ಹಾವೇರಿ: ಸಮಸ್ಯೆ ಆಲಿಸಿದ ಡಿ.ಸಿ.

7
ತಹಶೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ಭೇಟಿ

ಹಾವೇರಿ: ಸಮಸ್ಯೆ ಆಲಿಸಿದ ಡಿ.ಸಿ.

Published:
Updated:
ಹಾವೇರಿ: ಸಮಸ್ಯೆ ಆಲಿಸಿದ ಡಿ.ಸಿ.

ಹಾವೇರಿ: ‘ಸರ್ಕಾರದ ವಿವಿಧ ಸೌಲಭ್ಯಗಳು, ಶೈಕ್ಷಣಿಕ ಮತ್ತಿತರ ಕಾರಣಕ್ಕಾಗಿ ಪ್ರಮಾಣ ಪತ್ರಗಳನ್ನು ಪಡೆಯಲು ಬರುವ ನಾಗರಿಕರಿಗೆ ತ್ವರಿತಗತಿಯಲ್ಲಿ ಸೇವೆ ಸಲ್ಲಿಸಲು ತಹಶೀಲ್ದಾರ್‌ಗಳು ಕ್ರಮ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಸೂಚನೆ ನೀಡಿದರು.

ನಗರದ ಮಿನಿ ವಿಧಾನಸೌಧಕ್ಕೆ ಗುರುವಾರ ಭೇಟಿ ನೀಡಿ, ಕಂದಾಯ ಇಲಾಖೆಯ ವಿವಿಧ ವಿಭಾಗಗಳು ಹಾಗೂ ಸೇವೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಕಚೇರಿಗೆ ಬಂದಿದ್ದ ಬಡವರು, ವೃದ್ಧರು, ಮಹಿಳೆಯರ ಸಮಸ್ಯೆ ಆಲಿಸಿದರು.

‘ಆಧಾರ್ ಕಾರ್ಡ್‌’ ಪಡೆಯಲು ತೀವ್ರ ಸಮಸ್ಯೆ ಎದುರಾಗುತ್ತಿದೆ. ಬೆಳಿಗ್ಗೆ 4 ಗಂಟೆಯಿಂದ ಸರದಿ ಕಾಯುತ್ತಿದ್ದೇವೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿ ಬಳಿ ದೂರಿಕೊಂಡರು.

‘ಎಲ್ಲ ಆಧಾರ್ ಕೇಂದ್ರಗಳ ಮಾಹಿತಿ ಹಾಗೂ ಸಂಪರ್ಕ ಸಂಖ್ಯೆಯನ್ನು ಕೂಡಲೇ ಪ್ರಕಟಿಸಿ. ಅಲ್ಲದೇ, ಬೆಳಿಗ್ಗೆ 6ರಿಂದ ಸಂಜೆ 9ರ ತನಕ ಸೇವೆ ಸಲ್ಲಿಸುವ ಹೆಚ್ಚುವರಿ ಕೇಂದ್ರವೊಂದನ್ನು ತೆರೆಯಿರಿ’ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ನಾಗರಿಕರ ಸಮಸ್ಯೆಗಳನ್ನು ಆಲಿಸಿದರು. ಜಾತಿ ಪ್ರಮಾಣ ಪತ್ರ ಮತ್ತಿತರ ದಾಖಲೆಗಳು ಪಡೆಯುವಲ್ಲಿ ಆಗುತ್ತಿರುವ ಗೊಂದಲಗಳ ಬಗ್ಗೆ ನಾಗರಿಕರು ದೂರಿಕೊಂಡರು. ಎರಡು ಸಿಬ್ಬಂದಿ, ಹೆಚ್ಚುವರಿ ಕಂಪ್ಯೂಟರ್ ಅಳವಡಿಸುವ ಮೂಲಕ ಬೆಳಿಗ್ಗೆ 6ರಿಂದ ರಾತ್ರಿ 9 ರ ತನಕ ಎರಡು ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಕೇಂದ್ರವನ್ನು ಶೀಘ್ರವೇ ತೆರೆಯಿರಿ ಎಂದು ಸೂಚನೆ ನೀಡಿದರು.

ವಿವಿಧ ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ‘ಪ್ರತಿನಿತ್ಯ ಬಂದ ಅರ್ಜಿಗಳ ಸಂಖ್ಯೆ, ವಿಲೇವಾರಿ ಆಗಿರುವುದು, ಸಾರ್ವಜನಿಕರ ಮನವಿಗಳ ಬಗ್ಗೆ ಖುದ್ದು ತಹಶೀಲ್ದಾರ್‌ ಅವರೇ ಬೆಳಿಗ್ಗೆ ಮತ್ತು ಸಂಜೆ ಪರಿಶೀಲಿಸಬೇಕು. ಅನಗತ್ಯ ವಿಳಂಬ ಮಾಡುವ ಸಿಬ್ಬಂದಿಗೆ ಎಚ್ಚರಿಕೆ ನೀಡಿ, ಬಳಿಕ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಿ’ ಎಂದರು.

ಚುನಾವಣಾ ಕಾರ್ಯಗಳು ಆರಂಭಗೊಂಡಿವೆ. ಜೂನ್‌ನಲ್ಲಿ ಶಾಲಾ– ಕಾಲೇಜುಗಳೂ ಆರಂಭಗೊಳ್ಳಲಿವೆ. ಹೀಗಾಗಿ, ಸಾರ್ವಜನಿಕರು ವಿವಿಧ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸುತ್ತಾರೆ. ವಿಳಂಬ ಮಾಡಿದಷ್ಟು ಗೊಂದಲ ಹೆಚ್ಚಾಗುತ್ತದೆ. ಅದಕ್ಕಾಗಿ ತ್ವರಿತಗತಿಯಲ್ಲಿ ಸೇವೆ ನೀಡಲು ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಅಗತ್ಯ ಬಿದ್ದಲ್ಲಿ, ಖಾಸಗಿ ಡಾಟಾ ಆಪರೇಟರ್‌ಗಳನ್ನು ನಿಯೋಜಿಸಿಕೊಳ್ಳಿ ಎಂದರು.

ತಾಲ್ಲೂಕು ಕಚೇರಿಯ ಕಾರ್ಯನಿರ್ವಹಣೆ ಬಗ್ಗೆ ಪ್ರತಿ ವಾರಕ್ಕೊಮ್ಮೆ ಉಪವಿಭಾಗಾಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದರು.

ಉಪವಿಭಾಗಾಧಿಕಾರಿ ಪಿ.ಎನ್. ಲೋಕೇಶ್, ತಹಶೀಲ್ದಾರ್ ಜೆ.ಬಿ. ಮಜ್ಜಗಿ ಇದ್ದರು.

**

ಸಾರ್ವಜನಿಕರ ಅರ್ಹ ಸೇವೆಗಳನ್ನು ನೀಡುವಲ್ಲಿ ಯಾವುದೇ ಸಿಬ್ಬಂದಿ ಅನಗತ್ಯ ವಿಳಂಬ ಮಾಡಿದರೆ, ತಕ್ಷಣವೇ ಗಮನಕ್ಕೆ ತನ್ನಿ. ಸೂಕ್ತ ಕ್ರಮ ಕೈಗೊಳ್ಳುತ್ತೇನೆ

–ಡಾ.ವೆಂಕಟೇಶ್ ಎಂ.ವಿ. , ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry