ಮಾವಳ್ಳಿಪುರ ಸುತ್ತಲ ಜಲಮೂಲಗಳಲ್ಲಿ ‘ವಿಷ’

6

ಮಾವಳ್ಳಿಪುರ ಸುತ್ತಲ ಜಲಮೂಲಗಳಲ್ಲಿ ‘ವಿಷ’

Published:
Updated:
ಮಾವಳ್ಳಿಪುರ ಸುತ್ತಲ ಜಲಮೂಲಗಳಲ್ಲಿ ‘ವಿಷ’

ಬೆಂಗಳೂರು: ಮಾವಳ್ಳಿಪುರದ ಭೂಭರ್ತಿ ಘಟಕದಲ್ಲಿ ಕಸ ಸುರಿದ ಕಾರಣ ಈ ಭಾಗದ ಜಲಮೂಲಗಳಲ್ಲಿ ವಿಷಕಾರಿ ಅಂಶಗಳು ಹೆಚ್ಚಾಗಿವೆ. ಇದರಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ.

ಪರಿಸರ ಬೆಂಬಲ ತಂಡವು (ಇಎಸ್‌ಜಿ) ತಜ್ಞರ ಸಹಯೋಗದಲ್ಲಿ ಅಧ್ಯಯನ ನಡೆಸಿ, ನಗರದಲ್ಲಿ ಶುಕ್ರವಾರ ಬಿಡುಗಡೆ ಮಾಡಿದ ‘ಬೆಂಗಳೂರಿನ ತ್ಯಾಜ್ಯ ಸಂಗ್ರಹ ಸ್ಥಳಗಳು, ತ್ಯಾಜ್ಯ ಸಂಸ್ಕರಣಾ ತಾಣಗಳು ಹಾಗೂ ಪೌರಕಾರ್ಮಿಕರ ಕಾರ್ಯಸ್ಥಿತಿಗಳು’ ವರದಿಯಲ್ಲಿ ಈ ಅಂಶ ಇದೆ.

ಕೆಮ್ಮು, ವಿದುಳು ಸಂಬಂಧಿತ ಸಮಸ್ಯೆ ಹಾಗೂ ಚರ್ಮ ರೋಗದಿಂದ ಈ ಪ್ರದೇಶದ ಬಹುತೇಕ ಮಕ್ಕಳು ಬಳಲುತ್ತಿದ್ದಾರೆ. ಡೆಂಗಿ ಹಾವಳಿ ಹೆಚ್ಚಾಗಿದೆ. ಮಹಿಳೆಯರಲ್ಲಿ ತಲೆ ನೋವು, ಉಸಿರಾಟದ ತೊಂದರೆ, ಸ್ನಾಯು ಸಂಬಂಧಿತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಈ ಸಂಬಂಧ ಮಾವಳ್ಳಿಪುರ ಭೂಭರ್ತಿ ಘಟಕದ ಸಮೀಪದ ಶಿವಕೋಟೆ ಪಂಚಾಯಿತಿಯ ಗ್ರಾಮಗಳು, ರಾಮಗೊಂಡನಹಳ್ಳಿ ಹಾಗೂ ಸುಬೇದಾರಪಾಳ್ಯದಲ್ಲಿ 4,500 ಮಂದಿಯ ಆರೋಗ್ಯ ತಪಾಸಣೆ ನಡೆಸಿ ವರದಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ಭೂಭರ್ತಿ ಘಟಕಕ್ಕೆ ಅವೈಜ್ಞಾನಿಕವಾಗಿ ಟನ್‌ಗಟ್ಟಲೆ ಕಸ ಹಾಕಿರುವುದರಿಂದ ಸುತ್ತಮುತ್ತಲ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ತ್ಯಾಜ್ಯ ರಸವು (ಲಿಚೆಟ್‌) ಅರ್ಕಾವತಿ ನದಿ ಸೇರುತ್ತಿದೆ. ಕೊರಮನಕುಂಟೆ, ಮಾವಳ್ಳಿಪುರ, ಶಿವಕೋಟೆ ಹಾಗೂ ಕಂದಾಪುರ ಗ್ರಾಮಗಳ ಕೆರೆಗಳು ಲಿಚೆಟ್‌ನಿಂದ ಕಲುಷಿತಗೊಂಡಿವೆ ಎಂದು ಹೇಳಲಾಗಿದೆ.

ಕುಡಿಯುವ ನೀರಿಗೆ ಸಮಸ್ಯೆ ಉಂಟಾದ ಕಾರಣಕ್ಕೆ ಮಾವಳ್ಳಿಪುರ ಭಾಗದಲ್ಲಿ ಐದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಅವುಗಳ ಪೈಕಿ ಸದ್ಯ ಎರಡು ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ ಎಂದು ತಂಡದ ಪ್ರತಿನಿಧಿಗಳು ಹೇಳಿದರು.

ಕಸ ವಿಂಗಡಣೆ ಬಗ್ಗೆ ಅರಿವು ಅಗತ್ಯ: ‘ಮನೆಗಳಲ್ಲಿಯೇ ಕಸ ವಿಂಗಡಿಸಬೇಕು. ಈ ಸಂಬಂಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಮಾಧ್ಯಮದ ಪಾತ್ರ ಅತ್ಯಂತ ಮಹತ್ವದ್ದು’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್‌ ಹೇಳಿದರು.

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉನ್ನತಾಧಿಕಾರಿಗಳು ಜನಪರವಾಗಿ ಕೆಲಸ ಮಾಡದಿದ್ದರೆ ಅವರು ಬದುಕಿದ್ದು ಸತ್ತಂತೆ ಎಂದು ಅಭಿಪ್ರಾಯಪಟ್ಟರು.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ‘ನಗರದಲ್ಲಿ ಪ್ರತಿದಿನ 4–5 ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿದೆ. ಅದನ್ನು ನಿರ್ವಹಿಸುವುದು ದೊಡ್ಡ ಸವಾಲಾಗಿತ್ತು. ಸದ್ಯ ಪ್ರತಿ ವಾರ್ಡ್‌ನಲ್ಲಿ ಕಸ ಸಂಸ್ಕರಣಾ ಘಟಕ ಸ್ಥಾಪಿಸಿ, ಕಸ ಸಂಸ್ಕರಣೆ ಮಾಡಲಾಗುತ್ತಿದೆ. ಇದರಿಂದ ಸಮಸ್ಯೆ ಕಡಿಮೆಯಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry