ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರವಾದಿ ಹತ್ಯೆ ಕುರಿತು ಸಂಭಾಷಣೆ!

Last Updated 2 ಮಾರ್ಚ್ 2018, 19:33 IST
ಅಕ್ಷರ ಗಾತ್ರ

ಬೆಂಗಳೂರು: ಮದ್ದೂರಿನ ‘ಹಿಂದೂ ಯುವಸೇನೆ’ ಮುಖಂಡ ಕೆ.ಟಿ.ನವೀನ್‌ ಕುಮಾರ್, ಬಲಪಂಥೀಯ ವಿರೋಧಿ ವಿಚಾರವಾದಿಯೊಬ್ಬರ ಕೊಲೆಗೆ ಸಂಚು ರೂಪಿಸಿದ್ದ ಎಂಬ ಸಂಗತಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಗೌರಿ ಹಂತಕರ ಪತ್ತೆ ಕಾರ್ಯದಲ್ಲಿ ತೊಡಗಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು, ಅನುಮಾನದ ಮೇಲೆ ಕೆಲ ಸಂಘಟನೆಗಳ ಮುಖಂಡರ ಹಾಗೂ ಕಾರ್ಯಕರ್ತರ ಮೊಬೈಲ್ ಸಂಭಾಷಣೆಯನ್ನು ಆಲಿಸುತ್ತಿದ್ದರು.

ಇದೇ ಜನವರಿಯಲ್ಲಿ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನ ನಾಲ್ವರು ಯುವಕರಿಗೆ ಕರೆ ಮಾಡಿದ್ದ ನವೀನ್, ‘ಬಲಪಂಥೀಯ ವಿರೋಧಿ ವಿಚಾರವಾದಿಯೊಬ್ಬರನ್ನು ಹೊಡೆಯಬೇಕು’ ಎಂದಿದ್ದ. ಇದೇ ವಿಚಾರವಾಗಿ 1 ತಾಸಿಗೂ ಹೆಚ್ಚು ಸಂಭಾಷಣೆ ನಡೆಸಿದ್ದರು. ಅದನ್ನು ಕೇಳಿದ ಕೂಡಲೇ ಕಾರ್ಯಾಚರಣೆ ಪ್ರಾರಂಭಿಸಿ, ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮೊದಲು ಭಜರಂಗದಳದಲ್ಲಿದ್ದ ನವೀನ್, ನಂತರ ಅದನ್ನು ತೊರೆದು ತಾನೇ ಹಿಂದೂ ಯುವಸೇನೆ ಸಂಘಟನೆ ಕಟ್ಟಿದ್ದ. ಯಾರನ್ನು ಹೊಡೆಯುವ ಬಗ್ಗೆ ಚರ್ಚೆ ನಡೆಸಿದ್ದು ಎಂಬ ಕುರಿತು ಆರೋಪಿ ಹೇಳುತ್ತಿಲ್ಲ. ಆತನ ಜತೆ ಸಂಭಾಷಣೆ ನಡೆಸಿದ್ದ ಯುವಕರೂ ಸದ್ಯ ರಾಜ್ಯ ತೊರೆದಿದ್ದಾರೆ.

ಗೌರಿ ಹತ್ಯೆ ಪ್ರಕರಣದಲ್ಲೂ ಈತನ ಪಾತ್ರವಿರುವ ಬಗ್ಗೆ ಬಲವಾದ ಅನುಮಾನ ವ್ಯಕ್ತವಾಗಿದೆ. ಆ ನಾಲ್ವರು ಯುವಕರು ಸಿಕ್ಕ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಅವರನ್ನು ಹುಡುಕಿಕೊಂಡು ವಿಶೇಷ ತಂಡಗಳು ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ಮತ್ತೆ 8 ದಿನ ಕಸ್ಟಡಿ‌ಗೆ

ಎಸ್‌ಐಟಿ ತಂಡ ನವೀನ್ ಮನೆಯಲ್ಲಿ ಶೋಧ ನಡೆಸಿದಾಗ 15 ಜೀವಂತ ಗುಂಡುಗಳು ಪತ್ತೆಯಾಗಿದ್ದವು. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಅಧಿಕಾರಿಗಳು,  ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಮಾರ್ಚ್ 2ರವರೆಗೆ ತಮ್ಮ ವಶಕ್ಕೆ ಪಡೆದಿದ್ದರು.

ಕಸ್ಟಡಿ ಅವಧಿ ಮುಗಿದಿದ್ದರಿಂದ ಆತನನ್ನು ಶುಕ್ರವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮತ್ತೆ ಎಂಟು ದಿನ ತಮ್ಮ ವಶಕ್ಕೆ ಪಡೆದಿದ್ದಾರೆ. ಸಿಐಡಿ ಕಚೇರಿಯ ಸೆಲ್ಲಾರ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT