ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಗೊಂಡಿದ್ದ ಹೆಣ್ಣಾನೆಗೆ ಚಿಕಿತ್ಸೆ

ಸಕ್ರೆಬೈಲ್ ವನ್ಯಜೀವಿ ಧಾಮಕ್ಕೆ ಕಳುಹಿಸಲು ಸಿದ್ಧತೆ
Last Updated 2 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಶಿರಸಿ: ಗುಂಪಿನಿಂದ ಬೇರೆಯಾಗಿ, ಗಾಯಗೊಂಡಿದ್ದ ಹೆಣ್ಣು ಆನೆಯೊಂದಕ್ಕೆ ಅಗತ್ಯ ಆರೈಕೆ ಮಾಡಿ, ಹೆಚ್ಚಿನ ಚಿಕಿತ್ಸೆಗೆ ಸಕ್ರೆಬೈಲ್ ವನ್ಯಜೀವಿಧಾಮಕ್ಕೆ ಕಳುಹಿಸಲು ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಆನೆ, ತಾಲ್ಲೂಕಿನ ಉಲ್ಲಾಳದಲ್ಲಿ ಎರಡು ದಿನಗಳ ಹಿಂದೆ ಕಾಣಿಸಿಕೊಂಡಿತ್ತು. ದೃಷ್ಟಿ ಮಂದವಾಗಿದ್ದ ಅದು ನಡೆದಾಡಲಾಗದಂಥ ಸ್ಥಿತಿಯಲ್ಲಿತ್ತು. ಅಲ್ಲದೆ ಮೈಮೇಲೆ ಗಾಯ ಕೂಡ ಆಗಿತ್ತು. ಸ್ಥಳೀಯರು ಕಾಳಜಿ ತೋರಿ, ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಆರೈಕೆ ಮಾಡಿದ್ದರು. ಶುಕ್ರವಾರ ಬೆಳಿಗ್ಗೆ ತಾಲ್ಲೂಕಿಗೆ ಬಂದಿದ್ದ ವನ್ಯಜೀವಿ ವೈದ್ಯರು ಚಿಕಿತ್ಸೆ ನೀಡಿದರು.

ಶಿವಮೊಗ್ಗದ ವನ್ಯಜೀವಿ ವೈದ್ಯ ಡಾ. ವಿನಯ್, ಆನೆಗೆ ಅಗತ್ಯವಿರುವ ಪ್ರಾಥಮಿಕ ಔಷಧ ನೀಡಿ ಆರೋಗ್ಯ ಸುಧಾರಣೆಗೆ ತುರ್ತು ಕ್ರಮ ಕೈಗೊಂಡರು. ‘ಸ್ಥಳೀಯವಾಗಿ ವೈದ್ಯರು ಲಭ್ಯರಿಲ್ಲದ ಕಾರಣ, ಒಂದು ದಿನ ಕಾದು ವನ್ಯಜೀವಿ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಲಾಗಿದೆ. ಆನೆಯನ್ನು ಹಸ್ತಾಂತರಿಸಲು ಪಿ.ಸಿ.ಸಿ.ಎಫ್ ಪರವಾನಗಿಯ ಅಗತ್ಯವಿದೆ. ಅನುಮತಿ ಸಿಗುತ್ತಲೇ ಹಸ್ತಾಂತರಿಸಲಾಗುವುದು’ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

‘ಅಂದಾಜು 10 ವರ್ಷದ ಹೆಣ್ಣು ಆನೆಯಾಗಿದ್ದು, ಮೊದಲ ಬಾರಿಗೆ ಸಂತಾನ ಕ್ರಿಯೆ ನಡೆಸುವಾಗ ಗಂಡು ಆನೆಯ ಜೊತೆ ಕಾಳಗವಾಗಿ ಗುಂಪಿನಿಂದ ಬೇರ್ಪಟ್ಟಿರುವ ಸಾಧ್ಯತೆ ಇದೆ. ಕಾಳಗದ ಸಂದರ್ಭದಲ್ಲಿ ಗಂಡು ಆನೆಯ ದಂತ ತಾಗಿ, ಅದರ ಮೈಮೇಲೆ ವಿವಿಧೆಡೆ ಗಾಯವಾಗಿದೆ. ಇದರ ಜೊತೆಗೆ ಕಣ್ಣಿಗೆ ಪೆಟ್ಟು ಬಿದ್ದ ಕಾರಣ ದೃಷ್ಟಿ ಮಂದವಾಗಿದೆ. ಅಲ್ಲದೇ ಗಂಟಲಿನ ಭಾಗಕ್ಕೆ ಹೊಡೆತ ಬಿದ್ದಿರುವ ಕಾರಣ ಆಹಾರ ತಿನ್ನಲಾಗದೇ, ಮೂರ್ನಾಲ್ಕು ದಿನಗಳಿಂದ ನೀರು ಕುಡಿಯುವುದನ್ನು ಬಿಟ್ಟಿರಬಹುದು. ನಂತರದ ದಿನಗಳಲ್ಲಿ ಆರೋಗ್ಯ ಕ್ಷೀಣವಾಗಿ, ಎಲ್ಲಿಗೂ ಹೋಗಲಾರದೇ, ಕಾಡಿನ ಅಂಚಿನ ಜನವಸತಿ ಪ್ರದೇಶದಲ್ಲಿ ಅಲೆದಾಡುತ್ತಿರಬಹುದು’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ.

‘ಆನೆಯ ಆರೋಗ್ಯ ಚೇತರಿಕೆಗೆ ಸಂಬಂಧಿಸಿ, ಈಗಲೇ ಹೇಳಲು ಸಾಧ್ಯವಿಲ್ಲ. 10 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಬಾಯಿಯಿಂದ ದುರ್ವಾಸನೆ ಬರುತ್ತಿದೆ. ಕಣ್ಣು ಸಂಪೂರ್ಣ ಕುರುಡಾಗಿದೆ’ ಎಂದು ಡಾ. ವಿನಯ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT