ಛತ್ತೀಸಗಡ: 12 ನಕ್ಸಲರ ಹತ್ಯೆ

ಮಂಗಳವಾರ, ಮಾರ್ಚ್ 26, 2019
29 °C

ಛತ್ತೀಸಗಡ: 12 ನಕ್ಸಲರ ಹತ್ಯೆ

Published:
Updated:
ಛತ್ತೀಸಗಡ: 12 ನಕ್ಸಲರ ಹತ್ಯೆ

ಹೈದರಾಬಾದ್: ತೆಲಂಗಾಣ ನಕ್ಸಲ್ ನಿಗ್ರಹ ಪಡೆಯ ಗ್ರೇಹೌಂಡ್ಸ್‌ ಸಿಬ್ಬಂದಿ ಮತ್ತು ಛತ್ತೀಸಗಡ ಪೊಲೀಸರು, ಎರಡೂ ರಾಜ್ಯಗಳ ಗಡಿ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ 12 ನಕ್ಸಲರು ಹತರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಗ್ರೇಹೌಂಡ್ಸ್‌ ದಳದ ಕಾನ್‌ಸ್ಟೆಬಲ್ ಸುಶೀಲ್‌ಕುಮಾರ ವಿಲ್ಸನ್ (32) ಮೃತಪಟ್ಟಿದ್ದು, ಇನ್ನೂ ಇಬ್ಬರು ಗಾಯಗೊಂಡಿದ್ದಾರೆ. ವಿಲ್ಸನ್‌ ಬೀದರ್‌ನ ಗ್ರೇಸ್‌ ಕಾಲನಿಯ ನಿವಾಸಿ.

‘ಕಾರ್ಯಾಚರಣೆಯಲ್ಲಿ ನಕ್ಸಲ್ ಮುಖಂಡ ಯಾಪ ನಾರಾಯಣ ಅಲಿಯಾಸ್ ಹರಿಭೂಷಣ್ ಅಲಿಯಾಸ್ ಜಗನ್ ಮತ್ತು ಆತನ ಪತ್ನಿ ಸಾಮಕ್ಕ ಮೃತಪಟ್ಟಿದ್ದಾರೆ. ಮೃತ ನಕ್ಸಲರಲ್ಲಿ ಆರು ಮಹಿಳೆಯರೂ ಇದ್ದಾರೆ. ಇನ್ನೂ ಹತ್ತು ಜನರ ಗುರುತು ಪತ್ತೆಮಾಡಬೇಕಿದೆ’ ಎಂದು ತೆಲಂಗಾಣದ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಬರ್ ಕಿಶೋರ್ ಜಾ ಮಾಹಿತಿ ನೀಡಿದ್ದಾರೆ.

‘ಛತ್ತೀಸಗಡದ ಪುಜರಿಕಂಕರ್ ಅರಣ್ಯ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಸುಮಾರು 70 ನಕ್ಸಲರು ಬೀಡು ಬಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಿತ್ತು. ಆ ಮಾಹಿತಿಯ ಆಧಾರದಲ್ಲಿ ಛತ್ತೀಸಗಡ ಪೊಲೀಸರ ಜತೆಗೂಡಿ ಜಂಟಿ ಕಾರ್ಯಾಚರಣೆ ನಡೆಸಿದೆವು’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ನಕ್ಸಲರು ನಡೆಸಿದ ಗುಂಡಿನ ದಾಳಿಗೆ ಕಮಾಂಡೊಗಳು ಪ್ರತಿದಾಳಿ ನಡೆಸಿದರು. ಆಗ 12 ನಕ್ಸಲರು ಮೃತಪಟ್ಟರು. ದಾಳಿಯಲ್ಲಿ ಗಾಯಗೊಂಡಿದ್ದ ಕಮಾಂಡೊಗಳನ್ನು ಹೆಲಿಕಾಪ್ಟರ್‌ ಮೂಲಕ ಭದ್ರಾಚಲಂಗೆ ಕರೆತರಲಾಯಿತು. ನಕ್ಸಲರ ಮೃತದೇಹಗಳನ್ನೂ ಹೆಲಿಕಾಪ್ಟರ್‌ ಮೂಲಕ ಭದ್ರಾಚಲಂಗೆ ತರಲಾಗಿದೆ. ಘಟನಾ ಸ್ಥಳದಿಂದ ತಪ್ಪಿಸಿಕೊಂಡಿರುವ ನಕ್ಸಲರಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

‘ಈ ಅರಣ್ಯ ಪ್ರದೇಶ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಈ ಹಿಂದೆ ಹಲವು ನೆಲಬಾಂಬ್‌ಗಳು ಪತ್ತೆಯಾಗಿದ್ದವು. ಹೀಗಾಗಿ ಈ ಸ್ಥಳದ ಮೇಲೆ ಪೊಲೀಸರು ನಿಗಾ ಇರಿಸಿದ್ದರು’ ಎಂದು ಮೂಲಗಳು ಹೇಳಿವೆ.

ಬೀದರ್‌ನ ಕಾನ್‌ಸ್ಟೆಬಲ್‌ ಬಲಿ

(ಸುಶೀಲ್‌ಕುಮಾರ್ ವಿಲ್ಸನ್)

ಬೀದರ್‌: ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ತೆಲಂಗಾಣದ ಗ್ರೇಹೌಂಡ್ಸ್‌ನ ಕಾನ್‌ಸ್ಟೆಬಲ್‌, ಬೀದರ್‌ನ ಗ್ರೇಸ್‌ಕಾಲೊನಿಯ ಸುಶೀಲ್‌ಕುಮಾರ ವಿಲ್ಸನ್ (32) ನಕ್ಸಲರ ಗುಂಡಿಗೆ ಬಲಿಯಾಗಿದ್ದಾರೆ.

ಸುಶೀಲ್‌ಕುಮಾರ ಅವರ ಹೊಟ್ಟೆಯ ಎಡಭಾಗಕ್ಕೆ ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೆಲಂಗಾಣದ ಇನ್ನಿಬ್ಬರು ಪೊಲೀಸರು ಗಾಯಗೊಂಡಿದ್ದಾರೆ.

ಸುಶೀಲ್‌ಕುಮಾರ ಅವರು ತೆಲಂಗಾಣದ ಜಹೀರಾಬಾದ್‌ ಸಮೀಪದ ಪಟಪಳ್ಳಿಯ ಅಜ್ಜಿಯ ಮನೆಯಲ್ಲಿ ಬೆಳೆದು ಅಲ್ಲಿಯೇ ಶಿಕ್ಷಣ ಪಡೆದು 2004ರಲ್ಲಿ ತೆಲಂಗಾಣದ ಚಂದಾನಗರ ಪೊಲೀಸ್ ಠಾಣೆಗೆ ಕಾನ್‌ಸ್ಟೆಬಲ್ ಆಗಿ ನಿಯುಕ್ತರಾಗಿದ್ದರು. 2008ರಲ್ಲಿ ನಕ್ಸಲ್ ನಿಗ್ರಹ ಪಡೆ ಗ್ರೇಹೌಂಡ್ಸ್‌ಗೆ ನಿಯೋಜನೆಗೊಂಡಿದ್ದರು.

ಮೃತರಿಗೆ ಪತ್ನಿ ಇದ್ದಾರೆ. ಮೂರು ವರ್ಷದ ಹೆಣ್ಣು ಮಗು ಇದೆ. ತಂದೆ ತಾಯಿ ಗ್ರೇಸ್‌ಕಾಲೊನಿಯಲ್ಲಿ ವಾಸವಾಗಿರುವ ಕಾರಣ ಅವರ ಮೃತದೇಹವನ್ನು ಬೀದರ್‌ಗೆ ತರಲಾಗುತ್ತಿದೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ಮಂಗಲಪೇಟೆಯ ಸ್ಮಶಾನದದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಬೀದರ್‌ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry