ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಜವಳಿ ಕ್ಷೇತ್ರದ ಅಭಿವೃದ್ಧಿಗೆ ಆಧ್ಯತೆ

ಆಧುನಿಕ ಜವಳಿ ಪಾರ್ಕ್‌ ಶಂಕುಸ್ಥಾಪನೆ, ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ವಿಶ್ವಾಸ
Last Updated 3 ಮಾರ್ಚ್ 2018, 7:48 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ದೇಶದ ಶೇ 80 ರಷ್ಟು ಜನರು ಕೃಷಿಯಲ್ಲಿ ತೊಡಗಿದ್ದಾರೆ. ಇದಕ್ಕೆ ಪೂರಕವಾಗಿ ಜವಳಿ ಉದ್ದಿಮೆ ಇದ್ದು, ರಾಜ್ಯ ಸರ್ಕಾರವು ಈ ಎರಡು ಕ್ಷೇತ್ರಗಳಿಗೆ ಹೆಚ್ಚಿನ ಆಧ್ಯತೆ ನೀಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ತಾಲ್ಲೂಕಿನ ಹನುಮನಮಟ್ಟಿ ಗ್ರಾಮದಲ್ಲಿ ಶುಕ್ರವಾರ ನಡೆದ ‘ಆಧುನಿಕ ಜವಳಿ ಪಾರ್ಕ್ ಶಂಕುಸ್ಥಾಪನೆ’ ನೆರವೇರಿಸಿ  ಮಾತನಾಡಿದರು.

‘ನಮ್ಮ ಜಿಲ್ಲೆ ಅತೀ ಹಿಂದುಳಿದ ಜಿಲ್ಲೆಯಾಗಿದ್ದು ಜಿಲ್ಲೆಯಲ್ಲಿ 25 ಸಾವಿರ ಪಾರಂಪರಿಕ ನೇಕಾರ ಕುಂಟುಂಬಗಳಿವೆ’ ಎಂದರು.

‘ಆಧುನಿಕ ಜವಳಿ ಪಾರ್ಕ್‌ನಿಂದ ಜಿಲ್ಲೆಯ 5 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಸರ್ಕಾರದ ವತಿಯಿಂದ ಕೌಶಲ ತರಬೇತಿ ನೀಡಲಾಗುತ್ತಿದ್ದು, ಜವಳಿ ಪಾರ್ಕ್ ಕ್ರಿಯಾಯೋಜನೆ ಸಂಪೂರ್ಣ ಮುಗಿದಿದೆ. ಇನ್ನು ಕೆಲವೇ ದಿನಗಳಲ್ಲಿ ಟೆಂಡರ್‌ ಕರೆಯಲಾಗುವುದು’ ಎಂದರು.

‘ತಾಲ್ಲೂಕಿನ ಕಮದೋಡ ಗ್ರಾಮದ ಬಳಿ ₹7.6 ಕೋಟಿ ಗಳಲ್ಲಿ ಉಣ್ಣೆ ಟೆಕ್ಸ್‌ಟೈಲ್ಸ್‌ ಆರಂಭಿಸಿದ್ದು, ಬೆಳಗಾವಿ, ಬೆಂಗಳೂರು, ಬಳ್ಳಾರಿಯಲ್ಲಿ ಜವಳಿ ಪಾರ್ಕ್ ಮತ್ತು ಮೈಸೂರಿನಲ್ಲಿ ಮೆಗಾ ಸಿಲ್ಕ್ ಕಂಪನಿ ಆರಂಭಿಸಲು ಸರ್ಕಾರ ಮುಂದಾಗಿದೆ. ಎಸ್‌ಇಪಿಟಿ ಯೋಜನೆಯಡಿಯಲ್ಲಿ ಶೇ 90 ರಷ್ಟು ಸಹಾಯ ಧನದಲ್ಲಿ ಸಿದ್ಧ ಉಡುಪು ತಯಾರಿಕ ಕಂಪನಿಗಳಿಗೆ ಉತ್ತೇಜನ ನೀಡಲು ಸರ್ಕಾರ ಚಿಂತನೆ ನಡೆಸಿದೆ’ ಎಂದರು.

‘ರಾಜ್ಯ ಸರ್ಕಾರ ಕೈಮಗ್ಗಗಳಿಂದ 65 ಲಕ್ಷ ಮೀಟರ್‌ ಬಟ್ಟೆ ಖರೀದಿಸಲು ಮತ್ತು ಪವರಲೂಮ್‌ನಿಂದ 20 ಲಕ್ಷ ಮೀಟರ್‌ ಬಟ್ಟೆ ಖರೀದಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಅಭಿವೃದ್ಧಿಗೆ ಹೆಚ್ಚು ಶ್ರಮಿಸುತ್ತಿದ್ದಾರೆ’ ಎಂದರು.

ಬೆಂಗಳೂರು ಕೆ.ಎಸ್.ಟಿ.ಐ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಮೂರ್ತಿ ಮಾತನಾಡಿ, ‘ಜಿಲ್ಲೆಯಲ್ಲಿ ಸ್ಥಾಪಿಸಲಾಗುವ ಆಧುನಿಕ ಜವಳಿ ಪಾರ್ಕ್‌ ಉದ್ದಿಮೆದಾರರಿಗೆ ಪ್ಲಾಟ್‌ಗಳನ್ನು ಒದಗಿಸುವ ದೃಷ್ಟಿಯಿಂದ ₹650 ಲಕ್ಷ ವೆಚ್ಚದ ಯೋಜನೆಯನ್ನು ನಿಗದಿಡಿಸಲಾಗಿದೆ’ ಎಂದು ಹೇಳಿದರು.

ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ‘ತಾಲ್ಲೂಕಿನಲ್ಲಿ ಮೆಗಾ ಮಾರುಕಟ್ಟೆ ಇದ್ದು, ಪ್ರಸ್ತುತ ಆಧುನಿಕ ಜವಳಿ ಪಾರ್ಕ್‌ ಆರಂಭವಾಗುತ್ತಿರುವುದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯಲಿವೆ’ ಎಂದರು.

ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋತಿಪ್ಪೇಶ, ಉಪಾಧ್ಯಕ್ಷ ನಜೀರ್ ಅಹಮದ್ ಅಬ್ಬಾಸಲಿ ಕಂಗನೊಳ್ಳಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಸದಸ್ಯ ಏಕನಾಥ ಬಾನುವಳ್ಳಿ, ಎಪಿಎಂಸಿ ಅಧ್ಯಕ್ಷ ಮಂಜನಗೌಡ ಪಾಟೀಲ, ಸದಸ್ಯ ಬಸವರಾಜ ಸವಣೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಅಶೋಕ ತಳವಾರ, ಬಸವರಾಜ ಎನ್‌.ಪಾಟೀಲ, ಯತೀಂದ್ರ, ತಿಪ್ಪೇಶಸ್ವಾಮಿ, ಎಚ್.ಬಿ.ಪಾಟೀಲ, ಪಾರ್ವತೆಮ್ಮ ಹಲಗಣ್ಣನವರ, ಎಸ್‌.ಎಫ್.ಎನ್.ಗಾಜೀಗೌಡ್ರ, ಕೃಷ್ಣಪ್ಪ ಕಂಬಳಿ ಇದ್ದರು.
**
ರಾಜ್ಯದಲ್ಲಿಯೇ ನಮ್ಮ ಜಿಲ್ಲೆ ಅತೀ ಹೆಚ್ಚು ಹತ್ತಿ ಬೆಳೆಯುವ ಪ್ರದೇಶವಾಗಿದ್ದು, ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಹಾಗೂ ಸಿದ್ಧ ಉಡುಪು ಘಟಕಗಳನ್ನು ಸ್ಥಾಪಿಸಲು ಉದ್ದಿಮೆದಾರರಿಗೆ ಉತ್ತೇಜಿಸಲಾಗುವುದು.

ರುದ್ರಪ್ಪ ಲಮಾಣಿ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT