ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಕರಗ ಮಹೋತ್ಸವ

ವಿಜಯಪುರ: ಪ್ರಮುಖ ಬೀದಿಯಲ್ಲಿ ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗ ಸಂಚಾರ
Last Updated 3 ಮಾರ್ಚ್ 2018, 5:53 IST
ಅಕ್ಷರ ಗಾತ್ರ

ವಿಜಯಪುರ: ಧರ್ಮರಾಯಸ್ವಾಮಿ ದ್ರೌಪದಮ್ಮ ಹೂವಿನ ಕರಗ ಮಹೋತ್ಸವ ಗುರುವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.

ಕರಗದ ಪೂಜಾರಿ ಭೀಮಣ್ಣ ಅವರು ವಿಶೇಷವಾಗಿ ಮಲ್ಲಿಗೆ ಹೂವುಗಳಿಂದ ಅಲಂಕರಿಸಿದ ಕರಗವನ್ನು ಹೊತ್ತು ರಾತ್ರಿ 11ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರತಿಯೊಂದು ಮನೆಯಿಂದ ಪೂಜೆ ಸ್ವೀಕರಿಸಿದರು.

ದೇವಾಲಯದಿಂದ ಕರಗ ಹೊರಬರುತ್ತಿದ್ದಂತೆ ವೀರಕುಮಾರರು ಅಲಗು ಸೇವೆ ಅರ್ಪಿಸಿದ್ದು ಆಕರ್ಷಕವಾಗಿತ್ತು. ಗಂಟೆನಾದ, ಪೊಂಬುವಾದ್ಯದೊಂದಿಗೆ ಕರಗ ಪ್ರದಕ್ಷಿಣೆ ಸಾಗಿತು.

ಭಕ್ತರು ಗೋವಿಂದ ನಾಮ ಸ್ಮರಣೆ ಮಾಡುತ್ತಾ ದೇಗುಲ ಪ್ರದಕ್ಷಿಣೆ ಮಾಡಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಗದೊಂದಿಗೆ ಹೆಜ್ಜೆ ಹಾಕಿದರು.

ನಗರದ ಗಾಂಧಿ ಚೌಕ, ಗಂಗಾತಾಯಿ ದೇಗುಲ, ದರ್ಗಾದ ಬಳಿ ಕರಗಕ್ಕೆ ಪೂಜೆ ಸಲ್ಲಿಸಲಾಯಿತು. ಎಲ್ಲಮ್ಮ ತಾಯಿ ದೇವಾಲಯ, ಗುರಪ್ಪನಮಠದಿಂದ ಬಸ್‌ನಿಲ್ದಾಣ, ಏಳು ಸುತ್ತಿನ ಕೋಟೆ, ಸತ್ಯಮ್ಮ ತಾಯಿ ಕಾಲೊನಿ, ಶಿವಗಣೇಶ್‌ ಸರ್ಕಲ್‌, ಶಿಡ್ಲಘಟ್ಟ ಕ್ರಾಸ್‌, ಬಸವೇಶ್ವರ ನಗರ ಸೇರಿದಂತೆ ಪಟ್ಟಣದಾದ್ಯಂತ ಸಂಚರಿಸಿ ಸ್ಥಳೀಯ ನಿವಾಸಿಗಳಿಂದ ಪೂಜೆ ಸ್ವೀಕರಿಸಲಾಯಿತು. ಬೆಳಿಗ್ಗೆ 8ಕ್ಕೆ ದೇವಾಲಯಕ್ಕೆ ಕರಗ ವಾಪಸಾಯಿತು.

‌ಫೆ.25ರಂದು ಬೆಳಿಗ್ಗೆ 9ಕ್ಕೆ ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿರುವ ಕರಗ ಮಹೋತ್ಸವ ಮಾ.3ರಂದು ನಡೆಯಲಿರುವ ವಸಂತೋತ್ಸವ ಧ್ವಜ ಆವರೋಹಣದೊಂದಿಗೆ ಕೊನೆಗೊಳ್ಳಲಿದೆ.

ದೇವಾಲಯದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ದೇವಿಗೆ ಕಳಸ ಪೂಜೆ, ಗಂಗೆ ಪೂಜೆ, ಬಳಿ ತೊಡಿಸುವ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನಗಳಂತೆ ನಡೆಯಿತು.

ಕರಗದ ಪ್ರಯುಕ್ತ ಹೂವಿನ ಪಲ್ಲಕ್ಕಿ ಮಾಡಿ ಮೆರವಣಿಗೆ ನಡೆಸಲಾಯಿತು. ಕರಗ ಮಹೋತ್ಸವಕ್ಕೆ ಜಾತಿ, ಮತ, ಭೇದ ಇಲ್ಲದೆ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಿಂದ ಸಾವಿರಾರು ಭಕ್ತರು ಬಂದು ಕರಗ ವೀಕ್ಷಿಸಿದರು. ಹಳೇ ಪುರಸಭೆ ಬಳಿ ವಾದ್ಯಗೋಷ್ಠಿ ಆಯೋಜಿಸಲಾಗಿತ್ತು.

ಕರಗ ರಾಜ್ಯದ ಪ್ರಸಿದ್ಧ ಜಾನಪದ ಆಚರಣೆ. ಆದಿಶಕ್ತಿ ದ್ರೌಪದಮ್ಮನನ್ನು ವಹ್ನಿಕುಲ ಕ್ಷತ್ರೀಯ, ತಿಗಳ ಕ್ಷತ್ರೀಯ ಸಮುದಾಯ ಕುಲದೇವತೆಯಾಗಿ ಆರಾಧಿಸುತ್ತಾ ಬಂದಿದ್ದಾರೆ.

ಉತ್ಸವದ ಪ್ರಮುಖರಾದ ತಿಗಳ ಸಮುದಾಯದ ಬಹಳಷ್ಟು ಮಂದಿ ಮಾಂಸ, ಮದ್ಯಪಾನದಿಂದ ದೂರವಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಮತ್ತೊಂದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT