ದಲಿತರನ್ನು ಎತ್ತಿಕಟ್ಟುತ್ತಿರುವ ಕಾಂಗ್ರೆಸ್‌

7
ಅಕ್ರಮ ಕಸಾಯಿಖಾನೆಗಳ ವಿರುದ್ಧ ಹೋರಾಟ; ಸಂಸದ ಸುರೇಶ ಅಂಗಡಿ

ದಲಿತರನ್ನು ಎತ್ತಿಕಟ್ಟುತ್ತಿರುವ ಕಾಂಗ್ರೆಸ್‌

Published:
Updated:
ದಲಿತರನ್ನು ಎತ್ತಿಕಟ್ಟುತ್ತಿರುವ ಕಾಂಗ್ರೆಸ್‌

ಬೆಳಗಾವಿ: ‘ಅಕ್ರಮ ಕಸಾಯಿಖಾನೆ ವಿರುದ್ಧ ನಮ್ಮ ಹೋರಾಟ ನಡೆದಿದೆ ಹೊರತು, ದಲಿತರ ವಿರುದ್ಧ ಅಲ್ಲ. ಶೈತ್ಯಾಗಾರವೊಂದರ ದಲಿತ ಮಾಲೀಕನನ್ನು ಮುಂದೆ ಮಾಡಿರುವ ಕಾಂಗ್ರೆಸ್‌ ನಾಯಕರು, ಬಿಜೆಪಿಯ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರ ತಂತ್ರಕ್ಕೆ ದಲಿತರು ಬಲಿಯಾಗಬಾರದು’ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

ಇಲ್ಲಿನ ಆಟೊನಗರದಲ್ಲಿ ಹಲವಾರು ಶೈತ್ಯಾಗಾರಗಳು ಅಕ್ರಮವಾಗಿ ನಡೆಯುತ್ತಿವೆ. ಇದರಲ್ಲಿ ಜಾನುವಾರುಗಳ ವಧೆ ಕೂಡ ಮಾಡಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಉಗ್ರ ಹೋರಾಟ ನಡೆಸುತ್ತಿದ್ದು, ಅಕ್ರಮ ಶೈತ್ಯಾಗಾರಗಳನ್ನು ಮುಚ್ಚಿಸಬೇಕು ಹಾಗೂ ಅಂತಹ ಮಾಲೀಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಅಕ್ರಮ ಶೈತ್ಯಾಗಾರಗಳಿಗೆ ಸ್ಥಳೀಯ ಶಾಸಕರ ಕುಮ್ಮಕ್ಕು ಇದೆ. ನಮ್ಮ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದಲೇ ಹಿಂದೂ ಡೋಹರ್‌ (ಎಸ್‌.ಸಿ) ಸಮುದಾಯಕ್ಕೆ ಸೇರಿದ ಅಮೋಲ ವಿದ್ಯಾಧರ್‌ ಮೋಹನದಾಸ ಎನ್ನುವವರನ್ನು ಬಳಸಿಕೊಳ್ಳುತ್ತಿದ್ದಾರೆ. ಅಮೋಲ ನಿಜವಾಗಿಯೂ ಇದೇ ಸಮುದಾಯಕ್ಕೆ ಸೇರಿದವರೇ ಎನ್ನುವುದರ ನನಗೆ ಸಂಶಯವಿದೆ. ಜಿಲ್ಲೆಯ ಬಹುತೇಕ ಎಲ್ಲ ದಲಿತ ನಾಯಕರು ನನಗೆ ಪರಿಚಯವಿದೆ. ಆದರೆ, ಇವರ ಹೆಸರನ್ನು ಎಲ್ಲಿಯೂ ಕೇಳಿಲ್ಲ’ ಎಂದು ಹೇಳಿದರು.

‘ಕಳೆದ 3–4 ವರ್ಷಗಳಿಂದಲೂ ಶೈತ್ಯಾಗಾರಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾಗ ಏಕೆ ಇವರು ಮಾತನಾಡಲಿಲ್ಲ? ಇಷ್ಟು ದಿನಗಳವರೆಗೆ ಸುಮ್ಮನಿದ್ದು ಈಗ ತಮ್ಮನ್ನು ದಲಿತ ಸಮುದಾಯಕ್ಕೆ ಸೇರಿದವರು ಎಂದುಹೇಳಿಕೊಳ್ಳುತ್ತಿರುವುದರ ಹಿಂದೆ ಕಾಂಗ್ರೆಸ್ಸಿಗರ ಕುಮ್ಮಕ್ಕು ಇದೆ. ಕಾಂಗ್ರೆಸ್ಸಿನ ಮೋಸದ ಜಾಲಕ್ಕೆ ದಲಿತರು ಬೀಳಬಾರದು’ ಎಂದು ಆರೋಪಿಸಿದರು.

‘ಕಾನೂನುಬದ್ಧವಾಗಿ ಲೈಸೆನ್ಸ್‌ ಪಡೆದು ಶೈತ್ಯಾಗಾರ ಉದ್ಯಮ ನಡೆಸುತ್ತಿದ್ದರೆ ನಮ್ಮ ಆಕ್ಷೇಪವಿಲ್ಲ. ಅವರಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ನಾವು ದಲಿತರ ಪರ ಇದ್ದೇವೆ’ ಎಂದರು.

‘ದಲಿತರು ಬಿಜೆಪಿಯ ಜೊತೆಗಿದ್ದಾರೆ. ಮೊನ್ನೆ ನಡೆದ ಹಿಂದೂ ವಿರಾಟ ಯಾತ್ರೆಯಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಭಾಗವಹಿಸಿದ್ದೇ ಇದಕ್ಕೆ ಸಾಕ್ಷಿ. ಬಿಜೆಪಿಯೊಂದಿಗಿರುವ ದಲಿತರನ್ನು ಬೇರ್ಪಡಿಸುವ ಉದ್ದೇಶದಿಂದಲೇ ಕಾಂಗ್ರೆಸ್ಸಿಗರು ಮೋಹನದಾಸ ಅವರಿಂದ ಪತ್ರಿಕಾಗೋಷ್ಠಿ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ಆಟೊ ನಗರ ಪ್ರದೇಶದಲ್ಲಿ ಹಲವು ಶೈತ್ಯಾಗಾರಗಳಿದ್ದು, ಇವುಗಳ ನಿಜವಾದ ಮಾಲೀಕರು ಯಾರು? ಇವುಗಳನ್ನು ನಡೆಸುತ್ತಿರುವವರು ಯಾರು? ಎನ್ನುವ ಮಾಹಿತಿಯನ್ನು ಹಲವು ಬಾರಿ ಕೇಳಿದರೂ ಯಾವ ಅಧಿಕಾರಿಯೂ ನೀಡುತ್ತಿಲ್ಲ. ಪೊಲೀಸರು, ಕೆಐಎಡಿಬಿ ಅಧಿಕಾರಿಗಳು, ಪಾಲಿಕೆಯ ಅಧಿಕಾರಿಗಳು ಬಾಯಿಗೆ ಬೀಗ ಹಾಕಿಕೊಂಡಿರುವುದರ ಹಿಂದಿನ ಮರ್ಮವೇನು?’ ಎಂದು ಪ್ರಶ್ನಿಸಿದರು.

ಸ್ಲಾಟರ್‌ ಹೌಸ್‌ ಯತ್ನ: ಬೆಳಗಾವಿಯನ್ನು ಸ್ಮಾರ್ಟ್‌ ಸಿಟಿಯನ್ನಾಗಿಸಲು ಬಿಜೆಪಿ ಹೊರಟಿದ್ದರೆ, ಕಾಂಗ್ರೆಸ್‌ ಸ್ಲಾಟರ್‌ ಹೌಸ್‌ (ಕಸಾಯಿಖಾನೆ) ಸಿಟಿಯನ್ನಾಗಿಸಲು ಪ್ರಯತ್ನಿಸುತ್ತಿದೆ ಎಂದು ಸುರೇಶ ವ್ಯಂಗ್ಯವಾಡಿದರು.

ಕಸಾಯಿಖಾನೆಗಳಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ಅಕ್ರಮವಾಗಿ ನಡೆಯುತ್ತಿರುವ ಕಸಾಯಿಖಾನೆಗಳ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಶಿಫಾರಸ್ಸು ಮಾಡುವುದಾಗಿ ಹೇಳಿದ್ದಾರೆ. ಸದ್ಯದಲ್ಲಿಯೇ ಸಿಬಿಐಗೆ ಒಪ್ಪಿಸಬಹುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry