ಬಾಬಾಬುಡನ್‌ಗಿರಿಯಲ್ಲಿ ಉರುಸ್‌ ಸಂಭ್ರಮ

ಬುಧವಾರ, ಮಾರ್ಚ್ 20, 2019
25 °C

ಬಾಬಾಬುಡನ್‌ಗಿರಿಯಲ್ಲಿ ಉರುಸ್‌ ಸಂಭ್ರಮ

Published:
Updated:
ಬಾಬಾಬುಡನ್‌ಗಿರಿಯಲ್ಲಿ ಉರುಸ್‌ ಸಂಭ್ರಮ

ಚಿಕ್ಕಮಗಳೂರು: ತಾಲ್ಲೂಕಿನ ಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ಶುಕ್ರವಾರದಿಂದ ಸಂದಲ್‌ ಉರುಸ್‌ ಆರಂಭವಾಗಿದ್ದು, ಬಾಬಾಬುಡನ್‌ಗಿರಿಯಲ್ಲಿ ಭಕ್ತರ ಕಲರವ ಮೇಳೈಸಿದೆ.

ದೇಶದ ವಿವಿಧೆಡೆಗಳಿಂದ ಸಹಸ್ರಾರು ಮುಸ್ಲಿಂ ಭಕ್ತರ ದಂಡು ಗಿರಿಗೆ ಹರಿದಿದೆ. ಉರೂಸ್‌ ಆಚರಣೆ ಮೆರವಣಿಗೆಯಲ್ಲಿ ಧಪ್, ವಾದ್ಯಮೇಳ ನಾದಗಳು ಮುಗಿಲುಮುಟ್ಟಿದ್ದವು. ಪುಟಾಣಿಗಳು ಅಪ್ಪ, ಅಜ್ಜಂದಿರ ಹೆಗಲ ಮೇಲೆ ಕುಳಿತು ಉತ್ಸಾಹದಿಂದ ಉರೂಸ್ ವಿಧಿವಿಧಾನಗಳನ್ನು ನೋಡಿದರು.

ಭಕ್ತರು ಸಾಲಾಗಿ ಗುಹೆಯೊಳಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಮಕ್ಕಳು, ಮಹಿಳೆಯರು, ಯುವಜನರು ಎಲ್ಲರೂ ಉರುಸ್‌ ಆಚರಣೆಯಲ್ಲಿ ಭಾಗವಹಿಸಿದ್ದರು. ಗಿರಿಯಲ್ಲಿನ ಅಂಗಡಿಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಸೆಂಟ್‌, ಬ್ಯಾಗು, ಟೊಪ್ಪಿಗೆ ಮೊದಲಾದವುಗಳನ್ನು ಖರೀದಿಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಶಾಖಾದ್ರಿ ಸೈಯದ್‌ ಗೌಸ್‌ ಮೊಹಿದ್ದೀನ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ನೇತೃತ್ವದ ಸಮಿತಿಯು ಈಗಾಗಲೇ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ರಾಜ್ಯ ಸರ್ಕಾರವು ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿಲ್ಲ. ದಾಖಲೆಗಳನ್ನು ಪರಿಶೀಲಿಸಿ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು’ ಎಂದು ಹೇಳಿದರು.

‘ಜಿಲ್ಲಾಡಳಿತವು ದರ್ಗಾದ ಗುಹೆಯೊಳಗೆ ಹೋಗಲು ನಮಗೆ ಅನುಮತಿ ನೀಡುವುದಿಲ್ಲ. ಉರುಸ್‌ ಎಂದರೆ ಗುಹೆಯೊಳಗೆ ಹಸಿರು ಚಾದರ ಹೊದಿಸಿ, ಗಂಧ ಹಚ್ಚಬೇಕು. ಜಿಲ್ಲಾಡಳಿತ ನಮಗೆ ವಿಧಿವಿಧಾನಕ್ಕೆ ಅವಕಾಶ ನೀಡುವುದಿಲ್ಲ. ಹಾಗಾದರೆ ಇದು ಉರೂಸ್‌ ಆಚರಣೆ ಹೇಗಾಗುತ್ತದೆ’ ಎಂದು ಪ್ರಶ್ನಿಸಿದರು.

ಗಂಗಾವತಿಯ ಸಯ್ಯದ್‌ ಖಲೀಲ್‌ ವುಲ್ಲಾ ಖಾದ್ರಿ, ಸಾಗರದ ವಾಸಿಂವುಲ್ಲಾ ಖಾನ್‌ ಖಲೀಫ್‌ ಇದ್ದರು.

***

ಕುಸಿದು ಬಿದ್ದ ಭಕ್ತ; ಆಸ್ಪತ್ರೆಗೆ ರವಾನೆ

ಉರೂಸ್‌ನಲ್ಲಿ ಪಾಲ್ಗೊಂಡಿದ್ದ ಆಂಧ್ರಪ್ರದೇಶದ ಸಯ್ಯದ್‌ ಮುಸ್ತಾಪ ಎಂಬುವರು ಗುಂಪಿನ ನಡುವೆ ಕುಸಿದುಬಿದ್ದರು. ತಕ್ಷಣವೇ ಅಲ್ಲಿದ್ದ ಆರೋಗ್ಯ ಸಿಬ್ಬಂದಿ ಅವರನ್ನು ಆರೈಕೆ ಮಾಡಿದರು. ತುಸು ಸುಧಾರಿಸಕೊಂಡ ನಂತರ ಅವರನ್ನು ಆಂಬುಲೆನ್ಸ್‌ನಲ್ಲಿ ಅತ್ತಿಗುಂಡಿಯ ಆಸ್ಪತ್ರೆಗೆ ಒಯ್ಯಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry