ನಾಗಸಂದ್ರದ ಜಗಲಿಗೆ ಅಂಟಿದ ರಾಜಕಾರಣ

7
ಗೌರಿಬಿದನೂರು ವಿಧಾನಸಭೆ ಕ್ಷೇತ್ರ: ‘ಕೈ’ ಭದ್ರಕೋಟೆಯಲ್ಲಿ ‘ಕಮಲ’ ಅರಳಿಸುವ ತವಕ, ‘ಹೊರೆ’ಯಾದ ಜೆಡಿಎಸ್‌

ನಾಗಸಂದ್ರದ ಜಗಲಿಗೆ ಅಂಟಿದ ರಾಜಕಾರಣ

Published:
Updated:
ನಾಗಸಂದ್ರದ ಜಗಲಿಗೆ ಅಂಟಿದ ರಾಜಕಾರಣ

ಗೌರಿಬಿದನೂರು: ವಿದುರಾಶ್ವತ್ಥವನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಗೌರಿಬಿದ ನೂರು ವಿಧಾನಸಭೆ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೂ ಮತ್ತು ರಾಜಕೀಯಕ್ಕೂ ತುಂಬಾ ನಂಟು. ಅದರಲ್ಲೂ ಅತಿ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರನ್ನು ಹೊಂದಿರುವ ಎಚ್‌.ನಾಗಸಂದ್ರಕ್ಕೂ ರಾಜಕಾರಣಕ್ಕೂ ಬಿಡಿಸಲಾಗದ ಸಂಬಂಧ ಬೆಸೆದಿದೆ.

ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ದೇಶದ ಹೋರಾಟಗಾರರ ಚಳವಳಿಯ ಕೇಂದ್ರಗಳಲ್ಲಿ ಗೌರಿಬಿದನೂರು ಒಂದಾಗಿತ್ತು.

ಕಸಬಾ, ಮಂಚೇನಹಳ್ಳಿ, ತೊಂಡೇ ಬಾವಿ, ಹೊಸೂರು, ಡಿ.ಪಾಳ್ಯ ಮತ್ತು ನಗರಗೆರೆ ಹೋಬಳಿಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳು, ಕುರುಬ, ಹಿಂದೂ ಸಾದರ, ಒಕ್ಕಲಿಗ ಸಮುದಾಯದ ಮತಗಳೇ ನಿರ್ಣಾಯಕ.

ಮೊದಲ ಚುನಾವಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನಾಗಯ್ಯ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಬಳಿಕ 1957ರಿಂದ ಸತತ ಮೂರು ಅವಧಿಗೆ ಕೆ.ಎಚ್. ವೆಂಕಟರೆಡ್ಡಿ (1957), ಆರ್.ಎನ್. ಲಕ್ಷ್ಮಿಪತಿ (1962–67) ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಪಾರುಪತ್ಯ ಸ್ಥಾಪಿಸಿದ್ದರು. 1972ರಲ್ಲಿ ವಿ.ಕೃಷ್ಣರಾವ್ ಅವರು ಇಲ್ಲಿ ಕಾಂಗ್ರೆಸ್‌ ಪಕ್ಷ ಮತ್ತೆ ನೆಲೆ ಕಂಡುಕೊಳ್ಳುವಂತೆ ಮಾಡಿದರು.

1969ರಲ್ಲಿ ಕಾಂಗ್ರೆಸ್ ಒಳಗೆ ಆಂತರಿಕ ಭಿನ್ನಾಭಿಪ್ರಾಯಗಳು ಉಲ್ಬಣಗೊಂಡು ಪಕ್ಷ ಒಡೆದು ಇಬ್ಭಾಗವಾಯಿತು. 1978ರಲ್ಲಿ ಇಲ್ಲಿ ಇಂದಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಎನ್.ಕೆ. ಪಾಪಯ್ಯ ಅವರು ಜನತಾಪಕ್ಷದ ಹುರಿಯಾಳು ಆರ್.ಎನ್. ಲಕ್ಷ್ಮಿಪತಿ ಅವರನ್ನು ಸೋಲಿಸಿದ್ದರು.

ಗೌರಿಬಿದನೂರು ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿದ್ದ ಒಂದು ಕಾಲದ ‘ಪ್ರಭಾವಿ’ ರಾಜಕಾರಣಿ ಮಂಚೇನಹಳ್ಳಿ ಸಮೀಪದ ಕಂಬತ್ತನಹಳ್ಳಿಯ ಕೆ.ಎಚ್.ವೆಂಕಟರೆಡ್ಡಿ ಅವರು 1957ರಲ್ಲಿ ಇಲ್ಲಿ ಮೊದಲ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.

ಕ್ಷೇತ್ರದಲ್ಲಿ ಇಪ್ಪತ್ತೈದು ವರ್ಷ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಹೊಸೂರು ಹೋಬಳಿಯ ರಮಾಪುರದ ಜೈನ ಸಮುದಾಯಕ್ಕೆ ಸೇರಿದ ಆರ್.ಎನ್. ಲಕ್ಷ್ಮಿಪತಿ ಅವರು ಮೂರು ಬಾರಿ ಗೆಲುವು ಸಾಧಿಸಿದ್ದಾರೆ. 1978ರಲ್ಲಿ ಪಾಪಯ್ಯ ವಿರುದ್ಧ ಸೋತಿದ್ದ ಲಕ್ಷ್ಮಿಪತಿ, 1983ರಲ್ಲಿ ಕಾಂಗ್ರೆಸ್‌ನ ವಿ. ಕೃಷ್ಣರಾವ್ ವಿರುದ್ಧ ಗೆದ್ದರು. ಆಗ ಸಣ್ಣ ನೀರಾವರಿ ಸಚಿವರೂ ಆಗಿದ್ದರು.

ನಗರಗೆರೆ ಹೋಬಳಿಯ ಕುಗ್ರಾಮ ನಕ್ಕಲಹಳ್ಳಿಯಿಂದ ಬಂದ ವಿ.ಕೃಷ್ಣರಾವ್ ಅವರು 1972ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದರು. 1983ರಲ್ಲಿ ಲಕ್ಷ್ಮಿಪತಿ ಎದುರು ಸೋತ ಬಳಿಕ ಕೃಷ್ಣರಾವ್ ದಿಲ್ಲಿಯತ್ತ ದೃಷ್ಟಿ ನೆಟ್ಟರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ 1984ರಿಂದ 1991ರ ವರೆಗೆ ಸತತ ಮೂರು ಅವಧಿಗೆ ಸಂಸದರಾದರು.

ರಾಮಕೃಷ್ಣ ಹೆಗಡೆ ಅವರ ಒತ್ತಾಯದ ಮೇರೆಗೆ 1985ರಲ್ಲಿ ಗೌರಿಬಿದನೂರಿನಿಂದ ಜನತಾಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದ ನಟ ಮುಖ್ಯಮಂತ್ರಿ ಚಂದ್ರು ತಮ್ಮ ಪ್ರತಿಸ್ಪರ್ಧಿ ‘ಕೈ’ ಅಭ್ಯರ್ಥಿ ಪಾಪಯ್ಯ ಅವರಿಗೆ ಸೋಲಿನ ರುಚಿ ತೋರಿಸಿದರು.

1989ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಂಚೇನಹಳ್ಳಿ ಹೋಬಳಿಯ ಸಾದೇನಹಳ್ಳಿಯ ಎಸ್‌.ವಿ. ಅಶ್ವತ್ಥನಾರಾಯಣರೆಡ್ಡಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜೆಡಿಎಸ್‌ ಹುರಿ ಯಾಳಾಗಿದ್ದ ನಾಗಯ್ಯ ರೆಡ್ಡಿ ಅವರ ಮೊಮ್ಮಗಳು ಎನ್.ಜ್ಯೋತಿ ರೆಡ್ಡಿ ಅವರನ್ನು ಪರಾಭವಗೊಳಿಸಿದ್ದರು.

ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೆಗೌಡರ ‘ಮಾನಸ ಪುತ್ರಿ’ಯಂತಿದ್ದ ಜ್ಯೋತಿ ರೆಡ್ಡಿ ಮರು ಚುನಾವಣೆಯಲ್ಲೇ (1994) ಅಶ್ವತ್ಥನಾರಾಯಣರೆಡ್ಡಿ ಅವರನ್ನು ಚುನಾವಣಾ ಕಣದಲ್ಲಿ ‘ಚಿತ್’ ಮಾಡಿ ಸೇಡು ತೀರಿಸಿಕೊಂಡರು.

1999ರಿಂದ ಸತತ ನಾಲ್ಕು ಬಾರಿ ಗೌರಿಬಿದನೂರು ಕ್ಷೇತ್ರದಲ್ಲಿ ಸೋಲಿಲ್ಲದ ಸರ್ದಾರನಂತಿದ್ದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಅವರು ಇದೀಗ 5ನೇ ಚುನಾವಣೆಗೆ ಭರದ ಸಿದ್ಧತೆ ನಡೆಸಿದ್ದಾರೆ. ಎರಡು ದಶಕಗಳಲ್ಲಿ ಅನಾಯಾಸವಾಗಿ ಗೆದ್ದು ಬೀಗಿದ್ದ ಅವರಿಗೆ ಕಳೆದ ಚುನಾವಣೆಯಲ್ಲಿ ಉದ್ಯಮಿ ಕೆ. ಜೈಪಾಲ್‌ ರೆಡ್ಡಿ ಅಳಕು ಮೂಡಿಸಿದ್ದರು.

ಜೈಪಾಲ್ ರೆಡ್ಡಿ ಕಳೆದ ಚುನಾವಣೆ ಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲು ಯತ್ನಿಸಿದ್ದರು. ಅದು ತಪ್ಪಿದಾಗ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಜೈಪಾಲ್‌ರೆಡ್ಡಿ ಮೊದಲ ಪ್ರಯತ್ನದಲ್ಲೇ 44,056 ಮತ ಪಡೆದು ಗಮನ ಸೆಳೆದರು. ಸಮಾಜಸೇವೆ, ಪ್ರಚಾರ ಕಾರ್ಯದ ಬಗ್ಗೆ ಉದಾಸೀನರಾಗಿದ್ದ  ಶಿವಶಂಕರೆಡ್ಡಿ, ತಮ್ಮ ಎದುರಾಳಿಯಾಗಿ ಅಂದಿನಿಂದ ಈವರೆಗೆ ಅವರ ಮೇಲೆ ಒಂದು ಕಣ್ಣಿಟ್ಟು, ಕಟ್ಟಿಹಾಕಲು ತಂತ್ರ ರೂಪಿಸುತ್ತಿದ್ದಾರೆ ಎಂದು ಹಿರಿಯರೊಬ್ಬರು ಹೇಳುವರು.

ಕ್ಷೇತ್ರದಲ್ಲಿ ರವಿನಾರಾಯಣರೆಡ್ಡಿ ಮತ್ತು ಜ್ಯೋತಿ ರೆಡ್ಡಿ ನಿರ್ಗಮನದಿಂದ ಬಡವಾದ ಜೆಡಿಎಸ್‌ನಲ್ಲಿ ಆ ‘ಶೂನ್ಯ’ ತುಂಬಿ ಪಕ್ಷ ಚೈತನ್ಯಗೊಳಿಸುವ ಕೆಲಸ ಈವರೆಗೆ ಆಗಿಲ್ಲ. ಹೀಗಾಗಿ ಜೆಡಿಎಸ್ ಆಟ ಗಂಭೀರವಾಗಿಲ್ಲ ಎನ್ನಲಾಗುತ್ತಿದೆ.

ಮೂರೂ ಪಕ್ಷಗಳಲ್ಲೂ ಕ್ಷೇತ್ರದ ಅಭ್ಯರ್ಥಿಯ ಘೋಷಣೆಯಾಗಿಲ್ಲ. ಕಣದಲ್ಲಿ ಶಿವಶಂಕರೆಡ್ಡಿ ಮತ್ತು ಜೈಪಾಲ್‌ರೆಡ್ಡಿ ಎದುರಾಳಿಗಳಾದರೆ ಚುನಾವಣೆ ಹಿಂದಿಗಿಂತಲೂ ಹೆಚ್ಚು ‘ರೋಚಕ’ವಾಗಿರುತ್ತದೆ ಎನ್ನುವುದು ಸ್ಥಳೀಯ ರಾಜಕಾರಣದ ಆಳ ಅಗಲ ಬಲ್ಲವರ ಅಭಿಮತ.

***

ಹ್ಯಾಟ್ರಿಕ್‌ ಸಾಧಕ ಶಿವಶಂಕರರೆಡ್ಡಿ

ನಾಗಸಂದ್ರದ ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ ಎನ್‌.ಎಸ್.ಹನುಮಂತರೆಡ್ಡಿ ಅವರ ಪುತ್ರರಾದ ಶಿವಶಂಕರರೆಡ್ಡಿ ಅವರು ಕಳೆದ ಎರಡು ದಶಕಗಳಲ್ಲಿ ರಾಜಕೀಯದಲ್ಲಿ ಬೆಳೆದು ನಿಂತ ಪರಿ ಅನೇಕರ ಅಚ್ಚರಿಗೆ ಕಾರಣವಾಗಿದೆ. ಸಹೋದರ ಸಂಬಂಧಿ ಎನ್‌.ಟಿ.ಮದನಗೋಪಾಲ್ ರೆಡ್ಡಿ ಅವರ ಒತ್ತಾಸೆಯಿಂದ ಗ್ರಾಮ ಪಂಚಾಯಿತಿ ಚುನಾವಣೆಯಿಂದ ಮೊದಲುಗೊಂಡು ರಾಜಕೀಯ ಕಣಕ್ಕೆ ಇಳಿದ ಶಿವಶಂಕರರೆಡ್ಡಿ ಅವರು ದಿನೇ ದಿನೇ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತ ಪ್ರವರ್ಧಮಾನಕ್ಕೆ ಬಂದವರು.

ಅಶ್ವತ್ಥನಾರಾಯಣರೆಡ್ಡಿ ಅವರು ಶಾಸಕರಾಗಿದ್ದ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಇವರು ಇದೇ ವೇಳೆ ಜನನಾಯಕರಾಗಿ ಬೆಳೆಯುತ್ತ ಹೋದರು. 1999ರಲ್ಲಿ ಮೊದಲ ಬಾರಿಗೆ ಗುರುವಿಗೆ ಸೆಡ್ಡು ಹೊಡೆದು ಪಕ್ಷೇತರರಾಗಿ ಸ್ಪರ್ಧಿಸಿ ಅಶ್ವತ್ಥನಾರಾಯಣರೆಡ್ಡಿ ಅವರನ್ನು ಸೋಲಿಸಿ ಗೆದ್ದು ಶಾಸಕರಾದ ಶಿವಶಂಕರರೆಡ್ಡಿ ಅವರು ಈವರೆಗೆ ರಾಜಕಾರಣದಲ್ಲಿ ಹಿಂತಿರುಗಿ ನೋಡಿಲ್ಲ. 2004, 2008 ಮತ್ತು 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತತ ಗೆಲುವಿನ ಮಾಲೆ ಧರಿಸಿ ಶಾಸಕರಾಗಿ ಉಳಿದುಕೊಂಡು ಬಂದಿರುವ ಇವರದು ಸದ್ಯ ಈ ಕ್ಷೇತ್ರ ಪಾಲಿಗೆ ಹ್ಯಾಟ್ರಿಕ್ ಸಾಧನೆ.

***

ಕಾಂಗ್ರೆಸ್‌ ಪಕ್ಷದ ಹಿಡಿತ

ರಾಜ್ಯದಲ್ಲಿ 1952ರಿಂದ 2013ರ ವರೆಗೆ ನಡೆದ 14 ಸಾರ್ವತ್ರಿಕ ಚುನಾವಣೆಗಳ ಪೈಕಿ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ (7) ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ. 35 ವರ್ಷದ ಆಳ್ವಿಕೆಯಿಂದಾಗಿ ‘ಕೈ’ ಪಡೆಯ ಭದ್ರಕೋಟೆಯಾಗಿ ಗುರುತಿಸಿಕೊಂಡಿದೆ.

ಇದಲ್ಲದೆ ಕ್ಷೇತ್ರದಲ್ಲಿ ನಾಲ್ವರು ಪಕ್ಷೇತರರು, ಜನತಾಪಕ್ಷದಿಂದ ಇಬ್ಬರು ಮತ್ತು ಜೆಡಿಎಸ್‌ನಿಂದ ಒಬ್ಬರು ಗೆಲುವು ಸಾಧಿಸಿದ್ದಾರೆ. ಆದರೆ ಬಿಜೆಪಿಗೆ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

**

ರಾಜಕೀಯ ಶಕ್ತಿ ಕೇಂದ್ರ ನಾಗಸಂದ್ರ

ಸಂವಿಧಾನ ಅಸ್ತಿತ್ವಕ್ಕೆ ಬಂದ ಬಳಿಕ 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಇಲ್ಲಿಂದ ಆಯ್ಕೆಯಾದ ಎನ್.ಸಿ.ನಾಗಯ್ಯ ರೆಡ್ಡಿ ಅವರಿಂದ ಹಿಡಿದು ನಾಲ್ಕು ವಿಧಾನಸಭೆ ಚುನಾವಣೆಗಳಲ್ಲಿ ಸತತ ಗೆಲುವಿನ ನಗೆ ಬೀರಿದ ಎನ್.ಎಚ್.ಶಿವಶಂಕರರೆಡ್ಡಿ ಅವರ ತವರೂರು ನಾಗಸಂದ್ರ.

ಒಂದು ಕಾಲದಲ್ಲಿ ಧುಮ್ಮಿಕ್ಕಿ ಹರಿಯುತ್ತಿದ್ದ ತಾಲ್ಲೂಕಿನ ಜೀವಾಳವಾಗಿದ್ದ ಉತ್ತರ ಪಿನಾಕಿನಿ ನದಿ ಬತ್ತಿ ಬರಿದಾದರೂ ನಾಗಸಂದ್ರದ ರಾಜಕೀಯ ‘ಪ್ರವಾಹ’ ಇಂದಿಗೂ ಕ್ಷೇತ್ರದ ತುಂಬಾ ಪ್ರವಹಿಸುತ್ತಲೇ ಇದೆ. ಆರೂವರೆ ದಶಕಗಳಲ್ಲಿ ಈ ಕ್ಷೇತ್ರದ ರಾಜಕಾರಣದ ನಾನಾ ಸ್ಥಿತ್ಯಂತರ, ಪಲ್ಲಟಗಳಿಗೆ ಕೇಂದ್ರಬಿಂದುವಾಗಿದ್ದು ಈ ಪುಟ್ಟ ಗ್ರಾಮ.

ಮತದಾರರಲ್ಲಿ ಬಹುಸಂಖ್ಯಾತ ರಾಗಿರುವ ಪರಿಶಿಷ್ಟರು ಇಲ್ಲಿ ಈವರೆಗೆ ಯಾವುದೇ ಚುನಾವಣೆಯಲ್ಲಿ ಸ್ವಂತ ನಿಲುವು ತೆಗೆದುಕೊಂಡಿಲ್ಲ. ಮೊದಲಿನಿಂದಲೂ ಪರಾವಲಂಬಿ ಗಳಾಗಿಯೇ ಉಳಿದುಕೊಂಡಿರುವ ಅವರು ನಾಗಸಂದ್ರದ ‘ರೆಡ್ಡಿ’ಗಳ ಪ್ರಭಾವದಿಂದ ಹೊರಬಂದು ರಾಜಕೀಯ ಶಕ್ತಿ ವೃದ್ಧಿಸಿಕೊಳ್ಳುವ ಸಾಹಸ ಮಾಡಿದ ಉದಾಹರಣೆಗಳಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry