ಮತಾಂತರದ ಹೇಳಿಕೆಗೆ ಕ್ರೈಸ್ತರ ಆಕ್ರೋಶ

7

ಮತಾಂತರದ ಹೇಳಿಕೆಗೆ ಕ್ರೈಸ್ತರ ಆಕ್ರೋಶ

Published:
Updated:

ಬೆಂಗಳೂರು: ‘ಕುಡಿಯಲು ಕೊಟ್ಟು ಹಾಗೂ ಹೆಣ್ಣಿನ ಜತೆ ಕುಣಿಯಲು ಬಿಟ್ಟು ಕ್ರೈಸ್ತರು ಮತಾಂತರ ಮಾಡಿಸುತ್ತಾರೆ’ ಎಂಬ ಕೊಲ್ಲಾಪುರದ ಕನ್ಹೇರಿಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆಗೆ ಕ್ರೈಸ್ತ ಸಮುದಾಯದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ‘ಬೆಂಗಳೂರು ಮಹಾಧರ್ಮಕ್ಷೇತ್ರ’ದ ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಎಸ್‌. ಆಂಥೋನಿ ಸ್ವಾಮಿ, ‘ಜನರ ಗೌರವಕ್ಕೆ ಪಾತ್ರರಾಗಿರುವ ಸ್ವಾಮೀಜಿಗಳು ಉತ್ತಮ ಮಾತುಗಳಿಂದ ಸಮಾಜ ಕಟ್ಟುವ ಕೆಲಸ ಮಾಡಬೇಕು. ಆದರೆ, ವಿಶ್ವ ಹಿಂದೂ ಪರಿಷತ್‌ ವತಿಯಿಂದ ಬೆಳಗಾವಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾವೇಶದಲ್ಲಿ ಕಾಡಸಿದ್ದೇಶ್ವರ ಸ್ವಾಮೀಜಿ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜ ಒಡೆಯುವ ಕೆಲಸವನ್ನು ಮಾಡಿದ್ದಾರೆ’ ಎಂದು

ಆರೋಪಿಸಿದ್ದಾರೆ.

‘ಮತಾಂತರದ ಗೂಬೆಯನ್ನೇ ಬಂಡವಾಳ ಮಾಡಿಕೊಂಡ ಕೆಲ ರಾಜಕೀಯ ಪಕ್ಷಗಳು ಹಾಗೂ ಸಂಕುಚಿತ ಮನೋಭಾವವುಳ್ಳ ಮುಖಂಡರು, ಕ್ರೈಸ್ತರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಲೇ ಇದ್ದಾರೆ. ವಿಶ್ವ ಹಿಂದೂ ಪರಿಷತ್‌ ಮತ್ತಿತರ ಸಂಘ– ಪರಿವಾರದ ಸಂಘಟನೆಗಳು ಮತಾಂತರದ

ಪ್ರಸ್ತಾಪವನ್ನೇ ಪ್ರಮುಖ ಧ್ಯೇಯವಾಗಿಟ್ಟುಕೊಂಡು ಏನೇನೋ ಹೇಳಿಕೆಗಳನ್ನು ನೀಡುತ್ತಿವೆ. ಇವೆಲ್ಲವೂ ಖಂಡನಾರ್ಹ’ ಎಂದಿದ್ದಾರೆ.

‘ಶಾಂತಿ, ಸೌಹಾರ್ದತೆ ಹಾಗೂ ಅಹಿಂಸೆಗಳೇ ಕ್ರೈಸ್ತ ಧರ್ಮದ ಮೂಲ ಮಂತ್ರ. ನಮ್ಮ ಧರ್ಮ ಹಾಗೂ ಬೈಬಲ್‌ ಗ್ರಂಥವನ್ನು ಮಹಾತ್ಮ ಗಾಂಧೀಜಿಯವರು ಮೆಚ್ಚಿದ್ದರು.

ಸ್ವಯಂಪ್ರೇರಿತರಾಗಿ ನಮ್ಮ ಧರ್ಮ ಸ್ವೀಕರಿಸುವವರಿಗೆ ಮಾತ್ರವೇ ಸ್ವಾಗತವಿದೆ. ಬಲವಂತದ ಮತಾಂತರಕ್ಕಲ್ಲ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry