ಪ್ರಜಾಪ್ರಭುತ್ವದಲ್ಲಿ ಮೂಲಭೂತವಾದಕ್ಕಿಲ್ಲ ಅವಕಾಶ

ಭಾನುವಾರ, ಮಾರ್ಚ್ 24, 2019
32 °C
ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯ 61ನೇ ಸ್ಮರಣೋತ್ಸವದಲ್ಲಿ ಸಾಹಿತಿ ಚಂಪಾ

ಪ್ರಜಾಪ್ರಭುತ್ವದಲ್ಲಿ ಮೂಲಭೂತವಾದಕ್ಕಿಲ್ಲ ಅವಕಾಶ

Published:
Updated:
ಪ್ರಜಾಪ್ರಭುತ್ವದಲ್ಲಿ ಮೂಲಭೂತವಾದಕ್ಕಿಲ್ಲ ಅವಕಾಶ

ದಾವಣಗೆರೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂಲಭೂತವಾದ ಹಾಗೂ ಕೋಮುವಾದಗಳಿಗೆ ಅವಕಾಶ ಇಲ್ಲ. ಎಲ್ಲಾ ಆಂದೋಲನಗಳು ಇಂತಹ ಶಕ್ತಿಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಬೇಕು ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮಾರ್ಮಿಕವಾಗಿ ಹೇಳಿದರು.

ನಗರದ ಶಿವಯೋಗಾಶ್ರಮದ ಬಸವಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ 61ನೇ ಸ್ಮರಣೋತ್ಸವದಲ್ಲಿ ಶುಕ್ರವಾರ ಚಿಂತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಈಗ ನಾನು ಹೇಳುತ್ತೇನೆ, ನೀವು ಕೇಳಬೇಕು. ಅದೂ ಕಿವಿಯಿಂದಲೇ ಕೇಳಬೇಕು. ಬಾಯಿಂದ ಕೇಳಬಾರದು ಎಂಬ ಮೂಲಭೂತವಾದ ಧೋರಣೆ ಇದೆ. ಇದಕ್ಕೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜಾಗವಿಲ್ಲ. ಇರಬಾರದು ಕೂಡ’ ಎಂದು ಹೇಳಿದರು.

‘ದೇವರ ಪೂಜೆ, ಆಹಾರ ಸೇವನೆ ವೈಯಕ್ತಿಕವಾದವು. ಆದರೆ, ಅದನ್ನು ಯಾರೋ ಒಬ್ಬರು ನಿರ್ಧರಿಸುವುದು ಸರಿ ಅಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಪ್ರೇರಣೆ ಮನಸ್ಸನ್ನು ಅರಳಿಸುವಂತಹದ್ದು, ಪ್ರಚೋದನೆ ಮನಸ್ಸನ್ನು ಕೆರಳಿಸುತ್ತದೆ. ತಮ್ಮ ಮಾತುಗಳಿಂದ ಯಾರೂ ಪ್ರೇರಣೆ ಪಡೆಯುತ್ತಿಲ್ಲ ಎಂದು ಅರಿತ ಕೇಂದ್ರದ ಸಚಿವರೊಬ್ಬರು ಈಗ ಎಲ್ಲರನ್ನೂ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಧರ್ಮ ರಾಜಕಾರಣ, ಸಾಹಿತ್ಯ ರಾಜಕಾರಣ, ಸಾಂಸ್ಕೃತಿಕ ರಾಜಕಾರಣಗಳು ಎಂಬ ಶಬ್ದಗಳು ಈಗ ಮುನ್ನೆಲೆಗೆ ಬಂದಿವೆ. ಆದರೆ, ಇವುಗಳ ಕುರಿತು ಮುಕ್ತ ಚಿಂತನೆ ನಡೆಯಬೇಕು ಎಂದು ಹೇಳಿದರು.

ಕಣ್ಣಿಗೆ ಕಾಣುವುದಷ್ಟೇ ಸತ್ಯ. ದೇಹ, ಆತ್ಮ ಎರಡೂ ಒಂದೇ ಎಂದು ಬಸವಣ್ಣ ಹೇಳಿದ್ದಾನೆ. ದೇಹ ಹೋದರೆ ಆತ್ಮವೂ ಹೋಗುತ್ತದೆ ಎಂಬ ಸಿದ್ಧಾಂತದ ಪ್ರಕಾರ ಸ್ವರ್ಗ, ನರಕಗಳೆಲ್ಲವೂ ಸುಳ್ಳು ಎಂಬುದು ತಿಳಿಯುತ್ತದೆ. ಈ ಲೋಕಗಳ ಪರವಾನಗಿ ಪಡೆದವರಂತೆ ವರ್ತಿಸುವ ಪೂರೋಹಿತಶಾಹಿಗಳಿಗೆ ಕೆಲಸ ಇಲ್ಲದಂತೆ ಮಾಡಿದವರು ಬಸವಣ್ಣ, ಬುದ್ಧ ಎಂದರು.

ಶ್ವಾಸ ಸಂಸ್ಥೆ ಯೋಗ ಗುರು ವಚನಾನಂದ ಸ್ವಾಮೀಜಿ ಮಾತನಾಡಿ, ‘ಬದುಕಿನಲ್ಲಿ ಎಲ್ಲದಕ್ಕೂ ಪರ್ಯಾಯ ಇದೆ. ಆದರೆ, ಆರೋಗ್ಯಕ್ಕೆ ಪರ್ಯಾಯ ಇಲ್ಲ. ಎಷ್ಟೇ ಹಣ, ಅಧಿಕಾರ ಅಂತಸ್ತು ಇದ್ದರೂ ಆರೋಗ್ಯ ಇಲ್ಲದಿದ್ದರೆ ಅದು ಪ್ರಯೋಜನಕ್ಕೆ ಬಾರದು’

ಎಂದು ಹೇಳಿದರು.

‘ಈಗ ಗುಣಕ್ಕಿಂತ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯ. ನಟಿ ಶ್ರೀದೇವಿ, ಜಯಲಲಿತಾ ಅವರಿಗೆ ಎಲ್ಲವೂ ಇತ್ತು. ಆದರೆ, ಆರೋಗ್ಯ ಇರಲಿಲ್ಲ. ಒಳ್ಳೆಯ ವ್ಯಕ್ತಿಗಳ ಆರೋಗ್ಯ ಮುಖ್ಯ. ಅದರಿಂದ ಸಮಾಜಕ್ಕೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ಪ್ರಚೋದನೆ ಅಲ್ಪಕಾಲದ್ದು: ಚಿಂತಕಿ ಲೀಲಾ ಮಲ್ಲಿಕಾರ್ಜುನ ಕಾರಟಗಿ ಮಾತನಾಡಿ, ‘ಪ್ರೇರಣೆ ಸಾರ್ವಕಾಲಿಕವಾದದ್ದು, ಪ್ರಚೋದನೆ ಅಲ್ಪಕಾಲದ್ದು. ಅಕ್ಕಮಹಾದೇವಿಗೆ ಇದ್ದಿದ್ದು ಪ್ರೇರಣೆ, ಪ್ರಚೋದನೆ ಅಲ್ಲ. ಈಚೆಗೆ ಮನುಷ್ಯತ್ವ ಕಾಣುವ ಪ್ರೇರಣೆ ಸಿಗುತ್ತಿಲ್ಲ’ ಎಂದು

ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಿದ್ದರು. ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜ್‌, ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ಇದ್ದರು.

ಸಮಾರಂಭದಲ್ಲಿ ಜಯದೇವ ಪ್ರತಿಭಾವಂತ ವಿದ್ಯಾರ್ಥಿ–ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂದನೂರು ಮುಪ್ಪಣ್ಣ ಸ್ವಾಗತಿಸಿದರು. ಎಂ.ಕೆ.ಬಕ್ಕಣ್ಣ ನಿರೂಪಿಸಿದರು. ಜೀವಿತಾ ಮೌನೇಶ್, ಪ್ರಕೃತಿ ಸುಗಮ ಸಂಗೀತ ಪ್ರಸ್ತುತ ಪಡಿಸಿದರು.

***

‘ಶರಣ ಸಂಸ್ಕೃತಿ ಉತ್ಸವ’ದಲ್ಲಿ ಇಂದು

ಬಸವಕೇಂದ್ರ, ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್: ಶರಣ ಸಂಸ್ಕೃತಿ ಉತ್ಸವ. ಸಹಜ ಶಿವಯೋಗ. ನೇತೃತ್ವ: ಶಿವಮೂರ್ತಿ ಮುರುಘಾ ಶರಣರು. ಬೆಳಿಗ್ಗೆ 7.30ಕ್ಕೆ. ಉಚಿತ ನೇತ್ರ ಪರೀಕ್ಷೆ ಮತ್ತು ಚಿಕಿತ್ಸೆ. ಬೆಳಿಗ್ಗೆ 9.45ಕ್ಕೆ. ರಾಜ್ಯ ಮಟ್ಟದ ಚದುರಂಗ ಸ್ಪರ್ಧೆ ‘ಜಯದೇವ ಟ್ರೋಫಿ’. ಉದ್ಘಾಟನೆ: ಶಾಸಕ ಶಾಮನೂರು ಶಿವಶಂಕರಪ್ಪ. ಬೆಳಿಗ್ಗೆ 11.30ಕ್ಕೆ. ಸಾಧಕರ ಸಮಾವೇಶ. ಜಯದೇವ ಶ್ರೀ ಮತ್ತು ಶೂನ್ಯಪೀಠ ಪ್ರಶಸ್ತಿ ಪ್ರದಾನ. ‘ಜಯದೇವ ಶ್ರೀ’ ಪ್ರಶಸ್ತಿ: ಸಂಸದ ಮಲ್ಲಿಕಾರ್ಜುನ ಖರ್ಗೆ, ‘ಶೂನ್ಯಪೀಠ ಅಲ್ಲಮ’ ಪ್ರಶಸ್ತಿ: ಹಂಪ ನಾಗರಾಜಯ್ಯ, ‘ಶೂನ್ಯಪೀಠ ಅಕ್ಕನಾಗಮ್ಮ’ ಪ್ರಶಸ್ತಿ: ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ. ‘ಶೂನ್ಯಪೀಠ ಚನ್ನಬಸವ’ ಪ್ರಶಸ್ತಿ: ಸಮಾಜ ಸೇವಕ ಡಾ.ಸಿ.ಆರ್‌.ನಸೀರ್‌ ಅಹಮದ್‌ ಅವರಿಗೆ ಪ್ರದಾನ. ನೇತೃತ್ವ: ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ. ಅತಿಥಿಗಳು: ಸಂಸದ ಜಿ.ಎಂ.ಸಿದ್ದೇಶ್ವರ, ಸಚಿವ ರಮೇಶ್‌ ಜಾರಕಿಹೊಳಿ. ಹಾಸ್ಯಲಾಸ್ಯ: ನಗೆ ಭಾಷಣಕಾರ ಕೋಗುಳಿ ಕೊಟ್ರೇಶ್. ಸ್ಥಳ: ಶಿವಯೋಗಾಶ್ರಮ. ಜಯದೇವ ವೃತ್ತ. ಸಂಜೆ 6.30ಕ್ಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry