ’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry