ಮಾದರಿ ಚುನಾವಣೆಗೆ ಸಜ್ಜಾಗಲಿದೆ ಜಗಳೂರು

7
ಸಿರಿಗೆರೆ ಸ್ವಾಮೀಜಿ ಪ್ರಯೋಗಕ್ಕೆ ಅಭ್ಯರ್ಥಿಗಳ ಸಹಮತ

ಮಾದರಿ ಚುನಾವಣೆಗೆ ಸಜ್ಜಾಗಲಿದೆ ಜಗಳೂರು

Published:
Updated:
ಮಾದರಿ ಚುನಾವಣೆಗೆ ಸಜ್ಜಾಗಲಿದೆ ಜಗಳೂರು

ಜಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಣ, ಹೆಂಡ ಇತರೆ ಆಮಿಷಗಳನ್ನು ಒಡ್ಡದೆ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಮತಯಾಚನೆ ಮಾಡಬೇಕು ಎಂಬ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಪ್ರಯೋಗಕ್ಕೆ ಬದ್ಧರಾಗಿರುವುದಾಗಿ ವಿವಿಧ ರಾಜಕೀಯ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು ಘೋಷಿಸಿದರು.

ತಾಲ್ಲೂಕಿನ ಸೊಕ್ಕೆ ಗ್ರಾಮದಲ್ಲಿ ಸಿರಿಗೆರೆಯ ತರಳಬಾಳು ಮಠದಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ರಾಜಕೀಯ ಶುದ್ಧೀಕರಣ ಪ್ರಯೋಗ–2018’ ಭ್ರಷ್ಟಾಚಾರ ಮುಕ್ತ ಚುನಾವಣಾ ಜನಜಾಗೃತಿ ಸಮಾರಂಭದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಕಾಂಗ್ರೆಸ್‌ ಶಾಸಕ ಎಚ್‌.ಪಿ.ರಾಜೇಶ್‌, ಬಿಜೆಪಿ ಮಾಜಿ ಶಾಸಕ ಎಸ್‌.ವಿ.ರಾಮಚಂದ್ರ ಹಾಗೂ ಇನ್ನಿತರ ಆಕಾಂಕ್ಷಿಗಳು ಸಾಮೂಹಿಕವಾಗಿ ಪ್ರತಿಜ್ಞೆ ಕೈಗೊಂಡರು.

ಸ್ವಾಮೀಜಿ ಮಾತನಾಡಿ, ‘ಚುನಾವಣೆ ಸಮಯದಲ್ಲಿ ಮತದಾರರಿಗೆ ಹಣ, ಹೆಂಡದ ಮೂಲಕ ಆಮಿಷ ಒಡ್ಡುವಂತಿಲ್ಲ. ಇದು ಸಂವಿಧಾನ ಮತ್ತು ಧರ್ಮಕ್ಕೆ ಎಸಗಿದ ಅಪಚಾರವಾಗಲಿದೆ. ಚುನಾವಣೆಯಲ್ಲಿ ವ್ಯಕ್ತಿಯ ತೇಜೋವಧೆಗೆ ಅವಕಾಶ ನೀಡದೆ, ಪ್ರತಿಯೊಬ್ಬ ಅಭ್ಯರ್ಥಿ ಅಭಿವೃದ್ಧಿ ಆಧಾರದಲ್ಲಿ ಪ್ರಚಾರ ಕೈಗೊಳ್ಳಬೇಕು. ಭ್ರಷ್ಟಾಚಾರ ಮುಕ್ತ ಪಾರದರ್ಶಕ ಚುನಾವಣೆಯ ಮೂಲಕ ದೇಶದಲ್ಲೇ ಜಗಳೂರು ವಿಧಾನಸಭಾ ಕ್ಷೇತ್ರ ಮಾದರಿಯಾಗಬೇಕು’ ಎಂದರು.

‘ರಾಜಕೀಯ ಪಕ್ಷಗಳನ್ನು ದೂಷಿಸುವ ಮುನ್ನ ಮತದಾರರು ಸಹ ಹಣ ಮುಂತಾದ ಆಮಿಷಕ್ಕೆ ಒಳಗಾಗಬಾರದು. ಚುನಾ

ವಣಾ  ಸಂದರ್ಭದಲ್ಲಿ ತೆಗೆದುಕೊಳ್ಳುವ ಹಣದಿಂದ ಯಾರೂ ಜೀವನ ನಡೆಸಲು ಸಾಧ್ಯವಿಲ್ಲ. ಚುನಾವಣೆ ನಂತರ, ಜನಪ್ರತಿನಿಧಿಯ ಮೂಲಕ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಳ್ಳಿ. 1994ರಲ್ಲಿ ಜಗಳೂರು ಕ್ಷೇತ್ರದಲ್ಲಿ ನಾವು ಪಾರದರ್ಶಕ ಆಯ್ಕೆಗಾಗಿ ಎಂ.ಬಸಪ್ಪ ಅವರನ್ನು ಆಯ್ಕೆ ಮಾಡಲು ಸೂಚಿಸಿದ್ದೆವು. ಅದರಂತೆ ಬಸಪ್ಪ ಆಯ್ಕೆಯಾಗಿದ್ದರು’ ಎಂದು ಸ್ಮರಿಸಿದರು.

‘ಇಂದಿನ ರಾಜಕೀಯ ಶುದ್ಧೀಕರಣ ಪ್ರಯೋಗ ಕಾರ್ಯಕ್ರಮವನ್ನು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದುವರಿಸಲಾಗುವುದು. ಮಾರ್ಚ್ 8ರಂದು ಕಲ್ಲೇದೇವಪುರ, 16ರಂದು ಬಿಳಿಚೋಡು, 21ರಂದು ಅರಸಿಕೆರೆ ಮತ್ತು 30ರಂದು ಜಗಳೂರಿನಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗುವುದು’ ಎಂದು ಸ್ವಾಮೀಜಿ ಮಾಹಿತಿ ನೀಡಿದರು.

ಎಚ್‌.ಪಿ. ರಾಜೇಶ್‌ ಮಾತನಾಡಿ, ‘ಸಿರಿಗೆರೆ ಶ್ರೀಗಳ ನೂತನ ಪ್ರಯೋಗಕ್ಕೆ ನನ್ನ ಸಹಮತ ಇದೆ. ಚುನಾವಣೆಯಲ್ಲಿ ಹಣ, ಹೆಂಡದ ಆಮಿಷ ಒಡ್ಡುವುದಿಲ್ಲ. ಮತದಾರರೂ ಸಹಕರಿಸಬೇಕು. ನಾನು ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ’ ಎಂದು ತಿಳಿಸಿದರು.

ಎಸ್‌.ವಿ. ರಾಮಚಂದ್ರ ಮಾತನಾಡಿ, ‘ಮತದಾರರು ಭ್ರಷ್ಟರಲ್ಲ. ರಾಜಕಾರಣಿಗಳಾದ ನಾವೇ ಮತದಾರರನ್ನು ಭ್ರಷ್ಟರನ್ನಾಗಿ ಮಾಡಿದ್ದೇವೆ. ಶ್ರೀಗಳ ಆಶಯಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. ಚುನಾವಣೆಯಲ್ಲಿ ನಾನೂ ಆಮಿಷಗಳನ್ನು ಒಡ್ಡುವುದಿಲ್ಲ. ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ’ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷದ ಆಕಾಂಕ್ಷಿ ಪುಷ್ಪಾ ಲಕ್ಷ್ಮಣಸ್ವಾಮಿ, ಜೆಡಿಎಸ್‌ ಆಕಾಂಕ್ಷಿ ದೇವೆಂದ್ರಪ್ಪ, ಹನುಮಂತಪ್ಪ, ಎಂ.ಸುರೇಶ್‌, ಕೆ.ಆರ್‌.ತಿಪ್ಪೇಸ್ವಾಮಿ ಮಾತನಾಡಿ, ಸ್ವಚ್ಛ ಚುನಾವಣೆಗೆ ನಮ್ಮ ಸಹಮತ ಇದೆ ಎಂದು ಘೋಷಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್‌.ಕೆ.ಮಂಜುನಾಥ್‌, ಮುಖಂಡ ಎಚ್‌.ನಾಗರಾಜ್‌, ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಗುರುಸಿದ್ದಪ್ಪ, ಬೋಜೇಗೌಡ, ಡಾ. ಮಂಜುನಾಥ್‌ ಗೌಡ, ಶಿವಕುಮಾರ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry