7

ಬಜೆಟ್‌ನಲ್ಲಿ ಪ್ರಕಟಿಸಿದಂತೆ ಎರಡೇ ದಿನಕ್ಕೆ ಟ್ಯಾಬ್‌ ವಿತರಣೆ

Published:
Updated:
ಬಜೆಟ್‌ನಲ್ಲಿ ಪ್ರಕಟಿಸಿದಂತೆ ಎರಡೇ ದಿನಕ್ಕೆ ಟ್ಯಾಬ್‌ ವಿತರಣೆ

ಬೆಂಗಳೂರು: ಬಿಬಿಎಂಪಿ ನಡಾವಳಿ, ಸುತ್ತೋಲೆ ಸೇರಿದಂತೆ ಕಚೇರಿಗೆ ಸಂಬಂಧಿಸಿದ ಮಾಹಿತಿಯನ್ನು ಇ–ಮೇಲ್‌ ಮೂಲಕ ಕಳುಹಿಸುವ ಉದ್ದೇಶ ದಿಂದ ಎಲ್ಲ ಸದಸ್ಯರಿಗೆ ಟ್ಯಾಬ್‌ಗಳನ್ನು ನೀಡುವುದಾಗಿ 2018–19ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ ಎರಡೇ ದಿನಕ್ಕೆ ಅವುಗಳನ್ನು ವಿತರಿಸಲಾಯಿತು.

ಕೌನ್ಸಿಲ್‌ ಸಭೆಯಲ್ಲಿ ಶುಕ್ರವಾರ ಬಜೆಟ್‌ ಮೇಲಿನ ಚರ್ಚೆ ನಡೆಯಿತು. ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳ ಬಗ್ಗೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಮಾತನಾಡಿದರು. ಮಧ್ಯಾಹ್ನದ ವೇಳೆಗೆ, ಆ್ಯಪಲ್‌ ಕಂಪನಿಯ ಐಪಾಡ್‌ಗಳಿದ್ದ ಬಾಕ್ಸ್‌ಗಳನ್ನು ತಂದು, ಸಾಂಕೇತಿಕವಾಗಿ ಮೇಯರ್‌ ಹಾಗೂ ಉಪಮೇಯರ್‌ಗೆ ವಿತರಿಸಲಾಯಿತು.

ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳ ಕುರಿತು ಕೌನ್ಸಿಲ್‌ ಸಭೆಯಲ್ಲಿ ಚರ್ಚಿಸಿದ ಬಳಿಕ, ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗುತ್ತದೆ. ಆನಂತರವಷ್ಟೇ ಟೆಂಡರ್‌ ಕರೆದು ಕಾರ್ಯಾದೇಶ ನೀಡಲಾಗುತ್ತದೆ. ಆದರೆ, ನಿಯಮಗಳನ್ನು ಗಾಳಿಗೆ ತೂರಿ ಟ್ಯಾಬ್‌ಗಳನ್ನು ವಿತರಿಸಲಾಗಿದೆ ಎಂದು ಬಿಜೆಪಿ ಸದಸ್ಯರು ದೂರಿದರು.

ಈ ಕುರಿತು ವಿವರಿಸಿದ ಎಂ.ಶಿವರಾಜು, ‘2017–18ನೇ ಸಾಲಿನಲ್ಲಿ ಐಟಿ ವಿಭಾಗಕ್ಕೆ ₹4 ಕೋಟಿ ಅನುದಾನ ನೀಡಲಾಗಿತ್ತು. ಅದರಲ್ಲಿ ಉಳಿದಿದ್ದ ಅನುದಾನದಲ್ಲಿ 225 ಐಪಾಡ್‌ಗಳನ್ನು ಖರೀದಿಸಲಾಗಿದೆ. ಪ್ರತಿ ಐಪಾಡ್‌ನ ಮೂಲ ಬೆಲೆ ₹38,600. ಪೌಚ್‌ಗೆ ₹2,000. ತಂತ್ರಾಂಶ ಅಳವಡಿಸಲು ಮತ್ತು ತರಬೇತಿ ನೀಡುವುದು ಸೇರಿದಂತೆ ಪ್ರತಿ ಐಪಾಡ್‌ಗೆ ಒಟ್ಟು ₹44,000 ಆಗುತ್ತದೆ’ ಎಂದು ವಿವರಿಸಿದರು.

ಆಡಳಿತ ಸುಧಾರಣೆ ತರಲು ಹಾಗೂ ಕಾಗದಮುಕ್ತ ಆಡಳಿತಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಅಂಗ ಸಂಸ್ಥೆ ಕಿಯೋನಿಕ್ಸ್‌ ಮೂಲಕವೇ ಖರೀದಿಸಲಾಗಿದೆ. ಇದಕ್ಕೆ 4ಜಿ ವಿನಾಯಿತಿ ನೀಡಲಾಗಿದೆ ಎಂದರು.‌

‘ಎಲ್ಲ ಸದಸ್ಯರ ಬಳಿ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್‌ಗಳಿವೆ. ಆದರೂ ಟ್ಯಾಬ್‌ ವಿತರಿಸುವ ಅಗತ್ಯವಿರಲಿಲ್ಲ. ಇವುಗಳ ಖರೀದಿ ಕಾನೂನುಬಾಹಿರ. ಹೀಗಾಗಿ, ನಾನು ಟ್ಯಾಬ್‌ ತೆಗೆದುಕೊಳ್ಳುವುದಿಲ್ಲ. ಬಿಜೆಪಿಯ ಉಳಿದ ಸದಸ್ಯರು ಟ್ಯಾಬ್‌ಗಳನ್ನು ತೆಗೆದುಕೊಳ್ಳುತ್ತಾರೋ ಇಲ್ಲವೋ ಎಂಬುದರ ಕುರಿತು ಅವರೊಂದಿಗೆ ಚರ್ಚಿಸಿದ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ತಿಳಿಸಿದರು.

‘ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ, ಕಲ್ಯಾಣ ಕಾರ್ಯಕ್ರಮಗಳಡಿ ಹೊಲಿಗೆ ಯಂತ್ರ, ಇಸ್ತ್ರಿಪೆಟ್ಟಿಗೆ, ಸೈಕಲ್‌, ತ್ರಿಚಕ್ರ ವಾಹನ ವಿತರಣೆ ಮಾಡುವಲ್ಲಿ ಪಾಲಿಕೆ ವಿಫಲವಾಗಿದೆ. ಬಡವರ ಕಾರ್ಯಕ್ರಮ ನಿಗದಿತ ಅವಧಿಯಲ್ಲಿ ಅನುಷ್ಠಾನಕ್ಕೆ ತರುವುದಿಲ್ಲ. ಆದರೆ, ಟ್ಯಾಬ್‌ಗಳನ್ನು ತರಾತುರಿಯಲ್ಲಿ ನೀಡಲಾಗಿದೆ. ಈ ಆತುರ, ಜನರ ಕೆಲಸ ಮಾಡುವಾಗ ಇರುವುದಿಲ್ಲ‌ವೇಕೇ’ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿಯ ಸದಸ್ಯರೊಬ್ಬರು ಪ್ರಶ್ನಿಸಿದರು.

‘₹12,346 ಕೋಟಿ ಆದಾಯ’

ಎಂ.ಮಹಾದೇವ ಮಂಡಿಸಿದ ಬಜೆಟ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾವುದೇ ಹೊರೆ ಇಲ್ಲದ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದ ಬಜೆಟ್‌ ಎಂದು ಎಂ.ಶಿವರಾಜು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಪನ್ಮೂಲ ಕ್ರೋಡೀಕರಣದಲ್ಲಿ ಸುಧಾರಣೆ ಆಗಿದೆ. 2008ರಿಂದ 2013ರವರೆಗೆ ಪಾಲಿಕೆಯ ಆದಾಯ ₹6,702 ಕೋಟಿ ಇತ್ತು. ಆದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಈವರೆಗೆ ₹12,346 ಕೋಟಿ ವರಮಾನ ಬಂದಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಪಾಲಿಕೆಗೆ ₹4,254 ಕೋಟಿ ನೀಡಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರವು ₹12,551 ಕೋಟಿ ನೀಡಿದೆ. ₹7,300 ಕೋಟಿ ಅನುದಾನಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಆಗಿದ್ದು, ಜಾಬ್‌ ಕೋಡ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

2017–18ನೇ ಸಾಲಿನಲ್ಲಿ ಈವರೆಗೆ ₹2,100 ಆಸ್ತಿ ತೆರಿಗೆ ಸಂಗ್ರಹಗೊಂಡಿದೆ. ಸುಮಾರು 19 ಲಕ್ಷ ಆಸ್ತಿಗಳನ್ನು ಗುರುತಿಸಲಾಗಿದೆ. ಉಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗುತ್ತದೆ. ಮಾಲ್‌, ಟೆಕ್‌ ಪಾರ್ಕ್‌, ಬೃಹತ್‌ ಕಟ್ಟಡಗಳನ್ನು ಟೋಟಲ್‌ ಸ್ಟೇಷನ್‌ ಸರ್ವೆ ಮಾಡಲಾಗುತ್ತದೆ. ಇದನ್ನು ಸರಿಯಾಗಿ ಜಾರಿಗೆ ತಂದರೆ ಈ ವರ್ಷದ ಆಸ್ತಿ ತೆರಿಗೆಯಲ್ಲಿ ₹500 ಕೋಟಿ ಹೆಚ್ಚಾಗಲಿದೆ ಎಂದರು.

ಸಭೆಯಲ್ಲಿ ಕೇಳಿಬಂದ ಒತ್ತಾಯಗಳು

* ಕೈಗಾರಿಕಾ ಶೆಡ್‌ಗಳಲ್ಲಿ ಕಡ್ಡಾಯವಾಗಿ ಕಸ ಸಂಸ್ಕರಣೆ ಮಾಡಲು ಕ್ರಮ ಕೈಗೊಳ್ಳಬೇಕು.

* ಪ್ಲಾಸ್ಟಿಕ್‌ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು.

* ಚರಂಡಿಗಳಲ್ಲಿ ಕಡ್ಡಾಯವಾಗಿ ಇಂಗುಗುಂಡಿಗಳನ್ನು ನಿರ್ಮಿಸಬೇಕು.

* ಪಾಲಿಕೆಯ ಶಾಲೆಗಳ ದಾಖಲೆಗಳನ್ನು ಭದ್ರಪಡಿಸಿಕೊಳ್ಳಬೇಕು. ಒತ್ತುವರಿ ತಡೆಗಟ್ಟಬೇಕು.

* ಪಾಲಿಕೆಯ ಶಾಲಾ–ಕಾಲೇಜುಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ, ಕ್ರೀಡೆಗೆ ಉತ್ತೇಜನ ನೀಡಬೇಕು.

* ಸಹಜ ಹಾಗೂ ಶಸ್ತ್ರಚಿಕಿತ್ಸೆ ಹೆರಿಗೆ ಎಂಬ ಭೇದವಿಲ್ಲದೆ ಎಲ್ಲ ಹೆಣ್ಣು ಮಕ್ಕಳಿಗೂ ಪಿಂಕ್‌ ಬೇಬಿ ಯೋಜನೆಯಡಿ ₹5 ಲಕ್ಷ ನೀಡಬೇಕು.

* ಶವ ಸಾಗಿಸುವ ಫ್ರೀಜರ್‌ಸಹಿತ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಬೇಕು.

ಮೇಯರ್‌ ಭರವಸೆಗಳು‌

* ಮಹಿಳೆಯರ ವಾರ್ಡ್‌ಗಳಿಗೆ ನೀಡುತ್ತಿರುವ ಅನುದಾನ ಹೆಚ್ಚಳ

* ಪಾಲಿಕೆಯ ಹಿರಿಯ ಸದಸ್ಯರ ಹೆಸರನ್ನು ಯಾವುದಾದರೂ ರಸ್ತೆಗೆ ಇಡಲು ಚಿಂತನೆ.

* ಪ್ರತಿ ವಾರ್ಡ್‌ಗೆ ಒಂದು ಶವಸಾಗಿಸುವ ಫ್ರೀಜರ್‌ಸಹಿತ ವಾಹನ ಖರೀದಿಗೆ ಕ್ರಮ

* ಸೀಗೆಹಳ್ಳಿ ಹಾಗೂ ಕನ್ನಹಳ್ಳಿಯ ಕಸ ಸಂಸ್ಕರಣಾ ಘಟಕಗಳಲ್ಲಿ ವಿದ್ಯುತ್‌ ತಯಾರಿಸಲು ₹100 ಕೋಟಿ ಮೀಸಲು

* ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಾಗರಿಕರಿಗಾಗಿ ವಿಶ್ರಾಂತಿ ಕೊಠಡಿ ನಿರ್ಮಾಣ

ಅಂಕಿ–ಅಂಶ

17.54 ಲಕ್ಷ - ಒಟ್ಟು ಆಸ್ತಿ ತೆರಿಗೆ ಪಾವತಿಸಿರುವವರು

8.51 ಲಕ್ಷ -ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಕಟ್ಟಿದವರು

9.02 ಲಕ್ಷ -ಚಲನ್‌ ಮೂಲಕ ಆಸ್ತಿ ತೆರಿಗೆ ಕಟ್ಟಿದವರು

 5,200 -ಪ್ರತಿದಿನ ಸರಾಸರಿ ಆಸ್ತಿ ತೆರಿಗೆ ಕಟ್ಟುತ್ತಿರುವವರು

 

ಪ್ರತಿ ವಲಯದಿಂದ ಇಬ್ಬರು ಮಹಿಳಾ ಪೌರ ಕಾರ್ಮಿಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.

- ಆರ್‌.ಸಂಪತ್‌ ರಾಜ್‌, ಮೇಯರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry