‘ಸಂಸದ ಆಗಬೇಕಿದ್ದವನು,ಮುಖ್ಯಮಂತ್ರಿಯಾದೆ’

7
ಮೊದಲು ಶಾಸಕರಾದ ಅನುಭವ ಬಿಚ್ಚಿಟ್ಟ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದ ಜಗದೀಶ ಶೆಟ್ಟರ್‌

‘ಸಂಸದ ಆಗಬೇಕಿದ್ದವನು,ಮುಖ್ಯಮಂತ್ರಿಯಾದೆ’

Published:
Updated:
‘ಸಂಸದ ಆಗಬೇಕಿದ್ದವನು,ಮುಖ್ಯಮಂತ್ರಿಯಾದೆ’

ಹುಬ್ಬಳ್ಳಿ: ‘1991ರಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್‌ ದೊರೆತಿತ್ತು. ನಾಮಪತ್ರವನ್ನೂ ಸಲ್ಲಿಸಿದ್ದೆ. ಕಣದಲ್ಲಿ ಉಳಿದಿದ್ದರೆ, ಬಹುಶಃ ಸಂಸದನಾಗುತ್ತಿದ್ದೆ. ಕೊನೆ ಗಳಿಗೆಯಲ್ಲಿ ಪಕ್ಷದ ನಿರ್ಧಾರದಂತೆ ನಾಮಪತ್ರ ವಾಪಸ್‌ ಪಡೆದೆ. ಮುಂದೆ 1994ರಲ್ಲಿ ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದೆ. ನಂತರದ ವರ್ಷಗಳಲ್ಲಿ ಮುಖ್ಯಮಂತ್ರಿಯೂ ಆದೆ’

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಎರಡು ದಶಕಗಳ ಹಿಂದೆ ನಡೆದ ಘಟನಾವಳಿಗಳನ್ನು ‘ಪ್ರಜಾವಾಣಿ’

ಯೊಂದಿಗೆ ಹಂಚಿಕೊಂಡರು.

‘ನಾನು ಮಾಡಿಕೊಂಡು ಬಂದಿದ್ದ ಹೋರಾಟ ಗುರುತಿಸಿದ ನಾಯಕರಾದ ಕೇಂದ್ರ ಸಚಿವ ಅನಂತಕುಮಾರ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು, ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ನೀಡಿದ್ದರು. ಕೊನೆ ಗಳಿಗೆಯಲ್ಲಿ ಹಿರಿಯರಾದ ಚಂದ್ರಕಾಂತ ಬೆಲ್ಲದ ಅವರು ಪಕ್ಷಕ್ಕೆ ಸೇರ್ಪಡೆಯಾದರು. ನನ್ನ ಬದಲಿಗೆ, ಅವರಿಗೆ ಟಿಕೆಟ್‌ ನೀಡಲು ನಿರ್ಧರಿಸಲಾಯಿತು. ಪಕ್ಷದ ಆದೇಶ ಪಾಲಿಸಿ ನಾಮಪತ್ರ ಹಿಂತೆಗೆದುಕೊಂಡೆ. ಮುಂದೆ ಅದೇ ನಿರ್ಧಾರ ನನಗೆ ರಾಜಕೀಯವಾಗಿ ಬೆಳೆಯಲು ನೆರವಾಯಿತು’ ಎಂದು ನೆನಪಿಸಿಕೊಂಡರು.

‘ರಾಜಕೀಯ ಹಿನ್ನಲೆಯುಳ್ಳ ಕುಟುಂಬವಾದರೂ, ರಾಜಕೀಯದ ಬಗ್ಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಚಿಕ್ಕಪ್ಪ ಸದಾಶಿವ ಶೆಟ್ಟರ್‌ ಶಾಸಕರಾಗಿದ್ದರು. ತಂದೆ ಎಸ್‌.ಎಸ್‌. ಶೆಟ್ಟರ್‌ ಅವರು, ಐದು ಬಾರಿ ಪಾಲಿಕೆ ಸದಸ್ಯರಾಗಿದ್ದರು. ಒಮ್ಮೆ ಮೇಯರ್‌ ಕೂಡ ಆಗಿದ್ದರು’ ಎಂದು ಸ್ಮರಿಸಿಕೊಂಡರು.

‘ಹೈಕೋರ್ಟ್ ಪೀಠ ಸ್ಥಾಪನೆ, ರೈಲ್ವೆ ವಲಯ ಆರಂಭ, ಕಳಸಾ–ಬಂಡೂರಿ ಹಾಗೂ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ. ಆದರೆ, ಎಂದೂ ಚುನಾವಣೆಗೆ ನಿಲ್ಲುವ ವಿಚಾರ ಮಾಡಿರಲಿಲ್ಲ. ವಕೀಲ ವೃತ್ತಿಯನ್ನು ಗಂಭೀರವಾಗಿಯೇ ಪರಿಗಣಿಸಿದ್ದೆ. ಆಕಸ್ಮಿಕವಾಗಿ 1989ರಲ್ಲಿ ರಾಜಕೀಯಕ್ಕೆ ಬಂದೆ’ ಎಂದು ರಾಜಕೀಯದ ಹಾದಿಯನ್ನು ಬಿಚ್ಚಿಟ್ಟರು.

‘1994ರಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷದ ಮುಖಂಡರು ಸೂಚಿಸಿದಾಗ ಒಪ್ಪಿಕೊಂಡೆ. ಆದರೆ, ನನ್ನ ನಿರ್ಧಾರಕ್ಕೆ ಹಲವಾರು ಸ್ನೇಹಿತರು ಅಸಮಾಧಾನ ವ್ಯಕ್ತಪಡಿಸಿದರು. ನಿಮ್ಮ ಚಿಕ್ಕಪ್ಪ, ತಂದೆಯವರು ಹುಬ್ಬಳ್ಳಿ ನಗರ ಕ್ಷೇತ್ರದಿಂದ ಚುನಾವಣೆಗೆ ನಿಂತಿ

ದ್ದರು. ನೀನೂ ಹುಬ್ಬಳ್ಳಿ ನಗರದಿಂದಲೇ ಸ್ಪರ್ಧಿಸು. ಹುಬ್ಬಳ್ಳಿ ಗ್ರಾಮೀಣ ಬೇಡ ಎಂದು ಸಲಹೆ ನೀಡಿದರು’ ಎಂದು ನೆನಪಿಸಿಕೊಂಡರು

‘ಇನ್ನೂ ಕೆಲವರು, ಹುಬ್ಬಳ್ಳಿ ಗ್ರಾಮೀಣ ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿ ಅವರು ಗೆದ್ದಿರುವ ಕ್ಷೇತ್ರ. ಈಗ ಅವರ ಪುತ್ರ ಬಸವರಾಜ ಬೊಮ್ಮಾಯಿ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಿಂದ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದವರು ಯಾರೂ ಹೆಚ್ಚಿನ ಮತಗಳನ್ನು ಗಳಿಸಿಲ್ಲ. ಆದ್ದರಿಂದ ‘ರಿಸ್ಕ್‌’ ತೆಗೆದುಕೊಳ್ಳಬೇಡ ಎಂದು ಹೆದರಿಸಿದರು’ ಎಂದು ಅಂದಿನ ಪರಿಸ್ಥಿತಿಯನ್ನು ವಿವರಿಸಿದರು.

‘ಹೋರಾಟದ ಬಲವಿತ್ತು. ಜತೆಗೆ ಪಕ್ಷ ಸಂಘಟನೆಯನ್ನೂ ಮಾಡಿದ್ದೆ. ಪಕ್ಷಕ್ಕೆ ಬೆಂಬಲ ಇಲ್ಲದಲ್ಲಿಯೇ ನಿಂತು ಗೆಲುವು ಸಾಧಿಸಬೇಕು ಎಂಬ ಗುರಿಯಿಟ್ಟುಕೊಂಡು ಮುನ್ನುಗ್ಗಿದೆ. ನನ್ನ ಮಾತಿಗೆ ಎಲ್ಲರೂ ಸಮ್ಮತಿಸಿದರು. ಸ್ನೇಹಿತರ, ವಕೀಲರ, ಮುಖಂಡರ ಹಾಗೂ ಕಾರ್ಯಕರ್ತರ ನೆರವಿನಿಂದ ಅಲೆಗಳ ವಿರುದ್ಧ ಈಜಿಯೇ ದಡ ಸೇರಿದೆ. ಗೆಲುವು ನನ್ನದಾಯಿತು. ಆ ಮೇಲೆ ಹಿಂತಿರುಗಿ ನೋಡಿದ್ದೇ ಇಲ್ಲ’ ಎಂದರು.

‘ಎರಡು ದಶಕಗಳ ಹಿಂದೆ ಚುನಾವಣೆಗಳಲ್ಲಿ ಹಣದ ಪ್ರಭಾವ ಇರಲಿಲ್ಲ. ವ್ಯಕ್ತಿ, ಪಕ್ಷ, ಅಭಿವೃದ್ಧಿ ಕೆಲಸ ನೋಡಿ ಮತ ಹಾಕುತ್ತಿದ್ದರು. ಈಗ ಹಣದ ಪ್ರಭಾವ, ಗೂಂಡಾಗಿರಿ, ಕೀಳು ಮಟ್ಟದ ರಾಜಕಾರಣ, ಮತದಾರರಿಗೆ ಆಮಿಷ ಒಡ್ಡುವುದು ಜಾಸ್ತಿಯಾಗಿದೆ. ಆಮಿಷ ಒಡ್ಡದಿದ್ದರೂ, ಮತದಾರರು ಕೈ ಹಿಡಿದಿದ್ದಾರೆ. ಉತ್ತಮ ಕೆಲಸ ಮಾಡಿದ ತೃಪ್ತಿ ನನಗಿದೆ’ ಎಂದು ಹೇಳಿದರು.

‘ಹಿಂದೆ ಸದನದಲ್ಲಿ ಗುಣಮಟ್ಟದ ಚರ್ಚೆ ನಡೆಯುತ್ತಿತ್ತು. ಹಿರಿಯ ನಾಯಕರಲ್ಲಿ ಅಧ್ಯಯನ ಪ್ರವೃತ್ತಿ ಕಾಣಬಹುದಾಗಿತ್ತು. ಸಮಸ್ಯೆಗಳ ಬಗ್ಗೆ ಆಳವಾದ ಚರ್ಚೆ ನಡೆಯುತ್ತಿತ್ತು. ಈಗ ಪ್ರಚಾರಕ್ಕಾಗಿಯೇ ಚರ್ಚೆ ನಡೆಯುತ್ತಿದೆ. ಚರ್ಚೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸ್ಪೀಕರ್‌ ಆಗಿದ್ದಾಗ ಪ್ರಯತ್ನಿಸಿದ್ದೆ’ ಎಂದು ಸ್ಮರಿಸಿಕೊಂಡರು. ‘ಆರನೇ ಬಾರಿಗೆ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ’ ಎಂದು ಹೇಳಿದರು.

**

ಚುನಾವಣಾ ಹಾದಿ

1994: ಹುಬ್ಬಳ್ಳಿ ಗ್ರಾಮೀಣದಿಂದ ಸ್ಪರ್ಧೆ ಗೆಲುವು

1999: ಹುಬ್ಬಳ್ಳಿ ಗ್ರಾಮೀಣದಿಂದ ಸ್ಪರ್ಧೆ ಗೆಲುವು

2004: ಹುಬ್ಬಳ್ಳಿ ಗ್ರಾಮೀಣದಿಂದ ಸ್ಪರ್ಧೆ ಗೆಲುವು

2008: ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ನಿಂದ ಸ್ಪರ್ಧೆ ಗೆಲುವು

2013: ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ನಿಂದ ಸ್ಪರ್ಧೆ ಗೆಲುವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry